*ಎಂ.ನಾ.ಚಂಬಲ್ತಿಮಾರ್.
ಯಾವ ಊರಲ್ಲಿ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಮುಂಜಾನೆ ಮನೆಮನೆ ದಿನಪತ್ರಿಕೆ ಹಾಕುವ ಮೊದಲ ಉದ್ಯೋಗ ಮಾಡಿದನೋ….
ಯಾವ ಊರಲ್ಲಿ ಅತಿಯಾಸೆಯಿಂದ ತೀರ ಎಳವೆಯಲ್ಲೇ ಮೊದಲ ಬಾರಿ ವೇದಿಕೆಯೇರಿ ಏಕಪಾತ್ರಾಭಿನಯ ಮಾಡಿದನೋ…
ಯಾವ ಊರಲ್ಲಿ ಬಡತನ, ಹಸಿವಿನಿಂದ ಕಂಗೆಟ್ಟು ಗಂಜಿಯ ತೆಳಿಯಲ್ಲಿ ಅನ್ನದಗುಳು ಹುಡುಕಿದನೋ….
ಯಾವ ಊರಿನ ಬಸ್ಟೇಂಡಲ್ಲಿ ಹತಾಶೆಯಿಂದ ತಲೆತಗ್ಗಿಸಿ ಕಣ್ಣೀರಿಟ್ಟು ನಿರಾಶೆಯಿಂದ ಕುಸಿದು ಕುಳಿತನೋ……
ಅದೇ ಊರಲ್ಲೀಗ.. ಅದೇ ಹುಡುಗ ಅಕ್ಷರಶಃ ರಾಜನಂತೆ ಗೌರವಾದರದ ಮಾನ ಸನ್ಮಾನ ಪಡೆದಿದ್ದಾನೆ.!!!
ಅದೂ ಆತ ಓಡಾಡಿ ಅರಳಿದ ಅದೇ ಶಾಲೆಯಲ್ಲಿ.. ಮೊದಲಕ್ಷರ ಕಲಿಸಿದ
ಅಧ್ಯಾಪಿಕೆ ಮತ್ತು ಅದೇ ಊರವರ ಮುಂದೆ!!!
ಇದಲ್ಲವೇ ಸಾಧನೆ….??
ಇದು ವ್ಯಕ್ತಿಯೊಬ್ಬನಿಗೆ ಸಂದ ಪದ್ಮಗೌರವದಷ್ಟೇ ತೂಕದ ಶ್ರೇಷ್ಠ ಅಂಗೀಕಾರದ ಮಾನ್ಯತೆ.
ಇಂಥದ್ದೊಂದು ಭಾವುಕ ಕ್ಷಣಗಳಿಗೆ ಮೊನ್ನೆ ಮಾನ್ಯ ಜ್ಞಾನೋದಯ ಹಿರಿಯ ಬುನಾದಿ ಶಾಲೆ ವೇದಿಕೆಯಾಯಿತು.ಅದು ಕನ್ನಡ ಸಿನಿಮಕ್ಕೆ ಕೀರ್ತಿ ಕಿರೀಟ ತೊಡಿಸಿದ ಚಾರ್ಲಿ777 ಸಿನಿಮಾ ನಿರ್ದೇಶಕ, ನಮ್ಮ ಗಡಿನಾಡ ಹುಡುಗ ಕಿರಣ ನ ಜೊತೆ ಒಂದು ಸಂತಸದ ಸಂಜೆ ಕಳೆದ ಸಾರ್ಥಕ ಕಾರ್ಯಕ್ರಮ. ಆಯೋಜಿಸಿದವರು 38ವರ್ಷದ ಹಿರಿತನದ ಪಕ್ವತೆ ಉಳ್ಳ ಮಾನ್ಯದ ಮಾನ್ಯತೆಯ ಸಂಕೇತ ಎಂದೇ ಬಿಂಬಿತವಾದ ಸಾಮ್ರಾಟ್ (ರಿ) ಮಾನ್ಯ.
ಚಾರ್ಲಿ ಖ್ಯಾತಿಯ ಕಿರಣನ ಬಾಲ್ಯ ಅರಳಿದ್ದು ಇದೇ ಮಾನ್ಯದಲ್ಲಿ. ಆತ ಸಾಂಸ್ಕೃತಿಕ, ಸಾಮಾಜಿಕ ಬದುಕಿಗೆ ಕಾಲೂರಿದ್ದು ಕೂಡಾ ಇದೇ ಸಾಮ್ರಾಟಿನ ಮೂಲಕ.ಈ ಎಲ್ಲಾ ನೆನಪುಗಳನ್ನು ಮರು ಮೆಲುಕಿದ ಸಂತಸದ ಸಂಜೆ ವಿಭಿನ್ನ ಮತ್ತು ವಿನೂತನ ಕಾರ್ಯಕ್ರಮ. ಇದಕ್ಕೆ ಅಧ್ಯಕ್ಷ, ಗಣ್ಯ ಅತಿಥಿಗಳೆಂದಿಲ್ಲ. ಕ್ಲಬ್ಬಿನ ಸದಸ್ಯರು ಮತ್ತು ಕ್ಲಬ್ಬಿನೊಡನೆ ಆಪ್ತ ಸಂಬಂಧ ಹೊಂದಿದ ಆಪ್ತೇಷ್ಟರನ್ನಷ್ಟ್ಟೇ ಕರೆಯಲಾಗಿತ್ತು. ಅವರೆಲ್ಲ ಸುತ್ತ ಕುಳಿತರು. ಕಿರಣ ಅಮ್ಮ, ತಮ್ಮ, ಸೋದರಿಯೊಂದಿಗೆ ಬಂದಿದ್ದ.
ಬಾಲ್ಯದ ಬಡತನದಲ್ಲಿ ಆಸರೆಯಾದ ಊರವರ ಮುಂದೆ ಅದೇ ಮುಗ್ಧ ಹುಡುಗನಾಗಿ ವಿನಯದಿಂದ ನಿಂತಿದ್ದ!
ಜೀವನ ಯಾನದ ನೆನಪುಗಳನ್ನು ರಂಗುರಂಗಿನ ಕಟ್ಟುಕತೆಯಾಗಿಸದೇ, ಅನುಭವಿಸಿದ ಬಡತನ ಮತ್ತು ಅದರ ಕುಲುಮೆಯಿಂದಲೇ ಸಾಧನೆಯ ಕಡೆಗೆ ಏಣಿಇಟ್ಟದ್ದನ್ನು ಹಸಿ ಹಸಿಯಾಗಿ ಹೇಳಿದ….!!
ಕೇಳಿದವರ ಮನಸಿನ ಜತೆ ಕಣ್ಣೂ ಕರಗಿತು. ಗಂಟಲೊಣಗಿತು. .
ಅಲ್ಲಿ ಸಾಸಿವೆ ಬಿದ್ದರೂ ಕೇಳುವಂತ ಮೌನ ಆವರಿಸಿತ್ತು..!
ಪ್ರೇರಣೆಯ ಸ್ಫೂರ್ತಿಯ ಮಾತುಗಳು ಮೊರೆಯುತಿತ್ತು!
ಕಿರಣನನ್ನ ನಡುವೆ ಕೂರಿಸಿ ಕಿರಣನನ್ನು ಬಲ್ಲವರು ಮಾತಾಡಿದರು. ಕೆಲವರು ಕಿರಣನ ಸಾಧನೆ, ಕನಸುಗಳ ಕುರಿತು ಪ್ರಶ್ನೆ ಕೇಳಿದರು. ಅನೇಕರು ಕಿರಣನ ಮಾತುಗಳಿಗೆ ಕಿವಿಯಾದರು…
ಇದು ಕಿರಣನ ಕತೆಯಷ್ಟೇ ಅಲ್ಲ ಕತ್ತಲಕೂಪದಲ್ಲಿರುವ ಅನೇಕರ ಬದುಕಿಗೆ ಕಿರಣ ಬೀರುವ ಕತೆಯೂ ಹೌದು.!
ಕಿರಣ ಕಾಸರಗೋಡಿನ ಮೊದಲ ಪರಿಪೂರ್ಣ ನಿರ್ದೇಶಕ. ಹಳ್ಳಿಯ ಗ್ರಾಮೀಣತೆಯ ನಡುವಿಂದ ಕನಸನೇರಿ ಹೊರಟವ. ಚಾರ್ಲಿಯಂತ ಸಿನಿಮಾ ಗೆಲುವು ಕಾಸರಗೋಡಿನ ಮತ್ಯಾರಿಗೂ ಒಲಿಯಲಿಲ್ಲ! ಉಳಿದ ಊರಲ್ಲೆಲ್ಲಾದರೂ
ಕಿರಣ ಇರುತ್ತಿದ್ದರೆ ಈ ಸಾಧನೆಗೆ ಆ ನಾಡಿಗೆ ನಾಡೇ ಸಂಭ್ರಮಿಸುತಿತ್ತು. ಅಭಿನಂಧನೆಯ ಉತ್ಸವ ಆಚರಿಸುತ್ತಿದ್ದರು..
ಕಾಸರಗೋಡು ಮಾತ್ರ ಮೌನದ ಛಾದರ ಹೊದ್ದಿದೆ!!
ಆದರೆ ಮಾನ್ಯದ ಮಾನ್ಯತೆಯ ಸಾಮ್ರಾಟ್ ಸದ್ದಿಲ್ಲದೇ ಗ್ರಾಮೀಣ ಶುದ್ದತೆಯ ಮಗುಮನಸ್ಸಿಂದ ಆಡಂಬರಗಳಿಲ್ಲದೇ ಕಿರಣನನ್ನು ಮರೆಯದೇ ಪ್ರೀತಿ ಉಣಿಸಿದ್ದಾರೆ..
ಆತ ಬೆಳೆದುಬಂದ ಕಾಲದ ಹೆಜ್ಜೆ ಗುರುತುಗಳಾದ ಚಿತ್ರ ಗಳ ಮಾಲೆ ಪೋಣಿಸಿದ ಅಭಿನಂಧನಾ ಪತ್ರ ಇತ್ತು ಆದರಿಸಿದ್ದಾರೆ. ಬೆಳೆದ ಕತೆಯನ್ನು ಸೂಕ್ಷ್ಮವಾಗಿ ಸಾರುವ ಡಾಕ್ಯುಫಿಷನ್ ಪ್ರದರ್ಶಿಸಿದ್ದಾರೆ…
ಇವ ನಮ್ಮವ ಇವ ನಮ್ಮವನೆಂದು ಕೊಂಗಾಟದಿಂದ ಕೊಂಡಾಡಿದ್ದಾರೆ..
ಇದೆಲ್ಲ ಕಂಡು ಕಿರಣನ ಕಣ್ಣೊದ್ದೆಯಾಗಿದೆ. ಭಾವೋತ್ಕರ್ಷವಾದರೂ ಅದುಮಿ ಹಿಡಿದು ಕೂತಿದ್ದಾನೆ..
ಕೊನೆಗೆ ಬಿದಿರೊಂದು ಎತ್ತರಕ್ಕೇರಬೇಕಾದರೆ ಸೂಕ್ತ ಮಣ್ಣುಸಿಗಬೇಕು. ಅದರೊಳಗೆ ಆಳಕ್ಕಿಳಿಯಬೇಕು. ನನ್ನ ಪಾಲಿಗೆ ಮಾನ್ಯದ ಮಣ್ಣು ಅಂಥದ್ದು. ಅದಕ್ಕೆ ನಾನು ತಲೆತಗ್ಗಿಸುವೆ.. ಎಂದೆಂದಿಗೂ ಈ ಊರಿಗೆ ಕೃತಜ್ಞನಾಗಿರುವೆ ಎಂದ. ಬದುಕಿನ ಪ್ರತಿಹೆಜ್ಜೆ, ಅಲ್ಲಿ ಸಿಕ್ಕಿದ ಪ್ರತಿಯೊಬ್ಬರನ್ನೂ ಮನದ ಕೋಶದೊಳಗೆ ಕಿರಣ ಬಂಧಿಸಿಟ್ಟಿದ್ದಾನೆ. ಅವರೆಲ್ಲರ ಹೆಸರು ಸಹಿತನೆನಪುಗಳು ಜೋಪಾನವಾಗಿವೆ. ಅದನ್ನು ದೃಶ್ಯದಂತೆ ಮಾತಿನಲ್ಲೂ ಕಟ್ಟಲಾತ ಪಳಗಿದ್ದಾನೆ..
ಗಡಿನಾಡ ಹುಡುಗನಿಗೆ ಉಜ್ವಲ ಭವಿಷ್ಯ ಹಾರೈಸುತ್ತ ಜೊತೆಗೆ ಉಂಡು ನಕ್ಕುನಲಿದ ಈ ಕಾರ್ಯಕ್ರಮ ಮಾನ್ಯಕ್ಕೆ ಭೂಷಣ.
ನಮ್ಮ ಮನಸ್ಸಲ್ಲಿ ಬಹುಕಾಲ ಉಳಿಯುವಂಥಾದ್ದು. ಅಂದ ಹಾಗೆ ಕಿರಣನ ಸಾಧನೆ ಸುಳ್ಯಕ್ಕೂ ಹೆಮ್ಮೆ.. ಕಿರಣನ ತಂದೆಯ ಊರು ಸುಳ್ಯ. ಕಾಸರಗೋಡಿನಂತೆ ಸುಳ್ಯದಲ್ಲಿಯೂ ಬಾಲ್ಯವನ್ನು ಕಳೆದ ಹುಡುಗ ಕಿರಣ ರಾಜ್..
(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರು)