*ಡಾ.ಸುಂದರ ಕೇನಾಜೆ.
ಕನ್ನಡ ಮಾತೃಭಾಷೆಯಾಗಿ ಬಳಸುವ ಜನರಿಗೆ ಕರ್ನಾಟಕದಲ್ಲಿ ಕನ್ನಡವೊಂದೇ ಮುಖ್ಯ ಭಾಷೆಯಾಗಿದ್ದರೂ ಅದು ಅಳಿವಿನಂಚಿಗೆ ಹೋಗಲು ಹೇಗೆ ಸಾಧ್ಯ? ಮತ್ತು ತಮ್ಮ ಮಕ್ಕಳು ಹುಟ್ಟುತ್ತಲೇ ಕನ್ನಡವನ್ನೇ ಬಳಸುತ್ತಿರುವ ಕಾರಣ ಅವರು ಇನ್ನೊಂದು ಮಾಧ್ಯಮವನ್ನು ಕಲಿಕೆಗೆ ಬಳಸಿಕೊಂಡರೆ ಏನು ತಪ್ಪು ಇತ್ಯಾದಿ ಜಿಜ್ಞಾಸೆಗಳು ಮೂಡಿದರೆ ಅದನ್ನು ತೀರಾ ಅಲ್ಲಗಳೆಯುವಂತಿಲ್ಲ. ಏಕೆಂದರೆ ಅನಾದಿಕಾಲದಿಂದ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕನ್ನಡದ
ಬಳಕೆಯ ಸ್ಥಿತಿಗತಿ ಏನು? ಆ ನಡುವೆಯೂ ಈ ಭಾಗದ ಜನ ಕನ್ನಡವನ್ನು ಕಲಿಯುದಕ್ಕೆ ಪಡುವ ಪಾಡೇನು? ಇದು ಅನೇಕ ಗಡಿಯೇತರ ಕನ್ನಡಿಗರಿಗೆ ಗೊತ್ತಿರಲು ಸಾಧ್ಯವಿಲ್ಲ. ಈ ಸೂಕ್ಷ್ಮವನ್ನು ಗಮನಿಸಿದ್ದಾದರೆ ಕನ್ನಡವನ್ನು ಮಾತೃಭಾಷೆಯಾಗಿ ಬಳಸುತ್ತಿರುವ ಜನ ಕಲಿಕಾ ಮಾಧ್ಯಮವಾಗಿ ಇನ್ನೊಂದನ್ನು ಆಯ್ಕೆ ಮಾಡುವ ಆಸಕ್ತಿಯನ್ನು ಕಡಿಮೆ ಮಾಡಬಹುದು.
ಹೀಗೆ ಕನ್ನಡದ ಈ ಸ್ಥಿತಿಗತಿಯನ್ನು ತಿಳಿಯುವ ಮೊದಲು ನಮ್ಮೆಲ್ಲಾ ಗಡಿ ಜಿಲ್ಲೆಗಳಲ್ಲಿ ಕನ್ನಡವನ್ನು ಮಾತೃಭಾಷೆಯಾಗಿಸಿ ಇರುವವರ ಸಂಖ್ಯೆಯನ್ನೊಮ್ಮೆ ತಿಳಿದುಕೊಳ್ಳುವುದು ಉತ್ತಮ. ಈ ಅಂಕಿಅಂಶವನ್ನು ಗಮನಿಸಿದಾಗ ಅನೇಕರಿಗೆ ಆಘಾತವಾಗಬಹುದು, ಪರಿಚಿತ ಕನ್ನಡವನ್ನೇ ಕಲಿಕೆಯ ಭಾಷೆಯಾಗಿಸಲು ನಡೆಸುವ ಒದ್ದಾಟವೂ ಅರ್ಥವಾಗಬಹುದು. ಅಲ್ಲದೇ ತಮ್ಮ ಮಕ್ಕಳಿಗೆ ಯಾವುದೋ ದೇಶ, ಸಂಸ್ಕೃತಿಯ ಭಾಷೆಯನ್ನು ಕಲಿಸುವುದಕ್ಕೆ ಪಡಬೇಕಾದ ಸರ್ಕಸ್ ಗಳ ಅಗತ್ಯದ ಬಗ್ಗೆ ಅರಿವೂ ಮೂಡಬಹುದು.
ಕರಾವಳಿ ಜಿಲ್ಲೆಯನ್ನೇ ತೆಗೆದುಕೊಳ್ಳೋಣ, ಇತ್ತೀಚಿನ ಅಂಕಿಅಂಶವೊಂದರ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕನ್ನಡ ಮಾತೃಭಾಷೆಯಾಗಿ ಬಳಸುವವರ ಶೇಖಡವಾರು ಪ್ರಮಾಣ, ದ.ಕ ಜಿಲ್ಲೆಯಲ್ಲಿ ಕೇವಲ ೦.೪೭, ಅದೇ ಉಡುಪಿ ಜಿಲ್ಲೆಯಲ್ಲಿ ೧.೨೩ ಆಗಿದೆ. (ಇಲ್ಲಿ ಉಪಭಾಷೆಗಳನ್ನು ಮಾತೃಭಾಷೆಯಾಗಿ ಬಳಸುವವರಲ್ಲಿ ಕ್ರಮವಾಗಿ ತುಳು ಶೇ ೪೮.೫೫/೩೧.೩೧, ಬ್ಯಾರಿ ಶೇ ೧೭.೦೮/೦೮.೯೦, ಕೊಂಕಣಿ ಶೇ ೯.೮೦/೧೧.೩೩, ಮಲೆಯಾಳಂ ಶೇ ೯.೯೬/೨.೧೩, ಮರಾಠಿ ಶೇ ೦.೮೮/೨.೮೩, ತಮಿಳು ಶೇ ೧.೧೨/೦.೮೫, ಅರೆಭಾಷೆ ದ.ಕ ಜಿಲ್ಲೆ ಮಾತ್ರ ಶೇ ೦.೮೨, ಕುಂದಕನ್ನಡ ಉಡುಪಿ ಜಿಲ್ಲೆ ಮಾತ್ರ ೪೧.೦೮, ಕೊರವ ೦.೫೬/೦.೪೧, ಹವ್ಯಕ, ಕರಾಡ, ಕುಡುಬಿ ಈ ಭಾಷೆಯ ಜತೆಗೆ ಇತರ ಕೆಲವು ಭಾಷೆಗಳು ಒಟ್ಟು ಸೇರಿ ಶೇ ೧೬.೦೬/೦೨.೧೩ ಬಳಕೆಯಾಗುತ್ತದೆ) ಆದರೆ ಕನ್ನಡದ ಹೊರತಾಗಿ ಈ ಎರಡು ಜಿಲ್ಲೆಗಳ ನಾನಾ ಜನಾಂಗದ ಜನ ನಾನಾ ಮಾತೃಭಾಷಿಕರಾಗಿ ಇರುವುದನ್ನು ಕಾಣಬಹುದು. ಈ ಸಂಖ್ಯೆ ಕೆಲವು ವರ್ಷಗಳ ಹಿಂದೆ ಇನ್ನೂ ಹೆಚ್ಚಿದ್ದು ಕನ್ನಡ ಕಡಿಮೆಯಾಗಿ ಇದ್ದಿರುವ ಸಾಧ್ಯತೆಯೂ ಇದೆ. ಆದರೆ ಈ ಗಡಿ ಜಿಲ್ಲೆಗಳಲ್ಲಿ ಇಷ್ಟು ಉಪಭಾಷೆಗಳಿದ್ದರೂ ಇಂಗ್ಲೀಷ್ ಮಾಧ್ಯಮ ಪ್ರವೇಶಿಸುವವರೆಗೆ ಕನ್ನಡ ಕಲಿಕೆಯ ಭಾಷೆಯಾಗಿದ್ದುದಕ್ಕೆ ಯಾವ ಅಡ್ಡಿ ಆತಂಕಗಳೂ ಇರಲಿಲ್ಲ.
ಈ ಮೇಲೆ ಹೇಳಿದ ಎಲ್ಲ ಭಾಷೆಗಳನ್ನು ಮನೆಭಾಷೆಯಾಗಿ ಬಳಸುತ್ತಿರುವ ಜನಾಂಗಗಳ ಮಕ್ಕಳಿಗೆ ಶಾಲೆಯಲ್ಲಿ ಕಲಿಯುವ ಕನ್ನಡ ವಾಸ್ತವವಾಗಿ ದ್ವಿತೀಯ ಭಾಷೆ, ಇಂಗ್ಲೀಷ್ ಇವರಿಗೆ ತೃತೀಯ ಭಾಷೆ, ಅದೇ ರೀತಿ ಹಿಂದಿ ನಾಲ್ಕನೇಯ ಭಾಷೆಯಾಗಿರುತ್ತದೆ. ಹಾಗಾದಾಗ ನಮ್ಮ ತ್ರಿಭಾಷಾ ಸೂತ್ರ ಅಥವಾ ಮಾತೃಭಾಷಾ ಶಿಕ್ಷಣ ಎಂಬ ಪರಿಕಲ್ಪನೆ ಈ ಮಕ್ಕಳಿಗೆ ಹೇಗೆ ಅನ್ವಯವಾದೀತು? ಇವರು ಶಾಲೆಯಲ್ಲಿ ಕಲಿಯುವ ಮೂರು ಭಾಷೆಗಳೂ ಇವರಿಗೆ ಹೊಸತೇ ಆಗಿರುತ್ತವೆ. ಆದ್ದರಿಂದ ಕನ್ನಡವನ್ನೇ ಮನೆಭಾಷೆಯಾಗಿಸಿದ ಜನರಿಗೆ ಮಾತ್ರ ಕರ್ನಾಟಕದ ತ್ರಿಭಾಷಾ ಸೂತ್ರ ಅನುಕೂಲ, ಉಳಿದವರೆಲ್ಲ ಮಾಧ್ಯಮಿಕ ಹಂತದಲ್ಲಿ ನಾಲ್ಕು ಭಾಷೆಗಳ ಜೊತೆಗಿರುವುದು ಅನಿವಾರ್ಯ. ಹೀಗಿದ್ದರೂ ಪ್ರಾದೇಶಿಕ ಭಾಷೆಗಳನ್ನು ಹೊರತುಪಡಿಸಿ ಇಲ್ಲಿಯ ಎಲ್ಲ ಉಪಭಾಷೆಗಳ ಬರವಣಿಗೆಯ ಲಿಪಿ ಕನ್ನಡವೇ ಆಗಿರುವುದು ಹಾಗೂ ಗ್ರಾಂಥಿಕ ಭಾಷೆಯ ಬಳಕೆಯಲ್ಲೂ ಕರಾವಳಿಯ ಕನ್ನಡವೇ ಮಂಚೂಣಿಯಲ್ಲಿರುವುದು ಕುತೂಹಲಕಾರಿ ಸಂಗತಿ. ಆದರೆ ಈ ಭಾಗದ ಅನೇಕ ಮಕ್ಕಳಿಗೆ ಕನ್ನಡ ಉಚ್ಚಾರಿಸುವುದು, ಅದನ್ನು ಸರಾಗವಾಗಿ ಓದುವುದು, ಎಲ್ಲ ಬಿಟ್ಟು ಅದನ್ನು ನಿರರ್ಗಳವಾಗಿ ಮಾತನಾಡುವುದೂ ಒಂದು ಸವಾಲಿನ ಸಂಗತಿ. ಎಲ್ಲ ಡಿಗ್ರಿಗಳನ್ನು ಪಡೆದ ನಂತರವೂ ಕರಾವಳಿಯ ಅನೇಕ ಪ್ರತಿಷ್ಟಿತರಿಗೆ(ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕೆಲವರಿಗೆ ಕೂಡ) “ನಾನು, ನೀನು, ಅವನು, ಅವಳು, ಹಾಲು, ಹಾಳು, ಅನ್ನ, ಅಣ್ಣ, ಹಕ್ಕಿ, ಅಕ್ಕಿ” ಇತ್ಯಾದಿ ಪದಗಳ ಉಚ್ಚಾರಣೆಯನ್ನು ಸಮರ್ಪಕವಾಗಿ ಮಾಡಲು ಸಾಧ್ಯವಿಲ್ಲದೇ ಇಂದಿಗೂ ಕಷ್ಟಪಡುವುದನ್ನು ಕಾಣುತ್ತೇವೆ. ಇಲ್ಲಿಯ ಅನೇಕರಿಗೆ ಕನ್ನಡ ಮನೆಭಾಷೆಯಾಗಿಲ್ಲದೇ ಇರುವುದೂ ಇದಕ್ಕೆ ಕಾರಣ.
ಈ ಮೇಲಿನ ಸಮಸ್ಯೆ ಕೇವಲ ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವಲ್ಲ, ಕರ್ನಾಟಕದ ಎಲ್ಲ ಗಡಿ ಜಿಲ್ಲೆಗಳಿಗೂ ಕೆಲವು ಕಡೆ ಒಳ ಜಿಲ್ಲೆಗಳಿಗೂ ಇದು ಅನ್ವಯಿಸುತ್ತದೆ. ಈ ಜಿಲ್ಲೆಗಳಲ್ಲಿ ಅಲ್ಲಿಯ ನೆರೆ ರಾಜ್ಯದ ಭಾಷೆಯನ್ನು ಮಾತೃಭಾಷೆಯಾಗಿಸಿದ ಅಥವಾ ಉಪ ಭಾಷೆಗಳನ್ನು ಮಾತೃಭಾಷೆಯಾಗಿಸಿದ ಸಂಖ್ಯೆಯೇ ಹೆಚ್ಚಾಗಿದೆ. ಕೋಲಾರ ಜಿಲ್ಲೆಯೊಂದರಲ್ಲಿ ಕನ್ನಡದಷ್ಟೇ ತಮಿಳು, ತೆಲುಗು, ಜತೆಗೆ ಅಲ್ಲಿಯ ಪ್ರಾದೇಶಿಕ ಭಾಷೆಯಾದ ಮರಸುಗನ್ನಡವನ್ನು ಮಾತನಾಡುವವರ ಸಂಖ್ಯೆ ಇದೆ. ಈ ರೀತಿಯ ವೈವಿಧ್ಯತೆ ಬೆಳಗಾಂ, ಚಾಮರಾಜನಗರ, ಕೊಡಗು,
ರಾಯಚೂರು ಮತ್ತು ಇತರ ಜಿಲ್ಲೆಗಳಲ್ಲೂ ಕಾಣಬಹುದು, ಬೆಂಗಳೂರು ನಗರ ಜಿಲ್ಲೆಯಲ್ಲಂತೂ ಇದಕ್ಕೆ ಕೊರತೆಯೇ ಇಲ್ಲ. ಈ ಎಲ್ಲ ಮಕ್ಕಳಿಗೆ ನಮ್ಮ ಗ್ರಾಂಥಿಕ ಕನ್ನಡ ಎರಡನೇ ಭಾಷೆ ಎನ್ನುವ ಸತ್ಯವನ್ನು ನಾವೀಗ ಅರಿತುಕೊಳ್ಳಬೇಕಾಗಿದೆ.
ಆದ್ದರಿಂದ ಕರ್ನಾಟಕದಲ್ಲಿ ಕನ್ನಡದ ಪರವಾದ ಭಾಷಾನೀತಿಯನ್ನು ರೂಪಿಸುವಾಗ ಈ ಎಚ್ಚರವನ್ನೂ ಗಮನಿಸಲೇಬೇಕು. ಇಲ್ಲದೇ ಹೋದಲ್ಲಿ ಹಿಂದಿ ಹೇರಿಕೆ ಅಥವಾ ಇಂಗ್ಲೀಷ್ ವ್ಯಾಮೋಹದಿಂದ ನಾವು ಏಕಭಾಷಾ ಸೂತ್ರಕ್ಕೆ ಒಳಗಾಗುವ ಅಪಾಯವಿರುತ್ತದೆಯೋ ಹಾಗೇ ಕನ್ನಡವೂ ಇಲ್ಲಿಯ ಜನರಿಗೆ ಹೇರಿಕೆಯೇ ಆಗುತ್ತದೆ. ಕನ್ನಡ ಹೇರಿಕೆಯ ಭಾಷೆಯಾದರೆ ಅದರಿಂದ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಅಲ್ಲದೇ ಕನ್ನಡವನ್ನು ಮಾತ್ರ ಕಡ್ಡಾಯಗೊಳಿಸುವುದರ ಮೂಲಕ ಅನೇಕ ಪ್ರಾದೇಶಿಕ ಮತ್ತು ಉಪಭಾಷೆಗಳನ್ನು ಸಾಯಿಸಿ ಬಿಡುವ ಅಪಾಯವೂ ಇದೆ.
ಹಾಗೇ ನೋಡಿದರೆ ಲಿಪಿಗಳಿಲ್ಲದ ಕರ್ನಾಟಕದ ಉಪಭಾಷೆಗಳು ತಲೆಮಾರಿನಿಂದ ತಲೆಮಾರಿಗೆ ಬಾಯ್ದರೆಯಾಗಿ ಹರಿದು ಬಂದಿವೆ. ಆಶ್ಚರ್ಯವೆಂದರೆ ಕನ್ನಡದಷ್ಟೇ ಸಮರ್ಥವಾದ ಜನಪದ ಸಾಹಿತ್ಯಗಳೂ ಈ ಭಾಷೆಗಳಲ್ಲಿವೆ. ಕರಾವಳಿಯ ತುಳುವಿನಂತಹಾ ಭಾಷೆ, ಪಂಚ ದ್ರಾವಿಡ ಭಾಷೆಗಳಲ್ಲಿ ಇತರ ಯಾವುದಕ್ಕೂ ಕಡಿಮೆ ಇಲ್ಲವೆಂಬಂತೆ ಸಾವಿರಾರು ವರ್ಷಗಳಿಂದ ಹರಿದು ಬಂದಿದೆ. ಹೀಗಿರುವಾಗ ಈ ಎಲ್ಲ ಭಾಷೆಗಳನ್ನು ಗೌರವಿಸುತ್ತಾ ಸಮರ್ಪಕ ಭಾಷಾ ನೀತಿಯನ್ನು ರಚಿಸದಿದ್ದರೆ ಈ ಭಾಷೆಗಳು ಸೊರಗುವ ಅಥವಾ ನಮ್ಮದೇ ಶ್ರೇಷ್ಠ, ಕನ್ನಡದ ಅಗತ್ಯವಿಲ್ಲವೆನ್ನುವ ಸಂದರ್ಭವೂ ಬರಬಹುದು. ಯಾಕೆಂದರೆ ತುಳುವಿನಂತಹಾ ಭಾಷಿಕರಿಗೆ ಕನ್ನಡ ಕಲಿಯುವುದು ಮತ್ತು ಇಂಗ್ಲೀಷ್ ಕಲಿಯುವುದು ಎರಡೂ ಒಂದೇ. ಕಲಿಕಾ ವಿಧಾನದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಇರಬಹುದು, ಆದರೆ ಪರಿಣಾಮದಲ್ಲಿ ಇವರಿಗೆ ಇಂಗ್ಲೀಷ್ ಕಲಿತರೆ ಹೆಚ್ಚು ಅನುಕೂಲ. ಆದ್ದರಿಂದ ಸರಕಾರ ಭಾಷಾವೃದ್ಧಿಯ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು. ಅಲ್ಪಸಂಖ್ಯಾತ ಭಾಷೆಯ ಬಗ್ಗೆಯೂ ವಿಶೇಷ ಗಮನವನ್ನು ಹರಿಸುತ್ತಾ ನಮ್ಮ ನಾಡ ಭಾಷೆಯನ್ನು ಗಟ್ಟಿಗೊಳಿಸುವ ಯೋಜನೆ ರೂಪಿಸಬೇಕು. ಭಾಷಾ ಸಾಮರಸ್ಯದಿಂದ ಮಾತ್ರ ಭಾಷಾ ಪ್ರಬುದ್ಧತೆ ಸಾಧಿಸಲು ಸಾಧ್ಯ, ಇದನ್ನು ತಿಳಿದೇ ಮುಂದಡಿ ಇಡಬೇಕು.
(ಡಾ.ಸುಂದರ ಕೇನಾಜೆ ಅವರು ಜಾನಪದ ಸಂಶೋಧಕರು, ಲೇಖಕರು ಹಾಗೂ ಅಂಕಣಕಾರರು)