*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಕೈಗೆ ಬಂದ ತುತ್ತು ಬಾಯಿಗಿಲ್ಲ.. ಕೈ ಕೆಸರಾದರೂ..ಬಾಯಿಗೆ ಮೊಸರಿಲ್ಲ..! ಈ ಮಾತುಗಳು ಅಡಿಕೆ ಬೆಳೆಗಾರರ ಸಂಕಷ್ಟವನ್ನು ಹೇಳುವಂತಿದೆ.. ವರ್ಷ ಪೂರ್ತಿ ದುಡಿವ ಕೃಷಿಕರಿಗೆ ಫಸಲು ಬರುವ ಸಂದರ್ಭದಲ್ಲಿ ಯಾವಾಗಲೂ ಆತಂಕ ತಪ್ಪುತ್ತಿಲ್ಲ. ಹತ್ತು ಹಲವು ಕಾರಣಗಳಿಂದ ನಷ್ಟದ ಹಾದಿಯಲ್ಲೇ ಸಾಗುತಿದೆ.
ಸರಿಯಾಗಿ ಬೆಳೆಯದ ಚಿಕ್ಕ ಅಡಿಕೆ ಕಾಯಿಗಳು ತನ್ನಷ್ಟಕ್ಕೆ ಹಣ್ಣಾಗಿ ಉದುರಿ ಬೀಳುತಿರುವುದು ಅಡಿಕೆ ಫಸಲು ನೀಡುವ ದಿನಗಳು ಹತ್ತಿರ ಬರುತ್ತಿದ್ದಂತೆ ಅಡಿಕೆ ಕೃಷಿಕರಲ್ಲಿ ಮತ್ತೆ ಆತಂಕದ ಕಾರ್ಮೋಡ ಬಿತ್ತಿದೆ.
ಅಡಿಕೆಯೇ ಮುಖ್ಯ ಕೃಷಿಯಾಗಿರುವ, ಅಡಿಕೆಯನ್ನೇ ನಂಬಿ ಬದುಕು
ಕಟ್ಟಿಕೊಳ್ಳುವ ಸುಳ್ಯ ತಾಲೂಕು ಸೇರಿದಂತೆ ದ.ಕ.ಜಿಲ್ಲೆಯಾದ್ಯಂತ ಮಿಡಿ ಅಡಿಕೆ ಹಣ್ಣಾಗಿ ಉದುರುತ್ತಿರುವುದು ವ್ಯಾಪಕವಾಗಿ ಕಂಡು ಬಂದಿದೆ. ಕೇರಳದ ಗಡಿ ಗ್ರಾಮಗಳಲ್ಲಿಯೂ ಈ ರೀತಿ ಅಡಿಕೆ ಉದುರುವುದು ವ್ಯಾಪಕವಾಗಿದೆ. ಸರಿಯಾಗಿ ಬೆಳೆಯದ, ಅರ್ಧ ಬೆಳೆದ ಅಡಿಕೆ ಕಾಯಿಗಳು ಹಣ್ಣಾದಂತೆ ಕೆಂಪು ಬಣ್ಣಕ್ಕೆ ತಿರುಗಿ ಉದುರಿ ಬೀಳುತಿದೆ. ಆ ರೀತಿಯ ಅಡಿಕೆಯ ಅರ್ಧದಲ್ಲಿ ಬಿರುಕು ಬಿಟ್ಟಂತೆ ಕಂಡು ಬರುತ್ತದೆ. ಬಿದ್ದ ಅಡಿಕೆ ಒಡೆದರೆ ಒಳಗೆ ಬೆಳೆದಿರುವುದಿಲ್ಲ. ಬೆಂದು ಕರಗಿದಂತೆ ಕಂಡು
ಬರುತ್ತವೆ.ಮಳೆ ಕಡಿಮೆಯಾದ ಬಳಿಕ ಕಳೆದ 15-20 ದಿನಗಳಿಂದ ಈ ರೀತಿ ಅಡಿಕೆ ಉದುರುವುದು ಹೆಚ್ಚು ಕಂಡು ಬಂದಿದೆ. ಪ್ರತಿ ಅಡಿಕೆ ಮರದ ಬುಡದಲ್ಲಿ ಹತ್ತಾರು ಬೆಳೆಯದ ಅಡಿಕೆ ಕಾಯಿಗಳು ತುಂಬಿದೆ. ಅಡಿಕೆ ಮರದಲ್ಲಿಯೂ ಬೆಳೆಯದ ಅಡಿಕೆ ಗೊಂಚಲು ಹಣ್ಣಾಗಿ ನಿಂತಿರುವುದು ಗೋಚರಿಸುತ್ತದೆ. ಹೀಗೆ ಅಕಾಲಿಕವಾಗಿ ಹಣ್ಣಾದ ಗೊಂಚಲಿನಿಂದ ಸಣ್ಣ ಅಡಿಕೆ ಪಟ ಪಟನೆ ಉದುರುತಿದೆ. ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳ ತನಕ ಎಡೆ ಬಿಡದೆ ಸುರಿದ ಮಹಾ ಮಳೆ
ಅಡಿಕೆ ಕೃಷಿಗೆ ಮಾರಕವಾಗಿ ಪರಿಣಮಿಸಿದೆ ಎಂದು ಕೃಷಿಕರು ಹೇಳುತ್ತಾರೆ. ಮಳೆ ಹೆಚ್ಚಾದ ಕಾರಣ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ. ಅಲ್ಲದೇ ಕಂಗಿನ ಬುಡದಲ್ಲಿ ನೀರು ನಿಂತು, ವಿಪರೀತ ನೀರು ಹರಿದು ಅಡಿಕೆ ಮರದ ಬುಡದಲ್ಲಿದ್ದ ಮಣ್ಣು, ಅದರಲ್ಲಿದ್ದ ಲಘು ಫೋಷಕಾಂಶಗಳು ಕೊಚ್ಚಿ ಹೋಗಿದೆ. ಇದರಿಂದ ಬೇರುಗಳಿಗೆ ಸರಿಯಾಗಿ ಲಘು
ಸರಿಯಾಗಿ ಬೆಳೆಯದ ಅಡಿಕೆ ಮರದಲ್ಲಿ ಹಣ್ಣಾಗಿ ನಿಂತಿರುವುದು
ಪೋಷಕಾಂಶ ದೊರಕದ ಕಾರಣ ಹಾಗೂ ಕೊಳೆ ರೋಗದ ಇಫೆಕ್ಟ್ ನಿಂದ ಈ ರೀತಿ ಅಡಿಕೆ ಮಿಡಿ ಅಕಾಲಿಕವಾಗಿ ಹಣ್ಣಾಗಿ ಬೀಳುತಿದೆ ಎಂದು ಕೃಷಿಕರು ಅಭಿಪ್ರಾಯಪಡುತ್ತಾರೆ. ಎಡೆ ಬಿಡದೆ ಮಳೆ ಸುರಿದ ಕಾರಣ ‘ಬೋಡೋ ಮಿಶ್ರಿತ’ ಔಷಧಿ ಸಿಂಪಡಿಸಲು ಸಾಧ್ಯವಾಗಿಲ್ಲ. ಇದು ಕೂಡ ಕೊಳೆ ರೋಗ ಹರಡಲು ಮತ್ತು ಮಿಡಿ ಅಡಿಕೆ ಉದುರಲು ಕಾರಣವಾಗಿದೆ. ಮಳೆಯ ಅಬ್ಬರಕ್ಕೆ ಔಷಧಿ ಸಿಂಪಡಿಸಿದ ತೋಟಗಳಿಗೂ ಕೊಳೆ ರೋಗ ಅಪ್ಪಳಿಸಿದೆ.
ಅಲ್ಲದೆ ಏಪ್ರಿಲ್ – ಮೇ ತಿಂಗಳಿನಲ್ಲಿ 40-42 ಡಿಗ್ರಿ ಸೆಲ್ಸಿಯಸ್ವರೆಗೆ ಏರಿದ ಉಷ್ಣಾಂಶ ಮತ್ತು ಬಿಸಿ ತಾಪಮಾನ ಕೂಡ ಅಡಿಕೆಗೆ ಮಾರಕವಾಗಿದೆ. ಏರಿದ ಉಷ್ಣಾಂಶ ತಾಳಲಾರದೆ ಏಪ್ರಿಲ್, ಮೇ ತಿಂಗಳಲ್ಲಿ ಬಿಟ್ಟ ಹಿಂಗಾರ ಒಣಗಿ ಕರಟಿ ಹೋಗಿದೆ. ಇದರಿಂದ ಉತ್ತಮ ಅಡಿಕೆ ಫಸಲು ನೀಡುವ ಈ ಹಿಂಗಾರಗಳು ನಾಶವಾಗಿ ಫಸಲು ಕಡಿಮೆಯಾಗಿ ಭಾರೀ ನಷ್ಟ ಉಂಟಾಗಿದೆ. ಹಲವಾರು ತೋಟಗಳಲ್ಲಿ ಈ ರೀತಿ ವ್ಯಾಪಕವಾಗಿ ಬೆಳೆ ನಾಶವಾಗಿದೆ.
ಹಿಂಗಾರ ಒಣಗಿ, ಮಿಡಿ ಅಡಿಕೆ ಉದುರಿ ತಮ್ಮ ತೋಟದಲ್ಲಿ ಶೇ.40ಕ್ಕಿಂತಲೂ ಹೆಚ್ಚು ಫಸಲು ಈಗಾಗಲೇ ನಷ್ಟವಾಗಿದೆ ಎನ್ನುತ್ತಾರೆ ಸುಳ್ಯ ಹಳಗೇಟಿನ ಕೃಷಿಕರಾದ ವಿನೋದ್ ಲಸ್ರಾದೋ. ಹಲವು ಅಡಿಕೆ ಮರಗಳು ಮಿಡಿ ಅಡಿಕೆ ಉದುರಿ ಬೋಳಾಗಿದೆ. ಇದ್ದ ಕೆಲವು ಅಡಿಕೆ ಗೊಂಚಲು ಸರಿಯಾಗಿ ಬೆಳೆಯದೆ ಹಣ್ಣಾಗಿ ಉದುರುತಿದೆ. ಏರಿದ ಉಷ್ಣಾಂಶ, ಅಧಿಕ ಮಳೆಯಿಂದ ಅಡಿಕೆ ಫಸಲು ನಾಶವಾಗಿದೆ. ಮರದ ಬುಡದಲ್ಲಿ ನೀರು ನಿಂತು ಮೇಲ್ಪದರ ಕೊಚ್ಚಿ ಹೋಗಿ ಲಘು ಪೋಷಕಾಂಶದ ಕೊರತೆ ಉಂಟಾಗಿ ಅಡಿಕೆ ಕಾಯಿ ಬೆಳವಣಿಗೆ ಆಗದೆ ಉದುರುತಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವಿನೋದ್ ಲಸ್ರಾದೋ ವಿವರಿಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ತೋಟಗಳಲ್ಲಿ ಮಿಡಿ ಅಡಿಕೆ ಉದುರುತ್ತಿರುವುದು ಕಂಡು ಬಂದಿದೆ. ಮಳೆ ಅಧಿಕವಾಗಿ ಕೊಳೆ ರೋಗ ಭಾದಿಸಿದ ಪರಿಣಾಮ ಈ ರೀತಿ ಮಿಡಿ ಅಡಿಕೆ ಉದುರಲು ಕಾರಣ ಎನ್ನುತ್ತಾರೆ ಕರ್ನಾಟಕ ಆಗ್ರೋ ಕೆಮಿಕಲ್ಸ್ ಕಂಪೆನಿಯ ಕೃಷಿ ತಾಂತ್ರಿಕ ಸಲಹೆಗಾರರು ಹಾಗೂ ಪತ್ರಕರ್ತರಾದ ಲೋಕೇಶ್ ಪೆರ್ಲಂಪಾಡಿ. ಕೆಲವೆಡೆ ಕೊಳೆ ರೋಗದಿಂದ ಅಡಿಕೆ ಗಿಡಗಳೇ ಸಾಯುವ ಪರಿಸ್ಥಿತಿ ಇದೆ. ನೀರು ನಿಂತು ಮಣ್ಣು ಕೊಚ್ಚಿ ಹೋಗಿ ಲಘು ಪೋಷಕಾಂಶಗಳ ಕೊರತೆ ಎದುರಾದರೆ ಅಡಿಕೆ ಮರದ ದೀರ್ಘ ಕಾಲೀನ ಬೆಳವಣಿಗೆಗೆ ತೊಂದರೆ ಆಗಲಿದೆ ಎನ್ನುತ್ತಾರೆ ಅವರು.
ಹಳದಿ ರೋಗ, ಎಲೆ ಚುಕ್ಕಿ ರೋಗ, ಬೇರು ಹುಳ ರೋಗ ಮುಂತಾದವುಗಳಿಂದ ಅಡಿಕೆ ಕೃಷಿ ನಾಶದ ಹಾದಿಯಲ್ಲಿದೆ. ಇದಲ್ಲದೇ ಹವಾಮಾನ ವೈಪರೀತ್ಯದ ಕಾರಣ ಹಿಂಗಾರ ಒಣಗುವಿಕೆ, ಕೊಳೆ ರೋಗ, ಅಡಿಕೆ ಮಿಡಿ ಉದುರುವಿಕೆ ಹೀಗೆ ಹತ್ತಾರು ಕಾರಣಗಳಿಂದ ಪ್ರತಿ ವರ್ಷವೂ ಬೆಳೆ ನಾಶವಾಗುವುದರಿಂದ ಹೆಚ್ಚಿನ ನಷ್ಟ ಉಂಟಾಗಿ ಕೃಷಿಕರು ಕಂಗಾಲಾಗಿದ್ದಾರೆ. ಉತ್ತಮ ದರ ಇದ್ದರೂ ಮಳೆ, ಬೆಳೆ ಕೈ ಕೊಡುವ ಕಾರಣ ಅಡಿಕೆ ಬೆಳೆಗಾರರಿಗೆ ಕಣ್ಣೀರಲ್ಲಿ ಕೈ ತೊಳೆಯಬೇಕಾದ ಸಂಕಷ್ಟದ ದಿನಗಳು ಮಾತ್ರ ತಪ್ಪುವುದಿಲ್ಲ..!