*ಡಾ.ಸುಂದರ ಕೇನಾಜೆ.
ಮಧ್ಯಯುಗೀನ ಉತ್ತರ ಕೇರಳದ ರೋಚಕ ಬದುಕನ್ನು ತಿಳಿದುಕೊಳ್ಳ ಬಯಸುವವರು ಈ ಕಥೆಗಳನ್ನು ಓದಿಕೊಳ್ಳಬೇಕು. ಆ ಕಾಲಘಟ್ಟದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಧೀರ ಪರಂಪರೆಯ ವಿವರಣೆಯನ್ನು ನೀಡುವ ಜನಪದ ಕಾವ್ಯಗಳು ಕೇರಳದ ತುಂಬೆಲ್ಲ, ಜತೆಗೆ ಕರಾವಳಿ ಕರ್ನಾಟಕದ ಒಂದಷ್ಟು ಭಾಗಗಳಲ್ಲೂ ಹರಡಿಕೊಂಡಿವೆ. ಈ ಕಾವ್ಯಗಳನ್ನು ಮಲೆಯಾಳಂನಲ್ಲಿ ವಡಕ್ಕನ್ ಪಾಟ್ಟ್(ಉತ್ತರ ಕೇರಳದ ವಡಗರ, ಮಾಹಿಯ ಕೆಲವು ಭಾಗಗಳಲ್ಲಿ ಪ್ರಚಲಿತವಿರುವ ಹಾಡು) ಎಂದು ಕರೆಯುತ್ತಿದ್ದು, ಇದು ಲಯಬದ್ಧ
ಜನಪದ ಹಾಡುಗಳಾಗಿವೆ. ಈ ಪಾಟ್ಟುಗಳಲ್ಲಿ ಮುಖ್ಯವಾಗಿ ಮೂರು ವಿಧಗಳು, ಪುತ್ತೂರಂ ಪಾಟ್ಟುಗಳ್(ಪುತ್ತೂರಂ ಹಾಡುಗಳು), ತಚ್ಚೋಳಿ ಪಾಟ್ಟುಗಳ್(ತಚ್ಚೋಳಿ ಹಾಡುಗಳು), ಒಟ್ಟ ಪಾಟ್ಟುಗಳ್(ಬಿಡಿ ಹಾಡುಗಳು). ಈ ಮೂರೂ ಹಾಡುಗಳ ಗದ್ಯ ರೂಪಾಂತರ ಕನ್ನಡದಲ್ಲಿ ಲಭ್ಯವಿದೆ ಎನ್ನುವುದೇ ಇಲ್ಲಿಯ ವಿಷಯ. ಅತ್ಯಂತ ಸುಂದರವಾದ, ಅಷ್ಟೇ ಲಯಬದ್ಧವಾದ ಈ ರೂಪಾಂತರ ಓದುಗರ ಮನಸೂರೆಗೊಳ್ಳದೇ ಇರಲಾರದು.
ತಚ್ಚೋಳಿ ಪಾಟ್ಟುಗಳು ಕೇರಳದ ಜನಪದವೀರ ತಚ್ಚೋಳಿ ಒದೇನನ(ನಾಯರ್ ಜನಾಂಗ), ಪುತ್ತೂರಂ ಪಾಟ್ಟುಗಳು ಆರೋಮಲ್ ಚೇಗವನ್(ಈಡಿಗ ಜನಾಂಗ) ಕುರಿತಾದದ್ದು. ಒಟ್ಟ ಪಾಟ್ಟುಗಳು ಕೆಲವು ವೀರರ ಹಾಗೂ ಒದೇನನ ಬಗೆಗಿನ ಬಿಡಿ ಹಾಡುಗಳಾಗಿವೆ. ಈ ಎಲ್ಲಾ ಪಾಟ್ಟುಗಳ ನಾಯಕರು ಅಂಕದ ಕಲಿಗಳು.
ಅಂಕವೆಂದರೆ ಒಂದು ವಿಶಿಷ್ಟವಾದ ದ್ವಂದ್ವಯುದ್ಧ. ಈ ಯುದ್ಧ ಆಢ್ಯ ಮನೆತನದ ಪ್ರತಿನಿಧಿಗಳ ಮಧ್ಯೆ ನಡೆಯುತ್ತಿತ್ತು. ಅವರಿಗಾಗಿ ಈ ಪ್ರತಿನಿಧಿಗಳು ಕಾದಾಡುತ್ತಿದ್ದರು. ಕಳರಿ ಸಾಧನೆಯಲ್ಲಿ ಹೆಸರು ಪಡೆದ ವೃತ್ತಿಪರ ಕಾದಾಟಗಾರರು ಈ ಅಂಕಗಳಲ್ಲಿ ಭಾಗವಹಿಸುತ್ತಿದ್ದರು. ಈ ಕಾಳಗದಲ್ಲಿ ಕಾದಾಳುಗಳು ಗೆಲ್ಲುವ ಇಲ್ಲಾ ಮರಣ ಹೊಂದುವ, ಕೆಲವೊಮ್ಮೆ ವಂಚನೆಗೂ ಒಳಗಾಗುವ ಸಂಭವವಿತ್ತು. ಆದರೆ ಈ ವೀರರು ಒಮ್ಮೆ ಅಂಕ ಸ್ವೀಕರಿಸಿದರೆ ಮತ್ತೆ ವಿಮುಖರಾಗುವ ಸಂದರ್ಭಗಳೇ ಇರಲಿಲ್ಲ. ತಾನು ಯಾವ ಆಢ್ಯನ ಪರವಾಗಿ ಅಂಕಕ್ಕೆ ಇಳಿದ್ದಿದ್ದೇನೋ ಅವನಿಗೆ ಗೆಲುವನ್ನು ತಂದು ಕೊಡುವ, ಆ ಮೂಲಕ ಅಸಾಧ್ಯ ಸಂಪತ್ತನ್ನು ಸಂಗ್ರಹಿಸಿ ತಾನೂ ಪಡೆದುಕೊಳ್ಳುವ, ಕೆಲವೊಮ್ಮೆ ಹೆಣ್ಣನ್ನೂ ಬಳುವಳಿಯಾಗಿ ಪಡೆಯುವ ಕಾದಾಟ ಇದಾಗಿತ್ತು.
ಇಂತಹಾ ಅಂಕಕಲಿಗಳಲ್ಲಿ ಈ ಇಬ್ಬರು ವೀರರಲ್ಲದೇ, ತಚ್ಚೋಳಿ ಚಂದು, ಕಪ್ಪುಳ್ಳಿ ಕೋಮ, ಅರೋಮಲುಣ್ಣಿ, ಕಣ್ಣಪ್ಪನುಣ್ಣಿ, ಅರಿಂಙೋಡರ್, ಕೇಳಪ್ಪ ಇವೇ ಮೊದಲಾದ ಇನ್ನೂ ಅನೇಕರಿದ್ದರು. ಇವರೆಲ್ಲರ ಸಾಹಸಗಾಥೆಯನ್ನು ಹೇಳುವ ಸುದೀರ್ಘ ಜನಪದ ಕಾವ್ಯವೇ ಈ ವಡಕ್ಕನ್ ಪಾಟ್ಟುಗಳು. ಸಂದರ್ಭವೊಂದನ್ನು ಪುನರಪಿ ವರ್ಣಿಸುವ, ಆ ಸಂದರ್ಭದ ಜತೆ ಸಂವಾದಿಸುವಂತೆ ಮಾಡುವ, ಕಾಲವೊಂದರ ಘಟನೆಗಳೊಂದಿಗೆ ಅನುಸಂಧಾನಗೊಳಿಸುವ ವಿಶಿಷ್ಟ ಅನುಭವವನ್ನು ಈ ಪಾಟ್ಟು ಕಥೆಗಳು ನೀಡುತ್ತವೆ. ಅಂಕ ಹಿಡಿಯಲು ಹೋಗುವ ಮುನ್ನ ನಡೆಯುವ
ಅಲಂಕಾರ, ಅದಕ್ಕೂ ಮುನ್ನ ನಡೆಸುವ ಸ್ನಾನ, ಊಟ, ಶಿಷ್ಟಾಚಾರ ಇತ್ಯಾದಿಗಳ ವೈಭವ, ತನಗೆ ಒಲಿದ ಮತ್ತು ಒಲಿಯಬೇಕಾದ ಹೆಣ್ಣಿನ ಜತೆಗೆ ಎಲ್ಲೆ ಮೀರದೇ ನಡೆಯುವ ಸಂಭಾಷಣೆ, ವರ್ತನೆ ಹಾಗೂ ನಾನಾ ರೀತಿಯ ಕಳರಿ ಅಂಗ ಸಾಧನೆ ಇವೇ ಇಲ್ಲಿಯ ಗಮನ ಸೆಳೆಯುವ ಅಂಶಗಳು. ಆ ಕಾಲದ ಸಾಮಾಜಿಕ ಬದುಕು ಹೇಗೇ ಇದ್ದರೂ ಇಡೀ ಪಾಟ್ಟುಗಳು ತಮ್ಮ ನೈತಿಕ ಚೌಕಟ್ಟನ್ನು ಮೀರದೇ, ಎಲ್ಲವನ್ನೂ ಶೌರ್ಯ, ಅರ್ಥಿಕತೆ ಮತ್ತು ಸುಖಲೋಲುಪತೆಯಿಂದ ನೋಡುತ್ತಿದ್ದ ಪ್ರವೃತ್ತಿಯನ್ನು ತಿಳಿಯಬಹುದು. ಮಾನುಷ ನಂಬಿಕೆಗಳೊಂದಿಗೆ ಅತಿಮಾನುಷ ಶಕ್ತಿಗಳಿಗೆ ಆ ಕಾಲದ ಜನ ನೀಡುತ್ತಿದ್ದ ಪ್ರಾಮುಖ್ಯವೂ ಇಲ್ಲಿಯ ಮುಖ್ಯ ಸಂಗತಿ.
ಮೇಲಿನ ಎರಡು ಕೃತಿಗಳು ರೂಪಾಂತರಗೊಂಡು ಕೆಲವು ವರ್ಷಗಳೇ ಕಳೆದವು. ಹಾಗೆ ನೋಡಿದರೆ, ಮಲೆಯಾಳಂನಿಂದ ಕನ್ನಡಕ್ಕೆ ಬಂದಿರುವ ಉತ್ಕೃಷ್ಟ ಕೃತಿಗಳಲ್ಲಿ ಇವೆರಡೂ ಮುಖ್ಯವಾದುವು. ಹೀಗೆ ಅನೇಕ ಸೃಜನಶೀಲ ಕೃತಿಗಳು, ಧಾರಾವಾಹಿಗಳು ಭಾಷಾಂತರಗೊಂಡದ್ದು ಇಲ್ಲಾ ರೂಪಾಂತರಗೊಂಡದ್ದು ಇದೆ(ಕನ್ನಡದಿಂದ ಮಲೆಯಾಳಂಗೆ ಈ ಪ್ರಕ್ರಿಯೆ ನಡೆದದ್ದು ಹೋಲಿಕೆಯ ದೃಷ್ಟಿಯಿಂದ ಕಡಿಮೆ) ಅವುಗಳಲ್ಲಿ ಈ ಮೂರು(ಒಟ್ಟಂ ಪಾಟ್ಟುಗಳ ಕೃತಿ ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ) ರೂಪಾಂತರ ಕೃತಿಗಳನ್ನು ಇತಿಹಾಸ ಪ್ರಿಯರು, ಜನಪದಾಸಕ್ತರು, ಸೃಜನಶೀಲ ಬರಹಗಳ ಓದುಗರು ಗಮನಿಸಲೇಬೇಕು. ಮಲೆಯಾಳಂನ ಅತ್ಯಂತ ಸೊಗಸಾದ ಮತ್ತು ಅಷ್ಟೇ ರಸವತ್ತಾದ ಜನಪದ
ಕಾವ್ಯಗಳನ್ನು ಮೂಲದಲ್ಲಿ ಆಸ್ವಾದಿಸಲು ಹೇಗೆ ಸಾಧ್ಯವೋ ಹಾಗೇ ಈ ರೂಪಾಂತರವನ್ನೂ ಕಾಣಬಹುದು. ಈ ಕೆಲಸವನ್ನು ಶ್ರದ್ಧೆ ಮತ್ತು ಪ್ರೀತಿಯಿಂದ ಮಾಡಿದವರು ಕನ್ನಡ-ತುಳು-ಮಲೆಯಾಳಂ ಭಾಷೆಯ ವಿದ್ವಾಂಸ, ಹಿರಿಯ ಸಂಶೋಧಕ ಡಾ.ಕೆ ಕಮಲಾಕ್ಷರವರು. ಕೇರಳದ ಜನಪದವೀರ ತಚ್ಚೋಳಿ ಒದೇನನ್(ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಶಿಗ್ಗಾವಿ-೨೦೧೩), ಅಂಕಕಲಿಗಳ ವೀರಗಾಥೆ(ಅಕ್ಷತಾ ಪ್ರಕಾಶನ ಕಾಸರಗೋಡು-೨೦೨೨) ಇವು ಈಗಾಗಲೇ ಪ್ರಕಟಗೊಂಡ ಕೃತಿಗಳು. ಅಲ್ಲದೇ ಮಲೆಯಾಳಂನ ಸೃಜನಶೀಲ ನೀಳ್ಗತೆಗಳನ್ನು, ಬಿಡಿ ಲೇಖನಗಳನ್ನು ಕನ್ನಡಕ್ಕೆ, ಅಲ್ಲದೇ ಮಲೆಯಾಳಂ ತೋಟಂ ಮತ್ತು ತುಳು ಪಾಡ್ದನಗಳ(ದೈವದ ಹಾಡು) ಬಗ್ಗೆ ತೌಲನಿಕ ಅಧ್ಯಯನವನ್ನು ಕನ್ನಡದಲ್ಲಿ ಮಾಡಿರುವ ಡಾ. ಕಮಲಾಕ್ಷರವರ ಅಮೂಲ್ಯ ಕೆಲಸ ಈ ಮೂರು ಪಾಟ್ಟುಗಳ ಕುರಿತಾದದ್ದೂ ಆಗಿದೆ.
ಈ ಮೂರು ಕೃತಿಗಳನ್ನು ಓದಿದ್ದೇ ಆದರೆ, ಮಧ್ಯಯುಗೀಯ ಕೇರಳದ ಸ್ವತಂತ್ರ-ಸ್ವಚ್ಛಂದ ಬದುಕು, ಅರಸೊತ್ತಿಗೆ, ಸಣ್ಣಪುಟ್ಟ ಪಾಳೆಗಾರಿಕೆ, ಭೂಮಾಲಿಕತ್ವ, ಗೇಣಿ ವಸೂಲಿ, ಮಾತೃಮೂಲಿಯ ಕೌಟುಂಬಿಕ ವ್ಯವಸ್ಥೆ, ಹೆಣ್ಣಿನ ಸ್ಥಾನಮಾನ, ಮೇಲ್ವರ್ಗದ ದರ್ಪ, ಆರಾಧನಾ ಸಂಸ್ಕೃತಿ, ಗಂಡು ಹೆಣ್ಣಿನ ಸಂಬಂಧ, ನಡೆ-ನುಡಿ, ಆಚಾರ-ವಿಚಾರ, ಆಹಾರ-ವಿಹಾರ, ಉಡುಗೆ-ತೊಡುಗೆ, ತುಳುನಾಡಿನ ಸಂಬಂಧ, ಮುಸ್ಲಿಂ ವ್ಯಾಪಾರ, ಐರೋಪ್ಯರ ಪ್ರಭಾವ ಇತ್ಯಾದಿ ಒಂದು ಕಾಲದ ಸಮಗ್ರ ಚಿತ್ರಣ ಮತ್ತು
ಸಂಸ್ಕೃತಿಯನ್ನು ತಿಳಿದುಕೊಳ್ಳಬಹುದು. ಎಲ್ಲಕ್ಕಿಂತಲೂ ಮೇಲಾಗಿ ವಡಕ್ಕನ್ ಪಾಟ್ಟುಗಳ ರಸಾಸ್ವಾದವನ್ನು ಗದ್ಯರೂಪದಲ್ಲೂ ಆಸ್ವಾದಿಸಬಹುದು. ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕನ್ನಡದಲ್ಲಿ ಅತ್ಯಂತ ಅಪ್ಯಾಯಮಾನವಾಗಿ ಇದನ್ನು ನಿರೂಪಿಸಲಾಗಿದೆ. ಈಗಾಗಲೇ ನಾಟಕ, ಸಿನಿಮಾ ಮೂಲಕ ಪ್ರಸಿದ್ಧಿ ಪಡೆದ ಈ ಪಾಟ್ಟುಗಳನ್ನು ಓದುವ ಮೂಲಕ ಆಸ್ವಾದಿಸುವ ಒಂದು ಬಗೆ ಈ ರೂಪಾಂತರ. ಕರ್ನಾಟಕದ ಕರಾವಳಿ ಮತ್ತು ಹಳೆ ಮೈಸೂರು ಭಾಗಗಳ ಮೇಲೆ ಮಲೆಯಾಳಂ ಸಂಸ್ಕೃತಿ ಬೀರಿರಬಹುದಾದ ಪ್ರಭಾವವನ್ನೂ ಇದರಿಂದ ತಿಳಿಯಬಹುದೋ ಏನೋ?ಆದ್ದರಿಂದ ಈ ಪಾಟ್ಟ್ ಕಥೆಗಳನ್ನು ತಚ್ಚೋಳಿ ಒದೇನನ ಹೆಸರಿನಂತೆ ಕೊಂಡಾಟದಿಂದ ಓದಲು ಕಾರಣರಾದ ಡಾ.ಕೆ ಕಮಲಾಕ್ಷರವರ ಕೆಲಸವನ್ನು ಶ್ಲಾಘಿಸುತ್ತೇನೆ.
(ಡಾ.ಸುಂದರ ಕೇನಾಜೆ ಅಂಕಣಕಾರರು. ಜಾನಪದ ಸಂಶೋಧಕರು.)