ಬೆಂಗಳೂರು: ಸುಳ್ಯದಲ್ಲಿ ತೀವ್ರಗೊಂಡಿರುವ ವಿದ್ಯುತ್ ಸಮಸ್ಯೆ ಹಾಗೂ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಯ ಬಗ್ಗೆ ಪ್ರಸ್ತುತ ವಿಧಾನಸಭಾ ಅಧಿವೇಶನದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನೆ ಎತ್ತಿದ್ದಾರೆ. ಅದಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ನೀಡಿದ ಉತ್ತರ ಇಲ್ಲಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ (KPTCL) ಸುಳ್ಯದಲ್ಲಿ 110 ಕೆ.ವಿ. ಸಾಮರ್ಥ್ಯದ ಉಪಕೇಂದ್ರ ಕಾಮಗಾರಿಯು ಯಾವ
ಹಂತದಲ್ಲಿದೆ, ನಿರ್ಮಾಣ ಯಾವಾಗ ಪೂರ್ತಿಗೊಳ್ಳಲಿದೆ ಎಂದು ಶಾಸಕರು ಕೇಳಿದ್ದಾರೆ.
ಸುಳ್ಯ 110ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಹಾಗೂ ಪ್ರಸರಣ ಮಾರ್ಗದ ಕಾಮಗಾರಿಯು ಪ್ರಗತಿಯಲ್ಲಿದೆ. ವಿದ್ಯುತ್ ಉಪಕೇಂದ್ರದ ನಿಯಂತ್ರಣ ಕೊಠಡಿ ನಿರ್ಮಾಣ ಕಾರ್ಯ ಹಾಗೂ ಉಪಕೇಂದ್ರದ ಆವರಣ ಗೋಡೆ ನಿರ್ಮಾಣ ಕಾರ್ಯ ಪುಗತಿಯಲ್ಲಿದೆ.
ಪ್ರಸರಣ ಮಾರ್ಗದ ಒಟ್ಟು 89 ಗೋಪುರಗಳಲ್ಲಿ, 03 ಗೋಪುರಗಳ ತಳಪಾಯ ನಿರ್ಮಾಣಗೊಂಡಿರುತ್ತದೆ ಹಾಗೂ ಬಾಕಿ ಉಳಿದ ಗೋಪುರಗಳ ತಳಪಾಯ ನಿರ್ಮಾಣಕ್ಕೆ ಪ್ರಸರಣ ಮಾರ್ಗ ಹಾದುಹೋಗುವ ಜಮೀನು ಮಾಲೀಕರುಗಳ ತೀವ್ರ ಆಕ್ಷೇಪವಿರುವ
ಕಾರಣ ಜಮೀನು ಮಾಲೀಕರಿಗೆ ಗೋಪುರ ತಳಪಾಯದ ವಿಸ್ತೀರ್ಣ ಹಾಗೂ ಪ್ರಸರಣ ಮಾರ್ಗದ ರಹದಾರಿ ವಿಸ್ತೀರ್ಣಕ್ಕೆ ಜಮೀನು ಪರಿಹಾರ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು,ಜಮೀನು ಮೌಲ್ಯವನ್ನು ನಿರ್ಧರಿಸುವ ಪ್ರಸ್ತಾವನೆಯು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿಯಲ್ಲಿದೆ. ಅರಣ್ಯ ಇಲಾಖೆಯ ಷರತ್ತಿನಂತೆ ಖಾಸಗಿ ಜಮೀನುಗಳಲ್ಲಿ ಪ್ರಸರಣ ಮಾರ್ಗವನ್ನು ಪೂರ್ಣಗೊಳಿಸಿದ ನಂತರವಷ್ಟೇ ಅರಣ್ಯ ಪ್ರದೇಶದಲ್ಲಿ ಪ್ರಾರಂಭಿಸಬೇಕಾಗಿರುತ್ತದೆ. ಕಾಮಗಾರಿಯನ್ನು ಗುತ್ತಿಗೆ ಕರಾರಿನಂತೆ ಉಪ ಕೇಂದ್ರದ ಕಾಮಗಾರಿಯನ್ನು ದಿನಾಂಕ 07.11.2024 ರವರೆಗೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಗೊಳಿಸಲಾಗಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ.