*ಗಂಗಾಧರ ಕಲ್ಲಪಳ್ಳಿ.
ಸುಳ್ಯ: ತಪ್ಪದ ಹಳದಿ ರೋಗ ಬಾದೆ, ಎಲೆ ಚುಕ್ಕಿ ರೋಗದ ಆತಂಕ, ಮುಗಿಯದ ಬೇರು ಹುಳ ಸಮಸ್ಯೆ, ಮಾರುಕಟ್ಟೆ ಅಸ್ಥಿರತೆ, ಬೆಲೆ ಕುಸಿತ, ಹವಾಮಾನ ವೈಪರೀತ್ಯ.. ಹೀಗೆ ಅಡಿಕೆ ಕೃಷಿಗೆ ಆತಂಕ, ಸವಾಲುಗಳು ಮತ್ತು ಸಮಸ್ಯೆಗಳು ಹತ್ತಾರು. ಹಾಗೆಂದು ಕೃಷಿಕರು ಅಡಿಕೆ ಕೃಷಿಯನ್ನು ಕೈ ಬಿಡುತ್ತಿಲ್ಲ. ಅಡಿಕೆ ಕೃಷಿ ವಿಸ್ತರಿಸುತ್ತಾ ಹೊಗುತಿದೆ.ಅದರಲ್ಲೂ ಸುಳ್ಯ ತಾಲೂಕಿನ ಕೃಷಿಕರು ಅಡಿಕೆ ಕೃಷಿಯನ್ನೇ ಬಲವಾಗಿ ನೆಚ್ಚಿ ಕೊಂಡಿದ್ದಾರೆ ಮತ್ತು ಅಪ್ಪಿಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ತಾಲೂಕಿನಲ್ಲಿ ಹೆಚ್ಚಾಗಿರುವ ಅಡಿಕೆ ಕೃಷಿಯೇ ಅದಕ್ಕೆ ಅತ್ಯುತ್ತಮ ನಿದರ್ಶನ. ತೋಟಗಾರಿಕಾ ಇಲಾಖೆ ನೀಡುವ
ಲೆಕ್ಕಾಚಾರವೇ ಅದಕ್ಕೆ ಸಾಕ್ಷಿ. ಬೆಳೆ ಸಮೀಕ್ಷೆ ಪ್ರಕಾರ 2021ರಲ್ಲಿ ತಾಲೂಕಿನಲ್ಲಿ ಇದ್ದ ಅಡಿಕೆ ಕೃಷಿಯ ವಿಸ್ತೀರ್ಣ 16,842 ಹೆಕ್ಟೇರ್, 2022 ರಲ್ಲಿ ನಡೆಸಿದ ಬೆಳೆ ಸಮೀಕ್ಷೆಯ ಪ್ರಕಾರ ತಾಲೂಕಿನ ಅಡಿಕೆ ಬೆಳೆಯ ವಿಸ್ತೀರ್ಣ 18,054.17 ಹೆಕ್ಟೇರ್. ಅಂದರೆ ಒಂದು ವರ್ಷದಲ್ಲಿ ಬರೋಬರಿ 1212.17 ಹೆಕ್ಟೇರ್ ಅಡಿಕೆ ಕೃಷಿ ಹೆಚ್ಚಾಗಿದೆ. 2022 ಆಗಸ್ಟ್-ಅಕ್ಟೋಬರ್ ಅವಧಿಯಲ್ಲಿ ಬೆಳೆ ಸರ್ವೆ ನಡೆಸಲಾಗಿತ್ತು. ಈ ಸರ್ವೇಯಲ್ಲಿ ಅಡಿಕೆ ಕೃಷಿ ತಾಲೂಕಿನಲ್ಲಿ ಹೆಚ್ಚು ವಿಸ್ತರಣೆಯಾಗುತ್ತಿರುವುದು ಕಂಡು ಬಂದಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು.

ಯಾಕೆ ವಿಸ್ತರಣೆಯಾಗುತ್ತಿದೆ..?
ಹತ್ತು ಹಲವು ಸಮಸ್ಯೆ, ಸವಾಲುಗಳ ನಡುವೆಯೂ ಅಡಿಕೆ ಕೃಷಿ ಯಾಕೆ ಏರಿಕೆಯ ಹಾದಿಯಲ್ಲಿದೆ ಎಂದು ಕೇಳಿದರೆ ಅದಕ್ಕೂ ಹತ್ತಾರು ಉತ್ತರಗಳನ್ನು ಕೃಷಿಕರು ಮುಂದಿಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಕೃಷಿಗೆ ದೊರಕುವ ಉತ್ತಮ ಧಾರಣೆ ಒಂದು ಪ್ರಮುಖ ಕಾರಣ.ಕಳೆದ 3-4 ವರ್ಷಗಳಿಂದ ಅಡಿಕೆಗೆ ಉತ್ತಮ ಧಾರಣೆ ಸಿಗುವುದು ಲಭ್ಯ ಇರುವ ಪ್ರದೇಶಗಳಲ್ಲೆಲ್ಲಾ ಅಡಿಕೆ ಗಿಡ ನೆಡಲು ಕೃಷಿಕರಿಗೆ ಪ್ರೇರಣೆ ಆಗಿದೆ. ಅಡಿಕೆ ಕೃಷಿಯನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬಂದಿರುವ ಇಲ್ಲಿನ ಕೃಷಿಕರಿಗೆ ಸೂಕ್ತವಾದ ಪರ್ಯಾಯ ಬೆಳೆ ಸಿಗಲೇ ಇಲ್ಲಾ. ರಬ್ಬರ್, ಕರಿಮೆಣಸು, ತಾಳೆ ಸೇರಿ ಹಲವು ಕೃಷಿಗಳ ಬಗ್ಗೆ ಪರ್ಯಾಯ ಆಲೋಚನೆಗಳಿದ್ದರೂ ಅದನ್ನು ಮಾತ್ರ ನಂಬಿ ಬದುಕುವಂತಿಲ್ಲಾ ಎಂಬುದು ಕೃಷಿಕರ ಅಭಿಪ್ರಾಯ.

ಇತರ ಕೃಷಿಗೆ ಸರಿಯಾದ ಧಾರಣೆ, ಮಾರುಕಟ್ಟೆ ಇಲ್ಲದಿರುವುದು ಕೃಷಿಕರನ್ನು ಬೇರೆ ಕೃಷಿಯೆಡೆಗೆ ಆಕರ್ಷಿಸುತ್ತಿಲ್ಲ. ಸುಳ್ಯ ತಾಲೂಕಿನ ಕೃಷಿಕರಿಗೆ ಸಂಬಂಧಿಸಿದಂತೆ ಅಡಿಕೆಯೇ ಮುಖ್ಯ ಬೆಳೆ, ಇಲ್ಲಿನ ಕೃಷಿಕರಿಗೆ ಕೃಷಿ ಅತ್ಯಂತ ಸುಲಭ ಮತ್ತು ಸುಲಲಿತ. ಅಡಿಕೆ ಕೃಷಿಯ ಎಲ್ಲಾ ಕೆಲಸಗಳು ಇಲ್ಲಿನ ಪ್ರತಿಯೊಬ್ಬ ಕೃಷಿಕರಿಗೆ ಗೊತ್ತಿದೆ. ಅದುದರಿಂದಲೇ ಅಡಿಕೆ ಕೃಷಿಯನ್ನು ಬಿಟ್ಟು ಇಲ್ಲಿನ ರೈತ ಬೇರೆ ಕೃಷಿಯ ಬಗ್ಗೆ ಯೋಚನೆ ಮಾಡುತ್ತಿಲ್ಲ.ಉಪ ಬೆಳೆಯಾಗಿ ಇತರ ಕೃಷಿ ಮಾಡುತ್ತಿದ್ದರೂ, ಅಡಿಕೆಯೇ ಮುಖ್ಯ ಬೆಳೆ. ಹೀಗೆ ತಾಲೂಕಿನಲ್ಲಿ ಅಡಿಕೆ ಕೃಷಿ ವಿಸ್ತರಣೆ ಆಗುವುದಕ್ಕೆ ಹತ್ತಾರು ಕಾರಣಗಳನ್ನು ಮುಂದಿಡುತ್ತಾರೆ ಕೃಷಿಕರು. ಹಳದಿ ರೋಗ ಬಾದಿಸಿ ಕೃಷಿ ನಾಶವಾದ ಪ್ರದೇಶಗಳಲ್ಲಿ ಕೂಡ ಮತ್ತೆ ಅಡಿಕೆ ಗಿಡ ನೆಡುವ ಪ್ರಯೋಗವೂ ಕಂಡು ಬರುತಿದೆ, ಅಡಿಕೆಯ ಮೇಲಿನ ಭರವಸೆ, ನಿರೀಕ್ಷೆ ಈಗಲೂ ತಾಲೂಕಿನ ಕೃಷಿಕರಲ್ಲಿ ಹಾಗೆಯೇ ಇದೆ ಎಂಬುದನ್ನು ಇದು ಸೂಚಿಸುತ್ತದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸುಹಾನ.

ಹರಡುವ ಹಳದಿ-ಎರಡು ಸಾವಿರ ಹೆಕ್ಟೇರ್ ಕೃಷಿ ನಾಶ:
ಅಡಿಕೆಯ ಹಳದಿ ರೋಗ ಬಾಧೆ ಸುಳ್ಯ ತಾಲೂಕಿನ ಅಡಿಕೆ ಕೃಷಿಕರನ್ನು ಕಾಡುವ ಪ್ರಮುಖ ಸಮಸ್ಯೆ. ದಿನೇ ದಿನೇ ಹಳದಿ ರೋಗ ವ್ಯಾಪಿಸುತ್ತಾ ಹೋಗುತಿದೆ. 2019ರಲ್ಲಿ ಸಮೀಕ್ಷೆ ನಡೆಸಿದಾಗ ತಾಲೂಕಿನ 13 ಗ್ರಾಮಗಳಲ್ಲಿ 1225 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಕೃಷಿ ನಾಶವಾಗಿತ್ತು ಎಂದು ಪತ್ತೆ ಹಚ್ಚಲಾಗುತ್ತು. ಬಳಿಕದ ವರ್ಷಗಳಲ್ಲಿ ಈ ಗ್ರಾಮಗಳಲ್ಲಿ ಕೃಷಿಗೆ ಹಳದಿ ಬಾದೆ ಮುಂದುವರಿಯುವುದರ ಜೊತೆಗೆ ಇತರ ಕೆಲವು ಗ್ರಾಮಗಳಲ್ಲಿಯೂ ಹೊಸತಾಗಿ ರೋಗ ಹರಡುವುದು ಕಂಡು ಬಂದಿದೆ. ಒಟ್ಟಿನಲ್ಲಿ ತಾಲೂಕಿನಲ್ಲಿ ಎರಡು ಸಾವಿರ ಹೆಕ್ಟೇರ್ಗಿಂತಲೂ ಅಧಿಕ ಕೃಷಿ ನಾಶ ಹಳದಿ ರೋಗ ಬಾಧೆಯಿಂದ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸಂಪಾಜೆ, ಆಲೆಟ್ಟಿ, ಅರಂತೋಡು, ತೊಡಿಕಾನ,ಹರಿಹರ ಪಳ್ಳತ್ತಡ್ಕ, ಕಲ್ಮಕ್ಕಾರು, ಕೊಡಿಯಾಲ, ಕೊಲ್ಲಮೊಗ್ರ, ಮಡಪ್ಪಾಡಿ, ಮರ್ಕಂಜ, ನೆಲ್ಲೂರು ಕೆಮ್ರಾಜೆ, ಉಬರಡ್ಕ ಮಿತ್ತೂರು, ಅಮರ ಮುಡ್ನೂರು ಗ್ರಾಮದಲ್ಲಿ ಹಳದಿ ರೋಗ ಕಂಡು ಬಂದಿತ್ತು. ಇದೀಗ ಹೊಸತಾಗಿ ಅಜ್ಜಾವರ, ಮಂಡೆಕೋಲು,ಜಾಲ್ಸೂರು ಸೇರಿ ವಿವಿಧ ಭಾಗಗಳಲ್ಲಿಯೂ ಹಳದಿ ರೋಗ ವ್ಯಾಪಿಸುತಿದೆ.

ಆಫೋಷನ ತೆಗೆದ ಎಲೆಚುಕ್ಕಿ ರೋಗ:
ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ವಕ್ಕರಿಸಿದ ಎಲೆ ಚುಕ್ಕಿ ರೋಗ ತಾಲೂಕಿನ ಹಲವು ಅಡಿಕೆ ತೋಟಗಳನ್ನು ಆಫೋಷನ ತೆಗೆದುಕೊಂಡಿದೆ. ಬಲು ಬೇಗ ವ್ಯಾಪಿಸಿದ ಎಲೆ ಚುಕ್ಕಿ ರೋಗ ತೋಟಗಳಿಗೆ ಬೆಂಕಿ ಬಿದ್ದಂತೆ ಒಣಗಿ ಹೋಗಿದೆ. ತಾಲೂಕಿನಲ್ಲಿ ಸುಮಾರು 200 ಹೆಕ್ಟೇರಿಗಿಂತಲೂ ಹೆಚ್ಚು ಪ್ರದೇಶದಲ್ಲಿ ಎಲೆ ಚುಕ್ಕಿ ರೋಗದಿಂದ ಅಡಿಕೆ ತೋಟ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಹಳದಿ ರೋಗ ಕಂಡು ಬಂದ ಭಾಗದಲ್ಲಿ ಎಲೆ ಚುಕ್ಕಿ ಬಾದೆ ಹೆಚ್ಚು ಕಂಡು ಬಂದಿದೆ. ಔಷಧಿ ಸಿಂಪಡಣೆ ಮತ್ತಿತರ ಪ್ರತಿರೋಧಕ ಉಪಾಯಗಳಿಂದ ಎಲೆ ಚುಕ್ಕಿ ಬಾದೆಯಿಂದ ತೋಟಗಳನ್ನು ರಕ್ಷಿಸಲು ಕೃಷಿಕರು ಹರ ಸಾಹಸಪಡುತ್ತಿದ್ದಾರೆ.

‘ಸುಳ್ಯ ತಾಲೂಕಿನಲ್ಲಿ ಅಡಿಕೆ ಕೃಷಿ ವಿಸ್ತರಣೆ ಆಗುತಿದೆ. ಒಂದು ವರ್ಷದಲ್ಲಿ 1212 ಹೆಕ್ಟೇರ್ಗಳಷ್ಟು ಅಡಿಕೆ ತೋಟ ಹೆಚ್ಚಳ ಆಗಿರುವುದು ಬೆಳೆ ಸಮೀಕ್ಷೆಯಿಂದ ಕಂಡು ಬಂದಿದೆ
-ಸುಹಾನ, ಹಿರಿಯ ಸಹಾಯಕ ನಿರ್ದೇಶಕರು.ತೋಟಗಾರಿಕಾ ಇಲಾಖೆ. ಸುಳ್ಯ
” ಸುಳ್ಯ ತಾಲೂಕಿನ ಕೃಷಿಕರು ಅಡಿಕೆಯನ್ನೇ ನೆಚ್ಚಿಕೊಂಡಿದ್ದಾರೆ.ಅಡಿಕೆ ಕೃಷಿ ಈ ಭಾಗದ ಕೃಷಿಕರಿಗೆ ಸುಲಭವಾದ ಕೃಷಿ ಹಾಗು ಉತ್ತಮ ಧಾರಣೆ ಮತ್ತು
ಮಾರುಕಟ್ಟೆ ಇದಕ್ಕೆ ಕಾರಣ. ಸರಿಯಾದ ಮಾರುಕಟ್ಟೆ ಇಲ್ಲದ ಕಾರಣ ಪರ್ಯಾಯ ಕೃಷಿಯತ್ತ ಕೃಷಿಕರು ಒಲವು ತೋರುತ್ತಿಲ್ಲ’
-ಲಕ್ಷ್ಮೀ ನಾರಾಯಣ ಕಜೆಗದ್ದೆ.
ಕೃಷಿಕರು.
