ರಾಂಚಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಆತಿಥೇಯ ಭಾರತ ತಂಡಕ್ಕೆ ಇನ್ನೀಂಗ್ಸ್ ಹಿನ್ನಡೆ ಭೀತಿ ಎದುರಾಗಿದೆ. ಯಶಸ್ವಿ ಜೈಸ್ವಾಲ್ ಅರ್ಧಶತಕ ಗಳಿಸಿದ ಹೊರತಾಗಿಯೂ, ಮೊದಲ ಇನಿಂಗ್ಸ್ನಲ್ಲಿ 219 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡಿದೆ.
ಇಂಗ್ಲೆಂಡ್ ತಂಡ ಗಳಿಸಿದ್ದ 353 ರನ್ಗೆ ಪ್ರತಿಯಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಆತಿಥೇಯರ ನಾಯಕ ರೋಹಿತ್ ಶರ್ಮಾ ಕೇವಲ 2 ರನ್ ಗಳಿಸಿ ಅನುಭವಿ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ವಿಕೆಟ್
ಒಪ್ಪಿಸಿದರು. ಬಳಿಕ ಜೊತೆಯಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್, ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 82 ರನ್ ಕೂಡಿಸಿದರು. 38 ರನ್ ಗಳಿಸಿದ್ದ ಗಿಲ್ ವಿಕೆಟ್ ಪತನದೊಂದಿಗೆ ಭಾರತ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು.
117 ಎಸೆತಗಳಲ್ಲಿ 73 ರನ್ ಗಳಿಸಿದ ಜೈಸ್ವಾಲ್, ರಜತ್ ಪಾಟೀದಾರ್ (17) ಹಾಗೂ ರವೀಂದ್ರ ಜಡೇಜ (12), ಸರ್ಫರಾಜ್ ಖಾನ್ (14), ಆರ್. ಅಶ್ವಿನ್ (1) ಔಟಾದರು. 2ನೇ ದಿನದಾಟ ಮುಕ್ತಾಯಕ್ಕೆ, ಧ್ರುವ ಜುರೇಲ್ (30) ಹಾಗೂ ಕುಲದೀಪ್ ಯಾದವ್ (17) ಕ್ರೀಸ್ನಲ್ಲಿದ್ದಾರೆ. ಇನಿಂಗ್ಸ್ ಹಿನ್ನಡೆ ತಪ್ಪಿಸಿಕೊಳ್ಳಲು ಭಾರತ ಇನ್ನೂ 134 ರನ್ ಗಳಿಸಿತ್ತು, ಮೂರು ವಿಕೆಟ್ಗಳಷ್ಟೇ ಬಾಕಿ ಇವೆ.ಇಂಗ್ಲೆಂಡ್ ಪರ ಬಷೀರ್ ನಾಲ್ಕು ವಿಕೆಟ್ ಉರುಳಿಸಿದರು. ಟಾಮ್ ಹಾರ್ಟ್ಲಿ ಮತ್ತು ಆ್ಯಂಡರ್ಸನ್ ಕ್ರಮವಾಗಿ 2 ಹಾಗೂ 1 ವಿಕೆಟ್ ಪಡೆದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 302 ರನ್ ಗಳಿಸಿತ್ತು. ಇಂದು ಆ ಮೊತ್ತಕ್ಕೆ 51 ರನ್ ಗಳಿಸುವಷ್ಟರಲ್ಲಿ ಉಳಿದ ಮೂರು ವಿಕೆಟ್ಗಳೂ ಪತನಗೊಂಡವು. ಹೀಗಾಗಿ ಪ್ರವಾಸಿ ಪಡೆಯ ಆಟ 353 ರನ್ಗಳಿಗೆ ಕೊನೆಗೊಂಡಿತು.ಮೊದಲ ದಿನವೇ ಶತಕ ಸಿಡಿಸಿದ್ದ ಜೋ ರೂಟ್, 122 ರನ್ ಗಳಿಸಿ ಆಜೇಯವಾಗಿ ಉಳಿದರು.ಭಾರತ ಪರ ಸ್ಪಿನ್ನರ್ ರವೀಂದ್ರ ಜಡೇಜ 4 ವಿಕೆಟ್ ಪಡೆದರೆ, ಪದಾರ್ಪಣೆ ಪಂದ್ಯವಾಡಿದ ಆಕಾಶ್ ದೀಪ್ 3 ಹಾಗೂ ಮೊಹಮ್ಮದ್ ಸಿರಾಜ್ 2 ವಿಕೆಟ್ ಕಿತ್ತರು. ಇನ್ನೊಂದು ವಿಕೆಟ್ ಅನ್ನು ಆರ್.ಅಶ್ವಿನ್ ಪಾಲಾಯಿತು..