ಸುಳ್ಯ:ಅಡಿಕೆ ಹಳದಿ ರೋಗ ಬಾದೆಯಿಂದ ಈ ಭಾಗದ ಅಡಿಕೆ ಕೃಷಿಕರು ಸಂಪೂರ್ಣ ತತ್ತರಿಸಿ ಹೋಗಿದ್ದಾರೆ. ಈ ಹಿನ್ನಲೆಯಲ್ಲಿ ಅಡಿಕೆ ಹಳದಿ ರೋಗಕ್ಕೆ ಕೇಂದ್ರ ಸರಕಾರದಿಂದ ಪರಿಹಾರ ಒದಗಿಸಬೇಕು ಎಂದು ಸುಳ್ಯ ತಾಲೂಕು ಆಡಿಕೆ ಹಳದಿ ರೋಗ ಪೀಡಿತ ನೊಂದ ಕೃಷಿಕರ ತಾಲೂಕು ಸಮಿತಿ ವತಿಯಿಂದ ರಾಜ್ಯ ಸಭಾ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಸಲ್ಲಿಸಿದರು. ಸುಳ್ಯದಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಡಾ.ವೀರೇಂದ್ರ ಹೆಗ್ಗಡೆಯವರು’ “ಈ ಭಾಗದ
ಅಡಿಕೆ ಹಳದಿ ರೋಗದ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂಬ ವಿಚಾರದಲ್ಲಿ ರಾಜ್ಯ ಸಭೆಯಲ್ಲಿ ಈಗಾಗಲೇ ಪ್ರಸ್ತಾಪಿಸಿ ಕೇಂದ್ರ ಸರಕಾರದ ಗಮನ ಸೆಳೆಯಲಾಗಿದೆ. ಈ ವಿಷಯವನ್ನು ಮತ್ತೊಮ್ಮೆ ರಾಜ್ಯ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡಿದರು.
ಮನವಿಯಲ್ಲಿ ಏನಿದೆ..?
ದ.ಕ. ಜಿಲ್ಲೆಯ ಮತ್ತು ಕೊಡಗಿನ ಕೆಲ ಪ್ರದೇಶಗಳು ಸೇರಿದಂತೆ ಈ ಭಾಗದ ಜನರು ಆಡಿಕೆಯನ್ನು ಮೂಲ ಕೃಷಿಯನ್ನಾಗಿ ಬೆಳೆಯುತ್ತಿದ್ದಾರೆ. ಆದರೆ ಸರಿ ಸುಮಾರು 35 ವರ್ಷಗಳ ಹಿಂದೆಯೇ ಅಡಿಕೆ ಕೃಷಿಗೆ ‘ಹಳದಿ ರೋಗ’ ಎಂಬ ಮಾರಕ ರೋಗ ತಗಲಿದ್ದು, ಆಡಿಕೆ ತೋಟವು ಸಂಪೂರ್ಣ ನಾಶವಾಗಿ, ಆ ಜಾಗದಲ್ಲಿ ಮತ್ತೆ ಅಡಿಕೆ ಕೃಷಿ ಮಾಡಲಾಗುವುದಿಲ್ಲ. ಕೃಷಿಕರಿಗೆ ವರ್ಷಕ್ಕೆ ಹತ್ತು, ಹದಿನೈದು ಲಕ್ಷ ಆದಾಯ ತರುತ್ತಿದ್ದ ತೋಟಗಳು ಇವತ್ತು ಒಂದು ರೂಪಾಯಿಯ ಆದಾಯವು ಇಲ್ಲದಾಗಿದೆ.
ಈ ಬಗ್ಗೆ ಇಲ್ಲಿಯವರೇಗೆ ರೋಗದ ಕಾರಣವಾಗಲಿ, ಅದಕ್ಕೆ ಬೇಕಾದ ಔಷಧಿಯನ್ನು ಕಂಡು ಹಿಡಿಯಲು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗಿದೆ. ಅಡಿಕೆ ಬೆಳೆಯನ್ನು ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದ ಮತ್ತು ಅದರ ಆಧಾರವಾಗಿ ವಾಣಿಜ್ಯ ಬ್ಯಾಂಕುಗಳಲ್ಲಿ ಮತ್ತು ಸಹಕಾರಿ ಬ್ಯಾಂಕ್ಗಳಲ್ಲಿ ಸಾಲ ಮಾಡಿದ್ದ ರೈತರು, ಆತ್ತ ಸಾಲ ಕಟ್ಟಲಾಗದೆ, ಇತ್ತ ಜೀವನ ನಡೆಸಲು ಸಾಧ್ಯವಾಗದೆ ಕಷ್ಟದ ದಿನಗಳು ಬಂದಿದೆ. ಈಗಾಗಲೇ ಈ ರೋಗದ ಲಕ್ಷಣಗಳು ಕೊಡಗು ಸಂಪಾಜೆಯಿಂದ ಆರಂಭವಾಗಿ, ದಕ, ಸಂಪಾಜೆ, ಆರಂತೋಡು, ತೊಡಿಕಾನ ಮತ್ತು ಮರ್ಕಂಜ ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿದೆ. ಅಲ್ಲದೆ ಇದು ತಾಲೂಕಿನ ನಾಲ್ಕು ದಿಕ್ಕುಗಳಲ್ಲಿ ವಿಸ್ತಾರಿಸುತ್ತಾ, ಇನ್ನು ಕೆಲವೇ ವರ್ಷಗಳಲ್ಲಿ ಸುಳ್ಯ ತಾಲೂಕಿನ 25 ಗ್ರಾಮಗಳಿಗೂ, ಕೇರಳದ ಒಂದಷ್ಟು ಭಾಗಕ್ಕೂ ಹಳದಿ ರೋಗ ತಗುಲಿ ಸಂಪೂರ್ಣ ವಿನಾಶದತ್ತ ಸಾಗುವುದರಲ್ಲಿ ಸಂಶಯವಿಲ್ಲ.
ಇಲ್ಲಿಯವರೇಗೆ ಅನೇಕ ಬಾರಿ ಜನಪ್ರತಿನಿಧಿಗಳ ಮೂಲಕ ರೈತರ ಪರವಾಗಿದ್ದ ಸಂಸ್ಥೆಗಳ ಮೂಲಕ, ಶಾಸಕರು, ಲೋಕಸಭಾ ಸದಸ್ಯರು, ಸಂಸದರುಗಳ ಮೂಲಕ ರಾಜ್ಯ ಮತ್ತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದರೂ, ಪ್ರಯೋಜನ ಕಾಣಲಿಲ್ಲ. ಕೃಷಿಕರು ಕೃಷಿ ಸಾಲ, ಅಲ್ಪಾವಧಿ, ದೀರ್ಘಾವಧಿ ಸಾಲಗಳು, ಮನೆ ಸಾಲ, ಶಿಕ್ಷಣ ಸಾಲ, ಚಿನ್ನಾಭರಣ ಈಡಿನ ಸಾಲ, ವಿವಾಹ ಪ್ರಯುಕ್ತ ಸಾಲ, ವಾಹನ ಖರೀದಿ ಸಾಲ ಹೀಗೆ ಅನೇಕ ರೀತಿಯ ಸಾಲವನ್ನು ಮಾಡಿಕೊಂಡಿದ್ದಾರೆ. ಸಾಲ ಕಟ್ಟಲಾಗದೇ ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಆದುದರಿಂದ ತಾಲೂಕಿನ ನೊಂದ ಕೃಷಿಕರೆಲ್ಲಾ ಒಂದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಸುಳ್ಯ ತಾಲೂಕು ಆಡಿಕೆ ಹಳದಿ ರೋಗ ಪೀಡಿತ ನೊಂದ ಕೃಷಿಕರು, 2022- 23ನೇ ಸಾಲಿನಲ್ಲಿ ತಾಲೂಕು ಸಮಿತಿಯನ್ನು ರಚಿಸಿಕೊಂಡಿರುತ್ತೇವೆ. ಈ ನಿಟ್ಟಿನಲ್ಲಿ ಸುಳ್ಯ ತಾಲೂಕಿನ ಪ್ರತಿ ಗ್ರಾಮದಲ್ಲೂ ರಾಜಕೀಯ ರಹಿತ ಗ್ರಾಮ ಸಮಿತಿಗಳನ್ನು ರಚಿಸಿಕೊಂಡು ಹೋರಾಟ ಮಾಡುವುದಾಗಿ ತೀರ್ಮಾನಿಸಿಕೊಂಡಿರುತ್ತೇವೆ. ಕೃಷಿಕರ ಸಂಕಷ್ಟದ ಕೂಗನ್ನು ಸರಕಾರಕ್ಕೆ ಮುಟ್ಟಿಸಿ ಪರಿಹಾರ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಹಳದಿ ರೋಗ ಪೀಡಿತ ಜಮೀನಿನಲ್ಲಿ ಸಂಶೋದಿತ ಅಡಿಕೆ ಕೃಷಿ ಅಥವಾ ಪರ್ಯಾಯ ಕೃಷಿ ಮಾಡಲು, ಸರಕಾರದಿಂದ ಸೂಕ್ತ ಪರಿಹಾರ ನೀಡೇಕು ಮತ್ತು ಈಗಾಗಲೇ ಕೃಷಿಕರು ಮಾಡಿರುವ ಸಾಲವನ್ನು 10 ವರ್ಷಗಳ ಕಾಲ ಬಡ್ಡಿ ರಹಿತವಾಗಿ ಮುಂದೂಡುವ ಅವಕಾಶ ಮಾಡಿ ಕೊಡಬೇಕು ಎಂದು ಮನವಿ ಮಾಡಲಾಯಿತು.
ಸಮಿತಿಯ ಪದಾಧಿಕಾರಿಗಳಾದ ಎನ್.ಎ.ರಾಮಚಂದ್ರ, ಎಂ.ವೆಂಕಪ್ಪ ಗೌಡ, ಭವಾನಿಶಂಕರ ಅಡ್ತಲೆ, ಕಳಂಜ ವಿಶ್ವನಾಥ ರೈ, ಲೋಕನಾಥ ಅಮೆಚೂರು, ಸುರೇಶ್ ಕಣೆಮರಡ್ಕ, ಮಹೇಶ್ ಕುಮಾರ್ ಮೇನಾಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗೇಶ್ ಪಿ.ಮತ್ತಿತರರು ಮನವಿ ಅರ್ಪಿಸಿದರು.