ಲಂಡನ್: ಐದನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳು ವೈಫಲ್ಯ ಅನುಭವಿಸಿದ ಕಾರಣ ಮೊದಲ ದಿನ ಭಾರತ ಸಾಧಾರಣ ಮೊತ್ತ ಗಳಿಸಿತು. ಕರುಣ್ ನಾಯರ್ ಸಿಡಿಸಿದ ಅಜೇಯ ಅರ್ಧಶತಕದ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ
6 ವಿಕೆಟ್ ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿದೆ.ಕರುಣ್ (ಔಟಾಗದೇ 52; 98ಎ, 4×7) ಹಾಗೂ ವಾಷಿಂಗ್ಟನ್ ಸುಂದರ್ (ಅಜೇಯ 19) ಕ್ರೀಸಿನಲ್ಲಿದ್ದಾರೆ.
ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಓಲಿ ಪೋಪ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಭಾರತ ತಂಡದ ನಾಯಕ ಶುಭಮನ್ ಗಿಲ್ ಸರಣಿಯಲ್ಲಿ ಸತತ ಐದನೇ ಬಾರಿ ಟಾಸ್ ಸೋತರು. ಭಾರತ ಆಘಾತ ಅನುಭವಿಸಿತು. ಚಹಾ ವಿರಾಮದ ವೇಳೆಗೆ 3 ವಿಕೆಟ್ಗಳಿಗೆ 85 ರನ್ ಗಳಿಸಿತ್ತು. ನಂತರ ಕೆಲಹೊತ್ತು ಮಳೆಯಿಂದಾಗಿ ಆಟ ಸ್ಥಗಿತಗೊಂಡು ಮತ್ತೆ ಆರಂಭವಾಯಿತು. ಯಶಸ್ವಿ ಜೈಸ್ವಾಲ್ (2), ಕೆ.ಎಲ್. ರಾಹುಲ್ (14;40ಎ), ಸಾಯಿ ಸುದರ್ಶನ್ (38;108ಎ), ಶುಭ್ಮನ್ ಗಿಲ್(21,35ಎ) ರವೀಂದ್ರ ಜಡೇಜ (9) ಮತ್ತು ಧ್ರುವ ಜುರೇಲ್ (19) ಅವರೂ ಬೇಗನೆ ಪೆವಿಲಿಯನ್ ಸೇರಿಕೊಂಡರು. ವಾಷಿಂಗ್ಟನ್ ಸುಂದರ್ ಕರುಣ್ ಅವರೊಂದಿಗೆ ಮುರಿಯದ ಏಳನೇ ವಿಕೆಟ್ ಜೊತೆಯಾಟದಲ್ಲಿ 51 (88ಎ) ಸೇರಿಸಿ, ಎರಡನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.





