ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹ-ಸದಸ್ಯರಾಗಿ ಮೋಹನ್ ಪೊನ್ನಚನ, ಕೆ.ಸಿ.ಗೋಪಾಲಕೃಷ್ಣ (ಗೋಪಾಲ ಪೆರಾಜೆ) ಹಾಗೂ ಕುದುಪಜೆ. ಕೆ. ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆಯೇ ಘೋಷಿಸಿದಂತೆ ಸಹ-ಸದಸ್ಯತ್ವದ ಮೂರು ಸ್ಥಾನಗಳ ಪ್ರಾತಿನಿಧ್ಯವನ್ನು
ಕೊಡಗು ಜಿಲ್ಲೆಗೆ ನೀಡಲಾಗಿದೆ. ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷರು ಹಾಗೂ ಸಂಘಟಕರಾದ ಮೋಹನ್ ಪೊನ್ನಚನ, ಅರೆಭಾಷೆ ಜಾನಪದ ಕಲಾವಿದ ಕುದುಪಜೆ. ಕೆ. ಪ್ರಕಾಶ್ ಮತ್ತು ಚಿಂತಕ ಹಾಗೂ ಸಾಹಿತಿ ಕೆ.ಸಿ.ಗೋಪಾಲಕೃಷ್ಣ (ಗೋಪಾಲ ಪೆರಾಜೆ) ಇವರುಗಳನ್ನು ಅಕಾಡೆಮಿಗೆ ಸಹ-ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಗೋಪಾಲ್ ಪೆರಾಜೆ, ಕುದುಪಜೆ ಕೆ.ಪ್ರಕಾಶ್, ಮೋಹನ್ ಪೊನ್ನಚನ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತು ಸಾಹಿತ್ಯ ಅಕಾಡೆಮಿಗೆ ಸರ್ಕಾರವು ಈಗಾಗಲೇ ಅಧ್ಯಕ್ಷರು ಸೇರಿದಂತೆ ಹನ್ನೊಂದು ಮಂದಿಯನ್ನು ನೇಮಿಸಿದೆ, ಸಂಘಟನೆ ಹಾಗೂ ಅಕಾಡೆಮಿಯ ಕಾರ್ಯಚಟುವಟಿಕೆಗಳನ್ನು ನಡೆಸುವ ನಿಟ್ಟಿನಲ್ಲಿ ಸಹಾಯವಾಗುವಂತೆ ಮೂವರು ಸಹ-ಸದಸ್ಯರನ್ನು ನೇಮಿಸಿಕೊಳ್ಳಲು ಸಮಿತಿಗೆ ಅವಕಾಶವಿರುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರೆಭಾಷಿಕರು ಇರುವ ಕೊಡಗು ಹಾಗೂ ದಕ್ಷಿಣ ಕನ್ನಡ ಭಾಗಗಳಿಗೆ ಸಮಾನ ಪ್ರಾತಿನಿಧ್ಯವನ್ನು ಸರಿದೂಗಿಸುವ ನಿಟ್ಟಿನಲ್ಲಿ ಸಹ-ಸದಸ್ಯರ ಅಯ್ಕೆ ಮೂಲಕ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ಒದಗಿಸಲಾಗಿದೆ. ಒಟ್ಟಾರೆ ಸಹ-ಸದಸ್ಯರು ಸೇರಿದಂತೆ ಕೊಡಗು ಜಿಲ್ಲೆಗೆ 7 ಮಂದಿ, ದಕ್ಷಿಣ ಕನ್ನಡ ಜಿಲ್ಲೆಗೆ ಅಧ್ಯಕ್ಷರು ಸೇರಿ 7 ಮಂದಿ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಗಡಿನಾಡ ಅರೆಭಾಷೆ ಉತ್ಸವ:
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿ ಪ್ರದೇಶಗಳಲ್ಲಿ ಗಡಿನಾಡ ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಉತ್ಸವವನ್ನು ಹಮ್ಮಿಕೊಂಡಿದ್ದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಾದ ಬಂದಡ್ಕ, ಮಂಡೆಕೋಲು ಹಾಗೂ ಕಲ್ಲಪ್ಪಳ್ಳಿ ಮತ್ತು ಕೊಡಗು ಜಲ್ಲೆಯ ಗಡಿ ಪ್ರದೇಶಗಳಾದ ಚೆಯ್ಯಂಡಾಣೆ, ಭಾಗಮಂಡಲ ಹಾಗೂ ಕುಶಾಲನಗರದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಗಡಿ ಉತ್ಸವ ಏರ್ಪಡಿಸಲು ನಿರ್ಧರಿಸಲಾಗಿದೆ.
ಪ್ರಥಮ ಗಡಿನಾಡ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಉತ್ಸವವನ್ನು ಅಕ್ಟೋಬರ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಬಂದಡ್ಕದಲ್ಲಿ ಆಯೋಜಿಸಲಾಗುವುದು.
ಎರಡನೇ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯ ಗಡಿಪ್ರದೇಶವಾಗಿರುವ ಚೆಯ್ಯಂಡಾಣೆಯಲ್ಲಿ ನವೆಂಬರ್ 10ರಂದು ಆಯೋಜಿಸಲಾಗುವುದು.
ಮೂರನೆಯ ಕಾರ್ಯಕ್ರಮವನ್ನು ಮಂಡೆಕೋಲಿನಲ್ಲಿ ಡಿಸೆಂಬರ್ 1ರಂದು ಹಮ್ಮಿಕೊಳ್ಳಲಾಗುವುದು.
ಉಳಿದ ಮೂರು ಕಡೆಗಳಲ್ಲಿ ಗಡಿನಾಡ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಉತ್ಸವವನ್ನು ನಡೆಸಲು ರೂಪು-ರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ.
ಗಡಿನಾಡಿನಲ್ಲಿ ಅರೆಭಾಷಿಕರ ಹಾಗೂ ಅರೆಭಾಷೆಯ ಹುಮ್ಮಸ್ಸನ್ನು ಹೆಚ್ಚಿಸುವ ನಿಟ್ಟಿನಿಂದ ಅದ್ದೂರಿಯ ಉತ್ಸವಕ್ಕೆ ಈಗಾಗಲೇ ತಯಾರಿ ನಡೆದಿದೆ ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸಾಂಸ್ಕೃತಿಕ, ಸಾಹಿತ್ಯ ಹಾಗೂ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಲಾಗಿದೆ. ಎಲ್ಲ ಪ್ರದೇಶಗಳಲ್ಲಿ ಕಾರ್ಯಕ್ರಮಗಳು ಸ್ಥಳೀಯ ಅರೆಭಾಷಿಕರು ಮತ್ತು ಅರೆಭಾಷಾ ಅಭಿಮಾನಿಗಳು, ಮುಖಂಡರು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದ್ದು ಉತ್ಸವಗಳಲ್ಲಿ ಅರೆಭಾಷೆ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಮತ್ತು ಆಹ್ವಾನಿತ ಅರೆಭಾಷೆ ಸಾಂಸ್ಕೃತಿಕ ತಂಡಗಳಿಗೆ ಅವಕಾಶ ನೀಡಲಾಗುವುದು. ಎಲ್ಲಾ ಕಡೆಗಳಲ್ಲೂ ಉತ್ಸವದ ಅಂಗವಾಗಿ ಸಾಂಸ್ಕೃತಿಕ, ಸಾಹಿತ್ಯ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಗಡಿ ಪ್ರದೇಶಗಳಲ್ಲಿ ಅರೆಭಾಷೆಯನ್ನು ಉಳಿಸಿ ಬೆಳೆಸಿ ಹಬ್ಬಿಸುವ ಹಾಗೂ ಭಾಷೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣೆ ಕಾರ್ಯಕ್ರಮವನ್ನು ಅ.31ರಂದು ಮಡಿಕೇರಿಯಲ್ಲಿ ಅಯೊಜಿಸಲಾಗುವುದು.
ಅರೆಭಾಷೆ ತ್ರೈಮಾಸಿಕ ಪತ್ರಿಕೆ ‘ಹಿಂಗಾರ’, ಪ್ರಕಟಗೊಳ್ಳದೆ ಉಳಿದಿರುವ 6ಸಂಚಿಕೆಗಳ ಮುದ್ರಣ ಕಾರ್ಯಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದು ಹಾಗೂ ಪುಸ್ತಕ ಪ್ರಕಟಣೆ, ಸಂಶೊಧನಾ ಗ್ರಂಥಗಳ ಮುದ್ರಣ ಕಾರ್ಯಗಳನ್ನು ಮುಂಬರುವ ದಿನಗಳಲ್ಲಿ ಮಾಡಲಾಗುವುದು.
ಅಕಾಡೆಮಿಯಿಂದ ಪ್ರತಿ ವರ್ಷ ನೀಡುವ ಗೌರವ ಪ್ರಶಸ್ತಿ 2022 ಮತ್ತು 2023ನೇಸಾಲಿನ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಎಂದು ಸದಾನಂದ ಮಾವಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು, ಚಂದ್ರಾವತಿ ಬಡ್ಡಡ್ಕ,ವಿನೋದ್ ಮೂಡಗದ್ದೆ,ಸಂದೀಪ ಪೂಳಕಂಡ, ಉಪಸ್ಥಿತರಿದ್ದರು.