ಮಂಗಳೂರು: ಕೇರಳ ರಾಜ್ಯದಲ್ಲಿ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ರೋಗೋದ್ರೇಕ ದೃಡಪಟ್ಟಿರುತ್ತದೆ. ಆದ ಕಾರಣ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೋಗ ಹರಡದಂತೆ ಅವಶ್ಯ ಮುನ್ನೆಚ್ಛರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆಫ್ರಿಕನ್ ಹಂದಿ ಜ್ವರವು ಸಾಕು ಮತ್ತು ಕಾಡು ಹಂದಿಗಳಲ್ಲಿ ವೈರಾಣು ನಿಂದ ಬರುವ ಸಾಂಕ್ರಮಿಕ ರೋಗವಾಗಿದ್ದು, ಸಾವಿನ ಪ್ರಮಾಣವು ಶೇ.100 ರವರೆಗೂ ತಲುಪಬಹುದಾಗಿದೆ. ಈ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಹಾಗೂ ಲಸಿಕೆ
ಇಲ್ಲದಿರುವುದರಿಂದ ನಿಯಮಾನುಸಾರ ರೋಗ ದೃಢೀಕರಣಗೊಂಡ ಪ್ರದೇಶದ 1 ಕಿ.ಮೀ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ವಧೆ ಮಾಡಬೇಕಾಗಿರುತ್ತದೆ. ಶೇ.100 ರಷ್ಟು ಸಾವಿನ ಪ್ರಮಾಣ ಇರುವುದರಿಂದ ಹಂದಿ ಸಾಕಾಣಿಕೆದಾರರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ʼʼಈ ವೈರಸ್ ಮನುಷ್ಯರಲ್ಲಿ ಯಾವುದೇ ರೋಗ ಉಂಟುಮಾಡುವುದಿಲ್ಲʼʼ.
ಈ ರೋಗವು ರಾಜ್ಯಕ್ಕೆ ಹಬ್ಬದಂತೆ ತಡೆಗಟ್ಟಲು ಕೇರಳ ರಾಜ್ಯಕ್ಕೆ ಸಂಪರ್ಕಿಸುವ ಗಡಿಭಾಗದ ಚೆಕ್ಪೋಸ್ಟ್ ಗಳನ್ನು ತೆರೆದು ಹಂದಿ ಹಾಗೂ ಹಂದಿ ಮಾಂಸಗಳ ಸಾಗಾಣಿಕೆ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಯ ಎಲ್ಲಾ ಹಂದಿ ಸಾಕಾಣಿಕೆದಾರರಿಗೆ ರೋಗ ಬರದ ಹಾಗೆ ಮುಂಜಾಗ್ರತೆ ಕ್ರಮವಹಿಸಲು ಸೂಚಿಸಲಾಗಿದೆ. ಪಶು ಪಾಲನಾ ಇಲಾಖೆಯ ಪಶುವೈದ್ಯಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಎಲ್ಲಾ ಹಂದಿ ಫಾರಂಗಳಿಗೆ ಭೇಟಿ ನೀಡಿ ಹಂದಿ ಸಾಕಾಣಿಕೆದಾರರಿಗೆ ಈ ಬಗ್ಗೆ ಸಲಹೆ ನೀಡುವಂತೆ ನಿರ್ದೇಶನ ನೀಡಲಾಗಿದೆ.
ಜಿಲ್ಲೆಯಲ್ಲಿ ಕಂಡು ಬಂದಿಲ್ಲ:
ಆಫ್ರಿಕನ್ ಹಂದಿ ಜ್ವರವು ಈ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡುಬಂದಿರುವುದಿಲ್ಲ. ಆದ್ದರಿಂದ ಹಂದಿ ಸಾಕಾಣಿಕೆದಾರರು ಮತ್ತು ಸಾರ್ವಜನಿಕರು ಭಯಭೀತರಾಗುವ ಅವಶ್ಯಕತೆಯಿರುವುದಿಲ್ಲ ಎಂದು ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.