ಕಾನ್ಪುರ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಏಳು ವಿಕೆಟ್ ಅಂತರದ ಜಯ ಗಳಿಸಿದೆ. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.ಅಂತಿಮ ದಿನ ಎರಡನೇ ಇನ್ನೀಂಗ್ಸ್ನಲ್ಲಿ ಗೆಲುವಿಗೆ 95 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡ
17.2 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಯಶಸ್ವಿ ಜೈಸ್ವಾಲ್ ಅರ್ಧಶತಕ (51) ಗಳಿಸಿದರೆ ವಿರಾಟ್ ಕೊಹ್ಲಿ 29 ರನ್ ಗಳಿಸಿ ಔಟಾಗದೆ ಉಳಿದರು.ಈ ಮೊದಲು ಭಾರತೀಯ ಬೌಲರ್ಗಳ ನಿಖರ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಎರಡನೇ ಇನಿಂಗ್ಸ್ನಲ್ಲಿ 47 ಓವರ್ಗಳಲ್ಲಿ ಕೇವಲ 146 ರನ್ಗಳಿಗೆ ಆಲೌಟ್ ಆಯಿತು.
ಆರಂಭಿಕ ಬ್ಯಾಟರ್ ಶಾದ್ಮನ್ ಇಸ್ಲಾಂ ಗರಿಷ್ಠ 50 ರನ್ ಗಳಿಸಿದರು. ಮುಷ್ಫೀಕುರ್ ರಹೀಂ 37 ರನ್ ಗಳಿಸಿ ಔಟ್ ಆದರು.ಭಾರತದ ಪರ ಜಸ್ಪ್ರೀತ್ ಬೂಮ್ರಾ, ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ ಮೂರು ವಿಕೆಟ್ಗಳನ್ನು ಗಳಿಸಿದರು.
ಕಾನ್ಪುರದಲ್ಲಿ ಸುರಿದ ಸತತ ಮಳೆಯಿಂದಾಗಿ ಮೊದಲ ಮೂರು ದಿನಗಳಲ್ಲಿ 35 ಓವರ್ಗಳ ಆಟ ನಡೆದಿತ್ತು. ಎರಡು ಹಾಗೂ ಮೂರನೇ ದಿನದಾಟ ಸಂಪೂರ್ಣವಾಗಿ ರದ್ದಾಗಿತ್ತು. ಆದರೆ ನಾಲ್ಕು ಹಾಗೂ ಐದನೇ ದಿನದಾಟದಲ್ಲಿ ಆಕ್ರಮಣಕಾರಿಯಾಗಿ ಆಡುವ ಮೂಲಕ ಪಂದ್ಯ ಗೆಲ್ಲುವಲ್ಲಿ ರೋಹಿತ್ ಶರ್ಮಾ ಬಳಗವು ಯಶಸ್ವಿಯಾಗಿದೆ.
ಬಾಂಗ್ಲಾದೇಶ ಮೊದಲ ಇನಿಂಗ್ಸ್ 233ಕ್ಕೆ ಆಲೌಟ್ (ಮೊಮಿನುಲ್ 107*, ಬೂಮ್ರಾ 50/3)
ಭಾರತ ಮೊದಲ ಇನಿಂಗ್ಸ್ 285/9 ಡಿಕ್ಲೇರ್ (ಜೈಸ್ವಾಲ್ 72, ರಾಹುಲ್ 68, ಮೆಹಿದಿ ಹಸನ್ 41/4, ಶಕೀಬ್ 78/4)
ಬಾಂಗ್ಲಾದೇಶ ದ್ವಿತೀಯ ಇನಿಂಗ್ಸ್ 146ಕ್ಕೆ ಆಲೌಟ್ (ಶದ್ಮನ್ 50, ಬೂಮ್ರಾ 17/3) ಭಾರತ ದ್ವಿತೀಯ ಇನಿಂಗ್ಸ್ 98/3 (ಜೈಸ್ವಾಲ್ 51, ಮೆಹಿದಿ ಹಸನ್ 44/2)