*ಡಾ.ಸುಂದರ ಕೇನಾಜೆ.
ಇದೊಂದು ಜನಪದ ಕತೆ, ತುಳುನಾಡಿನ ಪಾಡ್ದನ(ತುಳು ಜನಪದ ಕಾವ್ಯ ಪ್ರಕಾರ)ವೊಂದರ ಕತೆ. ಪಾಡ್ದನಗಾರ್ತಿಯರು ಹಾಡಿ ಜನಪ್ರಿಯಗೊಳಿಸಿದ ಈ ಕತೆ ಹೀಗಿದೆ, ಆತ ಬಲ್ಲಾಳ(ತುಳುನಾಡಿನ ತುಂಡರಸ ಅಥವಾ ಜಮೀನ್ದಾರ) ಆಕೆ ಮಂಙಣೆ (ಕೆಲವೇ ದಿನಗಳ ಹಿಂದೆ ಮದುವೆಯಾದ ದೈವ ನರ್ತಕನ ಹೆಂಡತಿ) ಆತ ಊರಿನ ದೊರೆ. ಅಧಿಕಾರವಿದೆ, ಅಂತಸ್ತಿದೆ, ಸಂಸಾರವಿದೆ, ಸಂಬಂಧಗಳಿವೆ. ಆಕೆಗೋ ಸೌಂದರ್ಯವಿದೆ, ಹಾಸಿ ಹೊದೆಯುವ ಬಡತನದೊಂದಿಗೆ ಸಂತೃಪ್ತಿಯೂ ಇದೆ.
ಹೀಗಿರುವಾಗ ಒಂದು ಬೆಳಿಗ್ಗೆ ಸೂರ್ಯ ಮೇಲೇಳುವ ಮುನ್ನ ತನ್ನ ಸಾವಿರ ಮುಡಿ(42 ಸೇರು ಅಂದರೆ ಒಂದು ಮುಡಿ) ಗದ್ದೆಯ
ಕಡಿ(ಮೇಲಿನ ಗದ್ದೆಯಿಂದ ಕೆಳಗಿನ ಗದ್ದೆಗೆ ನೀರು ಹೋಗುವ ಪಾತಿ) ನೀರು ಕಟ್ಟಲು ಬಲ್ಲಾಳ ಕೊಟ್ಟು(ಗುದ್ದಲಿ) ಹಿಡಿದು ಹೋಗುತ್ತಾನೆ. ಗದ್ದೆಯ ಬದುವಿನಲ್ಲಿ ನಡೆದು ಹೋಗುತ್ತಿದ್ದಾತನಿಗೆ ತನ್ನ ಮನೆಯಂಗಳದ ಎಳಬಿಸಿಲಿಗೆ ನೀಳ ಕೂದಲನ್ನು ಒಣಗಿಸುತ್ತಿದ್ದ ಮಂಙಣೆ ಕಾಣಿಸುತ್ತಾಳೆ. ಕಂಡದ್ದೇ ಬಲ್ಲಾಳ ಅಲ್ಲೇ ಮೂರ್ಚಿತನಾಗುತ್ತಾನೆ. ಒಂದಷ್ಟು ಹೊತ್ತಲ್ಲಿ ಸಾವರಿಸಿ, ಹೋದ ಕೆಲಸವನ್ನೂ ಬಿಟ್ಟು ಬೂಡಿಗೆ(ತುಳುನಾಡಿನ ಹಿರಿಮನೆಗಳು) ಹಿಂತಿರುಗುತ್ತಾನೆ. ಮನೆಗೆ ಬಂದವನೇ ಊಟ ನಿದ್ದೆ ಸೇರದೇ ಮಂಙಣೆಯ ಧ್ಯಾನದಲ್ಲೇ ಕಳೆಯುತ್ತಾನೆ.
ಅದಾಗಲೇ ಈ ಬಲ್ಲಾಳನ ತಲೆಯಲ್ಲಿ ಆಕೆಯನ್ನು ಪಡೆಯುವ ದುಷ್ಟ ಉಪಾಯವೊಂದು ಹೊಳೆಯುತ್ತದೆ. ಅದು ತನ್ನ ಮನೆಯ ಉತ್ಸವದಲ್ಲಿ ನಡೆಸುವ ಕುತಂತ್ರ.ನೇಮದ ದಿನ ನಿಗದಿಪಡಿಸಿ, ಮಂಙಣೆಯ ಗಂಡನಿಗೆ ಕರೆ ಕಳುಹಿಸುತ್ತಾನೆ. ದೈವ ನರ್ತಕ ಮತ್ತು ಆತನ ಹೆಂಡತಿ ಮಂಙಣೆಯನ್ನು ಬೂಡಿಗೆ ಬರ ಹೇಳುತ್ತಾನೆ. ಏನೂ ಅರಿಯದ ಮುಗ್ಧ ಕುಟುಂಬ ದೈವ ಚಾಕರಿ(ಸೇವೆ)ಗೆ ಅಣಿಯಾಗುತ್ತದೆ.
ಧರ್ಮದೈವ ಮುಖಕ್ಕೆ ಅರೆದಾಳ(ಹಳದಿ ಬಣ್ಣ) ಲೇಪಿಸಿ, ಬಿಳಿಕೆಂಪು ಚುಕ್ಕಿಗಳನ್ನಿಟ್ಟು, ಒಲಿ(ತೆಂಗಿನ ಎಳತು ಗರಿ), ಮುಡಿ(ದೊಡ್ಡ ಕಿರೀಟ) ಕಟ್ಟಿ ಎದ್ದು ನಿಲ್ಲುತ್ತದೆ. ಮಂಙಣೆ ತೆಂಬರೆ(ಚರ್ಮವಾದ್ಯ) ಹಿಡಿದು ದೈವ ಕುಣಿಸಲು ಪಾಡ್ದನ ಆರಂಭಿಸುತ್ತಾಳೆ. ಮುಂದೆ ದೈವ ಅವೇಶಗೊಳ್ಳಬೇಕು, ಅಭಯದ ನುಡಿ ಕೊಡಬೇಕು, ಬಲ್ಲಾಳನ ಉತ್ತರೋತ್ತರ ಅಭಿವೃದ್ಧಿಗೆ ಹರಸಬೇಕು….
ಆ ಹೊತ್ತಿಗೆ ಸರಿಯಾಗಿ ಉಪ್ಪರಿಗೆಯ ಮೇಲಿನಿಂದ ಜೋಡು ನಳಿಕೆಯ ಗುಂಡೆರಡು ಹಾರಿ ಬರುತ್ತದೆ. ಅದು ದೈವ ನರ್ತಕನ ಎದೆಯನ್ನು ಸೀಳಿ ಕೆಳಕ್ಕೆ ಬೀಳಿಸುತ್ತದೆ. ಮಂಙಣೆಯ ಆಕ್ರಂದನ ಮುಗಿಲು ಮುಟ್ಟುತ್ತದೆ, ಅಸಹಾಯಕ ನೆಲ ಬಾಯಿ ಬಿಟ್ಟಿರುತ್ತದೆ.
ಆಗ ಉಪ್ಪರಿಗೆಯ ಮೇಲಿಂದ ಬಲ್ಲಾಳನ ಧ್ವನಿ ಕೇಳುತ್ತದೆ, ತುಟಿಯಲ್ಲಿ ಕಿರುನಗೆ ಕಾಣುತ್ತದೆ, “ಹೆದರಬೇಡ ಮಂಙಣೆ…. ನಿನಗೆ ನಿನ್ನ ಗಂಡ ಹೋದರೇನಾಯಿತು…. ನಾನಿಲ್ಲವೇ? ನಿನಗಾಗಿ ಸಾವಿರ ಮುಡಿಯ ಭೂಮಿಯಿದೆ. ಸಂಮೃದ್ಧಿಯ ಈ ಬೂಡಿದೆ. ನಿನ್ನ ಸೇವೆಗೆ ನೂರಾರು ಆಳುಗಳಿದ್ದಾರೆ, ಬೂಡಿನ ಪಡ್ಪಿರೆ(ಜಗಲಿ) ದಾಟಿ ಒಳಗೆ ಬಾ…. ” ಎಂದು ಕರೆಯುತ್ತಾನೆ. ಈ ಉಪಾಯದಲ್ಲಿ ಅಪಾಯ ಅರಿತ ಮಂಙಣೆ, “ಸರಿ ಬಲ್ಲಾಳರೇ… ನಾನು ನಿಮ್ಮವಳಾಗಿ ನಿಮ್ಮ ಜೊತೆಗಿರುತ್ತೇನೆ. ಅದಕ್ಕೂ ಮೊದಲು ಈ ಸತ್ತ ಗಂಡನಿಗೊಂದು ಸಂಸ್ಕಾರ ನಡೆಸಿ, ಈತನ ಚಿತೆ ಸಿದ್ಧಪಡಿಸಿ, ಈತನಿಗೆ ಮುಕ್ತಿ ಸಿಗುವಂತೆ ಮಾಡಿ…. ಆ ಕೆಲಸ ಮೊದಲು ನಡೆಯಲಿ…” ಎನ್ನುತ್ತಾಳೆ. ಏಕೈಕ ಗುರಿಯ ಬಲ್ಲಾಳ ಮಂಙಣೆಯ ಪ್ರತಿ ಮಾತಿನಂತೆ ಓಡಾಡುತ್ತಾನೆ. ತನ್ನ ವಂಶಕ್ಕೇ ಮೀಸಲಿರುವ ಸಂಸ್ಕಾರ ಗದ್ದೆ(ಬಾಕಿತಿಮಾರ್)ಯಲ್ಲೇ ಚಿತೆ ಪೇರಿಸುತ್ತಾನೆ.
ಈಗ ಮಂಙಣೆ, ಸಂಪತ್ತು ತುಂಬಿದ ಬಲ್ಲಾಳನ ಬೂಡಿನಿಂದ ಒಂದೊಂದೇ ಅಮೂಲ್ಯ ವಸ್ತುಗಳನ್ನು ಚಿತೆಗೆ ಹಾಕುವಂತೆ ಪ್ರೇರೇಪಿಸುತ್ತಾಳೆ. ಮೋಹದ ಕಣ್ಣನ್ನು ಮಾತ್ರ ತೆರೆದಿದ್ದ ಬಲ್ಲಾಳ ತನ್ನ ಮನೆಯೊಳಗಿದ್ದ ಹಣ, ಆಭರಣ, ದವಸ, ಧಾನ್ಯ ಸಕಲವನ್ನೂ ತಂದು ಚಿತೆಗೆ ಹಾಕುತ್ತಾನೆ. ಬೂಡು ಬರಿದಾಗುತ್ತದೆ. ಚಿತೆ ಧಗಧಗ ಉರಿಯುತ್ತದೆ. ರಾಜ ಮರ್ಯಾದೆಯ ಶವ ಸಂಸ್ಕಾರ ದೈವ ನರ್ತಕನದ್ದಾಗುತ್ತದೆ.
ಪಾಡ್ದನಗಾರ್ತಿಯರು ಕತೆಯನ್ನು ಇಲ್ಲಿಗೂ ನಿಲ್ಲಿಸಬಹುದು, ಆದರೆ ನಿಲ್ಲಿಸುವುದಿಲ್ಲ. ಅವರ ಪ್ರಕಾರ, ಮುಗ್ಧ ಜೀವದ ನಾಶಕ್ಕೆ ಈ ಸಂಪತ್ತಿನ ನಾಶ ಏನೇನು ಸಮವಲ್ಲ, ಆದ್ದರಿಂದ ಪ್ರತಿಕಾರದ ತೀಕ್ಷ್ಣ ಮುಖಕ್ಕೆ ಹಾತೊರೆಯುತ್ತಾರೆ. ಪಾಡ್ದನದ ಕ್ಲೈಮೆಕ್ಸ್ ಎಂಬಂತೆ ಮಂಙಣೆಯೂ ಚಿತೆಗೆ ಹಾರುತ್ತಾಳೆ.
ಅದರೆ ಇದೂ ಪಾಡ್ದನದ ಕ್ಲೈಮೆಕ್ಸ್ ಆಗಿರುವುದಿಲ್ಲ. ಯಾಕೆಂದರೆ ಪಾಡ್ದನಗಾರ್ತಿಯರ ಪ್ರಕಾರ, ಇದು ಕೇವಲ ಕಟ್ಟು ಕತೆಯಲ್ಲ, ಶೋಷಣೆಯ ಅಥವಾ ಕೈಲಾಗದವರ ಕತೆಯೂ ಅಲ್ಲ. ನಿಷ್ಪಾಪಿ ಜನರನ್ನು ಕೊಂದು ತಿನ್ನುವ ದೊರೆಗಳ ಕತೆ. ಹೀಗೆ ಮೆರೆಯುವ ಯಾವ ದೊರೆಯೂ ಜನಪದರಿಗೆ ಬೇಡ, ಅದು ಸಮಾಧಾನವೂ ಇಲ್ಲದ ನ್ಯಾಯೋಚಿತವೂ ಅಲ್ಲದ ಸ್ಥಿತಿ. ಕತೆ ಮತ್ತೆ ಮುಂದುವರಿಯುತ್ತದೆ.
ಮಾನಸಿಕ ಸ್ಥಿಮಿತತೆ ಕಳೆದು ಅಕ್ರಮ, ಅಹಂಕಾರವನ್ನೇ ಸಂಪತ್ತೆಂದು
ಭಾವಿಸಿ ನಿಜ ಸಂಪತ್ತುಗಳನ್ನೆಲ್ಲಾ ಕಳೆದುಕೊಂಡ ಬಲ್ಲಾಳನಿಗೆ ಮಂಙಣೆ ಇಲ್ಲದ ಜೀವನ, ಸಂಪತ್ತು ಇಲ್ಲದ ಜಗತ್ತು ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಅದೇ ಚಿತೆಗೆ ತಾನೂ ಹಾರಿ ಪ್ರಾಣ ಬಿಡುತ್ತಾನೆ.
ಆಶ್ಚರ್ಯ ನೋಡಿ, ಪಾಡ್ದನಗಾರ್ತಿಯರು ಇನ್ನಾದರೂ ಕತೆ ನಿಲ್ಲಿಸಬಹುದಲ್ಲವೇ? ಇಲ್ಲ, ಇಷ್ಟಕ್ಕೂ ಇವರಿಗೆ ತೃಪ್ತಿಯಾಗುವುದಿಲ್ಲ. ಬಲ್ಲಾಳನ ಇಡೀ ಕುಟುಂಬವೇ ಸಾಮೂಹಿಕ ಶಿಕ್ಷೆಗೊಳಗಾಗುವಂತೆ ಮಾಡುತ್ತಾರೆ, ಒಬ್ಬೊಬ್ಬರಾಗಿ ಚಿತೆಗೆ ಹಾರುವಂತೆ ಮಾಡುತ್ತಾರೆ….. ಪಾಡ್ದನದ ಈ ಭಾಗ ಅತಿರೇಕದಂತೆ ಕಂಡರೂ ತುಳು ಜನಪದ ಹಾಡುಗಾರ್ತಿಯರ ಆಕ್ರೋಶ, ಅಧಿಕಾರಶಾಹಿ ವ್ಯವಸ್ಥೆಯ ವಿರುದ್ಧದ ಪ್ರತಿಕಾರ ಮಾತ್ರ ಅನನ್ಯವಾದುದು.
ನೇಜಿ(ನಾಟಿ) ಗದ್ದೆಯಲ್ಲಿ ನಾಲ್ಕೈದು ಗಂಟೆಗಳ ಕಾಲ ಈ ಪಾಡ್ದನವನ್ನು ಹಾಡಿ ಕೊನೆಯ ಭಾಗವನ್ನು ಮುಗಿಸಿಯೇ ಪಾಡ್ದನಗಾರ್ತಿಯರು ನಿಟ್ಟುಸಿರು ಬಿಡುತ್ತಿದ್ದರು.
ತುಳುನಾಡಿನ ಪಾಡ್ದನ ಕಟ್ಟಿಕೊಡುವ ಈ ಕತೆಯನ್ನು ಇತ್ತೀಚಿನ ವರೆಗೂ ಎಚ್ಚರಿಕೆಯ ಗಂಟೆ ಎಂಬಂತೆ ಅಲ್ಲಲ್ಲಿ ಕೇಳಬಹುದಾಗಿತ್ತು. ನಿಜ ಘಟನೆ ಎಂಬಂತೆ ನಿದರ್ಶನ ಕೊಡುತ್ತಲೂ ಹಾಡುತ್ತಿದ್ದರು. ಅದೇನೇ ಇದ್ದರೂ ಆಧುನಿಕ ಸಿನಿಮಾಕ್ಕೋ, ನಾಟಕಕ್ಕೋ ಕಥಾವಸ್ತುವಾಗಬಲ್ಲ, ಅದಕ್ಕಿಂತಲೂ ಹೆಚ್ಚಾಗಿ ವಾಸ್ತವ ಜಗತ್ತಿಗೆ ಕನ್ನಡಿಯಾಗಬಲ್ಲ ಈ ದೀರ್ಘ ಕಥನದ ವಿಸ್ತೃತ ಒಳ ಹೊರಹು ಮತ್ತು ಒಳಹು ಅವರವರ ವಿವೇಚನೆ ಬಿಟ್ಟಿದ್ದು ಎಂದು ಮಾತ್ರ ಹೇಳಬಹುದು.
(ಡಾ.ಸುಂದರ ಕೇನಾಜೆ ಅಂಕಣಕಾರರು ಹಾಗೂ ಜಾನಪದ ಸಂಶೋಧಕರು)