ಸುಳ್ಯ:ಸುಳ್ಯ -ಕೊಡಿಯಾಲಬೈಲು – ದುಗ್ಗಲಡ್ಕ ರಸ್ತೆಯಲ್ಲಿ ಬಸ್ಸು ಸಂಚಾರ ಪ್ರಾರಂಭವಾಗಿ ಮರುದಿನ ನಿಲ್ಲಿಸಿರುವ ಘಟನೆ ಬೆಳಕಿಗೆ ಬಂದಿದೆ.ಶಕ್ತಿ ಯೋಜನೆ 500 ಕೋಟಿ ಫಲಾನುಭವಿಗಳ ಗುರಿ ಮುಟ್ಟಿದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಬಸ್ ಓಡಾಟಕ್ಕೆ ಚಾಲನೆ ನೀಡಿದ್ದರು.
ಆದರೆ ಕೇವಲ ಒಂದು ಟ್ರಿಪ್ ಸಂಚಾರ ಮಾಡಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಈ ಕುರಿತು ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ
ಸಭೆಯಲ್ಲಿ ಸದಸ್ಯರು ಕೆಎಸ್ಆರ್ ಟಿಸಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು,ಆಲೆಟ್ಟಿಗೆ, ಮಡಪ್ಪಾಡಿಗೆ ಬಸ್ಸು ಸಂಚಾರ ಪ್ರಾರಂಭಿಸಲಾಗಿದೆ.ಆದರೆ ಕೊಡಿಯಾಲಬೈಲು ದುಗ್ಗಲಡ್ಕ ರಸ್ತೆಯಲ್ಲಿ ರಸ್ತೆ ಸರಿ ಇಲ್ಲದಿರುವ ಕಾರಣಕ್ಕೆ ತಾತ್ಕಾಲಿಕ ನಿಲ್ಲಿಸಲಾಗಿದೆ. ಮುಂದೆ ರಸ್ತೆ ಸರಿಪಡಿಸಿದರೆ ಈ ರಸ್ತೆಯಲ್ಲಿ ಬಸ್ಸು ಸಂಚಾರ ಮುಂದುವರಿಸಲಾಗುವುದು ಎಂದು ಮಾಹಿತಿ ನೀಡಿದರು.ಸುಳ್ಯ-ಕೊಡಿಯಾಲಬೈಲು-ದುಗ್ಗಲಡ್ಕ-ಸುಬ್ರಹ್ಮಣ್ಯ ಬಸ್ ಆರಂಭಿಸುವುದಾಗಿ ಘೋಷಿಸಿ ಚಾಲನೆ ನೀಡಲಾಗಿತ್ತು.
ಸುಳ್ಯ ತಾಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಗಾಳಿ ಮಳೆಗೆ ವಿದ್ಯುತ್ ಲೈನ್, ಕಂಬಗಳು ಮುರಿದಿದ್ದು ದುರಸ್ಥಿ ಪಡಿಸುವ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ.ಕೆಲವು ಪ್ರದೇಶಗಳಿಗೆ 5-6 ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೇ ಸಮಸ್ಯೆಯಲ್ಲಿರುವ ಬಗ್ಗೆ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಸಭೆಯಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ ಸಿಬ್ಬಂದಿ ಕೊರತೆಯಿಂದ ಕೆಲಸ ನಿಧಾನ ವಾಗುತ್ತಿದೆ ಎಂದು ಸಭೆಗೆ ತಿಳಿಸಿದರು.ಸದಸ್ಯ ಭವಾನಿಶಂಕರ್ ಕಲ್ಮಡ್ಕ ಮಾತನಾಡಿ ಸುಳ್ಯದಲ್ಲಿ ಸಿಬ್ಬಂದಿ ಕೊರತೆ ಇಂದು ನಿನ್ನೆಯದಲ್ಲ ಮೆಸ್ಕಾಂ ಇಲಾಖೆ ಸುಳ್ಯಕ್ಕೆ ಅಗತ್ಯ ವಿರುವ ಲೈನ್ ಮ್ಯಾನ್ ಗಳ ಬೇಡಿಕೆ, ಗ್ಯಾಂಗ್ ಮ್ಯಾನ್ ಗಳ ಬೇಡಿಕೆಯ ಬಗ್ಗೆ ಎಷ್ಟು ಪ್ರಸ್ತಾವನೆ ಕಳಿಸಿದ್ದೀರಿ, ಇದು ಯಾಕೆ ಹೀಗೆ ,ಸುಳ್ಯಕ್ಕೆ ಈಗ ಕೇವಲ 9 ಲೈನ್ ಮ್ಯಾನ್ ಗಳು 180 ಟಿ ಸಿ ಗಳನ್ನು ನೋಡಿಕೊಳ್ಳಬೇಕಾಗಿದೆ. ಸುಳ್ಯಕ್ಕೆ ಬೇಕಿರುವ ಸಿಬ್ಬಂದಿಗಳ ಬಗ್ಗೆ ಬೇಡಿಕೆ ಪ್ರಸ್ತಾವನೆಯನ್ನು ಕಳುಹಿಸಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗೃಹ ಲಕ್ಷೀ ಯೋಜನೆಯ ಪ್ರಗತಿ ಬಗ್ಗೆ ಸಂಬಂಧಿಸಿದಂತೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಸುಳ್ಯದಿಂದ ತೋಡಿಕಾನಕ್ಕೆ ನೂತನ ಬಸ್ಸು ಪ್ರಾರಂಭಿಸುವ ಪ್ರಸ್ತಾವನೆ ಬಗ್ಗೆ ಕುತ್ತಮೊಟ್ಟೆ ಪ್ರಶ್ನಿಸಿದರು. ಸುಳ್ಯ -ತೋಡಿಕಾನ ರಸ್ತೆಯಲ್ಲಿ ನೂತನ ಬಸ್ಸು ಪ್ರಾರಂಭಿಸಲು ವಿಭಾಗೀಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.ಅನ್ನಭಾಗ್ಯ, ಯುವನಿಧಿ ಯೋಜನೆ ಪ್ರಗತಿ ಬಗ್ಗೆ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಸದಸ್ಯರುಗಳಾದ ಸೋಮಶೇಖರ ಕೇವಳ ಧನುಷ್ ಕುಕ್ಕೇಟಿ, ವಿಜೇಶ್ ಹಿರಿಯಡ್ಕ, ರಾಜು ನೆಲ್ಲಿಕುಮೇರಿ, ಅಬ್ಬಾಸ್ ಅಡ್ಪಂಗಾಯ, ಲತೀಫ್ ಅಡ್ಕಾರ್, ಶಿಲ್ಪಾ ಇಬ್ರಾಹಿಂ,
ಭವಾನಿ ಬೊಮ್ಮಟ್ಟಿ, ರವಿ ಗುಂಡಡ್ಕ, ಕಾಂತಿ ಬಿ.ಎಸ್ ಮತ್ತು ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಮಿತಿ ಸದಸ್ಯ ಕಾರ್ಯದರ್ಶಿ, ತಾ. ಪಂ. ಕಾರ್ಯನಿರ್ವಾಹನಾಧಿಕಾರಿ ರಾಜಣ್ಣ ಕಾರ್ಯಕಲಾಪ ನಡೆಸಿಕೊಟ್ಟರು.














