*ಎಂ.ನಾ. ಚಂಬಲ್ತಿಮಾರ್.
ಕಾಸರಗೋಡಿನ ಪ್ರೇಕ್ಷಣೀಯ ಆಕರ್ಷಣೆಗಳಲ್ಲೊಂದಾದ ಅನಂತಪುರ ಸರೋವರ ಕ್ಷೇತ್ರದಲ್ಲಿ ಇತ್ತೀಚೆಗೆ ಪುನರುದಿಸಿಕೊಂಡ ಮರಿಮೊಸಳೆ ನಿಧಾನಕ್ಕೆ ಜನಸ್ನೇಹಿಯಾಗತೊಡಗಿದೆ. ಅದೀಗ ಭಕ್ತರಿಗೆ ದರ್ಶನ ನೀಡುತ್ತಾ ಕ್ಷೇತ್ರ ಸರೋವರದಲ್ಲಿ ಓಡಾಡುತ್ತಾ, ಬಿಸಿಲುಣ್ಣುತ್ತಾ ಬಾಲಲೀಲೆ ತೋರುತ್ತಿದೆ. ಇದರ ದರ್ಶನ ಪಡೆಯುವುದೇ ಸದ್ಯ ಭಜಕರ ಆನಂದ….
ಸರೋವರ ಕ್ಷೇತ್ರ ಅನಂತಪುರದಲ್ಲಿ
ಕಳೆದ ಐದು ತಿಂಗಳ ಹಿಂದೆಯಷ್ಟೇ ಪುನರುದಿಸಿ ಅಚ್ಚರಿ ಸೃಷ್ಠಿಸಿದ್ದ ಮೊಸಳೆ ಮರಿ ಈಗ ನಿಧಾನಕ್ಕೆ ಜನಸ್ನೇಹಿಯಾಗತೊಡಗಿದೆ. ಭಕ್ತರಿಗೆ ದರ್ಶನ ನೀಡುತ್ತಲೇ ನೀರಾಟ ಆಡುತ್ತಿದೆ. ತಣ್ಣಗಿನ ಹೊತ್ತಿಗೆ ನಿರ್ಭಯದಿಂದ ಗರ್ಭಗುಡಿಯ ಕೋನದಲ್ಲೇ ಹಾಯಾಗಿ ಮಲಗಿ ನಿರ್ಭೀತಿಯಿಂದ ಬಿಸಿಲುಣ್ಣುತ್ತಿದೆ..!
ಕ್ಷೇತ್ರಕ್ಕಾಗಮಿಸುವ ನಾನಾ ಊರಿನ ಭಕ್ತರ ಪಾಲಿಗೆ ಇದೇ ಭಗವದ್ದರ್ಶನ ಎಂಬಂತೆ ದಿವ್ಯದರ್ಶನದ ಪುಳಕ. ಮರಿಮೊಸಳೆಯ ಈ ಪುಟಾಣಿ ಬಾಲಲೀಲೆಯೇ ಒಂದು ಸುಂದರ, ಅನನ್ಯತೆಯ ದೃಶ್ಯ ಕಾವ್ಯ..
ಅನಂತಪುರ ಕ್ಷೇತ್ರ ತಟಾಕದಲ್ಲಿ ಈ ಹಿಂದೆ ವಾಸಿಸುತ್ತಿದ್ದ ಮೊಸಳೆ “ಬಬಿಯ” ತನ್ನ ವಯೋಸಹಜ ವಾರ್ಧಕ್ಯದಿಂದ ಬಳಲಿ 2022 ಅಕ್ಟೋಬರ್ 7ಕ್ಕೆ ವಿಷ್ಣುಪಾದ ಸೇರಿ, ಬ್ರಹ್ಮೈಕ್ಯವಾಗಿತ್ತು. ತದನಂತರ ಬರಿದಾಗಿದ್ದ ಕ್ಷೇತ್ರ ಸರೋವರದಲ್ಲೊಂದು ಮೂಕತೆ ಸೃಷ್ಟಿಯಾಗಿತ್ತು. ಆದರೆ ಮತ್ತೊಂದು ಮೊಸಳೆ ಮರಿ ತಾನಾಗಿಯೇ ಪ್ರತ್ಯಕ್ಷಗೊಳ್ಳುವುದೆಂದು ಅಂದೇ ದೈವಜ್ಞರು ನುಡಿದಿದ್ದರು. ಕಾಕತಾಳೀಯ ಎಂಬಂತೆ 2023ನ.7ರಂದು ಮೊದಲ ಬಾರಿಗೆ ಭಕ್ತರಿಗೆ ದರ್ಶನ ನೀಡುವಮೂಲಕ ಪ್ರತ್ಯಕ್ಷ ಕಂಡ ಈಗಿನ ಮೊಸಳೆ ಮರಿಗೆ ಈಗ ಕೇವಲ ಐದು ತಿಂಗಳ ಎಳೆ ಹರೆಯ..!
ಆದ್ದರಿಂದಲೇ ಅದರ ಬಾಲಲೀಲೆ ನೋಡುವುದೇ ಚಂದ…
ಅನಂತಪುರದಲ್ಲಿ ಮೊಸಳೆ ಮರಿ ಪ್ರತ್ಯಕ್ಷಗೊಂಡಿದೆಯೆಂದು ಸುದ್ದಿಯಾದದ್ದೇ ತಡ..ಅದನ್ನು ನೋಡಿಯೇ ಖಾತರಿ ಪಡಿಸಬೇಕೆಂದು ಸಾವಿರಾರು ಮಂದಿ ಕ್ಷೇತ್ರಕ್ಕಾಗಮಿಸುತ್ತಿದ್ದರು. ಆದರೆ ಅಪರಿಚಿತ ಪರಿಸರ, ಮನುಷ್ಯ ಸಂಸರ್ಗದ ಅನುಭವ ರಾಹಿತ್ಯದಿಂದ ಅದು ಜನರಿದ್ದಾಗ ಕಾಣಿಸಿಕೊಳ್ಳುತ್ತಲೇ ಇರಲಿಲ್ಲ. ಅನೇಕರಿಗೆ ದರ್ಶನವಾಗದೇ ಇದ್ದ ಕಾರಣ ಇದು ಸುಳ್ಳು ಸುದ್ದಿಯೆಂದು ಜರೆದು ಮರಳಿದವರೂ ಇದ್ದಾರೆ.!!
ಆದರೀಗ ಐದೇ ಐದು ತಿಂಗಳಲ್ಲಿ ಮರಿ ಮೊಸಳೆ ಪರಿಸರಕ್ಕೆ ಹೊಂದಿದೆ. ಅದಕ್ಕೆ ಜನರ ಭಯ ನೀಗಿದೆ. ಆದ್ದರಿಂದ ಸೂರ್ಯ ತಣ್ಣಗಿರುವ ಹೊತ್ತಿಗೆ ಆತನ ನೀರಾಟ ನಡೆಯುತ್ತದೆ. ಗರ್ಭಗುಡಿಗೆ ತಾಗಿಕೊಂಡೇ ಧ್ಯಾನಸ್ಥನಂತೆ ಮಲಗುವ ವಾಡಿಕೆಯೂ ಇದೆ! ಈ ಹಿಂದೆ ಇದ್ದ ಅದೇ ಬಬಿಯನ ದಾರಿಯಲ್ಲೇ ಇದೆ ಈತನ ನಡೆ..
ರಕ್ತದಾಹಿಯಾದ ಕ್ರೂರ ಪ್ರಾಣಿಯೊಂದು ಸಿಹಿನೀರ ಕೊಳದಲ್ಲಿ, ಕ್ಷೇತ್ರವಾಸಿಯಾಗಿ ಹೀಗೆ ಬದುಕಲು ಸಾಧ್ಯವೇ..?
ಇದುವೇ ಎಲ್ಲರನ್ನೂ ಕಾಡುವ , ಉತ್ತರವೇ ಇಲ್ಲದ, ನಂಬಿಕೆ ದೃಢಪಡಿಸುವ ಪ್ರಶ್ನೆ.
ಈ ಮೊಸಳೆ ಮರಿಗೆ ಹಿಂದಿನ ಮೊಸಳೆಗೆ ನೀಡುತ್ತಿದ್ದ ನೈವೇದ್ಯ ಆಹಾರವನ್ನೇ ನೀಡಬೇಕೆಂದು ತಂತ್ರಿಗಳ,ಬ್ರಹ್ಮಜ್ಞರ ಆದೇಶವಾಗಿದೆ. ಇದರಂತೆ ಪೂಜಾ ಕೈಂಕರ್ಯದ ಬಳಿಕ ನೈವೇದ್ಯ ನೀಡಲಾಗುತ್ತದೆ. ಆದರೆ ಈ ವರೆಗೆ ಮೊಸಳೆ ಮರಿ ಬಾಯಗಲಿಸಿ ಬಂದು ತಿಂದದ್ದಿಲ್ಲ! ಅದಕ್ಕೆ ಕೈ ತುತ್ತು ಉಣ್ಣುವುದಿನ್ನೂ ಅಭ್ಯಾಸವಾಗಿಲ್ಲ. ಹಾಗಿದ್ದರೆ ಈ ಐದು ತಿಂಗಳು ಅದೇನನ್ನು ತಿಂದು ಬದುಕಿತು..?
ಇದಕ್ಕೆ ರೆಕ್ಕೆ,ಪುಕ್ಕ ಕಟ್ಟಿ ಕುಹಕ ಪ್ರಶ್ನೆಗಳೊಂದಿಗೆ ಅಪಹಾಸ್ಯದ ಲೇವಡಿ ಮಾಡುವವರಿಗೂ ಕೊರತೆಯಿಲ್ಲ. ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿರಲಾರ ಎಂಬ ಮಾತಿಲ್ಲವೇ..? ಹಾಗೆಯೇ ಜಲಚರ ಪ್ರಾಣಿಗೆ ಆಹಾರದ ದಾರಿಯನ್ನು ಸೃಷ್ಠಿಕರ್ತನೇ ತೋರಿಸಿರಬಹುದು. ಅದಲ್ಲವೇ ಸತ್ಯ..?
ಅದೇನು ತಿಂದಿದೆ..?ಸಸ್ಯಹಾರಿಯೋ/ಮಾಂಸಾಹಾರಿಯೋ..? ಇಂಥ ಪ್ರಶ್ನೆಗಳೇ ಈ ವಿಷಯದಲ್ಲಿ ಅಸಂಮಂಜಸ. ಏನೇ ತಿಂದಿರಲಿ…ಪ್ರಕೃತಿ ಸಹಜವಾದ ಗುಣಧರ್ಮ ಹೊಂದಿದ ಪ್ರಾಣಿಯೊಂದು ತನ್ನ ಮೂಲಸ್ವಭಾವಗಳನ್ನೇ ಮರೆತು ಕ್ಷೇತ್ರವೊಂದರಲ್ಲಿ ತಾಪಸಿಯಂತೆ ಬದುಕುವುದಲ್ಲವೇ ವೈಶಿಷ್ಟ್ಯ..?
ಹೌದು..ಮೊಸಳೆ ರಕ್ತದಾಹಿ. ಕ್ರೂರ ಸ್ವಭಾವದ ಪ್ರಾಣಿ. ನೀರಲ್ಲಿ ಅಸಮಬಲ ಪಡೆದ ಜೀವಿ. ಇಂಥ ಪ್ರಾಣಿಯೊಂದು ಮೂಲ ಗುಣ,ಸ್ವಭಾವಗಳನ್ನೆಲ್ಲ ಮರೆತು, ಯಾರ ಪೋಷಣೆಯ ಶಿಕ್ಷಣಗಳೂ ಇಲ್ಲದೇ ಸರೋವರ ಕ್ಷೇತ್ರದಲ್ಲಿ ನಿರುಪದ್ರವಿಯಾಗಿ, ಭಕ್ತಜನ ಬಂಧುವಾಗಿರುವುದೆಂದರೆ…??
ಈ ಕಾರಣದಿಂದಲೇ ಅನಂತಪುರ ಕ್ಷೇತ್ರಕ್ಕೆ ಪ್ರಸಿದ್ದಿ ಬಂದಿದೆ. ಮೊಸಳೆಯ ದರ್ಶನ ಪಡೆದವರು ಸಾಕ್ಷಾತ್ ಪದ್ಮನಾಭನ ದರ್ಶನವಾದಷ್ಟೇ ಪುಳಕಿತರಾಗುತ್ತಾರೆ. ಇಡೀ ದೇಶದ ಮತ್ತೆಲ್ಲೂ ಇಲ್ಲದ ಏಕೈಕ ಸೋಜಿಗದ ಸಾನ್ನಿಧ್ಯವಿದು. ಇಲ್ಲಿ ಉತ್ಪ್ರೇಕ್ಷೆಯ ಮಾತೇ ಇಲ್ಲ. ಇದು ಬಣ್ಣಿಸಿದ ಕಪೋಲಕಲ್ಪಿತ ಕತೆಯಲ್ಲ. ಇದು ಎಲ್ಲರಿಗೂ ಕಣ್ಣಿಗೆ ಕಾಣುವ ಸಹಜ ಸತ್ಯ. ಆದ್ದರಿಂದಲೇ ಒಂಟಿ ಮೊಸಳೆಯ ವೈಶಿಷ್ಟ್ಯ , ವೈಚಿತ್ರ್ಯಮಯ ಬದುಕೇ ಕೌತುಕ. ಅದೇ ನಂಬಿಕೆಯ ಊರುಗೋಲು…
(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರು)