ಲಂಡನ್: ಭಾರತ ಮತ್ತು ಇಂಗ್ಲೆಂಡ್ ತಂಡಗಳ ಮಧ್ಯೆ ನಡೆಯುತ್ತಿರುವ ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ ಸರಣಿಯ ಕೊನೆಯ ಟೆಸ್ಟ್ಗುರುವಾರ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈಗಾಗಲೇ 2–1ರಿಂದ ಮುನ್ನಡೆಯಲ್ಲಿರುವ ಆತಿಥೇಯರು ಸರಣಿ ಗೆಲುವಿನ ಸಂಭ್ರಮ ಆಚರಿಸಬೇಕಾದರೆ, ಈ ಪಂದ್ಯದಲ್ಲಿ ಜಯಿಸಬೇಕು ಇಲ್ಲವೇ ಡ್ರಾ ಮಾಡಿಕೊಳ್ಳಬೇಕು. ಆದರೆ ಶುಭಮನ್ ಗಿಲ್ ಬಳಗಕ್ಕೆ ಸರಣಿ ಜಯಿಸುವ
ಅವಕಾಶ ಇಲ್ಲ. ಆದರೆ ಈ ಪಂದ್ಯದಲ್ಲಿ ಗೆದ್ದರೆ 2–2ರ ಸಮಬಲ ಸಾಧಿಸಬಹುದು. ಓಲ್ಡ್ ಟ್ರಾಫರ್ಡ್ನಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಸೋಲಿನ ದವಡೆಯಿಂದ ತಪ್ಪಿಸಕೊಂಡು ಡ್ರಾ ಮಾಡಿಕೊಂಡ ಭಾರತದ ಆಟಗಾರರ ಆತ್ಮವಿಶ್ವಾಸ ಈಗ ಉತ್ತುಂಗದಲ್ಲಿದೆ. ಈ ಪಂದ್ಯದಲ್ಲಿ ಭಾರತ ತಂಡವು ವಿಕೆಟ್ಕೀಪರ್’ ರಿಷಭ್ ಪಂತ್ ಅವರಿಲ್ಲದೇ ಕಣಕ್ಕಿಳಿಯಲಿದೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಪಂತ್ ಅವರ ಕಾಲಿನ ಬೆರಳಿಗೆ ಚೆಂಡು ಬಡಿದು ಗಾಯಗೊಂಡಿತು. ಆದ್ದರಿಂದ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ. ಈ ಸರಣಿಯಲ್ಲಿ ಅವರು ಎರಡು ಶತಕ ಗಳಿಸಿದ್ದಾರೆ. ಒಟ್ಟು 479 ರನ್ಗಳು ಅವರ ಖಾತೆಯಲ್ಲಿವೆ. ಅವರ ಬದಲಿಗೆ ಧ್ರುವ ಜುರೇಲ್ ಕಣಕ್ಕಿಳಿಯಲಿದ್ದಾರೆ.
ಆತಿಥೇಯ ತಂಡವೂ ನಾಯಕ ಬೆನ್ ಸ್ಟೋಕ್ಸ್ ಬಲಭುಜದ ಗಾಯದಿಂದಾಗಿ ಆಡುತ್ತಿಲ್ಲ. ಅವರ ಬದಲಿಗೆ ಓಲಿ ಪೋಪ್ ನಾಯಕತ್ವ ವಹಿಸುವರು.ವೇಗದ ಬೌಲರ್ಗಳಾದ ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸ್ ಮತ್ತು ಸ್ಪಿನ್ನರ್ ಲಿಯಾಮ್ ಡಾಸನ್ ಕೂಡ ಆಡುವುದಿಲ್ಲ.
ಇನ್ನೊಂದೆಡೆ ಭಾರತ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ಅವರು ಕಣಕ್ಕಿಳಿಯುವುದು ಖಚಿತವಾಗಿಲ್ಲ. ಸರಣಿ ಆರಂಭಕ್ಕೂ ಮುನ್ನ ಬೂಮ್ರಾ ಅವರು ಕಾರ್ಯಭಾರ ನಿಯಮದ ಪ್ರಕಾರ ಮೂರು ಪಂದ್ಯಗಳಲ್ಲಿ ಆಡಲಿರುವರು ಮತ್ತು ಎರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆಯುವರು. ಬೂಮ್ರಾ ವಿಶ್ರಾಂತಿ ಪಡೆದರೆ, ಮೊಹಮ್ಮದ್ ಸಿರಾಜ್ ಅವರೊಂದಿಗೆ ಆಕಾಶ್ ದೀಪ್ ವೇಗದ ಬೌಲಿಂಗ್ ಹೊಣೆ ನಿಭಾಯಿಸಬೇಕಿದೆ. ಸ್ಪಿನ್ನರ್ ಕುಲ್ದೀಪ್ ಯಾದವ್ ಕಣಕ್ಕಿಳಿಯುವ ಸಾಧ್ಯತೆಯೂ ಇದೆ.
ತಂಡಗಳು
ಭಾರತ: ಶುಭಮನ್ ಗಿಲ್ (ನಾಯಕ) ಯಶಸ್ವಿ ಜೈಸ್ವಾಲ್ ಕೆ.ಎಲ್. ರಾಹುಲ್ ಸಾಯಿ ಸುದರ್ಶನ್ ಅಭಿಮನ್ಯು ಈಶ್ವರನ್ ಕರುಣ್ ನಾಯರ್ ರವೀಂದ್ರ ಜಡೇಜ ಧ್ರುವ ಜುರೇಲ್ (ವಿಕೆಟ್ಕೀಪರ್) ವಾಷಿಂಗ್ಟನ್ ಸುಂದರ್ ಶಾರ್ದೂಲ್ ಠಾಕೂರ್ ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ಪ್ರಸಿದ್ಧ ಕೃಷ್ಣ ಆಕಾಶ್ ದೀಪ್ ಕುಲದೀಪ್ ಯಾದವ್ ಅನ್ಷುಲ್ ಕಂಬೋಜ್ ಅರ್ಷದೀಪ್ ಸಿಂಗ್ ಎನ್. ಜಗದೀಶನ್ (ವಿಕೆಟ್ಕೀಪರ್).
ಇಂಗ್ಲೆಂಡ್: ಒಲಿ ಪೋಪ್ (ನಾಯಕ) ಜಾಕ್ ಕ್ರಾಲಿ ಬೆನ್ ಡಕೆಟ್ ಜೋ ರೂಟ್ ಹ್ಯಾರಿ ಬ್ರೂಕ್ ಜೇಕಬ್ ಬೆಥೆಲ್ ಜೆಮಿ ಸ್ಮಿತ್ (ವಿಕೆಟ್ಕೀಪರ್) ಕ್ರಿಸ್ ವೋಕ್ಸ್ ಗಸ್ ಅಟ್ಕಿನ್ಸನ್ ಜೆಮಿ ಒವರ್ಟನ್ ಜೋಶ್ ಟಂಗ್. ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ) ನೇರಪ್ರಸಾರ; ಸೋನಿ ಸ್ಪೋರ್ಟ್ಸ್ ನೆಟ್ವರ್ಕ್.





