ಸುಳ್ಯ:ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಮತ್ತು ಕೆವಿಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆಶ್ರಯದಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಸೋಣಂಗೇರಿಯ ಸ.ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ವಿಜಯ ಗ್ರಾಮಾಭಿವೃದ್ಧಿ ಸಮಿತಿಯ
ಅಧ್ಯಕ್ಷ ಯಶ್ವಿತ್ ಕಾಳಂಮನೆ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸುಳ್ಯ ಬ್ಯಾಂಕ್ ಆಫ್ ಬರೋಡಾದ ಹಿರಿಯ ಶಾಖಾ ವ್ಯವಸ್ಥಾಪಕ ಸರವಣ, ಜಾಲ್ಸೂರು ಗ್ರಾ.ಪಂ. ಉಪಾಧ್ಯಕ್ಷೆ ತಿರುಮಲೇಶ್ವರಿ ಅರ್ಭಡ್ಕ, ಕೆವಿಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯೆ ಡಾ. ಮೇಘನಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯಂತ ತಳೂರು, ಸೋಣಂಗೇರಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಚಿದಾನಂದ ಎಂ., ಜಾಲ್ಸೂರು ಗ್ರಾ.ಪಂ. ಸದಸ್ಯ ಈಶ್ವರ ನಾಯ್ಕ, ಸೋಣಂಗೇರಿ ಶಾಲಾ ಮುಖ್ಯ ಶಿಕ್ಷಕಿ ಕುಸುಮಾವತಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕಿ ಸವಿತಾ ಪೆರಮುಂಡ ಸ್ವಾಗತಿಸಿ, ಗಣೇಶ್ ರೈ ಕುಕ್ಕoದೂರು ವಂದಿಸಿದರು. ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ದಂತ ಕುಳಿ ತುಂಬುವಿಕೆ, ಹಲ್ಲಿನ ಸ್ವಚ್ಛತೆ, ಹಲ್ಲು ಕೀಳುವಿಕೆ, ಕೃತ ದಂತ ಜೋಡಣೆ ನಡೆಯಿತು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.














