*ಡಾ.ಸುಂದರ ಕೇನಾಜೆ.
ಕಾಲಗಣನೆಯ ಮೂಲಕ ವಾರ್ಷಿಕ ಆವರ್ತನದ ಲೆಕ್ಕಾಚಾರ ಹಾಕುವ ತುಳು ಜಾನಪದ ಸಂಸ್ಕೃತಿಯಲ್ಲಿ ಪಗ್ಗು ೧(ಸಾಮಾನ್ಯ ಏಪ್ರಿಲ್ ೧೪/೧೫) ಹೊಸವರ್ಷ ಆರಂಭವಾಗುವ ದಿನ. ಸುಗ್ಗಿ ೩೦ಕ್ಕೆ ಹಿಂದಿನ ಬೇಸಾಯ ಜೀವನವನ್ನು ಕೊನೆಗೊಳಿಸಿ ಮರುದಿನ ಮುಂಜಾನೆಯಿಂದಲೇ ಹೊಸ ಬೇಸಾಯದ ಜೀವನಕ್ರಮವನ್ನು ರೂಢಿಸಿಕೊಳ್ಳುವುದೇ ಈ ಹೊಸ ವರುಷ. ಬತ್ತ ಬೇಸಾಯದ ಆರಂಭವು ಸಾಂಕೇತಿಕ ಕ್ರಿಯಾಚರಣೆಯಾದ “ಬರೆಪತ್ತುನೆ”(ನೇಗಿಲಿನಿಂದ ಉಳುವುದು)ಪಗ್ಗು ೧ರ ಸೂರ್ಯೋದಯದ ಆವಧಿಯಲ್ಲಿ ನಡೆಯುತ್ತಿತ್ತು. ಅಂದಿನಿಂದ ಬಿಡುವಿಲ್ಲದೆ ನಡೆಯುವ ತುಳುವರ ವೃತ್ತಿಜೀವನ ಮುಂದಿನ ಸುಗ್ಗಿ ೩೦ರವರೆಗೆ ನಿರಂತರವಾಗಿ
ಒಂದು ವರ್ಷದವರೆಗೆ ಸಾಗುತ್ತಿತ್ತು. ಮಳೆಯನ್ನೇ ನಂಬಿ ಬೆಳೆಯ ಭವಿಷ್ಯವನ್ನು ನಿರ್ಧರಿಸುವ ತುಳುನಾಡಿನಲ್ಲಿ ಪಗ್ಗು ತಿಂಗಳಿನಿಂದ ಮಳೆಯಾಗುವ ಸಾಧ್ಯತೆ ಇರುವುದರಿಂದ ವರ್ಷಾರಂಭವನ್ನೂ ತಮ್ಮ ವೃತ್ತಿಯ ಆರಂಭವನ್ನೂ ಪರಸ್ಪರ ಸಮೀಕರಿಸಿಕೊಂಡಿದ್ದರು.
ಪಗ್ಗು ೧ರ “ಬಿಸು” ತುಳು ಜನಪದರಿಗೆ ಹಬ್ಬದ ದಿನ. ತುಳು ಸಂಸ್ಕೃತಿಯಲ್ಲಿ ಹಬ್ಬ ದುಡಿಮೆಗೆ ವಿರಾಮ ನೀಡುವ ದಿನವೂ ಆಗಿತ್ತು. ಆದರೆ ಬೇಸಾಯ ಸಂಸ್ಕೃತಿಯಲ್ಲಿ ದುಡಿಮೆಯನ್ನೇ ಹಬ್ಬವಾಗಿರಿಸಿದ್ದನ್ನು ಬಿಸುವಿನ ಆಚರಣೆಯಿಂದ ತಿಳಿಯಬಹುದು.ಉಳುಮೆಯ ಕ್ರಿಯಾವಿಧಿ ನಡೆದ ನಂತರ ಅದೇ ದಿನ ಬಿತ್ತನೆಯ ಕ್ರಿಯಾವಿಧಿಯೂ ‘ಕೈ ಬಿತ್ತು ಪಾಡುನೆ’(ಕೈ ಬೀಜ ಹಾಕುವುದು)ಯ ಮೂಲಕ ಆರಂಭಗೊಳ್ಳುತ್ತಿತ್ತು. ಆದ್ದರಿಂದ ಉಳುಮೆ ಹಾಗೂ ಬಿತ್ತನೆ ಇವೆರಡರ ಸಾಂಕೇತಿಕ ಕ್ರಿಯೆ ತುಳುವರ ವಾರ್ಷಿಕ ಆವರ್ತನದ ಮೊದಲ ದಿನದಿಂದಲೇ ಆರಂಭಗೊಳ್ಳುವುದಾಗಿತ್ತು.
ತುಳುವರ ವಾರ್ಷಿಕ ಆವರ್ತನದ ಮೊದಲ ಕ್ರಿಯಾಚರಣೆಯು ಉಳುಮೆ ಮತ್ತು ಬಿತ್ತನೆಯಿಂದಲೇ ಆರಂಭಗೊಳ್ಳುತ್ತಿರುವುದು ಮಾನವ ಸಾಂಸ್ಕೃತಿಕ ಇತಿಹಾಸದ ಪುನರಾವೃತಿಯಂತೆಯೇ ಕಾಣುತ್ತದೆ. ಅಲ್ಲಿಂದ ಮುಂದಕ್ಕೆ ವರ್ಷಪೂರ್ತಿ ನಿರಂತರವಾಗಿ ಈ ಕ್ರಿಯೆ ಸಾಗುತ್ತಲೇ ಹೋಗುತ್ತಿತ್ತು. ಆದ್ದರಿಂದ ಬೇಸಾಯವೇ ಬದುಕೆಂದು ಪರಿಗಣಿಸಿದ ತುಳುವರು ಈ ರೀತಿಯಾಗಿ ತುಳುನಾಡಿನಲ್ಲಿ ಪ್ರತ್ಯೇಕ ಬೇಸಾಯ ಸಂಸ್ಕೃತಿಯೊಂದರ ರೂಪೀಕರಣಕ್ಕೆ ಕಾರಣರಾಗಿದ್ದರು.

ಏಣಿಲು ಬೇಸಾಯ:
ತುಳುನಾಡಿನ ಬೇಸಾಯ ವೃತ್ತಿಯಲ್ಲಿ ಕಾಲಮಾನಕ್ಕನುಗುಣವಾಗಿ ಮುಖ್ಯವಾದ ಮೂರು ವಿಭಾಗಗಳಿದ್ದವು. ಅವುಗಳಲ್ಲಿ ಮೊದಲ ಬೆಳೆಯೇ ಏಣಿಲು ಅಥವಾ ಏಣೆಲು.ಇದಕ್ಕೆ ಬತ್ತದ ‘ಮೊದಲನೆಯ ಬೆಳೆ’, ‘ಮುಂಗಾರು ಬೆಳೆ’ ಅಥವಾ ‘ಕಾರ್ತಿ ಬೆಳೆ’ ಎಂಬ ಅರ್ಥವಿದೆ.
ಏಣಿಲು ಬೆಳೆ ಅವಧಿ: ವಾರ್ಷಿಕ ಆವರ್ತನದ ತುಳು ಮಾಸ ಗಣನೆಯ ಪ್ರಕಾರ, ಮೊದಲ ಬೆಳೆಯಾದ ಏಣಿಲು ಮುಂಗಾರು ಬೆಳೆ. ಪಗ್ಗು ಆರಂಭದಿಂದ ನಿರ್ನಾಲ್ವರೆಗಿನ ಕಾಲವನ್ನು ಏಣಿಲು ಬೆಳೆಯ ಕಾಲಾವಧಿ ಎನ್ನುತ್ತಾರೆ(ಏಪ್ರಿಲ್ ಮೇ ತಿಂಗಳಿನಿಂದ ಸೆಪ್ಟಂಬರ್, ಅಕ್ಟೋಬರ್ ತಿಂಗಳವರೆಗೆ). ಮೂರು ಬೆಳೆಗಳಿಗೆ ಕಾಲದ ಹೊಂದಾಣಿಕೆಯ ಪ್ರಕಾರ ಮಳೆ ಕಾಲದ ಬೇಸಾಯ ಮೇ ತಿಂಗಳಿನಿಂದ ಸೆಪ್ಟಂಬರ್ (ಮೇಷದಿಂದ ನಿರ್ನಾಲ್)ವರೆಗೆ ಇದೇ ಏಣಿಲು. ಚಳಿಗಾಲದ ಬೇಸಾಯ ಅಕ್ಟೋಬರ್ ತಿಂಗಳಿನಿಂದ ಜನವರಿ(ನಿರ್ನಾಲ್ನಿಂದ ಪೊನ್ನಿ)ಯವರೆಗೆ ಸುಗ್ಗಿ. ಬೇಸಿಗೆ ಕಾಲದ ಬೇಸಾಯ ಜನವರಿಯಿಂದ ಏಪ್ರಿಲ್ (ಮಾಯಿಯಿಂದ ಪಗ್ಗು)ವರೆಗೆ ಇದನ್ನು ಕೊಳಕೆ ಎಂದು ಕರೆಯುತ್ತಿದ್ದರು. ಮೂರು ಬೆಳೆಗಳಲ್ಲಿ ಅತಿ ದೀರ್ಘ ಕಾಲ, ಅಂದರೆ ಸುಮಾರು ಅರ್ಧ ವಾರ್ಷಿಕ ಕಾಲವನ್ನು ಏಣಿಲು ಬೆಳೆಯಲ್ಲೇ ಕಳೆಯುತ್ತಿದ್ದರು. ಮೇ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ತುಳುನಾಡಿನಾದ್ಯಂತ ಬರುವ ವ್ಯಾಪಕ ಮಳೆಯಿಂದಾಗಿ ಕೊನೆಯ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನಲ್ಲಿ ಫಸಲಿನ ಕೊಯ್ಲು ನಡೆಯುತ್ತಿತ್ತು. ಆದರೆ ಏಪ್ರಿಲ್ ತಿಂಗಳಲ್ಲಿ ಮಳೆ ಬಾರದೆ ನೀರಿಲ್ಲದ ಕಾರಣ ಬೇಸಾಯ ವೃತ್ತಿಯ ಆರಂಭದಲ್ಲಿ ವಿಳಂಬವಾಗುತ್ತಿತ್ತು.
ಹಾಗಾಗಿ ಬೇಸಾಯ ಕುರಿತಾಗಿ ನಡೆಯುವ ಎಲ್ಲಾ ಕ್ರಿಯಾಚರಣೆ ಕೇವಲ ಸಾಂಕೇತಿಕವಾಗಿ ಮಾತ್ರ ಆಯಾ ತಿಂಗಳಿನಲ್ಲಿ ನಡೆಯುತ್ತಿತ್ತು. “ಏಣಿಲು ಮಳೆನೀರು, ಸುಗ್ಗಿ ಹದನೀರು, ಕೊಳಕೆ ಅಡಿ ನೀರು” ಎಂಬ ಗಾದೆ ಈ ಕಾರಣದಿಂದಲೇ ಹುಟ್ಟಿರಬೇಕು. ಏಣಿಲು ಬೆಳೆಯು ಮಳೆ ನೀರಿನಿಂದಲೇ ಬೆಳೆಯುವಂಹಾ ಬೆಳೆ. ವಾತಾವರಣ ತಂಪಾಗಿರುವ ಕಾಲಾವಧಿಯಲ್ಲಿ ನಡೆಯುವ ಏಣಿಲು ಬೇಸಾಯವು ಚಳಿಗಾಲದ ಆರಂಭದಲ್ಲಿ ಪೂರ್ಣಗೊಳ್ಳುತ್ತಿತ್ತು. ಆದ್ದರಿಂದ ಏಣಿಲು ಬೆಳೆ ಮತ್ತು ಮಳೆಗೆ ನಿಕಟ ಸಂಬಂಧವಿತ್ತು. ವಾತಾವರಣದಲ್ಲಿ ಮಳೆಯ ವೈಪರೀತ್ಯ ಕಂಡುಬಂದಲ್ಲಿ ಬೆಳೆಯಲ್ಲೂ ಬದಲಾವಣೆ ಕಂಡುಬರುತ್ತಿತ್ತು. ತುಳುನಾಡಿನಲ್ಲಿ ನಿರಂತರ ಸುರಿಯುವ ಮಳೆಯಿಂದಾಗಿ ಸಮೃದ್ಧವಾದ ಏಣಿಲು ಬೇಸಾಯ ನಡೆಯುತ್ತಿತ್ತು.
ಬೇಸಾಯದ ತಯಾರಿ: ಸುಗ್ಗಿ ತಿಂಗಳ ಕೊನೆಗೆ(ಮಾರ್ಚ್ ಏಪ್ರಿಲ್) ಸುಗ್ಗಿ ಬೇಸಾಯದ ಹುಲ್ಲನ್ನು ರಾಶಿ ಹಾಕುವ (ಬೈತಮುಟ್ಟೆ) ಕೆಲಸವನ್ನು ಮಾಡಿ ಮುಗಿಸಿ, ಅಲ್ಪ ಸ್ವಲ್ಪ ಕೊಳಕೆ ಬೇಸಾಯವಿದ್ದರೂ ಅದರ ಕೊಯ್ಲನ್ನೂ ಮುಗಿಸಿ ಮುಂದಿನ ಬೇಸಾಯಕ್ಕೆ ಸಿದ್ಧತೆ ನಡೆಯುತ್ತಿತ್ತು. “ಮಾಯಿಡ್ದ್ ಬೊಕ್ಕ ಮರಿಯಾಲು”(ಮಾಘ ಮಾಸದ ನಂತರ ಮಳೆಗಾಲ) ಆರಂಭಗೊಳ್ಳುವುದರಿಂದ ಉತ್ಪಾದನಾ ಕ್ಷೇತ್ರದ ಸುತ್ತಮುತ್ತ ಇರುವ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿತ್ತು. ಪಗ್ಗು ಒಂದರ ಮೊದಲು ಉಳುಮೆಗೆ ಜಾನುವಾರುಗಳನ್ನು ಖರೀದಿಸುವ ಕಾರ್ಯ ಬಹುತೇಕ ಸುಗ್ಗಿ ತಿಂಗಳಲ್ಲಿ ನಡೆಯುತ್ತಿದ್ದುದು ಸಾಮಾನ್ಯ. ಸುಗ್ಗಿ ಕೊನೆಯ ದಿನವಾದ ಸಂಕ್ರಮಣದಂದು (ಸುಗ್ಗಿ ೩೦ ಸಾಮನ್ಯವಾಗಿ ಏಪ್ರಿಲ್ ೧೪ರಂದು) ಒಕ್ಕಲುತನದ ಲೆಕ್ಕಾಚಾರಗಳು ಮತ್ತು ಮುಂದಿನ ಬೇಸಾಯದ ಕುರಿತಾದ ಒಪ್ಪಂದಗಳು ನಡೆಯುತ್ತಿದ್ದುವು. ಬೇಸಾಯ ವೃತ್ತಿಯ ಸಂದರ್ಭದಲ್ಲಿ ಕೆಲಸದಾಳುಗಳಿಗೆ ತಿನ್ನುವುದಕ್ಕಾಗಿ ಹಪ್ಪಳ, ಪಚ್ಚಿಲ್(ಉಪ್ಪಿನಲ್ಲಿ ಬೆರೆಸಿದ ಹಲಸಿನ ತೊಳೆ) ಮಾವಿನ ಮಿಡಿ ಇತ್ಯಾದಿಗಳನ್ನು ಸಂಗ್ರಹಿಸಲಾಗುತ್ತಿತ್ತು. ಸುಗ್ಗಿ ಬತ್ತವನ್ನು ಬೇಯಿಸಿ, ಒಣಗಿಸಿ
ಬೇಸಾಯ ಸಂದರ್ಭದಲ್ಲಿ ಬಳಸುವುದಕ್ಕಾಗಿ ಬೇಕಾಗುವಷ್ಟು ಬಿತ್ತನೆ ಬೀಜವನ್ನು ಸುರಕ್ಷಿತವಾಗಿ ತೆಗೆದಿರಿಸಲಾಗುತ್ತಿತ್ತು. ಗದ್ದೆಗೆ ತರಗೆಲೆಗಳನ್ನು ಮತ್ತು ಗೊಬ್ಬರವನ್ನು ಸಂಗ್ರಹಿಸುವ ಹಾಗೂ ಗದ್ದೆಯಲ್ಲಿ ಅಲ್ಲಲ್ಲಿ ರಾಶಿ ಹಾಕುವ, ಸುಡುಮಣ್ಣನ್ನು ತಯಾರಿಸುವ ಕ್ರಿಯೆ ಪಗ್ಗು ತಿಂಗಳಿಗಿಂತ ಮೊದಲೇ ನಡೆಯುತ್ತಿತ್ತು. ಬೇಸಾಯಕ್ಕೆ ಬೇಕಾಗುವ ತಾಂತ್ರಿಕ, ಭೌತಿಕ ಸಲಕರಣೆಗಳನ್ನು ಜೋಡಿಸುವ ಕಾರ್ಯವನ್ನೂ ಇದೇ ಅವಧಿಯಲ್ಲಿ ನಡೆಸಲಾಗುತ್ತಿತ್ತು. ಬೇಸಾಯ ವೃತ್ತಿಯು ಆರಂಭವಾಗುವ ಮೊದಲೇ ಎಲ್ಲಾ ಪರಿಕರಗಳನ್ನು ಜೋಡಿಸುವ ಕಾರ್ಯವು ಬೇಸಾಯದ ತಯಾರಿಯ ಹಂತವಾಗಿ ಕಂಡುಬರುತ್ತಿದ್ದವು. ಈ ಎಲ್ಲಾ ತಯಾರಿಗಳು ನಡೆದು ಮುಂದಿನ ಮಳೆಯ ನಿರೀಕ್ಷೆಯಲ್ಲಿ ಬೇಸಾಯಗಾರರು ಇರುತ್ತಿದ್ದರು. ಕಾವೇರಿ ಸಂಕ್ರಮಣದ ಅವಧಿಯಲ್ಲಿ ಊರು ತೊರೆದು ಘಟ್ಟಗಳಿಗೆ ತೆರಳಿರುವ ಕೆಲಸದಾಳುಗಳು ಬೇಸಾಯದ ಕೆಲಸಗಳಿಗಾಗಿ ಮತ್ತೆ ಊರು ಸೇರುತ್ತಿದ್ದರು.
ಪಗ್ಗು ೧೮ರ ‘ಕೈ ಬಿತ್ತು’: ಬೇಸಾಯ ಸಂಸ್ಕೃತಿಯಲ್ಲಿ ಉಳುಮೆಗೆ ಕೊಟ್ಟಷ್ಟೇ ಆದ್ಯತೆಯನ್ನು ಬಿತ್ತನೆಗೂ ನೀಡಲಾಗಿತ್ತು. ‘ಪಗ್ಗು ೧’ ಬೇಸಾಯದ ಪ್ರಮುಖ ಆರಂಭದ ದಿನವಾದರೆ ಪಗ್ಗು ೧೮ ಬೇಸಾಯದ ಎರಡನೇ ಪ್ರಮುಖ ದಿನ. ತುಳುನಾಡಿನಾದ್ಯಂತ ಸಾರ್ವತ್ರಿಕವಾಗಿ ಕ್ರಿಯಾಚರಣೆಗೆ ಒಳಪಡುವ ‘ಕೈ ಬಿತ್ತು’ ಹಾಕುವುದನ್ನು ಪಗ್ಗು ೧೮ರಂದು ನಡೆಸಲಾಗುತ್ತಿತ್ತು. ಕೋಟಿ-ಚೆನ್ನಯ ಪಾಡ್ದನದಲ್ಲಿ ‘ಪಗ್ಗೂಡು ಪದಿನೆಣ್ಮೊಲ್ಕೆ ಬನ್ನಾಗ ನಾಲೆರು ಮಾದಾಯೆರ್ ಯೆಣಿಲ್ ಬುಳೆ ಬೆಂದೆರ್’(ಪಗ್ಗು ೧೮ರ ದಿನ ಬಂದಾಗ ನಾಲ್ಕು ಸಾಲು ಎತ್ತುಗಳನ್ನು ತಿರುಗಿಸಿದರು, ಏಣಿಲಿನ ಬೆಳೆಯನ್ನು ಬೆಳೆದರು) ಎಂಬ ಸಾಲೊಂದು ಪಗ್ಗು ೧೮ರ ಮಹತ್ವವನ್ನು ವಿವರಿಸುತ್ತದೆ. ಅದಕ್ಕೂ ಮೊದಲು ನೇಜಿ ಹಾಕಲು ಬೇಕಾದಷ್ಟು ಗದ್ದೆಯನ್ನು ೪ ಬಾರಿ ಉತ್ತು ಹದಗೊಳಿಸುತ್ತಿದ್ದರು. ಪಗ್ಗು ೧೮ರಂದು ಬೆಳಿಗ್ಗೆ ಬೀಜ ಬಿತ್ತುವ ಕಾರ್ಯ ನಡೆಯುತ್ತಿತ್ತು. ಆ ದಿನ ಬಿತ್ತುವುದಾದರೆ ಮುಹೂರ್ತ ನೋಡಬೇಕಿಲ್ಲ ಎಂಬ ನಂಬಿಕೆ

ತುಳುವರದ್ದು. ಬರೆ ಹಿಡಿದ ದಿನದಿಂದ ೧೮ ದಿನಗಳ ಕಾಲಾವಕಾಶವಿರುವುದರಿಂದ ಉಳುಮೆ ಕಾರ್ಯಗಳು ಪೂರ್ಣಗೊಳಿಸಬಹುದಾದ ಹಿನ್ನಲೆಯಲ್ಲಿ ಪಗ್ಗು ೧೮ಕೈ ಬಿತ್ತು ಹಾಕುವ ದಿನ ರೂಪುಗೊಂಡಿದೆ. ಪಗ್ಗು ೧೮ರ ಅವಧಿಗಾಗಲೇ ಮಳೆ ಆರಂಭಗೊಂಡಿದ್ದು, ನೀರಾವರಿ ವ್ಯವಸ್ಥೆ ಸುಸೂತ್ರವಾಗುವ
ಸಂಭವವಿರುವುದರಿಂದ ಆ ದಿನ ತುಳುನಾಡಿನಾದ್ಯಂತ ಸಾರ್ವತ್ರಿಕವಾಗಿ ಬೀಜ ಬಿತ್ತುವ ಕಾರ್ಯ ನಡೆಸುತ್ತಿತ್ತು. ಗದ್ದೆಯ ಮೂಡುಮೂಲೆಯಲ್ಲಿ ಸ್ವಲ್ಪ ಮಣ್ಣನ್ನು ಹುಡಿಮಾಡಿ (ಕಳಬರಿಸಿ) ಐದು ಜೊತೆ ‘ಸರೋಳಿ’ ಎಲೆಯನ್ನು ಜೋಡಿಸಿಟ್ಟು ಅದರ ಮೇಲೆ ಬಿತ್ತನೆ ಬೀಜ ಹಾಕಿ ಕೈ ಮುಗಿದು ಅದೇ ‘ಕಳಕ್ಕೆ’ ಬೀಜ ಬಿತ್ತುವುದಕ್ಕೆ ಕೈ ಬಿತ್ತು ಎನ್ನುತ್ತಾರೆ. ನಂತರ ಸರೋಳಿ ಗೆಲ್ಲನ್ನು ನೆರಳಿಗಾಗಿ ಊರುತ್ತಿದ್ದರು. ಸರೋಳಿ ತಂಪು ನೀಡುವ ಸಸ್ಯವಾಗಿದ್ದು, ಪಗ್ಗು ತಿಂಗಳ ಉರಿಬಿಸಿಲಿನ ಬೇಗೆಯನ್ನು ತಡೆಯುವ ಶಕ್ತಿ ಹೊಂದಿರುತ್ತದೆ. ಜೊತೆಗೆ ಸರೋಳಿ ಸೂತಕದ ಸಂಕೇತವೂ ಆಗಿದೆ. ಆಗ ತಾನೆ ಬಿತ್ತಿದ ಬೀಜ ಸೂತಕವನ್ನು ಪ್ರತಿನಿಧಿಸುವುದರಿಂದ ಸರೋಳಿಯನ್ನು ಸೂತಕದ ಸಂಕೇತವಾಗಿ ಇಲ್ಲಿ ಬಳಸುತ್ತಿದ್ದರು. ಜನಪದ ಬದುಕಿನ ವಿಭಿನ್ನ ನೆಲೆಗಳಲ್ಲಿ ಸರೋಳಿ ಗಿಡ ಮುಖ್ಯ ಪಾತ್ರವಹಿಸುವುದನ್ನು ಈ ಹಿನ್ನಲೆಯಲ್ಲಿ ಗಮನಿಸಬಹುದು.
‘ಕೈ ಬಿತ್ತು’ ಹಾಕುವ ಕ್ರಿಯಾಚರಣೆ ಕೇವಲ ಬೇಸಾಯಗಾರನಿಗೆ ಮಾತ್ರ ಸೀಮಿತಗೊಂಡಿರುವುದರಿಂದ ಅದನ್ನು ಉಳಿದ ಹಬ್ಬಗಳಂತೆ ಸಾರ್ವತ್ರಿಕವಾಗಿ ಆಚರಿಸಲಾಗುತ್ತಿರಲಿಲ್ಲ. ವಾರ್ಷಿಕ ಆವರ್ತನದ ಸೂರ್ಯನ ಚಲನೆಯಲ್ಲಿ ಪಗ್ಗು ೧೮(ಮೇ ತಿಂಗಳ ೧ ಆಥವಾ ೨)ರಂದು ಸೂರ್ಯ ನಡುನೆತ್ತಿಯಲ್ಲಿರುವ ಏಕೈಕ ದಿನವಾಗಿದೆಯೆಂದು ವರ್ಷದ ಬೇರಾವ ದಿನವೂ ಸೂರ್ಯ ನಡುನೆತ್ತಿಗೆ ಬರುವುದಿಲ್ಲವೆಂದೂ ಜನಪದರು ಕಾರಣ ನೀಡುತ್ತಾ ಪಗ್ಗು ೧೮ನ್ನು ಮಹತ್ವದ ದಿನವಾಗಿಸಿದ್ದಾರೆ. ಸೌರಮಾನ ಕಾಲಗಣನೆಗೆ ಪ್ರಾಮುಖ್ಯ ನೀಡುವ ತುಳು ಜನಪದರು ಸೂರ್ಯನ ಈ ರೀತಿಯ ವಿಶೇಷ ಚಲನೆಯನ್ನು ಗಮನಿಸಿ ಪಗ್ಗು ೧೮ನ್ನು ಕೈ ಬಿತ್ತು ಹಾಕುವ ದಿನವಾಗಿ ಗುರುತಿಸಿರಬೇಕು. ಉತ್ಪಾದನಾ ಕ್ರಿಯೆಯನ್ನು ನಿರ್ಧರಿಸುವಲ್ಲಿ ಸೂರ್ಯನ ಚಲನೆಯು ಮುಖ್ಯ ಪಾತ್ರ ವಹಿಸುವುದರಿಂದ ತುಳುವರು ಸೂರ್ಯನಿಗೆ ಮಹತ್ವದ ಸ್ಥಾನವನ್ನು ನೀಡಿರುವ ಸಾಧ್ಯತೆ ಇದೆ. ಆದ್ದರಿಂದ ಬೇಸಾಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ತುಳುನಾಡಿನ ಸೌರಮಾನ ಕಾಲಗಣನೆ ರೂಪಿತವಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಚಾಂದ್ರಮಾನ ಕಾಲಗಣನೆಯ ಆಧಾರದಲ್ಲಿ ಪಗ್ಗು ೧೮ರ ಬದಲು ಸುಗ್ಗಿ ೧೮ರಂದು ಕೈ ಬಿತ್ತು ಹಾಕುವ ಕ್ರಿಯಾಚರಣೆಯೂ ನಡೆಯುತ್ತಿತ್ತು. ಸುಗ್ಗಿ ೧೮ ಕಡುಬೇಸಿಗೆಯ ಕಾಲವಾಗಿದ್ದು ನೀರಿಲ್ಲದ ಕಾಲಾವಧಿ. ಮಳೆ ಬೀಳುವುದಕ್ಕೆ ಇನ್ನೂ ಕೆಲವು ದಿನಗಳ ಅಂತರವಿರುವುದರಿಂದ

ಚಾಂದ್ರಮಾನ ಕಾಲಗಣನೆಯ ಸುಗ್ಗಿ ೧೮ ಬೇಸಾಯದ ಆರಂಭಕ್ಕೆ ಸೂಕ್ತ ಕಾಲವಾಗಿರುವುದಿಲ್ಲ. ಈ ತಿಳುವಳಿಕೆ ತುಳು ಜನಪದರಿಗೆ ಇದ್ದುದರಿಂದ ಸೌರಮಾನ ಕಾಲಗಣನೆಯ ಪಗ್ಗು ೧೮ನ್ನು ಬೀಜ ಬಿತ್ತುವ ದಿನವಾಗಿ ಆಯ್ಕೆ ಮಾಡಿರಬೇಕು. ಅದೇ ರೀತಿ ಮಂಗಳವಾರ ಮತ್ತು ಶುಕ್ರವಾರದಂದು ಗದ್ದೆಗೆ ಬೀಜ ಬಿತ್ತಬಾರದೆಂಬ ನಂಬಿಕೆಯು ತುಳುವರಲ್ಲಿತ್ತು. ಆದರೆ ಪಗ್ಗು ೧೮ ಯಾವುದೇ ದಿನವಾದರೂ ಈ ನಂಬಿಕೆಗಳು ಆ ದಿನಕ್ಕೆ ಅನ್ವಯಿಸುತ್ತಿರಲಿಲ್ಲ. ಪಗ್ಗು ೧೮ನ್ನು ಬೀಜ ಬಿತ್ತಲು ಉಪಯೋಗಿಸಿಕೊಳ್ಳದೇ ಇದ್ದಲ್ಲಿ ಮಂಗಳವಾರ ಮತ್ತು ಶುಕ್ರವಾರವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೀಜ ಬಿತ್ತಬಹುದಾಗಿತ್ತು.
ಉಳುಮೆ: ಪಗ್ಗು ೧ರಂದು ಗದ್ದೆಗೆ ಬರೆ ಹಾಕಿದ್ದಲ್ಲಿ ಉಳುಮೆ ಕಾರ್ಯ ಆರಂಭಗೊಂಡಿತೆಂದು ಅರ್ಥ. ಮುಂದೆ ಯಾವುದೇ ದಿನವಾದರೂ ಉಳುಮೆ ಮುಂದುವರಿಸಬಹುದಾಗಿತ್ತು. ಸಾಮಾನ್ಯವಾಗಿ ತುಳುನಾಡಿನಲ್ಲಿ ಒಂದು ಗದ್ದೆಯನ್ನು ನೆಡುವುದಕ್ಕಿಂತ ಮೊದಲು ಹತ್ತು ಬಾರಿ(ಹತ್ತು ಸಾಲು) ಉಳಬೇಕೆಂದಿತ್ತು. ತಪ್ಪಿದಲ್ಲಿ ೮ ಬಾರಿಯಾದರೂ ಉಳಲೇಬೇಕೆಂಬ ನಿಯಮವಿತ್ತು. ಈ ರೀತಿಯ ಉಳುಮೆಯಾಗದಿದ್ದಲ್ಲಿ “ಅಡಪು ತತ್ತಿ ಕಂಡದ ಕೊಡಿಪು ತಪ್ಪಾಂದ್” (ಉಳುಮೆ ತಪ್ಪಿದ ಗದ್ದೆಯ ಕಳೆಯ ಮೊಳಕೆ ನಿಲ್ಲದು) ಎಂಬ ಗಾದೆಯಂತೆ ಬೇಸಾಯದ ಮೊಳಕೆ ಸಮರ್ಪಕವಾಗದೆಂದು ಜನಪದರು ನಂಬಿದ್ದರು. ಪಗ್ಗು ೭ರ ಅವಧಿಗಾಗಲೇ ಒಂದೆರಡು ಮಳೆ ಬೀಳುತ್ತಿದ್ದುದರಿಂದ ಉಳುಮೆ ಕಾರ್ಯ ಸುಲಭವಾಗುತ್ತಿತ್ತು. ಸಾಮಾನ್ಯ ಲೆಕ್ಕಾಚಾರವೊಂದರ ಪ್ರಕಾರ ಒಂದು ಮುಡಿ ಗದ್ದೆಯ ಉಳುಮೆಗೆ ಬಲಿಷ್ಠ ಕೋಣಗಳಾದರೆ ಎರಡು ದಿನದಲ್ಲಿ ಒಂದು ಸಾಲು ಪೂರೈಸಬಹುದು. ದಿನಕ್ಕೆ ಅರ್ಧ ಸಾಲಿನಂತೆ ಉಳುಮೆ ನಡೆಸಲು ಸಾಧ್ಯವಾಗುತ್ತಿತ್ತು. ಎತ್ತುಗಳಾದರೆ ಅದೇ ವಿಸ್ತೀರ್ಣದ ಗದ್ದೆಗೆ ನಾಲ್ಕು ದಿನ ಬೇಕು. ಕೋಣಗಳನ್ನು ಬೆಳಿಗ್ಗೆ ೬ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೂ ಉಳುಮೆಗೆ ಬಳಸಿಕೊಳ್ಳಬಹುದಾಗಿತ್ತು. ಎತ್ತುಗಳಾದರೆ ೬ ಗಂಟೆಯಿಂದ ೯ ಅಥವಾ ೧೦ ಗಂಟೆಗಳವರೆಗೆ ಮಾತ್ರ ಬಳಸಲು ಸಾಧ್ಯವಾಗುತ್ತಿತ್ತು. ಉಳುಮೆಗೆ ಮುನ್ನ ಬೆಳಿಗ್ಗೆಯ ೪ ಗಂಟೆಯ ಹೊತ್ತಿಗೆ ಎತ್ತುಗಳ ಅಥವಾ ಕೋಣಗಳ ಆರೈಕೆ ನಡೆಯುತ್ತಿತ್ತು. ಅವುಗಳಿಗೆ ತಿನ್ನಲು ಹುಲ್ಲು, ಮಡ್ಡಿ, ಹುರುಳಿ ಇತ್ಯಾದಿಗಳಿಂದ ಹೊಟ್ಟೆ ತುಂಬಿಸುತ್ತಿದ್ದರು. ತಿಂದು ಸುಮಾರು ೨ ಗಂಟೆಗಳ ನಂತರ ಅಂದರೆ ೬ ಗಂಟೆಯಿಂದ ಉಳುಮೆ ಕಾರ್ಯ ಆರಂಭಗೊಳ್ಳುತ್ತಿತ್ತು. ನೀರಿನ ಒತ್ತಡ ಹೆಚ್ಚಿರುವ ಗದ್ದೆಗಳಲ್ಲಿ ಬೆಳಿಗ್ಗೆ ಉಳುಮೆ ಮಾಡಲು ಸಾಧ್ಯವಿಲ್ಲದಿದ್ದರೆ ಮಾತ್ರ ಸಂಜೆ ಹೊತ್ತಿನಲ್ಲಿ ಉಳುಮೆ
ನಡೆಯುತ್ತಿತ್ತು. ಇಲ್ಲದಿದ್ದಲ್ಲಿ ಸಂಜೆ ಉಳುಮೆ ಮಾಡುವ ಪದ್ಧತಿ ಬಹಳ ಕಡಿಮೆ. ನೀರಿಲ್ಲದೆ ಹುಡಿಗೆ ಮೂರು ಸಾಲು ಉಳುಮೆ ಮಾಡುವುದನ್ನು “ಪೊಡಿಕ್ಕ್ಸಾಲ್” (ಹುಡಿಗೆ ಸಾಲು) ಎನ್ನುತ್ತಿದ್ದರು. ಈ ಪೊಡಿಕ್ಕ್ಸಾಲು ಮಾಡುವಾಗ ಗದ್ದೆಯ ದೊಡ್ಡ ದೊಡ್ಡ ಮಣ್ಣಿನ ಹೆಂಟೆಗಳನ್ನು ಹುಡಿ ಮಾಡಿ, ಗದ್ದೆಯನ್ನು ಸಮತಟ್ಟಾಗಿಸುತ್ತಿದ್ದರು. ಒರತೆ ನೀರಿಲ್ಲದಿದ್ದರೆ ಪಕ್ಕದ ತೋಡಿಗೆ (ಹಳ್ಳ) ಒಡ್ಡು/ಕಟ್ಟ (ಕಿರುಅಣೆಕಟ್ಟು) ಕಟ್ಟಿ ಮಳೆಯ ನೀರನ್ನು ಗದ್ದೆಗೆ ಹಾಯಿಸುತ್ತಿದ್ದರು. ಈ ನೀರಿಗೆ ಮತ್ತೆ ನಾಲ್ಕು ಸಾಲು ಉಳುಮೆ ನಡೆಸಬೇಕು. ನೀರಿಗೆ ಒಂದು ಸಾಲು ಉತ್ತ ಬಳಿಕ ಗದ್ದೆ ಹುಣಿಯನ್ನು ಕೆತ್ತಿ ಸುಮಾರು ಒಂದು ಮೀಟರ್ ದೂರಕ್ಕೆ ಹುಲ್ಲನ್ನು ಬಿಸಾಕುತ್ತಿದ್ದರು. ಈ ರೀತಿ ಗದ್ದೆ ಹುಣಿಯನ್ನು ಕೆತ್ತಿದ ನಂತರ ಮತ್ತೆ ಮೂರು ಸಾಲು ಉಳುಮೆ ನಡೆಯುತ್ತಿತ್ತು. ಕೊನೆಗೆ ಒಂದು ಬಾರಿ ಹಲಗೆಯನ್ನು ಎಳೆದು ಗದ್ದೆಯನ್ನು ಸಮತಟ್ಟಾಗಿಸುತ್ತಿದ್ದರು. ಹೀಗೆ ಒಟ್ಟು ಒಂಬತ್ತು ಅಥವಾ ಹತ್ತು ಬಾರಿ ಉಳುಮೆ ನಡೆಸಿ ಗದ್ದೆಯನ್ನು ಹದ ಮಾಡಿ, ನಾಟಿ ಕೆಲಸಕ್ಕಿಳಿಯುತ್ತಿದ್ದರು. ತುಳುನಾಡಿನಲ್ಲಿ ಗಂಡಸರು ಮಾತ್ರ ಗದ್ದೆ ಉಳುತ್ತಿದ್ದರು. ಸಾಂಸ್ಕೃತಿಕ ಇತಿಹಾಸದ ದೃಷ್ಟಿಯಿಂದ ಉಳುವ ಮತ್ತು ಬಿತ್ತುವ ಕಾರ್ಯ ಗಂಡಸರಿಂದಲೂ ಬಿತ್ತಿದನ್ನು ಪೋಷಿಸುವ ಕಾರ್ಯ ಹೆಂಗಸರಿಂದಲೂ ನಡೆಯುವುತ್ತಿದ್ದುದನ್ನು ಜಗತ್ತಿನಾದ್ಯಾಂತದ ಜನಪದ ಬದುಕು ಗುರುತಿಸಿದೆ. ಇಲ್ಲಿಯ ಉಳುಮೆ ಗಂಡಸಿನ ಸಾಮರ್ಥ್ಯ ಹಾಗೂ
ಪುರುಷಾದಿಷ್ಟ ವ್ಯವಸ್ಥೆಯನ್ನು ಪ್ರತಿನಿಧಿಸುವ ಹಿನ್ನಲೆಯಿಂದ ಇತ್ತು ಎನ್ನಬಹುದು. ಜನಪದರ ಪ್ರಕಾರ, ಬೇಸಾಯದ ಉಳುಮೆ ಒಂದು ಕಲೆ. ಆ ಕಲೆ ಕರಗತವಾಗದಿದ್ದರೆ, ಎತ್ತುಗಳ ಕಾಲಿಗೆ ಗಾಯವಾಗುವ, ನೇಗಿಲು ಬಹುಬೇಗ ಸವೆದು ಹೋಗುವ, ‘ಪೊರಿ’ (ಸಾಲು) ಬಿಟ್ಟು ಹೋಗುವ, ಎತ್ತುಗಳ ಭುಜಕ್ಕೆ ನೋವಾಗುವ ಸಾಧ್ಯತೆಗಳೇ ಹೆಚ್ಚು. ಈ ಕಾರಣಕ್ಕಾಗಿ ಜನಪದರು ಉಳುಮೆಯನ್ನು ಅತ್ಯಂತ ಕಿರಿಯ ಪ್ರಾಯದಲ್ಲಿ ಕರಗತ ಮಾಡಿಕೊಳ್ಳುತ್ತಿದ್ದರು.
ಗೊಬ್ಬರ: ಮೂರು ಬಾರಿ ಹುಡಿಗೆ ಸಾಲು ಮಾಡಿದ ನಂತರ, ಗದ್ದೆಗೆ ತರಗೆಲೆ ತಂದು ಹಾಕುತ್ತಿದ್ದರು. ತರಗೆಲೆಗೆಳನ್ನು ಬಿದಿರಿನ ಕೊಟ್ಟೆ(ಜಲ್ಲೆ)ಗಳಲ್ಲಿ ತಂದು ಗದ್ದೆಯ ಅಲ್ಲಲ್ಲಿ ರಾಶಿ ಹಾಕುತ್ತಿದ್ದರು. ನೀರಿಗೆ ಉಳುವ ಸಂದರ್ಭದಲ್ಲಿ ಈ ತರಗೆಲೆಗಳನ್ನು ಹರಡಿ ಉಳುಮೆ ನಡೆಸುತ್ತಿದ್ದರು. ನೀರಿಗೆ ಒಂದು ಸಾಲು ಉತ್ತ ನಂತರ ಕಾಡಿನ ಸೊಪ್ಪು ಮತ್ತು ಹಟ್ಟಿಗೊಬ್ಬರಗಳನ್ನು ಹಾಕುವುದು ಕ್ರಮ. ಸೊಪ್ಪನ್ನು ಸಣ್ಣಗೆ ಕತ್ತರಿಸಿ ಗದ್ದೆ ಪೂರ್ತಿ ಹರಡುತ್ತಿದ್ದರು. ಈ ರೀತಿ ಹರಡಿ ಮೂರು ದಿನ ಕಳೆದ ನಂತರ ಮತ್ತೆ ಉಳುಮೆ ಕಾರ್ಯ ಆರಂಭವಾಗುತ್ತಿತ್ತು. ಈ ಅವಧಿಗಾಗಲೇ ಸೊಪ್ಪು ಕೊಳೆತು ಅದರ ಸಾರ ನೀರಿನೊಂದಿಗೆ ಸೇರಿಕೊಳ್ಳುತ್ತಿತ್ತು. ಸೊಪ್ಪು, ಗೊಬ್ಬರ ಹಾಕಿದ ನಂತರ ಗದ್ದೆಯ ನೀರನ್ನು ಹೊರಕ್ಕೆ ಬಿಡುವಂತಿರಲಿಲ್ಲ. ಗೊಬ್ಬರ ಹಾಕಿ ಮತ್ತೆ ಎರಡು ಸಾಲು ಉಳುಮೆ ಮಾಡಿದಲ್ಲಿ ಒಟ್ಟು ಉಳುಮೆ ಮುಗಿದಂತಾಗುತ್ತಿತ್ತು. ಸಾಮಾನ್ಯವಾಗಿ ಹೆಚ್ಚು ನೀರಿರುವ ಗದ್ದೆಗಳಿಗೆ ಏಣಿಲು ಬೇಸಾಯದ ಹಂತದಲ್ಲಿ ಸೊಪ್ಪು ಹಾಕುವುದು ಕಡಿಮೆ. ಗೊಬ್ಬರ ಕೊಚ್ಚಿ ಹೋಗುವ ಸಾಧ್ಯತೆ ಇರುವುದರಿಂದ ನೀರು ಹದವಾಗಿರುವ ಗದ್ದೆಗಳಿಗೆ ಮಾತ್ರ ಸೊಪ್ಪು ಗೊಬ್ಬರ ಬಳಸುತ್ತಿದ್ದರು. ಸಾಂಪ್ರದಾಯಿಕ ಬೇಸಾಯ ಪದ್ದತಿಯಲ್ಲಿ ಈ ರೀತಿಯ ಸಾವಯವ ಗೊಬ್ಬರದ ಬಳಕೆ ಹೆಚ್ಚು. ರಾಸಾಯನಿಕ ಗೊಬ್ಬರಗಳ ಬಳಕೆಗಿಂತ ಮೊದಲು ತುಳುನಾಡಿನ ಬೇಸಾಯದಲ್ಲಿ ಬಳಸುತ್ತಿದ್ದ ಜೈವಿಕ ಗೊಬ್ಬರಗಳಲ್ಲಿಯೂ ವ್ಯತ್ಯಾಸವಿದ್ದಿದನ್ನು ಗಮನಿಸಬಹುದು. ಉತ್ತಮ ಸಾರದಿಂದ ಕೂಡಿದ ಸೊಪ್ಪನ್ನೇ ಬಳಸುತ್ತಿದ್ದರು. ಈ ಹಂತದಲ್ಲಿ ನಿರಂತರ ಆವಿಷ್ಕಾರಗಳು ನಡೆದಿರುವ ಸಾಧ್ಯತೆಗಳೇ ಹೆಚ್ಚು.
ನೇಜಿ: ಬತ್ತದ ಎಳತು ಸಸಿಯನ್ನು ‘ನೇಜಿ’ ಎನ್ನುತ್ತಾರೆ. ಪಗ್ಗು ೧೮ರಂದು ಒಟ್ಟು ಗದ್ದೆಗೆ ಬೇಕಾಗುವಷ್ಟು ಬೀಜವನ್ನು ಬಿತ್ತಿ ನೇಜಿ ತಯಾರಿಸುತ್ತಿದ್ದರು. ಏಣಿಲು ಬೆಳೆಯ ನೇಜಿಗೆ ಬೀಜವನ್ನು ಮೊಳಕೆ ಬರಿಸದೆ ಬಹುತೇಕ ಕಡೆಗಳಲ್ಲಿ ಬಿತ್ತುತ್ತಿದ್ದರು. ಬಿತ್ತಿದ ಎರಡು ಮೂರು ದಿನಗಳಲ್ಲಿ ಬೀಜ ಮೊಳಕೆಯೊಡೆಯುತ್ತಿತ್ತು. ಈ ಹಂತದಲ್ಲಿ ಬಿತ್ತಿದ ಬೀಜದ ಸಂರಕ್ಷಣೆಯ ಕಾರ್ಯವೂ ನಡೆಸಬೇಕಿತ್ತು. ಸಾಮಾನ್ಯ ಲೆಕ್ಕಚಾರವೊಂದರ ಪ್ರಕಾರ ೧ ಮುಡಿ ಗದ್ದೆ ಬೇಸಾಯಕ್ಕೆ ೧/೨ ಮುಡಿ ಪ್ರದೇಶದಲ್ಲಿ ನೇಜಿಯ ಅವಶ್ಯಕತೆ ಇತ್ತು. ಬೀಜವು ಉತ್ತಮವಾಗಿ ಮೊಳಕೆ ಬಂದಲ್ಲಿ ೧ ಸೇರು ಬಿತ್ತಿಗೆ ೧೦೦ ಸೂಡಿ ನೇಜಿ ಬೆಳೆಯುವ ಸಾಧ್ಯತೆ ಇತ್ತು. ನೇಜಿ ಕೀಳಲು ಸಮರ್ಥನಾದವನಿಂದ ೫೦ ಅಥವಾ ೬೦ ಸೂಡಿಗಳನ್ನು ಮಾತ್ರ ಕೀಳಲು ಸಾಧ್ಯವೆಂಬ ಲೆಕ್ಕಚಾರವೂ ಇತ್ತು. ೧ ಮುಡಿ ಗದ್ದೆಗೆ ೧ ಮುಡಿ(೪೨ ಸೇರು) ಬತ್ತದ ಬೀಜವನ್ನು ೧/೨ ಮುಡಿ ಪ್ರದೇಶದಲ್ಲಿ ಬಿತ್ತಬೇಕಾಗುತ್ತಿತ್ತು. ಈ ರೀತಿ ೧ ಮುಡಿ ಬಿತ್ತಿದರೆ ಸುಮಾರು ೪೨೦೦ ಸೂಡಿ ನೇಜಿ ಸಿಗಬಹುದೆಂಬ ಲೆಕ್ಕಾಚಾರ ಜನಪದರದ್ದು. ಆದರೆ ಸಾಮಾನ್ಯವಾಗಿ ೩೦೦೦ ಸೂಡಿ ನೇಜಿಯಂತೂ ಸಿಕ್ಕಿಯೇ ಸಿಗುತ್ತಿತ್ತು.ನೇಜಿಗಾಗಿ ಬತ್ತ ಬಿತ್ತಿದ ನಂತರ ಗದ್ದೆಯ ಉಳಿದ ಪ್ರದೇಶವನ್ನು ಮೂರು ಬಾರಿ ಉತ್ತು ಮಳೆ ನೀರಿಗಾಗಿ ಕಾಯುತ್ತಿದ್ದರು. ಮಳೆ ಬಾರದೇ ಇದ್ದಲ್ಲಿ ಈ ನೇಜಿಗಾಗಿ “ಒಡ್ಡು/ಕಟ್ಟ”ದ ನೀರನ್ನು ಬಳಸುತ್ತಿದ್ದರು. ಪಗ್ಗು ೧೮ರಂದು ನೇಜಿಗೆ ಬೀಜ ಬಿತ್ತಿದರೆ ಬೇಶ ೨ನೇ ವಾರದಲ್ಲಿ(ಮೇ ೨೩) ನೇಜಿ ಕೀಳಬಹುದಾಗಿತ್ತು. ಏಣಿಲಿಗೆ ಬೆಳೆಯುವ ‘ಕಯಮ್ಮೆ’ ಬೀಜವಾದರೆ, ಸುಮಾರು ೨೫ ದಿನಗಳ ಬೆಳವಣಿಗೆ ಈ ನೇಜಿಗೆ ಬೇಕು. ಬೇಸಿಗೆಯಲ್ಲಿ ತರಕಾರಿ ಬೆಳೆದ
ಗದ್ದೆಗಳಾದರೆ ನೇಜಿಯ ಬೆಳವಣಿಗೆ ಬೇಗನೆ ಆಗುವ ಸಾಧ್ಯತೆಯೂ ಇತ್ತು. ಬೀಜದ ಬತ್ತಕ್ಕಾಗಿ ಪ್ರತ್ಯೇಕ ತೆನೆಯನ್ನು ಕೊಯ್ದು ಒಣಗಿಸಿ ಮುಡಿ ಕಟ್ಟಿ ಇಟ್ಟಿರುತ್ತಿದ್ದರು. ಬಿತ್ತುವ ಸಂದರ್ಭದಲ್ಲಿ ಆ ಬತ್ತವನ್ನು ಬಳಸುತ್ತಿದ್ದರು. ನೇಜಿ ತೆಗೆಯುವುದು (ಕೀಳುವುದು): ತುಳುನಾಡಿನಾದ್ಯಂತ ಬೇಶ ೨೫ರ ಹೊತ್ತಿಗೆ ನೇಜಿ ಕೀಳುವ ಕೆಲಸ ಪ್ರಾರಂಭವಾಗುತ್ತಿತ್ತು. ಮಳೆಯ ತೀವ್ರತೆ ಹೆಚ್ಚಾಗುತ್ತಿದಂತೆ ನೇಜಿ ಕೀಳುವ ಕೆಲಸವು ತೀವ್ರಗೊಳ್ಳುತ್ತಿತ್ತು. ತುಳುನಾಡಿನಲ್ಲಿ ನೇಜಿ ಕೀಳುವ ಕೆಲಸ ಹೆಚ್ಚಾಗಿ ಹೆಂಗಸರದ್ದಾಗಿತ್ತು. ಇದೇ ಸಂದರ್ಭದಲ್ಲಿ ಬೇಸಾಯ ಸಂಬಂಧಿ ಪಾಡ್ದನಗಳನ್ನು ಹಾಡಲಾಗುತ್ತಿತ್ತು. ಏಳು ಜನರಿದ್ದರೆ ಒಂದು ಮುಡಿ ಗದ್ದೆಯ ನೇಜಿಯನ್ನು ಕೀಳಲು ಒಂದು ದಿನ ಬೇಕು ಎಂಬ ಲೆಕ್ಕಾಚಾರವಿತ್ತು. ನೇಜಿಯನ್ನು ತೆಗೆದು ಅದರ ಬೇರಿನಲ್ಲಿ ಅಂಟಿರುವ ಮಣ್ಣನ್ನು ಚೆನ್ನಾಗಿ ತೊಳೆದು ಸೂಡಿ ಕಟ್ಟುತ್ತಿದ್ದರು. ಆ ನಂತರ ಅದರ ತುದಿಯನ್ನು ಕತ್ತರಿಸುವುದಿತ್ತು.
ಕಂಡತ ಕೋರಿ(ಗದ್ದೆಕೋರಿ): ಬೇಸಾಯ ಸಂಸ್ಕೃತಿಯಲ್ಲಿ ದುಡಿಮೆಯನ್ನು ಆಚರಣಾತ್ಮಕ ರೀತಿಯಲ್ಲಿ ತೊಡಗಿಸಿಕೊಳ್ಳುವ ಅನೇಕ ನಿದರ್ಶನಗಳು ದೊರಕುತ್ತವೆ. ಅವುಗಳಲ್ಲಿ ‘ಕಂಡತ ಕೋರಿ’(ಗದ್ದೆಕೋರಿ) ಮುಖ್ಯವಾದುದು. ಏಣಿಲು ಬೇಸಾಯದ ನೇಜಿ ಕಿತ್ತ ನಂತರ ನಡೆಯುವ ಒಂದು ದಿನದ ಸಾಮೂಹಿಕ ಉಳುಮೆ ಮತ್ತು ನಾಟಿಯನ್ನು ‘ಕಂಡತ ಕೋರಿ’ (ಗದ್ದೆಕೋರಿ) ಎನ್ನುತ್ತಿದ್ದರು. ಸಹಕಾರ ತತ್ವದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ಈ ದುಡಿಮೆ ತುಳುನಾಡಿನ ಸಾಮೂಹಿಕ ಬದುಕನ್ನು ರೂಪಿಸಲು ಕಾರಣವಾಗಿದೆ. ಸುಗ್ಗಿ ಬೆಳೆಯ ಸಂದರ್ಭದಲ್ಲಿ ನಂಬಿಕೆಯ ನೆಲೆಯಲ್ಲಿ ನಡೆಯುವ ‘ಕಂಡತಕೋರಿ’ಗೂ ಏಣಿಲು ಬೆಳೆಯ ಸಂದರ್ಭದಲ್ಲಿ ವ್ಯಾವಹಾರಿಕ ನೆಲೆಯಲ್ಲಿ ನಡೆಯುವ ‘ಕಂಡತಕೋರಿ’ಗೂ ವ್ಯತ್ಯಾಸವಿತ್ತು. ಏಣಿಲು ಬೇಸಾಯದ ಕಂಡತಕೋರಿಗೆ ಯಾವುದೇ ವಿಶೇಷ ಆಚರಣಾತ್ಮಕ ಮಾನ್ಯತೆ ಇಲ್ಲದಿದ್ದರೂ ದುಡಿಮೆಯೇ ಮುಖ್ಯವಾಗಿತ್ತು. ಸಂಘಜೀವನದ ಮೂಲಕ ದುಡಿಮೆಯನ್ನು ಪೂರೈಸುವ ಕ್ರಿಯೆ ಇದಾಗಿತ್ತು.
ಊರಿನ ಎಲ್ಲಾ ಮನೆಗಳ ಒಂದೊಂದು ಜೊತೆ ಎತ್ತು/ಕೋಣಗಳನ್ನು ಒಬ್ಬ ವ್ಯಕ್ತಿಯ ಗದ್ದೆಗೆ ತಂದು ಉಳುಮೆ ಪೂರೈಸುವ ಸಾಮೂಹಿಕ ವೃತ್ತಿ ನಿರ್ವಹಣೆಯೇ ಈ ಕಂಡತ ಕೋರಿ. ಈ ರೀತಿಯ ಬೇಸಾಯದ ಕ್ರಮವನ್ನು ‘ಪಗರೊಗು ಅಡಪುನಾ’(ಅದಲುಬದಲಿನ ಹೂಟೆ) ಎನ್ನುತ್ತಿದ್ದರು. ಸಂಘಜೀವನಕ್ಕೆ ಮೊದಲ ಆದ್ಯತೆಯನ್ನು ಕೊಡುವ ಹಿನ್ನಲೆಯಲ್ಲಿ ಕಂಡತಕೋರಿ ನಡೆಯುತ್ತಿತ್ತು.ಬೇಸಾಯ ವೃತ್ತಿ ಅತ್ಯಂತ ಕಠಿಣವೂ
ದೀರ್ಘಕಾಲಿಕವೂ ಆಗಿರುವುದರಿಂದ ಮತ್ತು ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದಿಂದ ಇದನ್ನು ನಿರ್ವಹಿಸಲು ಸಾಧ್ಯವಿಲ್ಲವೆಂಬ ಹಿನ್ನೆಲೆಯಲ್ಲಿ ಈ ಸಾಮೂಹಿಕ ಬೇಸಾಯ ಪದ್ಧತಿ ರೂಢಿಗೆ ಬಂದಿರಬಹುದು. ನಿರ್ದಿಷ್ಟ ಸಮಯದ ಪರಿಮಿತಿಯಲ್ಲಿ ಏಣಿಲು ಕೆಲಸ ಪೂರ್ಣಗೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಈ ಸಾಮೂಹಿಕ ದುಡಿಮೆ ಜನಪ್ರಿಯವಾಗಿತ್ತು. ಕಂಡತಕೋರಿ ಒಂದು ಮನೆಗೆ ಹಾಗೂ ಅಲ್ಲಿ ಸೇರಿದ ಕೆಲಸದಾಳುಗಳಿಗೆ ಮಾತ್ರ ಸೀಮಿತವಾಗಿರದೇ ಒಟ್ಟು ಊರಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತಿತ್ತು. ಈ ರೀತಿಯ ಸಾಮೂಹಿಕ ದುಡಿಮೆಯಿಂದಾಗಿ ವೃತ್ತಿ ಕುಶಲತೆ ಹೆಚ್ಚಾಗುವುದಲ್ಲದೆ ದುಡಿಮೆಯ ಶ್ರಮವನ್ನೂ ತಗ್ಗಿಸುತ್ತಿದ್ದರು.ಆ ಮೂಲಕ ಬೇಸಾಯದಂಥ ಕಠಿಣ ವೃತ್ತಿಯನ್ನು ಹಗುರವಾಗಿಸುವ ಉದ್ದೇಶ ತುಳು ಜನಪದರದ್ದಾಗಿತ್ತು.ಎಷ್ಟೇ ವಿಸ್ತೀರ್ಣದ ಗದ್ದೆಗಳಿದ್ದರೂ ಒಂದು ದಿನದ ಕೋರಿಯಲ್ಲಿ ಕೆಲಸವನ್ನು ಪೂರ್ಣಗೊಳಿಸಿ ನಿರಾಳವಾಗುವ ಪರಿಕಲ್ಪನೆ ಇಲ್ಲಿಯದು. ಇದು ಊರಿನ ಸೌಹಾರ್ದ ಬದುಕಿಗೂ ನಾಂದಿಯಾಗಿತ್ತು.
ಈ ಹಂತದಲ್ಲಿ ನಡೆಯುವ ಕಬಿತ, ಉರಲ್, ಕಥೆ, ಗಾದೆಗಳ ಮೂಲಕ ಒಟ್ಟು ಸಮೂಹವು ವೃತ್ತಿಯ ಜೊತೆಗೆ ಸಾಂಸ್ಕೃತಿಕ ವಾತಾವರಣವೊಂದನ್ನು ನಿರ್ಮಿಸಿಕೊಳ್ಳುತ್ತಿದ್ದರು. ಏಣಿಲಿನ ‘ಕಂಡದ ಕೋರಿ’ಯು ಕೇವಲ ಶ್ರಮಕ್ಕೆ ಮಾತ್ರ ಮಹತ್ವವನ್ನು ಕೊಡುವುದರಿಂದ ಉಳಿದ ಆಚರಣೆಗಳು ಇಲ್ಲಿ ನಗಣ್ಯವಾಗಿತ್ತು. ಆದ್ದರಿಂದ ಆಚರಣಾ ರಹಿತವಾಗಿ ಶ್ರಮದ ಪರಿಮಾಣವನ್ನು ತಗ್ಗಿಸುವ ನೆಲೆಯಲ್ಲಿ ಮೌಖಿಕ ಸಾಹಿತ್ಯ ಪ್ರಕಾರಗಳು ಶ್ರಮದೊಂದಿಗೆ ಬೆರೆತುಕೊಳ್ಳುತ್ತಿದ್ದವು.ಇಲ್ಲಿ ಮೌಖಿಕ ಸಾಹಿತ್ಯಕ್ಕೂ ಶ್ರಮಕ್ಕೂ ಸಮಾನವಾದ ಪ್ರಾಧಾನ್ಯ ಇದ್ದರೂ ಏಣಿಲ್ ಬೇಸಾಯವೂ ಶ್ರಮಕ್ಕೆ ಹೆಚ್ಚಿನ ಮಹತ್ವ ನೀಡುವುದನ್ನು ಗಮನಿಸಬಹುದು. ಇದಕ್ಕೆ ಮುಖ್ಯ ಕಾರಣ ಮಳೆಯ ಅನಿಶ್ಚಿತತೆ, ಬೇಸಾಯ ಸಾರ್ವತ್ರಿಕವಾಗಿರುವುದು, ಕೆಲಸದಾಳುಗಳ ಅಭಾವ ಮತ್ತು ನಿಗದಿತ ಅವಧಿಯಲ್ಲಿ ಬೇಸಾಯವನ್ನು ಪೂರೈಸಲೇಬೇಕೆಂಬ ಒತ್ತಡವೇ ಆಗಿರಬಹುದು. ಆದ್ದರಿಂದ ಏಣಿಲು ಬೇಸಾಯದ ಕಂಡತಕೋರಿ ಎಂದರೆ ಶ್ರಮ ನಿರ್ವಹಣೆಯ ತಂತ್ರವೆಂದು ಪರಿಭಾವಿಸಬಹುದು. ಇತರ ಆಚರಣೆಗಳು ಇಲ್ಲದೇ ಇರುವುದು ಇದಕ್ಕೆ ಉತ್ತಮ ನಿದರ್ಶನ.
ನಾಟಿ: ಕೊನೆಯ ಎರಡು ಸಾಲು ಉಳುಮೆಯಾದ ನಂತರ (ಒಂಬತ್ತು ಅಥವಾ ಹತ್ತು ಬಾರಿ) ನಾಟಿ ಕೆಲಸ ಆರಂಭವಾಗುತ್ತಿತ್ತು. ತುಳುನಾಡಿನಾದ್ಯಂತ ನಾಟಿ ಕೆಲಸವನ್ನು ಆರಂಭಿಸುವಲ್ಲಿ ಯಾವುದೇ ನಿಗದಿತ ದಿನವಿರಲಿಲ್ಲ. ಅದೇ ರೀತಿ ನಾಟಿ ಕೆಲಸವನ್ನು ಕೂಡ ಹೆಣ್ಣಾಳುಗಳು ನಡೆಸುವುದೇ ಹೆಚ್ಚಾಗಿತ್ತು. ಗಂಡಸರು ಗದ್ದೆ ಹುಣಿಯನ್ನು ಕೆತ್ತುವ, ನೇಜಿ ಸೂಡಿಯನ್ನು ತಂದು ಹಾಕುವ ಕಾರ್ಯವನ್ನು ಮಾಡುತ್ತಿದ್ದರು. ‘ಕೈಗುಣ ಒಳ್ಳೆಯದಿದೆ’ ಎಂದು ಪ್ರತೀತಿ ಇರುವ ಕೆಲಸದಾಳು ಅಥವಾ ಮನೆಯ ಯಜಮಾನಿ ಮೊದಲ ನಾಟಿ ಆರಂಭಿಸುವುದು
ವಾಡಿಕೆಯಾಗಿತ್ತು. ಸಾಮಾನ್ಯವಾಗಿ ‘ಚೋಟಿ’(ಗೇಣಿ)ಗೆ ಒಂದರಂತೆ ಒಂದು ‘ಪತ್ತ್’(ಸಣ್ಣ ಹಿಡಿ) ನೇಜಿ ನೆಡುತ್ತಿದ್ದರು. ಹೆಚ್ಚು ಕೆಸರಿರುವ ಕೆಂಪಗದ್ದೆಯಲ್ಲಿ(ಕೆಸರು ಗದ್ದೆ) ನಾಟಿಯನ್ನು ಅತ್ಯಂತ ಎಚ್ಚರಿಕೆಯಿಂದ ಮಾಡುತ್ತಿದ್ದರು. ಕೆಸರಿನ ಒಳಕ್ಕೆ ನೇಜಿ ತಳ್ಳಿ ಹೋದಲ್ಲಿ ಅದು ಮತ್ತೆ ಚಿಗುರದೇ ಇರುವ ಸಂಭವವಿರುವುದರಿಂದ ಈ ರೀತಿಯ ಎಚ್ಚರಿಕೆಯನ್ನು ವಹಿಸಲಾಗುತ್ತಿತ್ತು. ನಾಜೂಕಾದ ಕೆಲಸಗಾರರು ಹತ್ತು ಜನರಿದ್ದರೆ ಒಂದು ದಿನದಲ್ಲಿ ಸುಮಾರು ಒಂದು ಮುಡಿ ಗದ್ದೆಯನ್ನು ನೆಟ್ಟು ಮುಗಿಸುತ್ತಿದ್ದರು. ನಾಟಿಯ ಸಂದರ್ಭದಲ್ಲಿ ಪಾಡ್ದನ ಹಾಡುವ ಬದಲು ಕಬಿತ, ಗಾದೆ, ಒಗಟುಗಳನ್ನು ಸಂದರ್ಭಾನುಸಾರವಾಗಿ ಬಳಸುತ್ತಿದ್ದರು. ಇವುಗಳನ್ನು ಬಳಸುವುದರಿಂದ ಕೆಲಸದ ವೇಗ ಹೆಚ್ಚಾಗುತ್ತದೆ ಹಾಗೂ ಶ್ರಮ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇತ್ತು.
ಕಂಡೊ ಆಳುನೆ(ಗದ್ದೆ ಆಳುವುದು): ‘ಕಂಡೊ ಆಳುನೆ’ (ಗದ್ದೆ ಆಳುವುದು) ಒಂದು ಕ್ರಿಯಾಚರಣೆಯಾಗಿದೆ. ಗದ್ದೆಯ ನಾಟಿ ಕಾರ್ಯಪೂರ್ಣವಾದ ನಂತರ ಕೈಯಲ್ಲಿದ್ದ ನೇಜಿಯೊಂದಿಗೆ ಗದ್ದೆ ಹುಣಿಯಲ್ಲಿ ನಿಂತು ಹೇಳುವ ಕ್ರಿಯಾವಿಧಿ ‘ಕಂಡೊ ಆಳುನೆ’ ಅಥವಾ ಗದ್ದೆ ಆಳುವುದು. ಪಾಡ್ದನ ಹೇಳುವ ನುರಿತ ಹೆಂಗಸು ಗದ್ದೆ ಆಳುವ ಹೇಳಿಕೆಯನ್ನು ಗಟ್ಟಿಯಾಗಿ ಹೇಳುತ್ತಿದ್ದಳು. ಈ ಹೇಳಿಕೆಯ ಕೊನೆಯ ಸಾಲಿನಲ್ಲಿ ಉಳಿದ ಹೆಂಗಸರು ‘ಕೂ….’ ಎಂದು ಧ್ವನಿಗೂಡಿಸುತ್ತಿದ್ದರು. ಲೌಖಿಕ ಬದುಕಿನಲ್ಲಿ ಅಸಾಧ್ಯವೆನಿಸಿದ ಬೇಡಿಕೆಗಳನ್ನು ಮುಂದಿರಿಸಿ ‘ಕಂಡೊ ಆಳುನೆ’ ಹೇಳಿಕೆಯನ್ನು ಹೇಳುತ್ತಾ, ಬತ್ತದ ಸಮೃದ್ದಿಯನ್ನು ಆಶಿಸಲಾಗುತ್ತಿತ್ತು. ತುಳುನಾಡಿನ ಪ್ರಮುಖ ಮೂರು ಭಾಗದ ‘ಕಂಡೊ ಆಳುನ’ ಹೇಳಿಕೆಯನ್ನು ಸಂಗ್ರಹಿಸಲಾಗಿದೆ. ಈ ಮೂರು ಹೇಳಿಕೆಯಲ್ಲಿ ಮಂಗಳೂರು ಭಾಗದ ಹೇಳಿಕೆಯು ಬೇಸಾಯದ ಸಂದರ್ಭಕ್ಕನುಸಾರವಾಗಿದ್ದು, ಕಾಸರಗೋಡು ಹಾಗೂ ಸುಳ್ಯ ಭಾಗದ ಹೇಳಿಕೆಗಳು ಬೇಸಾಯ ಸಂದರ್ಭದಲ್ಲಿ ಅಪ್ರಸ್ತುತ ಎಂಬುದನ್ನು ಗುರುತಿಸಬಹುದು. ಕಾಸರಗೋಡು ಹಾಗೂ ಸುಳ್ಯ ಭಾಗದ ಹೇಳಿಕೆಗಳು ಬಲೀಂದ್ರ ಪಾಡ್ದನಗಳಲ್ಲಿ ಬರುವ ಹೇಳಿಕೆಗಳನ್ನೇ ಬಳಸಿಕೊಂಡಿರುವುದನ್ನು ಗುರುತಿಸಲಾಗಿದೆ. ಅಂದರೆ ಬಲೀಂದ್ರ ತುಳುನಾಡಿಗೆ ಮತ್ತೆ ಯಾವಾಗ ಬರಬಹುದೆಂಬ ಅಸಾಮಾನ್ಯ ಸಾಧ್ಯತೆಯನ್ನು ಬಿಂಬಿಸುವ ಹೇಳಿಕೆಗಳು ಇವುಗಳಾಗಿವೆ. ಈ ಪ್ರದೇಶದ ಎಲ್ಲಾ ಭಾಗಗಳಲ್ಲೂ ಇದೇ ರೀತಿಯ ಹೇಳಿಕೆಗಳು ದೊರಕುತ್ತವೆ.
ತನ್ನ ಒಡೆಯನ ಬೆಳೆಯ ಸಮೃದ್ದಿಯು ದುಡಿಯುವ ವರ್ಗದ ಕೈಯಲ್ಲಿತ್ತು ಎಂಬುದಕ್ಕೆ ‘ಕಂಡೊ ಆಳುನ’ ಹೇಳಿಕೆ ಉತ್ತಮ ನಿದರ್ಶನವಾಗಿತ್ತು. ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದ ಎಲ್ಲಾ ಕೆಲಸದಾಳುಗಳು
ಸಾಮೂಹಿಕವಾಗಿ ಗದ್ದೆಗೆ ಸುತ್ತು ಬರುತ್ತಾ ಈ ಹೇಳಿಕೆ ಹೇಳುವುದು ಬೆಳೆಯ ಭವಿಷ್ಯದ ಬಗ್ಗೆ ಈ ವರ್ಗಕ್ಕಿರುವ ಅಪಾರ ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ತಮ್ಮ ಕೈಯಲ್ಲಿ ಉಳಿದಿರುವ ನೇಜಿಯನ್ನು ಹಿಡಿದು ಸಂಮೃದ್ದಿಯನ್ನು ಬೇಡಿಕೊಳ್ಳುವುದು ಹಾಗೂ ಅದಕ್ಕಾಗಿ ತಮ್ಮ ಒಡೆಯ ಒಡತಿಯು ಭಾದ್ಯರಾಗಲಿ ಎಂದು ಆಶಿಸುವುದು ತಳವರ್ಗದ ಸ್ವಾಮಿನಿಷ್ಠೆಯನ್ನು ಸೂಚಿಸುತ್ತದೆ. ತಮಗೆ ಎಷ್ಟೇ ಕಷ್ಟ ಬಂದರೂ ತಮ್ಮ ಒಡೆಯನ ವೃದ್ದಿಯಲ್ಲಿ ಸಂತೋಷ ಕಾಣುವ ಆಶಯ ಇಲ್ಲಿಯದು.
ಕದಿಕೆ ಕಟ್ಟುನೆ(ಕಣಜ ಕಟ್ಟುವುದು): ಏಣಿಲು ಬೇಸಾಯದ ನಾಟಿಯಲ್ಲಿ ನಡೆಯುವ ಕೊನೆಯ ಕ್ರಿಯಾಚರಣೆ ‘ಕದಿಕೆ ಕಟ್ಟುನ’(ಕಣಜ ಕಟ್ಟುವುದು). ಈ ಕದಿಕೆ ಕಟ್ಟುನ ಕ್ರಿಯಾಚರಣೆಯು ತುಳುನಾಡಿನ ಕೆಲವು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತಿತ್ತು. ದೊಡ್ಡ ಗದ್ದೆಯ ನೇಜಿ ಕೆಲಸ ಮುಗಿದ ನಂತರ ಕೆಲಸದಾಳುಗಳಲ್ಲಿ ಪಾಡ್ದನ ಹೇಳುವ ಹೆಂಗಸು ಈ ಕ್ರಿಯಾಚರಣೆ ನೆರವೇರಿಸುತ್ತಿದ್ದಳು. ತನ್ನ ಕೈಯಲ್ಲಿರುವ ನೇಜಿಯನ್ನು ಗದ್ದೆಯಿಂದ ನೀರು ಹೊರಕ್ಕೆ ಬೀಳುವ ‘ಕಡಿ’ಯ ಬಳಿ ನೆಡುತ್ತಿದ್ದಳು. ವೃತ್ತಾಕಾರವಾಗಿ ನೆಡುವ ಈ ನೇಜಿಯ ಮಧ್ಯಭಾಗದಲ್ಲಿ ‘ಕಾಡು ಚೇವು’(ಕೆಸು) ಗಿಡವೊಂದನ್ನು ನೆಡಲಾಗುತ್ತಿತ್ತು. ಈ ಕ್ರಿಯೆಯನ್ನು ‘ಕದಿಕೆ ಕಟ್ಟುನ’ ಎನ್ನುತ್ತಿದ್ದರು. ಸುಳ್ಯ ಪ್ರದೇಶದ ಬಹುತೇಕ ಕಡೆಗಳಲ್ಲಿ ಈ ರೀತಿಯ ಕ್ರಿಯಾಚರಣೆ ಕಂಡುಬರುತ್ತಿತ್ತು. ಈ ಕ್ರಿಯಾಚರಣೆಯು ಮುಖ್ಯವಾಗಿ ದುಡಿಯುವ ಮತ್ತು ದುಡಿಸುವ ವರ್ಗಗಳ ಮಧ್ಯೆದ ಸಾಂಸ್ಕೃತಿಕ ಅನುಸಂಧಾನವನ್ನು ಬಿಂಬಿಸುತ್ತಿತ್ತು. ಕೆಳವರ್ಗದವರ ಪ್ರಮುಖ ಆಹಾರ ಮತ್ತು ದಾರಿದ್ರ್ಯದ ಸಂದರ್ಭದಲ್ಲಿ ಬಳಕೆಗೆ ಬರುವ ‘ಚೇವು’ ಬತ್ತದ ಜೊತೆಗೆ ಸಮೃದ್ದಿಯನ್ನು ಪಡೆಯಬೇಕೆಂಬ ಆಶಯವನ್ನು ಇದರಿಂದ ಕಂಡುಕೊಳ್ಳಲು ಸಾಧ್ಯವಾಗಿತ್ತು.ಮೇಲ್ವರ್ಗದ ಆಹಾರವಾದ ಬತ್ತ ಹಾಗೂ ಕೆಳವರ್ಗದ ಆಹಾರವಾದ ಚೇವು ಪರಸ್ಪರ ಕೂಡಿಕೊಳ್ಳುವ ಮೂಲಕ ತುಳುನಾಡಿನ ವರ್ಗ ಸಾಮರಸ್ಯ ಇದರಿಂದ ಕಂಡುಕೊಳ್ಳಲು ಸಾಧ್ಯವಾಗಿತ್ತು. ಬೇಸಾಯ ಸಂಸ್ಕೃತಿಯಲ್ಲಿ ವರ್ಗ ಸಂಘರ್ಷವಿಲ್ಲದ ಸಮಾನ ಭಾವನೆ ಮೂಡಿಸುವ ದೃಷ್ಟಿಕೋನ ಇದಾಗಿತ್ತು. ಇದಕ್ಕೆ ಪೂರಕವಾಗಿ ಅತಿಕರೆಯ ಬತ್ತದ ಐತಿಹ್ಯವನ್ನು ಗಮನಿಸಿದಾಗ(ಚೇವು) ಹಾಗೂ ‘ಅತಿಕರೆಯ’ ಬತ್ತ ಘಟ್ಟ ಇಳಿದು ಜೊತೆಯಾಗಿ ಬಂದಿತೆಂಬ ವಿವರಣೆಯೂ ದೊರಕುತ್ತದೆ. ಆ ಮೂಲಕ ಬತ್ತಕ್ಕೆ ಸಿಗುವ ಮಾನ್ಯತೆಯನ್ನು ಕೆಳವರ್ಗವು ಚೇವು ಗಿಡಕ್ಕೂ ದೊರಕಿಸಲು ಪ್ರಯತ್ನಿಸುತ್ತದೆ. ಈ ಹಿನ್ನಲೆಯಿಂದಲೇ ಹೊಸ ಅಕ್ಕಿ ಉಣ್ಣುವ ಅವಧಿಯಲ್ಲೂ ಚೇವು ಪಲ್ಯವನ್ನು
ಕಡ್ಡಾಯಗೊಳಿಸಿದ್ದಾಗಿರಬೇಕುಬೇಸಾಯದ ಭೌತಿಕ ವಸ್ತುಗಳಲ್ಲಿ ‘ಕದಿಕೆ’ ಎಂದರೆ ಬತ್ತ ಸಂಗ್ರಹಿಸಿ ಸಂರಕ್ಷಿಸುವ ವೃತ್ತಾಕಾರದ ಕಣಜ. ನಾಟಿಯ ಸಂದರ್ಭದಲ್ಲಿ ಫಲ ನೀಡುವ ನೇಜಿಯಿಂದಲೇ ಇಂತಹ ಕಣಜ ನಿರ್ಮಿಸಿ, ಅದರೊಳಗೆ ಚೇವು ತುಂಬಿಸುವುದರಿಂದ ಕೆಳವರ್ಗವನ್ನು ಮೇಲ್ವರ್ಗವು ಸಂರಕ್ಷಿಸುತ್ತದೆ ಎಂಬ ತಾತ್ವಿಕ ಅರ್ಥವೊಂದು ಇದರಿಂದ ವ್ಯಕ್ತವಾಗುತ್ತದೆ. ಈ ಕ್ರಿಯೆಯನ್ನು ತಳವರ್ಗದ ಹೆಂಗಸೊಬ್ಬಳು ನೆರವೇರಿಸುತ್ತಿದ್ದುದು ಇನ್ನೂ ಅರ್ಥಪೂರ್ಣವಾಗಿತ್ತು. ‘ಕದಿಕೆ ಕಟ್ಟುವ’ ಕ್ರಿಯೆ ನಡೆಯುವುದು ನೀರು ಕೆಳಕ್ಕೆ ಹರಿದು ಬೀಳುವ ‘ಕಡಿ’ಯ ಬದಿಯಲ್ಲಿ. ತುಳು ನಂಬಿಕೆಯ ಪ್ರಕಾರ, ಹರಿಯುವ ನೀರಿಗೆ ಶಾಸ್ತ್ರವಿಲ್ಲ. ಯಾವುದೇ ಜನಾಂಗದ ಜನರಾದರೂ ಹರಿಯುವ ನೀರಿನ ಮುಂದೆ ಸಮಾನರು. ಆದ್ದರಿಂದ ‘ಕದಿಕೆ ಕಟ್ಟುವ’ ಕ್ರಿಯೆಯಲ್ಲಿ ವ್ಯಕ್ತವಾಗುವ ವರ್ಗಗಳ ಸಾಂಸ್ಕೃತಿಕ ಅನುಸಂಧಾನವು ಹರಿಯುವ ನೀರಿನ ಮುಂದೆ, ವರ್ಗ ಸಮಾನತೆಯನ್ನು ಬಿಂಬಿಸುತ್ತದೆ. ವ್ಯವಸಾಯದ ಪ್ರತೀ ಹಂತದಲ್ಲೂ ತುಳುನಾಡಿನ ತಳವರ್ಗ ಮತ್ತು ಮೇಲ್ವರ್ಗ ಪರಸ್ಪರ ಕೂಡಿಕೊಳ್ಳುವ ಸಾಂಕೇತಿಕ ಅಭಿವ್ಯಕ್ತಿ ಈ ಕ್ರಿಯಾಚರಣೆಯಿಂದ ವ್ಯಕ್ತವಾಗುತ್ತದೆ.
ಕಾಪು: ಬೇಸಾಯದ ನಾಟಿ ಪ್ರಕ್ರಿಯೆ ಮುಗಿದ ನಂತರ ಗದ್ದೆಯ ಮಧ್ಯ ಭಾಗದಲ್ಲಿ ‘ಕಾಪು’ ನೆಡುವ ವಿಧಿಯೊಂದಿತ್ತು. ‘ಕಾಪು’ ಎಂಬುದಕ್ಕೆ ಕಾಯು, ತಡೆದಿರು, ನಿರೀಕ್ಷಿಸು, ಕಾವಲು ಮಾಡು, ಕಾಪಾಡು, ರಕ್ಷಿಸು ಇತ್ಯಾದಿ ಅರ್ಥಗಳಿವೆ. ಪ್ರಾಣಿ ಪಕ್ಷಿಗಳಿಂದ ಹಾಗೂ ಮನುಷ್ಯನ ದೃಷ್ಟಿ ತಾಗದಂತೆ ಬೆಳೆಯನ್ನು ರಕ್ಷಿಸಲು ಬತ್ತದ ಗದ್ದೆ, ತರಕಾರಿಯ ಹಿತ್ತಲು ಮೊದಲಾದವುಗಳಲ್ಲಿ ನೆಡುವ ಕಳ್ಳಿ, ಪೊರಕೆ, ಮೊದಲಾದವುಗಳನ್ನು ಕಟ್ಟಿದ ಕೋಲು, ಬೆರ್ಚ ಎಂಬ ಅರ್ಥವನ್ನು ನಿಘಂಟು ನೀಡುತ್ತದೆ. ಗದ್ದೆಗಳಲ್ಲಿ ಪೈರು ನೆಟ್ಟ ನಂತರ ಅದಕ್ಕೆ ದೃಷ್ಟಿ ತಾಗದಿರಲೆಂದು ನೆಡುವ ಕೆಲವೊಂದು ಮರದ ಕೊಂಬೆಗಳಿಗೆ ‘ಕಾಪು’ ಎನ್ನುತ್ತಿದ್ದರು. ಏಣಿಲು ಬೆಳೆಗಳಲ್ಲಿ ಕಾಸರಕದ ಮರದ ಕೊಂಬೆಗಳನ್ನು ಹೆಚ್ಚಾಗಿ ನೆಡುತ್ತಿದ್ದರು. ಬತ್ತ ಸಂಸ್ಕೃತಿಯ ಪ್ರತೀ ಪ್ರದೇಶಗಳಲ್ಲೂ ಕಾಪು ಒಂದಲ್ಲ ಒಂದು ರೀತಿಯಲ್ಲಿ ನೆಡಲಾಗುತ್ತಿತ್ತು. ಸುಳ್ಯ, ಪುತ್ತೂರು, ಕಾಸರಗೋಡು ಈ ಭಾಗದ ಗದ್ದೆಗಳಿಗೆ “ಕಾಸರಕದ ಕಣೆ” ಅಥವಾ ಬಿದಿರಿನ ‘ಅಂಡೆ’ಯೊಳಗೆ ಕಳ್ಳಿಗಿಡವನ್ನು ತುಂಬಿಸಿ ಮಂಗಳವಾರ ಅಥವಾ ಆದಿತ್ಯವಾರ ಗದ್ದೆಯ ಮಧ್ಯಭಾಗದಲ್ಲಿ ಊರಲಾಗುತ್ತಿತ್ತು. ಮಂಗಳೂರು, ಬೆಳ್ತಂಗಡಿ, ಬಂಟ್ವಾಳ ಭಾಗದಲ್ಲಿ ಕಾಸರಕದ ಕಣೆಗಿಂತ ಕಳ್ಳಿಯನ್ನು ಊರುವುದೇ ಹೆಚ್ಚು.
ಮಂಗಳೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ‘ಕಾಪು’ ಒಂದು ಆಚರಣಾತ್ಮಕ ಸ್ವರೂಪವನ್ನು ಪಡೆದಿದೆ. ಎಲ್ಲಾ ಕಡೆಗಳಲ್ಲೂ ಏಣಿಲು ಬೆಳೆಯ ಕೊನೆಯ ದಿನ ನಾಟಿ ಕಾರ್ಯ ಮುಗಿದ ನಂತರ ದೈವಗಳ ಗದ್ದೆಗಳಿಗೆ ಅಥವಾ ‘ಬಾಕಿತಿಮಾರ್’ ಗದ್ದೆಗಳಿಗೆ ವಿಧಿಬದ್ಧವಾಗಿ ‘ಕಾಪು’ ನೆಡಲಾಗುತ್ತಿತ್ತು. ಇದು ಸಾಮಾನ್ಯವಾಗಿ ಸುಗ್ಗಿ ಕಾಲದ ಪೂಕರೆಗೆ ಪರ್ಯಾಯವೆಂಬಂತೆ ಆಚರಣೆಗೊಳ್ಳುತ್ತಿತ್ತು. ಗದ್ದೆಯ ಯಜಮಾನ ಹಾಗೂ ನಾಟಿ ಗದ್ದೆಯಲ್ಲಿ ಹಾಡುವ ಹೆಂಗಸು ಇವರಿಬ್ಬರೂ ಗದ್ದೆಕೋರಿಯ ಹಿಂದಿನ ದಿನದಿಂದಲೇ ಶುದ್ಧಚಾರದಲ್ಲಿರುವುದು, ಆ ರಾತ್ರಿ ಇಬ್ಬರೂ ಊಟ ಮಾಡದಿರುವುದು, ಗದ್ದೆಯಲ್ಲಿ ‘ಕಾಪು’ ಹಾಕಿದ ನಂತರವೇ ಅವರಿಬ್ಬರೂ ಆಹಾರ ಸೇವಿಸುವುದು ಇಲ್ಲಿಯ ಸಾಮಾಜಿಕ ಸಂಬಂಧದ ಪ್ರಧಾನ ಅಂಶವಾಗಿದೆ.
’ಕಾಪು’ ಎಂಬುದು ರಕ್ಷಣೆಯ ತಂತ್ರವಾಗಿದ್ದು, ಇದು ಆಚರಣಾತ್ಮಕ ನೆಲೆಯಲ್ಲಿ ನಡೆಯುತ್ತಿತ್ತು. ಕಾಸರಕ ಹಾಗೂ ಕಳ್ಳಿಯ ಬಗೆಗಿನ ಜನಪದರ ನಂಬಿಕೆ ಈ ಕ್ರಿಯಾಚರಣೆಯ ಮೇಲೆ ಪ್ರಭಾವ ಬೀರಿದೆ. ಅನೇಕ ಸಂದರ್ಭಗಳಲ್ಲಿ ಈ ಎರಡೂ ಸಸ್ಯಗಳನ್ನು ರಕ್ಷಣಾತ್ಮಕವಾಗಿಯೂ ನಿಷೇಧಾತ್ಮಕವಾಗಿಯೂ ಜನಪದರು ಬಳಸುವುದನ್ನು ಗುರುತಿಸಬಹುದು. ಈ ಎರಡೂ ಸಸ್ಯಗಳಲ್ಲಿರುವ ಪ್ರಕೃತಿಜನ್ಯ ಗುಣದಿಂದಾಗಿ ಜನಪದರಲ್ಲಿ ಇವೆರಡಕ್ಕೂ ಪ್ರತ್ಯೇಕ ಸ್ಥಾನವಿದೆ. ಕಾಸರಕ ಮರದ ಬಗೆಗಿನ ಅತಿಮಾನುಷ ಕಲ್ಪನೆಯೂ ಅದಕ್ಕೆ ಗದ್ದೆಯನ್ನು ಕಾಯುವ ಕರ್ತವ್ಯವನ್ನು ನೀಡುವಂತೆ ಮಾಡಿದೆ. ಸಂಮೃದ್ದಿಯ ಅಳಿವಿನಲ್ಲಿ ಮಾನವನ ವಕ್ರದೃಷ್ಟಿಯು ತೀವ್ರವಾದ ಪರಿಣಾಮವನ್ನು ಬೀರುವುದರಿಂದ ಆ ದೃಷ್ಟಿಗೆ ಪ್ರತಿರೋಧ ಒಡ್ಡುವ ಹಿನ್ನೆಲೆಯಿಂದ ಕಳ್ಳಿಯ ಶಕ್ತಿಯನ್ನು ಬಳಸಿಕೊಂಡಿರುವ ಸಾಧ್ಯತೆ ಇದೆ. ವಿಶಾಲವಾಗಿ ಬೆಳೆದು ನಿಲ್ಲುವ ಪೈರು ಸಹಜವಾಗಿಯೇ ಮಾನವನ ದೃಷ್ಠಿಗೆ ತುತ್ತಾಗದೇ ಇರದು. ಈ ದೃಷ್ಟಿಯು ವಿನಾಶಕಾರವೆಂಬ ನಂಬಿಕೆ ಜನಪದರಲ್ಲಿದ್ದು ಅದನ್ನು ತಪ್ಪಿಸುವ ಉದ್ದೇಶದಿಂದ ಕಾಪು ನೆಡುತ್ತಿದ್ದರು. ಸಸ್ಯವಾಗಲಿ ಮಾನವನಾಗಲಿ ಕಿಶೋರಾವಸ್ಥೆಯಲ್ಲಿದ್ದಾಗ ಅದರ ಮೇಲೆ ದೃಷ್ಟಿಯ ಕೆಟ್ಟ ಪರಿಣಾಮ ಹೆಚ್ಚಾಗಿರುತ್ತದೆಂಬ ನಂಬಿಕೆ ಇದೆ. ಈ ಕಿಶೋರಾವಸ್ಥೆಯನ್ನು ಸಂರಕ್ಷಿಸುವ ಉದ್ದೇಶ ಇಲ್ಲಿ ವ್ಯಕ್ತವಾಗುತ್ತದೆ. ಕಳ್ಳಿಗಿಡದ ಹಾಲು ಕಣ್ಣಿಗೆ ಕೇಡನ್ನು ಬಗೆಯಬಲ್ಲ ವಿಷಕಾರಕ ದ್ರವ್ಯ. ಈ ಕೇಡನ್ನು ಸಂಕೇತಿಸುವ ದೃಷ್ಟಿಯಿಂದ ಕಳ್ಳಿಯನ್ನು ಬೆಳೆಯ ಕಿಶೋರಾವಸ್ಥೆಯಲ್ಲಿ ಬಳಸುತ್ತಿದ್ದರು. ಇದಕ್ಕೆ ಪೂರಕವಾಗಿಯೇ ಜನಪದ ಸಂಸ್ಕೃತಿಯಲ್ಲಿ ಎಳೆಯ ಮಗುವಿಗೆ ದೃಷ್ಟಿ ಚುಕ್ಕಿ ಹಾಕುವ, ಕಾಸರಕದ ಎಲೆಗಳನ್ನು ಇಡುವ ನಂಬಿಕೆಗಳು ಜಾರಿಯಲ್ಲಿದ್ದಿರಬಹುದು. ಆದ್ದರಿಂದ ನಾಟಿ ಮಾಡಿದ ಆರಂಭದಲ್ಲಿ ಬೆಳೆಯನ್ನು ರಕ್ಷಿಸುವ ಜವಾಬ್ದಾರಿಯನ್ನು “ಕಾಪು”ವಿನ ಮೇಲೆ ಜನಪದರು ಹೊರಿಸುತ್ತಿದ್ದರು.
ಕಳೆ: ಏಣಿಲು ನಾಟಿಯಾದ ಒಂದು ತಿಂಗಳ ನಂತರ ನಾಟಿ ಗದ್ದೆಯಲ್ಲಿ ಬೆಳೆಯುವ ಅನ್ಯ ಸಸ್ಯಗಳನ್ನು ‘ಕಳೆ’ ಎನ್ನುವರು. ಬತ್ತದ ಬೇಸಾಯದಲ್ಲಿ ಸುಮಾರು ೪೦ಕ್ಕೂ ಹೆಚ್ಚಿನ ಜಾತಿಯ ಕಳೆಗಳಿದ್ದವು. ಈ ಕಳೆಗಳನ್ನು ಕಿತ್ತು ಬೆಳೆಗಳನ್ನು ಸಂರಕ್ಷಿಸುವ ಕ್ರಿಯೆ ತುಳು ಕಾಲಗಣನೆಯ ಆಟಿ ೧೫ (ಜುಲೈ ಕೊನೆ)ರ ನಂತರ ಆರಂಭವಾಗುತ್ತಿತ್ತು. ಗದ್ದೆಗಳಲ್ಲಿ ಬೆಳೆಯುವ ಕಳೆಗಳಲ್ಲಿ ದೊಂಡೆಪಂತಿ, ಸಾರಿಪಂತಿ, ಕೋರಿಪಂತಿ, ನೊರೆಪಂತಿ, ಮಾವು, ಕುಣಲೆ (ಗಂಡುಬತ್ತ) ಇತ್ಯಾದಿಗಳು ಮುಖ್ಯವಾಗಿವೆ. ಸುಮಾರು ನಾಲ್ಕೈದು ಜನರಿದ್ದಲ್ಲಿ ಒಂದು ಮುಡಿ ಗದ್ದೆಯ ಕಳೆಯನ್ನು ಒಂದು ದಿನದಲ್ಲಿ ಕಿತ್ತು ಮುಗಿಸಲು ಸಾಧ್ಯವಿತ್ತು. ‘ಕುಣಲೆ’ಯನ್ನು ಅತ್ಯಂತ ದರಿದ್ರದ (ಕೆಟ್ಟದಾದ) ಕಳೆಯೆಂದೇ ನಂಬಿದ್ದರು. ‘ಕುಣಲೆ’ ಸಾಮಾನ್ಯವಾಗಿ ನೇಜಿಯ ಸ್ವರೂಪದಲ್ಲೇ ಇದ್ದು, ಪ್ರತ್ಯೇಕಿಸಲು ಸಾಧ್ಯವಿಲ್ಲದ ಕಳೆ. ದರಿದ್ರ ಹಿಡಿದವನ ಗದ್ದೆಯಲ್ಲಿ ಮಾತ್ರ ‘ಕುಣಲೆ’ ಬೆಳೆಯುತ್ತದೆ ಎಂಬ ನಂಬಿಕೆ ತುಳು ಜನಪದರಲ್ಲಿತ್ತು.ತುಳು ಬೇಸಾಯ ಸಂಸ್ಕೃತಿಯಲ್ಲಿ ‘ಒಬ್ಬ ವ್ಯಕ್ತಿ ಹಾಳಾಗಿ ಹೋಗಲಿ’ ಎಂದು ಶಪಿಸುವ ಬದಲು ‘ಆತನ ಗದ್ದೆಯಲ್ಲಿ ಕುಣಲೆ ಬೆಳೆಯಲಿ’ ಎಂದು ಹೇಳುವುದೂ ಇತ್ತು. ನೀರಿನ ಅಂಶ ಹೆಚ್ಚಿದ್ದಲ್ಲೆಲ್ಲಾ ‘ಕುಣಲೆ’ ತನ್ನಿಂತಾನಾಗಿ ಬೆಳೆಯುವ ಸಸ್ಯವಾಗಿದ್ದು, ಅದನ್ನು ನಿಯಂತ್ರಿಸಲು ಕಷ್ಟಸಾಧ್ಯವಾಗುತ್ತಿತ್ತು. ‘ಕಳಮೆ ಕಂಡೊಟು ಕುಣಲೆದ ಬಿತ್ತ್’ (ಕಳಮೆ ಗದ್ದೆಯಲ್ಲಿ ಕಳೆಯ ಬೀಜ) ಎಂಬ ಗಾದೆಯೊಂದು ‘ಕಳಮೆ’ ಬತ್ತದ ಬೀಜಕ್ಕೂ ಕುಣಲೆ ಬೀಜಕ್ಕೂ ಇರುವ ಸಂಬಂಧವನ್ನು ತಿಳಿಸುತ್ತದೆ.
ಆಟಿ ತಿಂಗಳಲ್ಲಿ ಗದ್ದೆಯ ಕಳೆಕಿತ್ತ ನಂತರ ಮತ್ತೆ ಗದ್ದೆಗೆ ಇಳಿಯುವ
ಆವಶ್ಯಕತೆ ಕೊಯ್ಲಿನವರೆಗೂ ಇರುತ್ತಿರಲಿಲ್ಲ. ಆಟಿ ತುಳುವರಿಗೆ ಸ್ಥಿತ್ಯಂತರದ ಕಾಲ. ಪ್ರಕೃತಿಯಲ್ಲಾಗುವ ಬದಲಾವಣೆಯಿಂದಾಗಿ, ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕಾಲ ಎಂಬ ನಂಬಿಕೆ ತುಳುವರದು. ಆದ್ದರಿಂದ ಇದು ಬೆಳೆಗಳ ಸಮೃದ್ಧತೆಯನ್ನು ಕಡಿಮೆ ಮಾಡುವ ಸಾಧ್ಯತೆಯನ್ನೂ ಜನಪದರು ಅಲ್ಲಗಳೆಯುತ್ತಿರಲಿಲ್ಲ. ಆಟಿಯ ಕಾಲಮಾನದ ಅಪಾಯ ಹಾಗೂ ಭಯವನ್ನು ತಪ್ಪಿಸಿಕೊಳ್ಳಲು ತುಳುವರು ಮಾಂತ್ರಿಕ ಶಕ್ತಿಯ ಮೊರೆ ಹೋಗುವುದು ಸಾಮಾನ್ಯವಾಗಿತ್ತು. ಮಾರಿ ಕಳೆಯುವುದಕ್ಕಾಗಿ ‘ಆಟಿ ಕಳೆಂಜ’ನನ್ನು ಕುಣಿಸಿ ರೋಗವನ್ನು ಕಿತ್ತು ಹಾಕಲು ಸಂಕಲ್ಪಿಸುತ್ತಿದ್ದರು. ಅದೇ ರೀತಿ ಬೆಳೆಗಳಿಗೆ ಬರಬಹುದಾದ ಕಂಟಕ, ಕಳೆಗಳನ್ನು ಕಿತ್ತು ಹಾಕುವ ಕ್ರಿಯೆಯೂ ಆಟಿ ತಿಂಗಳಲ್ಲಿ ನಡೆಯುತ್ತಿತ್ತು.
ಕರಿಕೊಳ್ಳಿ: ಬೇಸಾಯ ಗದ್ದೆಯ ರೋಗ ಬಾಧೆಯ ಹಾಗೂ ನೀಚ ದೃಷ್ಟಿಯನ್ನು ತಪ್ಪಿಸುವ ತಂತ್ರವೊಂದನ್ನು ‘ಕರಿಕೊಳ್ಳಿ ದೀಪುನ’(ಕರಿಕೊಳ್ಳಿ ಇಡುವುದು) ಎನ್ನುತ್ತಿದ್ದರು. ಒಂದೇ ಸಮಾನಾದ ಬಿದಿರಿನ ೪ ತಟ್ಟೆ (ಬಿದಿರನ್ನು ಸೀಳಿ ಮಾಡಿದ ನಾಲ್ಕು ಭಾಗ)ಗಳ ಒಂದು ತುದಿಯನ್ನು ಉರಿಸಿ ಮಸಿಯಾದ ಭಾಗವನ್ನು ಮೇಲ್ಮುಖವಾಗಿ ಗದ್ದೆಯ ಅಲ್ಲಲ್ಲಿ ಊರಲಾಗುತ್ತಿತ್ತು. ಇದು ಆಟಿ ತಿಂಗಳ ಮಂಗಳವಾರ ಅಥವಾ ಆದಿತ್ಯವಾರದಂದು ಬೆಳಗ್ಗಿನ ಜಾವ ನಡೆಯುತ್ತಿತ್ತು. ಇದನ್ನು ‘ಮುಷ್ಟಿ’ ಎಂದು ನಂಬಿರುವ ತುಳುವರು ಇದರಿಂದ ಹುಳುಬಾಧೆ, ಬೆಂಕಿರೋಗದಂತಹ ಬಾಧೆಗಳು ನಾಶವಾಗುತ್ತವೆ ಎಂಬ ನಂಬಿಕೆಯೂ ಇತ್ತು. ಆಟಿಯ ಆ ಬೆಳೆಗಳನ್ನು ಸಂರಕ್ಷಿಸುವ ತಂತ್ರಗಳಲ್ಲಿ ಕರಿಕೊಳ್ಳಿಯ ಕ್ರಿಯಾಚರಣೆಯು ಒಂದಾಗಿತ್ತು. ಜನಪದ ನಂಬಿಕೆಯ ಪ್ರಕಾರ, ಉರಿಯುವ ಕಟ್ಟಿಗೆಗೆ(ಕೊಳ್ಳಿ) ದೃಷ್ಟಿ ಕಳೆಯುವ ಸಾಮರ್ಥ್ಯವಿದೆ. ಬೇಟೆಯಿಂದ ದೊರೆತ ಪ್ರಾಣಿಯ ಮಾಂಸ ಮಾಡಿದ ‘ಅಜಕಲ’ (ಮಾಂಸ ಮಾಡಿದ ಸ್ಥಳ)ಕ್ಕೆ ಕರಿಕೊಳ್ಳಿಯಿಂದ ಗೆರೆ ಎಳೆಯುವ ಮೂಲಕ ದುಷ್ಟ ಶಕ್ತಿಯನ್ನು ದೂರ ಓಡಿಸುವ ಕ್ರಿಯಾ ವಿಧಿ ಬೇಟೆ ಸಂಸ್ಕೃತಿಯೂ ಕಾಣುತ್ತೇವೆ. ಬೆಳೆಗಳಿಗೆ ಬರುವ ಬಹುತೇಕ ರೋಗಗಳು ದುಷ್ಟ ಮಾನವನ ದೃಷ್ಟಿಯಿಂದ ಬರುವುವೆಂಬ ನಂಬಿಕೆ ತುಳುವರದು. ಇದನ್ನು ತಪ್ಪಿಸುವ ತಂತ್ರವಾಗಿ ಕರಿಕೊಳ್ಳಿ ನೆಡಲಾಗುತ್ತಿತ್ತು.
ನೀರಾವರಿ: ವ್ಯವಸ್ಥೆ ಏಣಿಲು ಬೆಳೆ ಮಳೆಯನ್ನಾಶ್ರಯಿಸಿ ನಡೆಯುವ ಬೇಸಾಯ. ಪಗ್ಗು ತಿಂಗಳಲ್ಲಿ(ಏಪ್ರೀಲ್) ಗದ್ದೆಯನ್ನು ಉತ್ತು ನಾಟಿಗಾಗಿ ಮೋಡಗಳನ್ನು ನೋಡಬೇಕಾದ ಹಾಗೂ ಮಳೆ ಬಂದಲ್ಲಿ ಮಾತ್ರ ಬೆಳೆ ತೆಗೆಯುವ ಪರಿಸ್ಥಿತಿ ತುಳುನಾಡಿನಲ್ಲಿತ್ತು. ನೀರಿಗೆ ಉಳುಮೆ ಮಾಡುವ ಹಂತದಲ್ಲಿ ಮಳೆಯ ನೀರನ್ನೇ ಬಹುಮುಖ್ಯವಾಗಿ ಬಳಸುತ್ತಿದ್ದರು. ಒರತೆ ಆಗದಿದ್ದರೂ ತೋಡುಗಳಿಗೆ ಒಡ್ಡು(ಹಳ್ಳ) ಕಟ್ಟಿ ಮಳೆಯ ನೀರನ್ನು ಉಳುಮೆಗೆ ಬಳಸುವುದೂ ಇತ್ತು. ಉಳುಮೆ ಹಾಗೂ ನಾಟಿಯ ನಂತರ ಸುಮಾರು ೧೫ ದಿನಗಳವರೆಗೂ ಒಂದು ಅಂಗುಲದಷ್ಟು ನೀರು ಇರಲೇಬೇಕೆಂದಿತ್ತು. ಈ ಹಂತದಲ್ಲಿ ನೇಜಿಗೆ ಜೀವ ಹಿಡಿದು ‘ಪಿಳ್ಳೆ’(ಹೆಚ್ಚುವರಿ ಚಿಗುರು ಮೊಳಕೆ) ಬರುವುದರಿಂದ ಈ ಪ್ರಮಾಣದ ನೀರು ಅಗತ್ಯವಾಗಿತ್ತು. ಇನ್ನು ಮುಖ್ಯವಾಗಿ ಕಳೆಗಳ ಬೀಜ ನೀರಿನಲ್ಲಿ ತೇಲಿ ಹೋಗುವ ಅಥವಾ ಮೊಳಕೆಯಾಗದೇ ಇರುವ ಸಾಧ್ಯತೆಯೂ ಇತ್ತು. ೨೫ ದಿನಗಳ ನಂತರ ನೀರಿನ ಪ್ರಮಾಣ ಕಡಿಮೆಯಿದ್ದರೆ ‘ಪಿಳ್ಳೆ’ ಚೆನ್ನಾಗಿ ಬರುತ್ತದೆಂದೂ ನಂತರ ಮತ್ತೆ ನೀರನ್ನೂ ಹೆಚ್ಚಿಸಬೇಕೆಂದೂ ಇತ್ತು. ತುಳುನಾಡಿನ ಬಹುತೇಕ ಕಡೆಗಳಲ್ಲಿ ಕಾರ್ತೆಲ್(ಜೂನ್-ಜುಲೈ) ತಿಂಗಳಲ್ಲಿ ವಿಪರೀತ ಮಳೆ. ಇದರಿಂದ ಗದ್ದೆಯಲ್ಲಿ ನೀರಿನ ಸಮತೋಲನ ಕಾಯ್ದುಕೊಳ್ಳುವುದೂ ಕಷ್ಟಸಾಧ್ಯವಾಗಿತ್ತು. ಈ ದೃಷ್ಟಿಯಿಂದ ನಿಗದಿತ ನೀರಿಗಿಂತ ಹೆಚ್ಚಿನ ಪ್ರಮಾಣವನ್ನು ‘ಕಡಿ’ಯ ಮೂಲಕ ಹೊರಕ್ಕೆ ಬಿಡಲಾಗುತ್ತಿತ್ತು. ಪ್ರತಿದಿನ ಬೆಳಿಗ್ಗೆ ಗದ್ದೆಗೆ ನೀರು ಬಿಡುವ ಹಾಗೂ ಅದನ್ನು ಪರಿಶೀಲಿಸುವ ಕ್ರಿಯೆಯೂ ನಡೆಯುತ್ತಿತ್ತು. ತುಳು ಜಾನಪದ ಪಾಡ್ದನಗಳಾದ ಕೋಟಿ ಚೆನ್ನಯ, ಬಲೀಂದ್ರ, ಮಲಾರ ಪಂಜುರ್ಲಿ, ಸಿರಿ ಇತ್ಯಾದಿಗಳಲ್ಲಿ ಬೇಸಾಯ ಗದ್ದೆಯ ನೀರಿನ ನಿರ್ವಹಣೆಯ ಬಗ್ಗೆ ವಿವರಣೆ ಇದೆ. ನಾಟಿಯ ೨೫ ದಿನಗಳ ನಂತರ ಮತ್ತೆ ನೀರಿನ ಪ್ರಮಾಣವನ್ನು ೨ ಅಂಗುಲಕ್ಕೆ ಏರಿಸಬೇಕೆಂದಿತ್ತು. ಸೋಣ(ಜುಲೈ ಆಗಸ್ಟ್) ತಿಂಗಳವರೆಗೆ ಇಷ್ಟೇ ಪ್ರಮಾಣದ ನೀರನ್ನು ಗದ್ದೆಯಲ್ಲಿ ಉಳಿಯಬೇಕು, ಸೋಣ(ಆಗಸ್ಟ್ ಕೊನೆ) ೨೫ರ ನಂತರ ಪೈರು ತೆನೆಬಿಟ್ಟು,”ಕಾಯಿಕಟ್ಟಲು” ಆರಂಭಿಸುತ್ತಿತ್ತು. ಐದಾರು ದಿನಗಳಲ್ಲಿಯೇ ತೆನೆ ಬಲಿತು ಬಾಗುವುದರಿಂದ ನೀರಿನ ಪ್ರಮಾಣವನ್ನು ತಗ್ಗಿಸುತ್ತಿದ್ದರು. ಕೊಯ್ಲಿಗೆ ನಾಲ್ಕೈದು ದಿನ ಮುಂಚಿತವಾಗಿ, ಗದ್ದೆಯ ನೀರನ್ನು ಸಂಪೂರ್ಣವಾಗಿ ಬಸಿಯುತ್ತಿದ್ದರು.
ಕೊಯ್ಲು: ಏಣಿಲು ಬೆಳೆಯ ಕೊಯ್ಲು ನಿರ್ನಾಲ್ ೫ರ ಒಳಗೆ (ಸೆಪ್ಟಂಬರ್ ೩೦ರ ಒಳಗೆ) ಸಾಮಾನ್ಯವಾಗಿ ಪೂರ್ಣಗೊಳ್ಳುತ್ತಿತ್ತು. ಸೋಣ ತಿಂಗಳು ಪೂರ್ತಿ ಮಳೆ ಬಿದ್ದಲ್ಲಿ ಕೊಯ್ಲಿಗೆ ತೊಂದರೆಯಾಗುವ ಸಾಧ್ಯತೆಯೂ ಇತ್ತು. ಸಾಮಾನ್ಯವಾಗಿ ಕೊಯ್ಲಿನ ಲೆಕ್ಕಾಚಾರದಲ್ಲಿ ಒಂದು ಮುಡಿಗದ್ದೆಯನ್ನು ಏಳು ಕೂಲಿಯಾಳುಗಳು ಒಂದೇ ದಿನದಲ್ಲಿ ಕೊಯ್ದು ಸೂಡಿ ಕಟ್ಟಬಲ್ಲವರಾಗಿದ್ದರು. ಅಷ್ಟೇ ಜನರು ಮರುದಿನ ಅದನ್ನು ತಂದು ಹಾಕಿ, ಮುಂದಿನ ಒಂದು ದಿನದಲ್ಲಿ ತೆನೆ ಹೊಡೆದು ಬತ್ತವನ್ನು ಮನೆಯೊಳಕ್ಕೆ ಸೇರಿಸುತ್ತಿದ್ದರು. ಸುಮಾರು ೨೧ ಕೂಲಿಯಾಳುಗಳಿದ್ದಲ್ಲಿ ಒಂದೇ ದಿನದಲ್ಲಿ ಒಂದು ಮುಡಿ ಗದ್ದೆಯ ಕೊಯ್ಲಿನ ಕಾರ್ಯವನ್ನು ಪೂರ್ಣಗೊಳಿಸಬಹುದಿತ್ತು. ಏಣಿಲ್ ಕೊಯಿಲಿನ ಸಂದರ್ಭದಲ್ಲಿ ಯಾವುದೇ ತುಳು ಜನಪದ ಸಾಹಿತ್ಯಗಳ ಬಳಕೆಯಾಗುತ್ತಿರಲಿಲ್ಲ. ಬಿಸಿಲಿನ ಬೇಗೆ ಹಾಗೂ ಕೊಯ್ಲಿನ ಸಂದರ್ಭ ಇದಕ್ಕೆ ಪೂರಕವಾಗಿಲ್ಲದೇ ಇರುವುದು ಈ ನಿಷೇಧಕ್ಕೆ ಕಾರಣವಾಗಿರಬಹುದು. ಸುಗ್ಗಿ ಬೇಸಾಯ ಮಾಡುವ ಬೇಸಾಯಗಾರರು ಏಣಿಲು ಕೊಯ್ಲನ್ನು ಬಹುಬೇಗ ಮುಗಿಸಿ ಮುಂದಿನ ಬೇಸಾಯಕ್ಕೆ ತೊಡಗುವುದು ಸಾಮಾನ್ಯವಾಗಿತ್ತು. ಸುಗ್ಗಿ ಬೇಸಾಯವಿಲ್ಲದ ಬೇಸಾಯಗಾರರು ನಿರ್ನಾಲ್ ೨೦-೨೫ ರೊಳಗೆ(ಅಕ್ಟೋಬರ್ ೧೫-೨೦) ಕೊಯ್ಲಿನ ಕಾರ್ಯ ಪೂರ್ಣಗೊಳಿಸುವುದು ಸಾಮಾನ್ಯ. ಕೊಯ್ಲಿಗೆ ದಿನ ನೋಡುವ, ಕೈಗುಣವನ್ನು ಪಾಲಿಸುವ ಸಂಪ್ರದಾಯವೂ ಕಂಡುಬರುತ್ತಿತ್ತು. ಗದ್ದೆಯಿಂದ ಮೊದಲ ಒಂದು ಕಟ್ಟು ಪೈರನ್ನು ಹೊತ್ತು ತರುವ ವ್ಯಕ್ತಿ ‘ಪೊಲಿ… ಪೊಲಿ… ಪೊಲಿ…’ ಎನ್ನುತ್ತಾ ಮನೆಯ ಅಂಗಳದಲ್ಲಿ ಹಾಕುತ್ತಿದ್ದರು. ಇದೇ ಸಂದರ್ಭದಲ್ಲಿ ಮನೆಯ ಒಳಭಾಗದಲ್ಲಿ ಕಾಲುದೀಪ ಉರಿಸಿಡಬೇಕೆಂಬ ನಂಬಿಕೆಯೂ ಇತ್ತು.
ಬತ್ತದ ತೆನೆಯ ಸೂಡಿಗಳನ್ನು ಮನೆಯಂಗಳದ ಮುಂದೆ ಪೇರಿಸಿ ಇಡುತ್ತಿದ್ದರು. ಇದನ್ನು “ಮೆದೆ” ಮಾಡುವುದು ಎನ್ನುತ್ತಿದ್ದರು. ಎರಡು ಕಟ್ಟು ಪೈರನ್ನು ಎದುರು ಬದುರು ಇರಿಸಿ ಅದರ ಮೇಲೆ ‘ಮಾದೇರಿ ಬಳ್ಳಿ’ಯಿಂದ ಹೆಣೆದ ‘ಪಡಿ’(ಹೊಡೆ ಮಂಚ)ಯನ್ನಿಟ್ಟು ಪೈರು ಹೊಡೆಯುತ್ತಿದ್ದರು. ತುಳುನಾಡಿನ ಕೆಲವು ಪ್ರದೇಶಗಳಲ್ಲಿ ಪೈರಿನ ಮೊದಲ ಸೂಡಿಯನ್ನು ಹೊಡೆಯುವಾಗ ‘ಪೊಲಿ… ಪೊಲಿ… ಪೊಲಿ…’ ಎಂದು ಗಟ್ಟಿಯಾಗಿ ಹೇಳಬೇಕೆಂದೂ ಅದು ಕೊಯ್ಲಾದ ಗದ್ದೆಗೆ ಕೇಳಬೇಕೆಂದೂ ನಂಬಿದ್ದರು. ಅದೇ ರೀತಿ ಮೊದಲು ಹೊಡೆದ ಬೈಹುಲ್ಲು ಸೂಡಿಯನ್ನು ಮನೆಯ “ಮಾಡಿಗೆ” (ಚಾವಣಿ)ಬಿಸಾಡಬೇಕೆಂದೂ ಅಷ್ಟು ಎತ್ತರದ ಬತ್ತದ ರಾಶಿ ಅಂಗಳದಲ್ಲಿ ಉಂಟಾಗುತ್ತದೆಂಬ ನಂಬಿಕೆಯೂ ಇತ್ತು. ಬತ್ತದ ಪೈರಿನ ಕೊನೆಯ ಸೂಡಿಯನ್ನು ಇದೇ ರೀತಿಯಾಗಿ ಮಾಡಲಾಗುತ್ತಿತ್ತು. ಬತ್ತದ ರಾಶಿಯು ‘ಮಾದೇರಿ ಪಡಿ’(ಒಂದು ಜಾತಿಯ ಬಳ್ಳಿಯಿಂದ ರಚಿಸುವ ಹೊಡೆ ಮಂಚ)ಯನ್ನು ಸ್ಪರ್ಶಿಸುವಷ್ಟು ಎತ್ತರಕ್ಕೆ ಬಂದಾಗ ‘ಪೊಲಿ’ ಕರೆಯಬೇಕೆಂದಿತ್ತು. ನಂತರ ಪಡಿಗೆ ತೆಂಗಿನ ಕಾಯಿ ಹೊಡೆಯುವುದೂ ಇತ್ತು. ಅದೇ ರೀತಿ ತೆನೆ ಹೊಡೆದು ಮುಕ್ತಾಯವಾದ ನಂತರವೂ ಪಡಿ ತೆಗೆಯುವ ಹಂತದಲ್ಲಿಯೂ ಇದೇ ರೀತಿ ಪೊಲಿ ಕರೆಯುವ ಸಂಪ್ರದಾಯವಿತ್ತು.
ಪೊಲಿ: ಬೇಸಾಯ ಸಂಸ್ಕೃತಿಯ ಉನ್ನತ ಪರಿಕಲ್ಪನೆಗಳಲ್ಲಿ “ಪೊಲಿ”ಗೆ ಮಹತ್ವದ ಸ್ಥಾನವಿದೆ. ಕೃಷಿಗೆ ಸಂಬಂಧಿಸಿದ ಸಮೃದ್ದಿಯ ಆಶಯವನ್ನು ಬಿಂಬಿಸುವ ಆಚರಣಾತ್ಮಕ ಪದವೇ ‘ಪೊಲಿ’. ಸಮೃದ್ದಿಯ ಸಂಕೇತವಾಗಿ ಆಚರಣೆಯ ನೆಲೆಯಲ್ಲಿ ಹಾಗೂ ಭಾಷಿಕ ನೆಲೆಯಲ್ಲಿ ‘ಪೊಲಿ’ ಎಂಬ ಪದವೇ ಹೆಚ್ಚು ಬಳಸಲ್ಪಡುತ್ತದೆ. ಪೊಲಿಗೆ ಪರ್ಯಾಯ ಪದಗಳು ಬೇರೆ ಬೇರೆ ಬಳಕೆಯಲ್ಲಿದ್ದರೂ ಎಲ್ಲವೂ ಸಮೃದ್ದಿಯ ನೆಲೆಯಲ್ಲಿ ಹುಟ್ಟಿಕೊಂಡವುಗಳಾಗಿವೆ. ‘ಪೊಲಿ’ ದ್ರಾವಿಡ ಭಾಷಾ ಪದ. ತುಳು ನಿಘಂಟಿನಲ್ಲಿ ಇದಕ್ಕೆ “ಐಶ್ವರ್ಯ, ಸಮೃದ್ದಿ, ಭಾಗ್ಯ, ಸಂಪತ್ತು”, “ಮಂಗಳ, ಶುಭ, ಭಾಗ್ಯ,” “ಬತ್ತದ ಕಣಜ, ಧಾನ್ಯರಾಶಿ, ಪೈರು”, “ಧಾನ್ಯ ಇತ್ಯಾದಿ ಅರ್ಥಗಳಿವೆ. ಪೊಲಿ ಶಬ್ದಕ್ಕೆ ‘ಹೊಸ ಬತ್ತ’ ಎಂಬ ಅರ್ಥವನ್ನು ನೀಡುತ್ತದೆ.
ಪೊಲಿಯ ಸಂದರ್ಭ: ‘ಮನೆ ತುಂಬಿಸುವ’, ‘ಪೇರರಿ’(ಹಾಲು ಅಕ್ಕಿ) ಇಡುವ, ಬತ್ತವನ್ನು ಮನೆಗೆ ತರುವ, ನಂತರ ಅದನ್ನು ಮೊದಲು ಉಪಯೋಗಿಸುವ ನಾನಾ ಸಂದರ್ಭಗಳಲ್ಲಿ ‘ಪೊಲಿ’ ಪದಗಳು ಬಳಕೆಯಾಗುತ್ತಿತ್ತು. ಬತ್ತವನ್ನು ರಾಶಿ ಹಾಕಿ ಅದಕ್ಕೆ ‘ಪೊಲಿ ಹಾಕುವ’ ಕ್ರಿಯಾಚರಣೆಗಳು ತುಳುನಾಡಿನ ಕೆಲವು ಭಾಗಗಳಲ್ಲಿ ಕಂಡುಬರುತ್ತಿತ್ತು. ತುಳುನಾಡಿನ ಬೇಸಾಯ ಸಂಬಂಧಿ ಕುಣಿತ, ಆಚರಣೆ, ಆರಾಧನೆಗಳಲ್ಲಿಯೂ ‘ಪೊಲಿ’ ಪದದ ಬಳಕೆ ಹೆಚ್ಚಾಗಿ ಕಂಡುಬರುತ್ತಿತ್ತು. ಅಂದರೆ ಸಂಪತ್ತನ್ನು ವೃದ್ದಿಸುವ ಎಲ್ಲಾ ಪರಿಕಲ್ಪನೆಗಳಲ್ಲಿಯೂ ‘ಪೊಲಿ’ ಎಂಬ ಪದರೂಪವು ಬಳಕೆಯಾಗುತ್ತಿತ್ತು.
ಪೊಲಿ ಲೆಪ್ಪುನೆ(ಪೊಲಿ ಕರೆಯುವುದು): ಬತ್ತದ ತೆನೆಯನ್ನು ಹೊಡೆದು ರಾಶಿ ಬಿದ್ದ ಬತ್ತವನ್ನು ಅಳತೆ ಮಾಡುವ ವಿಧಾನಕ್ಕೆ ಬೇಸಾಯ ಸಂಸ್ಕೃತಿಯಲ್ಲಿ ‘ಪೊಲಿ ಲೆಪ್ಪುನೆ’ (ಪೊಲಿ ಕರೆಯುವುದು) ಎನ್ನುತ್ತಿದ್ದರು. ನಿರ್ದಿಷ್ಟವಾದ ಮಾಪನ ಸಾಧನವನ್ನು ಬಳಸಿ ‘ಕಳಸಿಗೆ’ ಒಟ್ಟು ದೊರೆತ ಬತ್ತದ ಪ್ರಮಾಣವನ್ನು ತಿಳಿಯುವ ಕ್ರಿಯೆ ಇದಾಗಿತ್ತು. ಈ ರೀತಿ ಪೊಲಿ ಕರೆಯುವುದಕ್ಕಿಂತ ಮೊದಲು ಸೀಮೆಯ ಅಥವಾ ಸ್ಥಳೀಯ ದೈವ ದೇವರಿಗೆ ಒಂದೆರಡು ಸೇರು ಬತ್ತವನ್ನು ತೆಗೆದಿರಿಸುವ ಪದ್ದತಿ ಇತ್ತು. ನಂತರ ಅಳತೆ ಮಾಡಲು ಆರಂಭಿಸುತ್ತಿದ್ದರು. ಏರು ಸ್ವರವಿರುವ, ಭಾರ ಎತ್ತಲು ಶಕ್ತನಾಗಿರುವ ವ್ಯಕ್ತಿ ಪೊಲಿ ಕರೆಯಲು ತೊಡಗುತ್ತಿದ್ದ. ಪೊಲಿ ಕರೆಯುವ ಅವಧಿಯನ್ನು ಗಣನೆಗೆ ತೆಗೆದುಕೊಂಡು ಜನಪದರು ಕೆಲವೊಂದು ನಿಯಮವನ್ನು ಪಾಲಿಸುತ್ತಿದ್ದರು. ಅಂದರೆ ದಿನದ ಮಧ್ಯಾಹ್ನದ ನಂತರವಾದರೆ ಬತ್ತ ತುಂಬಿದ ಕಳಸಿಗೆಯನ್ನು ಎಡಭಾಗಕ್ಕೂ ಅದಕ್ಕಿಂತ ಮುನ್ನವಾದರೆ ಬಲ ಭಾಗಕ್ಕೂ ಸುರಿಯಬೇಕೆಂಬ ನಿಯಮವಿತ್ತು. ಹತ್ತು ಕಳಸಿಗೆ ಆದ ನಂತರ ಮತ್ತೆ ಒಂದು ಕಳಸಿಗೆ (ಹನ್ನೊಂದನೆಯದ್ದು) ಅಳತೆ ಮಾಡಿ ಮುಂದಿನ ಒಂದು ಕಳಸಿಗೆಯನ್ನು (ಹನ್ನೆರಡನೆಯದ್ದು) ‘ಬತ್ತೊ’ ಅಥವಾ ‘ಕೊಯಿಲಾತೊ’(ಕೂಲಿ) ಎಂದು ಪಕ್ಕಕ್ಕೆ ಸುರಿಯುತ್ತಿದ್ದರು. ಜಳ್ಳು ಪೊಳ್ಳು ತೆಗೆದು ಬತ್ತ ಅಳತೆ ಮಾಡುವುದಾದರೆ ಹತ್ತರ ನಂತರ ಒಂದನ್ನು ‘ಬತ್ತೊ’ ಎಂದು ತೆಗೆದಿರಿಸುತ್ತಿದ್ದರು. ಹನ್ನೊಂದು ಕಳಸಿಗೆ ಅಳತೆ ಮಾಡಿ ಒಂದೆರಡು ಕಳಸಿಗೆಯಷ್ಟು ಬಾಕಿ ಉಳಿದಿದ್ದರೂ ಅದನ್ನು ಪೊಲಿ ಕರೆಯದೇ ‘ಅಡಿಪಡಿ’ ಎಂದು ರಾಶಿ ಹಾಕುವುದಿತ್ತು. ಪೊಲಿ ಕರೆಯುವಾಗ ಪೊಲಿ ಒಂದು ಮತ್ತು ಪೊಲಿ ಎರಡನ್ನು ಕೂಗುವ ಪದ್ದತಿ ಇರಲಿಲ್ಲ. ಕೇವಲ ಪೊಲಿ…ಪೊಲಿ…ಪೊಲಿ ಎಂದು ಮಾತ್ರ ಹೇಳುತ್ತಿದ್ದರು. ಮೂರರ ನಂತರ ಪೊಲಿ ಮೂರೂ… ಎಂದು ಗಟ್ಟಿಯಾಗಿ ಕೂಗುತ್ತಿದ್ದರು. ಪೊಲಿ ಹತ್ತನ್ನು ‘ಪತ್ತಚ್ಚಿಯೇ’ ಎಂದು ಕರೆಯುದಿತ್ತು. ಇಲ್ಲಿ ‘ಎಚ್ಚಿ’ ಎಂದರೆ ‘ಹೆಚ್ಚಾಗು’ ಎಂಬ ಅರ್ಥ. ಪೊಲಿ ‘ಪತ್ತಚ್ಚಿ’ ಎಂದರೆ ಸಂಪತ್ತು ಹತ್ತು ಹೆಚ್ಚಾಗಿದೆ ಎಂಬ ಅರ್ಥ. ಸಾಮಾನ್ಯವಾಗಿ ತುಳುನಾಡಿನ ಪ್ರತಿಷ್ಠಿತ ಗುತ್ತು ಮನೆತನಗಳಲ್ಲಿ ಮೂಲದ ‘ಕಾಪಡ’ ಪೊಲಿ ಕರೆಯುವುದು ರೂಢಿ. ಏರು ಸ್ವರದಲ್ಲಿ ಇಂಪಾಗಿ ಪೊಲಿ ಕರೆಯುವವರಿಗೆ ಹೆಚ್ಚಿನ ಆದ್ಯತೆ. ಏಣಿಲು ಬೇಸಾಯದಲ್ಲಿ ಬತ್ತದ ಜಳ್ಳು, ಕಸಕಡ್ಡಿಗಳನ್ನು ಹೆಚ್ಚು ಶುದ್ದೀಕರಿಸದೇ ಅಳತೆ ಮಾಡುವುದು ಪದ್ದತಿಯಾಗಿತ್ತು.
ಬೈತ ಮುಟ್ಟೆ(ಬೈಹುಲ್ಲು ಪೇರಿಸಿಟ್ಟ ರಾಶಿ): ಪೈರಿನಿಂದ ಬತ್ತವನ್ನು ಬೇರ್ಪಡಿಸಿದ ನಂತರ ‘ಬೈಹುಲ್ಲು’ ಸಿಗುತ್ತದೆ. ಬೇಸಿಗೆಯಲ್ಲಿನ ಮೇವಿನ ಕೊರತೆ ಹಾಗೂ ಮಳೆಗಾಲದಲ್ಲಿ ಸಿಗದೇ ಇರುವ ಮೇವಿಗಾಗಿ ಜಾನುವಾರುಗಳಿಗೆ ಈ ಬೈಹುಲ್ಲನ್ನು ಬಳಸುತ್ತಿದ್ದರು. ಏಣಿಲು ಬೇಸಾಯದ ಬೈಹುಲ್ಲನ್ನು ಕೊಯ್ಲಾದ ನಂತರ ಗದ್ದೆಯಲ್ಲಿ ಹರಡಿ ಒಣಗಿಸುತ್ತಿದ್ದರು. ಒಣಗಿದ ನಂತರ ಸೂಡಿ ಕಟ್ಟಿ ಅದನ್ನು ‘ಮುಟ್ಟೆ’(ಪೇರಿಸಿ) ಕಟ್ಟುತ್ತಿದ್ದರು. ಚೌಕಾಕಾರದ ಮುಟ್ಟೆಯ ತುದಿಭಾಗದಲ್ಲಿ ಚಾವಣಿಯನ್ನು ನಿರ್ಮಿಸುವುದೂ ಇತ್ತು. ಬೈಹುಲ್ಲಿನ ಒಳಭಾಗಕ್ಕೆ ನೀರು ಇಳಿಯದ ರೀತಿಯಲ್ಲಿ ಈ ಚಾವಣಿ ನಿರ್ಮಾಣವಾಗುತ್ತಿತ್ತು. ಈ ರೀತಿ ಮುಟ್ಟೆ ಕಟ್ಟಿದ್ದಲ್ಲಿ ಬೈಹುಲ್ಲು ಕೆಲವು ವರ್ಷಗಳವರೆಗೆ ಕೆಡದಂತೆ ಇರಲು ಸಾಧ್ಯವಾಗುತ್ತಿತ್ತು. ತುಳುನಾಡಿನ ಕೆಲವು ಭಾಗಗಳಲ್ಲಿ ಬೈಹುಲ್ಲಿನ ಮುಟ್ಟೆ ತಯಾರಿಸುವುದಲ್ಲದೇ ಹಟ್ಟಿಯ ಅಟ್ಟದ ಮೇಲೂ ಇದನ್ನು ಪೇರಿಸಿಡುತ್ತಿದ್ದರು. ತುಳುನಾಡಿನಲ್ಲಿ ವೈವಾಹಿಕ ಸಂಬಂಧಗಳನ್ನು ಬೆಳೆಸುವ ಹಂತದಲ್ಲಿ ಬೈಹುಲ್ಲಿನ ಮುಟ್ಟೆಯೂ ಗಣನೆಗೆ ಬರುತ್ತಿತ್ತು. ಒಬ್ಬ ವ್ಯಕ್ತಿಯ ಸ್ಥಾನಮಾನವನ್ನು ಅಳೆಯುವಲ್ಲಿ ಬೈಹುಲ್ಲೂ ಪಾತ್ರವಹಿಸುತ್ತಿತ್ತು ಎಂಬುದನ್ನು ತಿಳಿಯಬಹುದು.
ಸುಗ್ಗಿ ಬೇಸಾಯ:
ತುಳುನಾಡಿನ ಬೇಸಾಯದಲ್ಲಿನ ಮಹತ್ವದ ಕಾಲಾವಧಿ ಎಂದರೆ ‘ಸುಗ್ಗಿ’. ಸುಗ್ಗಿ ಬೇಸಾಯದ ಜೊತೆಗಿನ ಅನೇಕ ನಂಬಿಕೆ, ಆಚರಣೆ, ಆರಾಧನೆಗಳೇ ಈ ಮಹತ್ವವನ್ನು ಎತ್ತಿ ಹಿಡಿಯಲು ಕಾರಣ. ಏಣಿಲು ಸಾರ್ವತ್ರಿಕವಾಗಿಯೂ ನಿರಂತರವಾಗಿಯೂ ಬೆಳೆಯುವ ಬೆಳೆಯಾದರೆ, ಸುಗ್ಗಿಯು ಅದೃಷ್ಟದ ಸಾಂಕೇತಿಕವಾಗಿಯೂ ಶ್ರಮದ ಮೌಲ್ಯವಾಗಿಯೂ ಬೆಳೆಯುವ ಬೆಳೆ ಎಂಬ ನಂಬಿಕೆ ಇತ್ತು. ಸುಗ್ಗಿಯನ್ನು ಜನಪದ ನಂಬಿಕೆಯಲ್ಲಿ ‘ಮದಿಮಾಳ್’ ‘ಮದುಮಗಳು’ ಎಂದು ಸಂಬೋಧಿಸಲಾಗುತ್ತಿತ್ತು. ಮದುಮಗಳು ಸಾಮಾಜಿಕವಾಗಿ ಎಷ್ಟೊಂದು ಮಹತ್ವವನ್ನು ಪಡೆಯುತ್ತಾಳೆಯೋ ಅಷ್ಟೇ ಮಹತ್ವವನ್ನು ಸುಗ್ಗಿ ಬೇಸಾಯವೂ ಪಡೆಯುತ್ತಿತ್ತು. ಸುಗ್ಗಿಗೆ ‘ಹದನೀರು’ ಮತ್ತು ‘ಪನಿನೀರು’(ಹನಿನೀರು) ಮೂಲ. ಅತ್ಯಂತ ಸಂಭ್ರಮದ ಬೆಳೆಯಾಗಿ ಬೆಳೆಯುವ ಸುಗ್ಗಿಯನ್ನು ಏಣಿಲಿನಂತೆ ಸಾರ್ವತ್ರಿಕವಾಗಿ ಬೆಳೆಯುವಲ್ಲಿ ಕೆಲವು ತೊಡಕುಗಳಿರುತ್ತಿದ್ದವು. ತೋಡು (ಹಳ್ಳ), ಸುರಂಗ, ಕಟ್ಟದ ನೀರು, ಹರಿದುಬರುವ ಪ್ರದೇಶಗಳಿಗೆ ಮಾತ್ರ ಸುಗ್ಗಿ ಸೀಮಿತವಾಗಿರುತ್ತಿತ್ತು. ಇದನ್ನು ಅದೃಷ್ಟದ ಬೆಳೆ ಎಂದೂ ಕರೆಯುತ್ತಿದ್ದರು. ಆದ್ದರಿಂದ ಇದಕ್ಕೆ ಕೇವಲ ವೃತ್ತಿಯ ನೆಲೆಯಿಂದ ಮಾತ್ರವಲ್ಲದೇ ಆರಾಧನೆಯ ನೆಲೆಯೂ ಇತ್ತು. ಸುಗ್ಗಿ ಬೇಸಾಯದ ಆರಂಭದಿಂದ ಮುಕ್ತಾಯದವರೆಗಿನ ಎಲ್ಲಾ ಕ್ರಿಯಾಸ್ವರೂಪದಲ್ಲೂ ಒಂದಲ್ಲ ಒಂದು ಕ್ರಿಯಾಚರಣೆಗಳು ಒಳಗೊಂಡಿದ್ದವು. ಇದು ಸುಗ್ಗಿಯ ಬಗೆಗಿನ ಧಾರ್ಮಿಕ ಭಾವನೆಯನ್ನು ಬೆಳೆಸುವಲ್ಲಿ ಸಹಾಯಕವಾಗಿತ್ತು.
ಸುಗ್ಗಿ ಶಬ್ದಾರ್ಥ: ತುಳುವಿನಲ್ಲಿ ಎರಡು ಅರ್ಥಗಳಲ್ಲಿ ‘ಸುಗ್ಗಿ’ ಎಂಬ ಪದವನ್ನು ಬಳಸಲಾಗುತ್ತಿದೆ. ಒಂದು ಸೌರಮಾನದ ೧೨ನೆಯ ತಿಂಗಳು (ಮೀನ ಮಾಸ, ಮಾರ್ಚ್-ಏಪ್ರಿಲ್) ಎಂದಾದರೆ, ಇನ್ನೊಂದು ತುಳು ಬೇಸಾಯದ ಎರಡನೆಯ ಬೆಳೆ. ಸುಗ್ಗಿ ಎಂಬುದಕ್ಕೆ ಅಧಿಕ, ಹೆಚ್ಚು, ಬಹಳ ಎಂಬ ಅರ್ಥವಿದೆ. ಬೇಸಾಯ ಸಂಸ್ಕೃತಿಯಲ್ಲಿ ಸುಗ್ಗಿ ಬೆಳೆಯ ಬಗೆಗಿನ ಕಲ್ಪನೆಯೂ ಇದೇ ಅರ್ಥದಲ್ಲಿತ್ತು. ಬೆಳೆಯುವ ಪ್ರಮಾಣ ಕಡಿಮೆಯಾದರೂ ಸಂಮೃದ್ದಿಯ ದೃಷ್ಟಿಯಿಂದ ಇದು ಅಧಿಕವೇ ಆಗಿತ್ತು. ಈ ಬೆಳೆಯ ಕಾಲಾವಧಿಯಲ್ಲಿ ಜನಪದ ಪರಿಸರದಲ್ಲುಂಟಾಗುವ ಉಲ್ಲಾಸ, ಸಂತೋಷವೇ ಸುಗ್ಗಿಯಾಗಿದೆ. ಸೌರಮಾನದ ೧೨ನೆಯ ತಿಂಗಳಾದ ‘ಸುಗ್ಗಿ’ಗೂ ಬೇಸಾಯದ ಪರಿಕಲ್ಪನೆಯಲ್ಲಿ ಬಳಸುವ ‘ಸುಗ್ಗಿ’ ಎಂಬ ಪದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಅಂದರೆ ಸೌರಮಾನದ ‘ಸುಗ್ಗಿ’ ಮಾಸಕ್ಕಿಂತ ಮೊದಲೇ ತುಳುನಾಡಿನ ಬಹುತೇಕ ಕಡೆಗಳಲ್ಲಿ ಸುಗ್ಗಿ ಬೇಸಾಯದ ಕೊಯ್ಲು ಪೂರ್ಣವಾಗಿರುತ್ತಿತ್ತು. ಆದರೆ ಸುಗ್ಗಿ ಬೆಳೆ ಸಂಮೃದ್ದಿಯ ಅವಧಿಯಾಗಿದ್ದರಿಂದ ತುಳುನಾಡಿನಲ್ಲಿ ಇದಕ್ಕೆ ತನ್ನದೇ ಆದ ಸ್ಥಾನಮಾನಗಳಿತ್ತು. ಈ ಅವಧಿಯಲ್ಲಿ ಪ್ರಕೃತಿಯಲ್ಲಿನ ವಿಪರೀತ ಮಳೆಯ ಸ್ವರೂಪ ಕಣ್ಮರೆಯಾಗಿ ತಂಪಾದ ಹಾಗೂ ಹಿತವಾದ ಶೀತಗಾಳಿ ತುಂಬಿರುತ್ತಿತ್ತು. ಹಗಲು ಬಿಸಿಲಿದ್ದರೂ ರಾತ್ರಿಯ ಚಳಿ ಹಾಗೂ ಹಿಮದಿಂದಾಗಿ ಬಿಸಿಲಿನ ತೀಕ್ಷ್ಣತೆ ಮತ್ತು ಮಳೆಯ ಭೀಕರತೆಯಿಂದ ಮುಕ್ತಿ ದೊರೆತಿತ್ತು. ಈ ಕಾರಣದಿಂದ ಸುಗ್ಗಿ ಬೇಸಾಯದ ಕಾಲಾವಧಿಯು ಮನಸ್ಸಿಗೆ ಹಿತವನ್ನು ನೀಡುವುದಲ್ಲದೆ ಸಂಭ್ರಮವನ್ನು ಉದ್ದೀಪನಗೊಳಿಸುವುದು. ಆದ್ದರಿಂದ ಸಂಭ್ರಮ ಸೂಚಕ ಪದವಾಗಿ ‘ಸುಗ್ಗಿ’ ಬಳಕೆಯಲ್ಲಿದೆ.
ಸುಗ್ಗಿಯ ಉಳುಮೆ: ಏಣಿಲು ಕೊಯ್ಲು ಮುಗಿದ ತಕ್ಷಣದಿಂದಲೇ ಸುಗ್ಗಿಯ ಉಳುಮೆ ಆರಂಭವಾಗುತ್ತಿತ್ತು. ಸುಗ್ಗಿ ಬೇಸಾಯ ಮಾಡುವ ಬೇಸಾಯಗಾರರು ಕಾಲಾವಧಿಯನ್ನು ಆಯಾ ಬೆಳೆಗೆ ಹೊಂದಿಕೊಳ್ಳುವಂತೆ ಬಳಸುವುದರಿಂದ ‘ನಿರ್ನಾಲ್’(ಒಕ್ಟೋಬರ್) ತಿಂಗಳ ಕೊನೆಯ ದಿನಗಳಲ್ಲಿ ಉಳುಮೆಗೆ ತೊಡಗಿಕೊಳ್ಳುತ್ತಿದ್ದರು. ಸುಗ್ಗಿ ಬೆಳೆಗೆ ಆರು ಬಾರಿ ‘ಸಾಲು’ ಉಳುಮೆಯಾಗಬೇಕೆಂಬ ನಿಯಮವಿತ್ತು. ನೀರಿನ ಕೊರತೆ ಇರುತ್ತಿದ್ದುದರಿಂದ ಇದ್ದ ನೀರನ್ನು ಉಳಿಸಿಕೊಳ್ಳಲು ಆರು ಬಾರಿಯ ಉಳುಮೆ ಸಹಾಯಕವಾಗುತ್ತಿತ್ತು. ಮೂರನೆ ಬಾರಿಯ ಉಳುಮೆಯ ನಂತರ ಗದ್ದೆ ಬದುವನ್ನು ಕೆತ್ತಿ ಹೊರಮೈಗೆ ಕೆಸರಿನಿಂದ ಸಾರಿಸಿ ನೀರು ಸೋರದಂತೆ ಮಾಡುತ್ತಿದ್ದರು. ಅನಂತರ ಸೊಪ್ಪು, ಗೊಬ್ಬರ ಹಾಕಿ, ಮತ್ತೆರಡು ಬಾರಿ ಉಳುಮೆ ನಡೆಸುತ್ತಿದ್ದರು. ಗದ್ದೆ ಕೋರಿಯ ಸಂದರ್ಭದಲ್ಲಿ ಒಂದು ಜೊತೆ ಎತ್ತು ಅಥವಾ ಕೋಣಗಳು ಹಲಗೆ ಎಳೆಯುವುದಕ್ಕೆಂದೇ ಮೀಸಲಿಡುತ್ತಿದ್ದರು. ಸುಗ್ಗಿಯಲ್ಲಿ ನಾಟಿ ಕಾರ್ಯಕ್ಕಿಂತಲೂ ಬಿತ್ತನೆಯೇ ಹೆಚ್ಚಾಗಿತ್ತು. ಕೆಸರಾಗುವಂತೆ ಮಾಡಿ ಅದರಲ್ಲಿ ಬಿತ್ತಿದ ಬೀಜ ಹೂತು ಹೋಗುವಂತೆ ಮಾಡುತ್ತಿದ್ದರು. ಇದರಿಂದ ನೀರಿನ ಚಲನೆಯಿಂದ ಬೀಜ ಒಂದೆಡೆ ಸೇರುವುದು ತಪ್ಪಿಹೋಗುತ್ತಿತ್ತು. ಸುಗ್ಗಿಯಲ್ಲಿ ನೀರಿಗೆ ಅಭಾವವಿರುವುದರಿಂದ ನೀರಿನ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದ್ದರು. ಆರು ಬಾರಿಯ ಉಳುಮೆ ಹಾಗೂ ಬದುವಿಗೆ ಸಾರಿಸಿದ ಕೆಸರಿನಿಂದಾಗಿ ಸುಗ್ಗಿ ಗದ್ದೆಯಲ್ಲಿ ನೀರು ಇಂಗುವಿಕೆ ಕಡಿಮೆಯೆಂಬ ತಿಳುವಳಿಕೆ ಇತ್ತು.
ಬೀಜ ಮೊಳಕೆ: ಸುಗ್ಗಿ ಗದ್ದೆಗೆ ಬೀಜ ಬಿತ್ತುವ ನಾಲ್ಕು ದಿನಗಳಿಗಿಂತ ಮೊದಲು ಬತ್ತವನ್ನು ಮೊಳಕೆ ಬರಲು ಇಡಲಾಗುತ್ತಿತ್ತು(ಈ ಬೇಸಾಯಕ್ಕೆ ಸಾಮಾನ್ಯವಾಗಿ ಅತಿಕರೆಯ ಬತ್ತವನ್ನೇ ಬಿತ್ತಲು ಬಳಸುತ್ತಿದ್ದರು)ಬೆಳಿಗ್ಗೆ ಬಿತ್ತನೆ ಬೀಜವನ್ನು ನೀರಿನಲ್ಲಿ ಹಾಕಿ, ಅದೇ ದಿನ ಸಂಜೆ ಸೆಗಣಿ ನೀರಿನಲ್ಲಿ ನೆನೆಸಿಡುತ್ತಿದ್ದರು. ನಂತರ ಬೀಜ ಮೊಳಕೆಗಾಗಿಯೇ ಇರುವ ಬುಟ್ಟಿಯೊಂದರಲ್ಲಿ ‘ನೆಕ್ಕಿ’ ಸೊಪ್ಪನ್ನು ಹರಡುತ್ತಿದ್ದರು. ಇದರ ಮೇಲೆ ಸೆಗಣಿ ನೀರಿನಲ್ಲಿ ಕಲಸಿದ ಬಿತ್ತನೆ ಬೀಜವನ್ನು ಹಾಕಿ ಮೇಲ್ಬಾಗಕ್ಕೆ ಮತ್ತೆ ನೆಕ್ಕಿ ಸೊಪ್ಪನ್ನು ಹರಡುತ್ತಿದ್ದರು. ಸೆಕೆ ಬರುವ ದೃಷ್ಟಿಯಿಂದ ಈ ರೀತಿಯಾಗಿ ನೆಕ್ಕಿ ಸೊಪ್ಪನ್ನು ಹರಡಲಾಗುತ್ತಿತ್ತು. ಅದರ ಮೇಲೆ ನೆನೆಸಿದ ಗೋಣಿ ಚೀಲವೊಂದನ್ನು ಹಾಕಿ ಭಾರವಾದ ಕಲ್ಲೊಂದನ್ನು ಇಡುತ್ತಿದ್ದರು. ೨ ದಿನಗಳಲ್ಲಿ ಬಿತ್ತನೆ ಬೀಜವು ಮೊಳಕೆ ಬರುತ್ತಿತ್ತು. ಈ ರೀತಿ ಮೊಳಕೆ ಬಂದ ಬೀಜವನ್ನು ‘ಹುಡಿ ಬಿತ್ತನೆ’ಗೆ ಅಥವಾ ‘ನೀರ್ನೇಜಿ’ಗೆ ಬಳಸುತ್ತಿದ್ದರು. ಬತ್ತದ ಮೊಳಕೆಗೆ ಶಾಖ ಬಹಳ ಮುಖ್ಯವಾಗಿದ್ದರಿಂದ ನೆಕ್ಕಿ ಸೊಪ್ಪು ಶಾಖ ಉತ್ಪತ್ತಿ ಮಾಡುತ್ತಿತ್ತು, ಭಾರವಾದ ಕಲ್ಲು ಗಾಳಿ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸುತ್ತಿದ್ದರಿಂದ ಬಿತ್ತನೆ ಬೀಜ ಬಹಳ ಬೇಗ ಮೊಳಕೆಗೆ ಬರುತ್ತಿತ್ತು.
ಸುಗ್ಗಿಯ ನಾಟಿ: ಸುಗ್ಗಿಗೆ ನಾಟಿ ಮಾಡುವ ಪದ್ಧತಿ ಬಹಳ ಕಡಿಮೆ. ಹೆಚ್ಚಿನ ಕಡೆಗಳಲ್ಲಿ ಮೊಳಕೆ ಬಂದ ಬೀಜವನ್ನೇ ಬಿತ್ತುವುದು ರೂಢಿಯಾಗಿತ್ತು. ಬಿತ್ತನೆಯಲ್ಲೂ ಹುಡಿಗೆ ಬಿತ್ತುವುದು ಹಾಗೂ ನೀರಿಗೆ ಬಿತ್ತುವುದು ಎಂಬ ಎರಡು ವಿಧಗಳಿದ್ದವು. ಇದಲ್ಲದೇ “ಪುಂಡಿತ್ತ್” ಅತ್ಯಂತ ಮಹತ್ವದ ಬಿತ್ತನೆಯ ಕ್ರಮವಾಗಿತ್ತು.
ಪುಂಡಿತ್ತ್ (ಹಿಡಿಬಿತ್ತನೆ): ಗೊಬ್ಬರದ ಅಂಶವುಳ್ಳ ಮಣ್ಣಿನೊಡನೆ(ಸುಡು ಮಣ್ಣು) ಮೊಳಕೆ ಬಂದ ಬೀಜವನ್ನು ಎಚ್ಚರಿಕೆಯಿಂದ ಬೆರೆಸಿ, ಹದಮಾಡಿದ ಗದ್ದೆಯ ಅಲ್ಲಲ್ಲಿ ಒಂದೊಂದು ಹಿಡಿ ಬೀಜವನ್ನು ಬಿತ್ತುವುದಕ್ಕೆ ‘ಪುಂಡಿತ್ತ್’(ಹಿಡಿಬಿತ್ತನೆ) ಎನ್ನುತ್ತಿದ್ದರು. ಪುಂಡಿತ್ತ್ನಲ್ಲಿ ‘ಹುಡಿಗೆ ಹಾಕುವ ಪುಂಡಿತ್ತ್’, ‘ನೀರಿಗೆ ಹಾಕುವ ಪುಂಡಿತ್ತ್’ ಎಂಬ ಎರಡು ವಿಧಗಳಿತ್ತು.
ಹುಡಿಗೆ ಹಾಕುವ ಪುಂಡಿತ್ತ್: ಈ ರೀತಿಯ ಪುಂಡಿತ್ತನ್ನು ಸಾಮಾನ್ಯವಾಗಿ ಏಣಿಲು ಬೆಳೆಗೆ ಬಳಸುವುದೇ ಹೆಚ್ಚಾಗಿತ್ತು. ಮಳೆ ಬಾರದೇ ಇದ್ದಲ್ಲಿ ಉಳುಮೆ ನಡೆಸುವ ಸಂದರ್ಭದಲ್ಲಿ ನೇಗಿಲ ಬರೆಗೆ ಬೀಜವನ್ನು ಬಿತ್ತುತ್ತಾ ಸಾಗುತ್ತಿದ್ದರು. ಒಂದೊಂದೇ ಬತ್ತ ಉದ್ದಕ್ಕೆ ನಿಲ್ಲುವಂತೆ ಈ ರೀತಿಯ ಬಿತ್ತನೆ ನಡೆಸಲಾಗುತ್ತಿತ್ತು. ಒಂದು ಬರೆ ಪೂರ್ತಿಯಾಗಿ ಬಿತ್ತಿದ ನಂತರ ಇನ್ನೊಂದು ಬರೆ ಎಳೆಯುವ ಸಂದರ್ಭದಲ್ಲಿ ಮೊದಲನೆಯ ಬರೆಯ ಮಣ್ಣು ಬಿತ್ತನೆ ಬೀಜವನ್ನು ಮುಚ್ಚುತ್ತಿತ್ತು. ಹೊಸ ಬರೆಯೊಂದು ನಿರ್ಮಾಣಗೊಂಡು ಅದರಲ್ಲಿಯು ಬೀಜ ಬಿತ್ತಲಾಗುತ್ತಿತ್ತು. ಈ ರೀತಿಯ ಬಿತ್ತನೆಯನ್ನು “ಬರೆಪುಂಡಿತ್ತ್” ಎಂದು ಕರೆಯುತ್ತಿದ್ದರು. ಬಿತ್ತನೆ ಪೂರ್ಣಗೊಂಡ ನಂತರ ಹಲಗೆ ಎಳೆದು ಗದ್ದೆಯ ಮಧ್ಯಭಾಗ ಹಾಗೂ ಸುತ್ತಲೂ ನೀರು ‘ಪಾತಿ’ ನಿರ್ಮಿಸುತ್ತಿದ್ದರು.
ನೀರಿಗೆ ಪುಂಡಿತ್ತ್: ಈ ರೀತಿಯ ಪುಂಡಿತ್ತ್ ಬಿತ್ತನೆಯು ಸುಗ್ಗಿ ಬೇಸಾಯಕ್ಕೆ ನಡೆಯುತ್ತಿತ್ತು. ಗದ್ದೆ ಕೋರಿಯ ದಿನ ‘ಕುರುಂಟು’ (ನೀರು ಬಸಿದು ಹೋಗುವ ಕಣಿ ನಿರ್ಮಿಸಲು ಬಳಸುವ ಸಾಧನ) ಎಳೆದು ನೀರೆಲ್ಲವನ್ನು ಸಂಪೂರ್ಣವಾಗಿ ಬಸಿಯಲಾಗುತ್ತಿತ್ತು. ಒಂದು ದಿನ ಕಳೆದ ನಂತರ ಈ ಗದ್ದೆಗೆ ಬಿತ್ತಲಾಗುತ್ತಿತ್ತು. ದೊಡ್ಡ ಗದ್ದೆಗಳಾದರೆ ನಾಲ್ಕೈದು ಜನರು ಸಾಲಾಗಿ ನಿಂತು ಮಣ್ಣು ಮತ್ತು ಮೊಳಕೆ ಮಿಶ್ರಿತ ಬೀಜವನ್ನು ಹಾಕುತ್ತಿದ್ದರು. ಗೇಣುದ್ದಕ್ಕೆ ಒಂದು ಹಿಡಿಯಂತೆ ಈ ಬೀಜವನ್ನು ಹಾಕಲಾಗುತ್ತಿತ್ತು. ಪುಂಡಿತ್ತ್ ಹಾಕಿದ ಎರಡು ದಿನಗಳವರೆಗೆ ಬಿತ್ತನೆ ಗದ್ದೆಗೆ ನೀರು ಬಿಡುವ ಪದ್ಧತಿ ಇರಲಿಲ್ಲ. ಮೂರನೆಯ ದಿನ ಬಿಡುವ ನೀರನ್ನು ‘ಬಿದೆ ನೀರು’ ಎನ್ನುತ್ತಿದ್ದರು. ಬಿತ್ತಿದ ಬೀಜವು ಮೊಳಕೆ ಬಂದ ನಂತರ ಮುಂದಿನ ಬೆಳವಣಿಗೆಗೆ ನೀರಿನ ಆಶ್ರಯವನ್ನು ಪಡೆದುಕೊಳ್ಳುತ್ತಿತ್ತು. ತುಳುನಾಡಿನ ಬೇಸಾಯ ಕ್ರಮಗಳಲ್ಲಿ ‘ಪುಂಡಿತ್ತ್’ ಬೇಸಾಯವು ಅತ್ಯಂತ ಜನಪ್ರಿಯ ಮಾದರಿಯಾಗಿತ್ತು.
ನೇಜಿ ನಾಟಿ: ಈ ದಿನಗಳಲ್ಲಿ ಸುಗ್ಗಿ ಬೇಸಾಯ ತುಳುನಾಡಿನಲ್ಲಿ ನಡೆಯುತ್ತಿದ್ದರೆ, ಅಲ್ಲಿ ಬಿತ್ತನೆಯ ಬದಲು ನೇಜಿ ನಾಟಿ ಕ್ರಮ ಬಳಕೆಯಾಗುತ್ತಿದೆ. ಏಣಿಲು ಕೊಯ್ಲಿನ ಅವಧಿಯಲ್ಲೇ ಬೀಜ ಬಿತ್ತಿ ಸುಗ್ಗಿ ನೇಜಿ ಕೀಳಲು ಸಿದ್ಧರಾಗುತ್ತಾರೆ. ಆದರೆ ಏಣಿಲು ಬೇಸಾಯವೇ ಕಾಣಸಿಗಲು ಅಪೂರ್ವವಾದ ಈ ಕಾಲದಲ್ಲಿ ಸುಗ್ಗಿ ಬೇಸಾಯವನ್ನು ನಿರೀಕ್ಷಿಸಲು ಕಷ್ಟ. ಸುಗ್ಗಿಯ ಬೇಸಾಯದ ಅವಧಿಯಲ್ಲಿ ತುಳು ಜನಪದ ಸಾಹಿತ್ಯಗಳ ಬಳಕೆ ಇರಲಿಲ್ಲ. ಮಂಗಳೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ಸುಗ್ಗಿ ಬೇಸಾಯದ ಪ್ರಧಾನ ಗದ್ದೆಗಳಲ್ಲಿ ಪಾಡ್ದನ ಹೇಳಲೇಬೇಕೆಂಬ ನಂಬಿಕೆ ಇತ್ತು. ಸುಗ್ಗಿ ಬೇಸಾಯದ ಸಂದರ್ಭದಲ್ಲಿ ಅನೇಕ ಆಚರಣೆಗಳು ಮತ್ತು ಆರಾಧನಾ ಸ್ವರೂಪಗಳು ತುಳುನಾಡಿನಾದ್ಯಂತ ಕಂಡುಬರುತ್ತಿದ್ದವು. ಈ ಬೆಳೆಯ ಬಗೆಗಿನ ಪವಿತ್ರವಾದ ಜನಪದ ನಂಬಿಕೆಗಳು ಉಳಿದ ಬೇಸಾಯ ಪ್ರಕ್ರಿಯೆಗಿಂತ ಇದನ್ನು ಪ್ರತ್ಯೇಕವಾಗಿ ನೋಡಲು ಅವಕಾಶ ಮಾಡಿಕೊಟ್ಟಿತ್ತು. ಸುಗ್ಗಿ ಬೇಸಾಯ ಸಂಪೂರ್ಣವಾಗಿ ಆಚರಣಾತ್ಮಕ ಸ್ವರೂಪವನ್ನು ಪಡೆದಿರುವುದರಿಂದ ಶ್ರಮದ ಮೌಲ್ಯವು ಇಲ್ಲಿ ಗೌಣವಾಗಿತ್ತು. ಸುಗ್ಗಿಯ ಉಳುಮೆಯಿಂದ ಕೊಯ್ಲಿನವರೆಗೂ ಶ್ರಮದ ಜೊತೆಗೆ ನಿರಂತರ ಆಚರಣೆಗಳು ನಡೆಯುತ್ತಿದ್ದುವು. ಶ್ರಮದ ಮಾನ್ಯತೆಯನ್ನು ಆಚರಣೆ ತನ್ನದಾಗಿಸುವ ಮೂಲಕ ಒಟ್ಟು ಬೇಸಾಯ ಪ್ರಕ್ರಿಯೆಯ ಮೌಲ್ಯವನ್ನು ಹೆಚ್ಚಿಸಿ ಬಿಡುತ್ತಿತ್ತು.
ಸುಗ್ಗಿಯ ಕಲ್ಯಾಂಡೆ: ಸುಗ್ಗಿ ಬೇಸಾಯ ಮುಗಿದ ನಂತರ ಗದ್ದೆಯ ಮಧ್ಯ ಭಾಗದಲ್ಲಿ ‘ಕಲ್ಯಾಂಡೆ’ ಊರುವ ಕ್ರಿಯಾಚರಣೆಯೊಂದಿತ್ತು. ತ್ರಿಕೋನಾಕಾರದ ಕತ್ತರಿಯೊಂದನ್ನು ಕೋಲಿನಿಂದ ರಚಿಸಿ ಅದರ ತುದಿಗೆ ‘ಮಾದೆರಿ ಬಳ್ಳಿ’ಯಿಂದ ಹೆಣೆದು ಸಣ್ಣದೊಂದು ಬುಟ್ಟಿಯಾಕಾರವನ್ನು ರಚಿಸುತ್ತಿದ್ದರು. ಈ ಬುಟ್ಟಿಯಲ್ಲಿ ಕೆಸರು ಮಣ್ಣು ತುಂಬಿಸಿ ಅದರಲ್ಲಿ ಕಳ್ಳಿ, ನೆಕ್ಕಿ, ಕೋರಿಪಂತಿ, ರಾವಿಜಎಲೆ, ನೆಲ್ಲಿ ಇತ್ಯಾದಿ ಗಿಡಗಳನ್ನು ನೆಡುತ್ತಿದ್ದರು. ತುಳುನಾಡಿನ ಕೆಲವು ಭಾಗಗಳಲ್ಲಿ ಏಣಿಲು ಬೆಳೆಗೂ ಈ ಕ್ರಮವಿತ್ತು . ಇದಲ್ಲದೆ ಬಿದಿರಿನ ಅಂಡೆಯೊಳಗೆ ಇದೇ ಗಿಡಗಳನ್ನು ಹಾಕಿ ನೆಡುವ ಸಂಪ್ರದಾಯವೂ ಇತ್ತು. ‘ಕಳ್ಳಿದ ಅಂಡೆ’ ಎಂಬುದೇ ‘ಕಲ್ಯಾಂಡೆ’ ಎಂದು ಬಳಸುವುದಾಗಿದೆ. ಏಣಿಲು ಬೆಳೆಗೆ ಕಾಪು ನೆಡುವ ಸಂಪ್ರದಾಯದ ಹಿಂದಿರುವ ರಾಚನಿಕ ಹಿನ್ನಲೆಯೇ ‘ಕಲ್ಯಾಂಡೆ’ ನೆಡುವ ಸಂಪ್ರದಾಯದ ಹಿಂದೆಯೂ ಕಂಡುಬರುವುದಾಗಿದೆ. ಇಲ್ಲಿ ಬರುವ ಎಲ್ಲಾ ಗಿಡಗಳ ಬಗ್ಗೆಯೂ ತುಳು ಜನಪದರಲ್ಲಿ ನೇತ್ಯಾತ್ಮಕ ನಂಬಿಕೆಯಿತ್ತು. ಈ ಗಿಡಗಳ ವಿಶಿಷ್ಟ ಗುಣಗಳನ್ನು ಮನುಷ್ಯನಿಗೆ ಮಾರಕವಾಗಿ ಬಳಸಲು ಸಾಧ್ಯವಿದ್ದುದೇ ಇದಕ್ಕೆ ಕಾರಣ.
ಆರೈಕೆ: ಸುಗ್ಗಿ ಬೇಸಾಯಕ್ಕೆ ಆರೈಕೆ ಬಹು ಮುಖ್ಯ. ಇದರಲ್ಲಿ ಮೊದಲನೆ ಆರೈಕೆ ನೀರಿನದ್ದಾಗಿತ್ತು. ಕಾಲಕಾಲಕ್ಕೆ ನೀರಿನ ಮಟ್ಟವನ್ನು ಸರಿದೂಗಿಸುವುದೂ ಅಗತ್ಯ ಇದ್ದೇ ಇತ್ತು. ಸುಗ್ಗಿಗೆ ಬೀಜ ಬಿತ್ತಿ ಸುಮಾರು ೧೫ ದಿನ ಕಳೆಯುವ ಹೊತ್ತಿಗೆ ಹುಳು ಬಾಧೆಯಾಗುವ ಸಾಧ್ಯತೆ ಹೆಚ್ಚಾಗಿತ್ತು. ಇದನ್ನು ಹೋಗಲಾಡಿಸಲು ಜನಪದರು ತಮ್ಮದೇ ಆದ ತಾಂತ್ರಿಕ ವಿಧಾನವೊಂದನ್ನು ಅಳವಡಿಸುತ್ತಿದ್ದರು. ಸೂರ್ಯ ಉದಯಿಸುವ ಮುನ್ನ ಬೆತ್ತಲೆಯಾಗಿ ‘ಮಲೆ ಪಾಜೆವೂ’ (ಗರಗಸ) ಮರದ ರೆಂಬೆಯನ್ನು ಕೈಯಿಂದಲೇ ಮುರಿದು ತಂದು ಅದರಿಂದ ಪೈರನ್ನು ಗುಡಿಸಿ,ನೀರು ಹರಿದು ಹೋಗುವ ‘ಕಡಿ(ನೀರು ಹೋಗುವ ದಾರಿ)ಯ’ ಪಕ್ಕದಲ್ಲಿ ಈ ರೆಂಬೆಯನ್ನು ಊರಿದರೆ ಹುಳು ಬಾಧೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇತ್ತು. ಇದಲ್ಲದಿದ್ದರೆ ‘ಕಡುಕಾರೆ’(ಕಾರೆ ಮುಳ್ಳಿನ ಕಾಯಿ)ಯನ್ನು ಗುದ್ದಿ ಗದ್ದೆಗೆ ನೀರು ಬೀಳುವ ಸ್ಥಳದಲ್ಲಿಟ್ಟರೆ ಅದರ ನೊರೆ ಗದ್ದೆ ಪೂರ್ತಿ ಹರಡಿ ಹುಳುಬಾಧೆಯನ್ನು ತಪ್ಪಿಸುತ್ತದೆ ಎಂದು ಹೇಳುತ್ತಿದ್ದರು.
ನೀರಾವರಿ ವ್ಯವಸ್ಥೆ: ‘ಹದನೀರು’, ಇರುವ ಪ್ರದೇಶದಲ್ಲಿ ಬೆಳೆಯುವ ಬೆಳೆ ಸುಗ್ಗಿ. ಹರಿದು ಬರುವ ನೀರಿನಿಂದಲೇ ಉಳುಮೆ ನಡೆಯುತ್ತಿತ್ತು. ಅದರೆ ಆನಂತರದ ಅವಧಿಯಲ್ಲಿ ಹರಿಯುವ ನೀರು ಬತ್ತುವುದರಿಂದ ತೋಡುಗಳಿಗೆ ‘ಕಟ್ಟೆ’ ಕಟ್ಟಿ ಬೆಳೆಗೆ ನೀರು ಹಾಯಿಸುತ್ತಿದ್ದರು. ಇಲ್ಲವೇ ಏತ ಕೂರಿಗೆಯ ಮೂಲಕ ನೀರನ್ನು ಹಾಯಿಸುತ್ತಿದ್ದರು. ‘ಪುಂಡಿತ್ತ್’ ಹಾಕಿದಲ್ಲಿ ಮೂರು ದಿನಗಳ ನಂತರ ‘ಬಿದೆನೀರು’ ಬಿಡುತ್ತಿದ್ದರು. ಇದನ್ನು ‘ಅಮೆನೀರು’ ಎನ್ನುವರು. ತುಳುವಿನ ‘ಅಮೆ’ ಎಂದರೆ ‘ಪುರುಡು’ ಎಂದರ್ಥ. ಹೆಣ್ಣಿನ ಹೆರಿಗೆಯ ನಂತರ ನಿಶ್ಚಿತ ದಿನದವರೆಗೆ ಈ ‘ಅಮೆ’ಯನ್ನು ಆಚರಿಸುವುದಿತ್ತು. ಅದೇ ರೀತಿ ಬಿತ್ತನೆಯ ನಂತರ ಒಂದೆರಡು ದಿನ ಈ ‘ಅಮೆ’, ಬೇಸಾಯ ಸಂಸ್ಕೃತಿಯಲ್ಲೂ ಇತ್ತು. ‘ಬಿದೆ’ ಚೆನ್ನಾಗಿ ಬಂದ ನಂತರ ನೀರನ್ನು ಒಂದು ಅಂಗುಲದವರೆಗೆ ನಿಲ್ಲಿಸುತ್ತಿದ್ದರು. ನೇಜಿ ದೊಡ್ಡದಾಗುತ್ತಿದ್ದಂತೆ ೧/೨ ಅಂಗುಲದಷ್ಟು ನೀರನ್ನು ಹೆಚ್ಚಿಸುತ್ತಾ ಹೋಗುತ್ತಿದ್ದರು. ರಾತ್ರಿಯ ಹೊತ್ತಿನಲ್ಲಿ ಬೀಳುವ ಮಂಜು ಬಿದೆಯ ಬೆಳವಣಿಗೆಗೆ ಉತ್ತಮ ನೀರಿನ ಅಂಶವನ್ನು ನೀಡುತ್ತಿತ್ತು. ಅತಿಕರೆಯದಂತಹ ತಳಿಗಳು ನೀರಿಲ್ಲದಿದ್ದರೂ ಚಳಿಗಾಲದ ಮಂಜಿನಿಂದಲೇ ಬೆಳೆಯುವ ಸಾಮರ್ಥ್ಯವನ್ನು ಹೊಂದಿತ್ತು. ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾದಾಗ ಪ್ರಾಚೀನ ಕಾಲದಿಂದಲೂ ಏತಗಳು ಬಹುಮುಖ್ಯ ನೀರಾವರಿ ಸಾಧನಗಳಾಗಿದ್ದವು. ಯಂತ್ರೋಪಕರಣಗಳ ಬಳಕೆ ಬಂದ ನಂತರವೂ ಏತಗಳ ಉಪಯೋಗಗಳಿದ್ದುವು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಿರ್ದಿಷ್ಟವಾಗಿ ಇಂತಿಷ್ಟು ‘ಮರಾಯಿ’(ಏತದ ನೀರೆತ್ತುವ ಪಾತ್ರೆ) ನೀರು ಹಾಕಬೇಕೆಂಬ ಲೆಕ್ಕಾಚಾರವಿತ್ತು.
೩.೮.ಸುಗ್ಗಿ ಕೊಯ್ಲು: ಬಿಸಿಲಿನ ಬೇಗೆ ತೀವ್ರವಾಗಿರುವ ಕಾಲದಲ್ಲಿ ಸುಗ್ಗಿ ಬೆಳೆ ಕೊಯ್ಲಿಗೆ ಸಿದ್ಧವಾಗುತ್ತಿತ್ತು. ಏಣಿಲು ಬೆಳೆಯ ಲೆಕ್ಕಾಚಾರದಂತೆ ಒಂದು ಮುಡಿ ಗದ್ದೆಯನ್ನು ಏಳು ಜನರಿದ್ದರೆ ಒಂದು ದಿನದಲ್ಲಿ ಕೊಯ್ದು ಮುಗಿಸಬಹುದಿತ್ತು. ಇನ್ನೆರಡು ದಿನಗಳಲ್ಲಿ ಅದೇ ಜನರಿಂದ ಪೈರನ್ನು ಹೊತ್ತು ಸಾಗಿಸುವ ತೆನೆ ಹೊಡೆದು ಶುಚಿ ಮಾಡುವ ಕೆಲಸಗಳು ನಿರ್ವಹಿಸಲ್ಪಡುತ್ತಿತ್ತು. ಸುಗ್ಗಿ ತೆನೆಯನ್ನು ರಾಶಿ ಹಾಕುವ ಬದಲು ವೃತ್ತಾಕಾರದ ‘ಮೆದೆ’ ರಚಿಸಲಾಗುತ್ತಿತ್ತು. ಈ ರೀತಿಯ ಮೆದೆ ರಚಿಸುವುದರಿಂದ ಪೈರಿಗೆ ಶಾಖ ತಟ್ಟಿ ಬತ್ತ ಬಹುಬೇಗ ಪೈರಿನಿಂದ ಉದುರುತ್ತಿತ್ತು. ಸುಗ್ಗಿ ಬತ್ತವನ್ನು ಅಳತೆ ಮಾಡುವ ಪದ್ಧತಿ ಕಡಿಮೆ ಇತ್ತು. ಬದಲಾಗಿ ಬತ್ತವನ್ನು ಮನೆಯೊಳಗೆ ರಾಶಿ ಹಾಕುತ್ತಿದ್ದರು. ಸುಗ್ಗಿಯಲ್ಲಿ ಫಸಲು ಹೆಚ್ಚಾಗಿದ್ದು ಒಂದು ಮುಡಿ ಗದ್ದೆಯಲ್ಲಿ ೩೦ ಮುಡಿ ಬತ್ತ ಸಿಗುವ ಸಾಧ್ಯತೆಯಿತ್ತು.
ಸುಗ್ಗಿಯಲ್ಲಿ ಅತಿಕರೆಯ ಬೆಳೆದರೆ ಬೈಹುಲ್ಲು ಮತ್ತು ಬತ್ತವು ಹೆಚ್ಚಾಗಿ ಸಿಗುತ್ತಿತ್ತು. ಸುಗ್ಗಿ ಕೊಯ್ಲಿನ ಸಂದರ್ಭದಲ್ಲಿ ಮಳೆ ಇಲ್ಲದಿರುವುದರಿಂದ ಬೈಹುಲ್ಲು ಒಣಗಿಸಲು ಉತ್ತಮ ಕಾಲವಾಗಿತ್ತು. ಏಣಿಲು ಬೆಳೆಯಂತೆ ಬತ್ತವನ್ನು ನೇರ ರಾಶಿ ಹಾಕದೆ ಸುಗ್ಗಿಯ ಪೊಳ್ಳು ಹಾಗೂ ಕಸವನ್ನು ಚೆನ್ನಾಗಿ ತೆಗೆದು ಮನೆಯೊಳಗೆ ರಾಶಿ ಹಾಕುತ್ತಿದ್ದರು. ಸುಗ್ಗಿ ಕೊಯ್ಲು ಅತ್ಯಂತ ಕಠಿಣ ಕೆಲಸ. ಬಿಸಿಲಿನ ತೀವ್ರತೆಗೆ ಕೆಲಸದಾಳುಗಳು ಬಹುಬೇಗ ಆಯಾಸಗೊಳ್ಳುತ್ತಿದ್ದರು. ಹಾಗಾಗಿ ಸುಗ್ಗಿ ಕೊಯ್ಲಿನಲ್ಲಿ ಲವಲವಿಕೆ ಕಡಿಮೆ. ಮಾತುಕತೆ, ಜನಪದ ಸಾಹಿತ್ಯಗಳ ಬಳಕೆ ಹೆಚ್ಚಾಗಿಲ್ಲದೆ ಇರುವುದಕ್ಕೆ ಇದುವೇ ಕಾರಣ.
ಕೊಳಕೆ:
ಕೊಳಕೆ ತುಳುನಾಡಿನ ಮೂರನೇಯ ಬೆಳೆ. ಸಮೃದ್ಧವಾದ ನೀರಾವರಿ ವ್ಯವಸ್ಥೆಯಿರುವ ಪ್ರದೇಶಗಳಲ್ಲಿ ಮಾತ್ರ ಕೊಳಕೆ ಬೇಸಾಯ ನಡೆಯುತ್ತಿತ್ತು. ಕೊಳಕೆಯ ಕಾಲಾವಧಿ ಕಡಿಮೆ. ಆದ್ದರಿಂದ ಅಲ್ಪಾವಧಿಯಲ್ಲಿ ಫಸಲು ನೀಡುವ ತಳಿಗಳನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಕೊಳಕೆಗೆ ‘ಅಡಿನೀರು’ ಮೂಲ. ತುಳುನಾಡಿನ ಸೀಮಿತ ಪ್ರದೇಶಗಳಲ್ಲಿ ಬೆಳೆಯುವ ಕೊಳಕೆ ಅಷ್ಟೊಂದು ಪ್ರಾಮುಖ್ಯ ಪಡೆದಿರಲಿಲ್ಲ. ಈ ಕಾರಣಕ್ಕಾಗಿಯೇ ಕೊಳಕೆ ಬೇಸಾಯಕ್ಕೆ ಹೆಚ್ಚಿನ ಮಾನ್ಯತೆಯೇನೂ ಇರಲಿಲ್ಲ. ಜನಪದ ಸಾಹಿತ್ಯದ ಬಳಕೆಯಾಗಲಿ, ಆರಾಧನಾ ಆಚರಣೆಗಳಾಗಲಿ ಈ ಬೇಸಾಯದೊಂದಿಗಿರಲಿಲ್ಲ. ಕೊಳಕೆ ಬೆಳೆಯ ನಿರ್ವಹಣೆ ಹಾಗೂ ಬೇಸಾಯ ಕ್ರಮವು ಸುಗ್ಗಿ ಬೇಸಾಯವನ್ನೇ ಹೆಚ್ಚಾಗಿ ಹೋಲುತ್ತಿತ್ತು. ನೀರಾವರಿ ವ್ಯವಸ್ಥೆಯೊಂದನ್ನು ಹೊರತು ಪಡಿಸಿದರೆ ಉಳಿದಂತೆ ಸುಗ್ಗಿ ಬೇಸಾಯ ಕ್ರಮಕ್ಕೂ ಕೊಳಕೆ ಬೇಸಾಯ ಕ್ರಮಕ್ಕೂ ವ್ಯತ್ಯಾಸವಿರಲಿಲ್ಲ. ಆದ್ದರಿಂದ ಪ್ರಸ್ತುತ ಕೊಳಕೆಯ ಕುರಿತಾಗಿ ಪ್ರತ್ಯೇಕ ವಿವರಣೆಯನ್ನು ನೀಡುತ್ತಿಲ್ಲ. ತುಳುನಾಡಿನಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಈ ಬೆಳೆಯನ್ನು ಬೆಳೆಯುತ್ತಿರುವುದೇ ಇದಕ್ಕೆ ಕಾರಣ.
ಪಟ್ಲ:ತುಳುನಾಡಿನ ನದೀ ಮುಖಜ ಭೂಮಿಗಳಲ್ಲಿ ಬೆಳೆಯುವ ಬೆಳೆಯನ್ನು ‘ಪಟ್ಲ’ ಎನ್ನುತ್ತಿದ್ದರು. ಏಣಿಲು ಮತ್ತು ಸುಗ್ಗಿಯ ಮಧ್ಯದ ಕಾಲಾವಧಿಯಲ್ಲಿ ಬೆಳೆಯುವ ಬೆಳೆ ಇದಾಗಿತ್ತು(ಆಟಿ ಕೊನೆಯ ಅವಧಿಯಿಂದ ಬೊಂಥೆಲ್ ವರೆಗೆ) ಆಟಿ ೧೫ರ ನಂತರ ‘ಪಟ್ಲ’ ಬೇಸಾಯಕ್ಕೆ ನೇಜಿ ಹಾಕುತ್ತಿದ್ದರು. ಸೋಣ ತಿಂಗಳ ಕೊನೆಗಿಂತ ಮೊದಲೇ ನಾಟಿ ಮಾಡುತ್ತಿದ್ದರು. ಕೆಲವೊಂದು ವರ್ಷ ಆಟಿ ಕೊನೆ ಅಥವಾ ಸೋಣ ಆರಂಭದಲ್ಲೇ ಬೇಸಾಯ ಆರಂಭವಾಗುವುದಿತ್ತು. ಈ ಅವಧಿಯು ಮಳೆ ಅಥವಾ ನದೀ ನೀರನ್ನು ಹೊಂದಿಕೊಂಡಿರುತ್ತಿತ್ತು. ಸುಮಾರು ಐದು ಬಾರಿ ‘ಪಟ್ಲ’ ಗದ್ದೆಯನ್ನು ಉಳುವುದು, ಸೊಪ್ಪು-ಗೊಬ್ಬರ ಹಾಕಿ ಮತ್ತೆ ಎರಡು ಬಾರಿ ಉಳುಮೆ ಮಾಡುವುದು ವಾಡಿಕೆಯಾಗಿತ್ತು. ಏಣಿಲು ಬೇಸಾಯ ಮುಗಿಸಿದ ಜನ (ಕೂಲಿ) ವಿರಾಮದಲ್ಲಿರುವುದರಿಂದ ‘ಪಟ್ಲ’ ಬೇಸಾಯಕ್ಕೆ ಕೂಲಿಗಳ ಸಮಸ್ಯೆ ಇರಲಿಲ್ಲ.
‘ಪಟ್ಲ’ ಬೆಳೆ ಬೆಳೆಯಲು ಮುಖ್ಯ ಕಾರಣ ನೀರಿನ ಹೆಚ್ಚಳ. ತುಳುನಾಡಿನಲ್ಲಿ ಅನೇಕ ನದಿ, ಹೊಳೆ ಹಾಗೂ ದೊಡ್ಡ ತೋಡುಗಳ ಬದಿಯಲ್ಲಿ ಬತ್ತ ಬೆಳೆಯುವ ಗದ್ದೆಗಳು ಇರುತ್ತಿದ್ದವು. ಆಟಿ ತಿಂಗಳವರೆಗೆ ಬೀಳುವ ಅವ್ಯಾಹತ ಮಳೆಯಿಂದಾಗಿ ಈ ನದಿಗಳಲ್ಲಿ ನೀರು ವಿಪರೀತವಾಗಿ ಹರಿದು ಬರುತ್ತಿತ್ತು. ಅಲ್ಲದೇ ಗದ್ದೆಗಳಲ್ಲಿ ಕೆಲವು ತಿಂಗಳುಗಳ ಕಾಲ ನೀರು ತುಂಬಿರುವುದೂ ಇತ್ತು. ಇದರಿಂದಾಗಿ ಆ ಪ್ರದೇಶದಲ್ಲಿ ಬೆಳೆ ಬೆಳೆಯಲು ಕಷ್ಟ ಸಾಧ್ಯವಾಗಿತ್ತು. ಆಟಿ ತಿಂಗಳ ನಂತರದ ಅವಧಿಯಲ್ಲಿ ನೀರಿನ ಪ್ರಮಾಣ ತಗ್ಗುವುದರಿಂದ ಬೇಸಾಯ ಕೆಲಸಕ್ಕೆ ತೊಡಗುವುದು ಸುಲಭವಾಗಿತ್ತು.ಆದ್ದರಿಂದ ಇದನ್ನು ‘ಪಟ್ಲ’ ಬೆಳೆ ಎನ್ನುತ್ತಿದ್ದರು.ಮುಖ್ಯ ನದಿಗಳಾದ ನೇತ್ರಾವತಿ, ಕುಮಾರಧಾರ, ಪಯಸ್ವಿನಿ, ಚಂದ್ರಗಿರಿ ಈ ನದಿ ಬಯಲುಗಳಲ್ಲಿ ಸಾಮಾನ್ಯವಾಗಿ ಪಟ್ಲ ಬೆಳೆ ಕಂಡುಬರುತ್ತಿತ್ತು. ಕಾಲದ ದೃಷ್ಟಿಯನ್ನು ಹೊರತುಪಡಿಸಿದರೆ ಏಣಿಲು ಬೆಳೆ ವಿಧಾನಕ್ಕೂ ಪಟ್ಲ ಬೆಳೆಯ ವಿಧಾನಕ್ಕೂ ಹೆಚ್ಚಿನ ವ್ಯತ್ಯಾಸವಿರಲಿಲ್ಲ.
ಕುಮೇರ್ ಬೇಸಾಯ:
ತುಳುನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಾಚೀನ ಕಾಲದಿಂದಲೇ ಬೆಳೆಯುತ್ತಿದ್ದ ಪ್ರಮುಖ ಬೆಳೆಯನ್ನು ‘ಕುಮೇರ್’ ಅಥವಾ ‘ಕುಮರಿ’ ಬೇಸಾಯ ಎನ್ನುತ್ತಿದ್ದರು. ಏಣಿಲು ಬೆಳೆಯ ಅವಧಿಯಲ್ಲಿ ಬೆಳೆಯುವ ಕುಮೇರ್ ಬೇಸಾಯ ಪ್ರಾಚೀನ ಬೇಸಾಯ ಚರಿತ್ರೆಯನ್ನು ಒಳಗೊಂಡಿದೆ. ತುಳುನಾಡಿನ ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದ ಹಲವು ಬುಡಕಟ್ಟು ಜನಾಂಗಗಳು ಈ ಬೆಳೆಯನ್ನು ಮೂಲ ಕಸುಬಾಗಿ ಬೆಳೆಯುತ್ತಿದ್ದರು. ಮುಂದೆ ಇದೇ ಬೇಸಾಯವು ನಾಗರಿಕ ಪದ್ಧತಿಗೆ ಒಳಗಾಗಿ ಬಯಲು ಪ್ರದೇಶಗಳಲ್ಲಿ ಬೆಳೆದಿರುವ ಸಾಧ್ಯತೆಯೂ ಇದೆ. ಅತ್ಯಂತ ಶ್ರಮದಾಯಕವಾದ ಈ ಬೇಸಾಯ ಪದ್ಧತಿ ಮಳೆಯನ್ನು ಅವಲಂಬಿಸಿ ಬೆಳೆಯುವುದಾಗಿತ್ತು.
ಕುಮೇರ್ ಬೇಸಾಯದ ಇತಿಹಾಸ: ಯಾವ ಕಾಲದಿಂದ ಕುಮೇರ್ ಬೇಸಾಯ ನಡೆಯುತ್ತಿತ್ತೆಂದು ನಿರ್ದಿಷ್ಟವಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಬೇಟೆಯಿಂದ ಬೇಸಾಯದ ಕಡೆಗೆ ತನ್ನ ವೃತ್ತಿಯನ್ನು ಪರಿವರ್ತಿಸಿದಾಗಲೇ ಕುಮೇರ್ ಬೇಸಾಯ ಪದ್ಧತಿಯನ್ನು ಮಾನವನು ರೂಢಿಸಿಕೊಂಡಿರಬೇಕೆಂದು ಊಹಿಸಬಹುದು. ತುಳುನಾಡಿಗೆ ಸಂಬಂಧಿಸಿದ ವಲಸೆಯ ಐತಿಹ್ಯವೊಂದು ಕುಮೇರ್ ಬೇಸಾಯದ ಪರಿಕಲ್ಪನೆಯನ್ನು ವ್ಯಕ್ತಪಡಿಸುತ್ತದೆ. ಇಲ್ಲಿಯ ದಟ್ಟ ಕಾಡುಗಳನ್ನು ಕಡಿದು ಬೇಸಾಯ ಆರಂಭಿಸಿದ ಕಥೆ ಇದಾಗಿದೆ. ತುಳುನಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗಗಳಲ್ಲಿ ಹೆಚ್ಚು ಪ್ರಚಲಿತವಾಗಿದ್ದ ಈ ಬೇಸಾಯ ಪದ್ಧತಿ ಇತ್ತೀಚಿನವರೆಗೂ ಬಳಕೆಯಲ್ಲಿದ್ದುದು ಕಂಡುಬರುತ್ತದೆ.ತುಳುನಾಡಿಗೆ ಮುನ್ನೂರು ವರ್ಷಗಳ ಹಿಂದೆ ವಲಸೆ ಬಂದ ಮರಾಠಿ ಮಾತನಾಡುವ ಜನಾಂಗದವರಲ್ಲಿ ಬಹುಕಾಲದಿಂದಲೂ ಕುಮೇರ್ ಬೇಸಾಯ ಹೆಚ್ಚು ಜನಪ್ರಿಯವಾಗಿತ್ತು. ಇವರು ಕುಮೇರ್ ಬೇಸಾಯದಲ್ಲಿ ಹೆಚ್ಚು ಪರಿಣತಿಯನ್ನು ಪಡೆದಿದ್ದರು. ಆದರೂ ತುಳುನಾಡಿನ ಕುಮೇರ್ ಬೇಸಾಯ ಇಲ್ಲಿಯ ಮೂಲನಿವಾಸಿಗಳಿಂದಲೇ ಆರಂಭವಾಯಿತೆಂದು ಹೇಳಬಹುದು.ಇದಕ್ಕೆ ಪೂರಕವಾಗಿ ತುಳು ಪಾಡ್ದನಗಳಲ್ಲಿ ಕುಮೇರ್ ಬೇಸಾಯದ ಪ್ರಸ್ತಾಪವು ದೊರಕುತ್ತದೆ.
ಕುಮೇರ್ ಬೆಳೆಯುವ ವಿಧಾನ: ಕುಮೇರ್ ಬೆಳೆಯುವ ಪ್ರದೇಶದ ಹುಡುಕಾಟವನ್ನು ತುಳುನಾಡಿನ ಗುಡ್ಡಗಾಡು ಜನರು ಮೊದಲು ನಡೆಸುತ್ತಿದ್ದರು. ಸಾಮಾನ್ಯವಾಗಿ ‘ಕೆಡ್ಡಸ’ (ಫೆಬ್ರವರಿ ತಿಂಗಳಲ್ಲಿ ಬರುವ ಹಬ್ಬ)ಗಿಂತ ಮೊದಲೇ ಈ ಬೇಸಾಯಕ್ಕೆ ಯೋಗ್ಯವಾದ ಕಾಡು ಪ್ರದೇಶವನ್ನು ಆಯ್ಕೆ ಮಾಡುತ್ತಿದ್ದರು. ನಂತರ ಆ ಪ್ರದೇಶದಲ್ಲಿರುವ ದೊಡ್ಡ ಮರಗಳ ರೆಂಬೆಕೊಂಬೆಗಳನ್ನು ಕತ್ತರಿಸುತ್ತಿದ್ದರು. ಕೆಳಭಾಗದಲ್ಲಿದ್ದ ಗಿಡಗಂಟಿಗಳನ್ನು ಕಡಿದು ಅಲ್ಲಲ್ಲಿ ‘ಮಾಪೆ’(ಒಟ್ಟು) ಸೇರಿಸುತ್ತಿದ್ದರು. ಸುಮಾರು ಒಂದು ತಿಂಗಳು ಕಳೆದ ನಂತರ ಆ ಪ್ರದೇಶಕ್ಕೆ ಬೆಂಕಿ ಹಾಕಿ ಎಲ್ಲಾ ಕಸಕಡ್ಡಿಗಳನ್ನು ಸುಡುತ್ತಿದ್ದರು. ಈ ರೀತಿ ಬೆಂಕಿ ಹಾಕಿ ೧೫ ದಿನ ಕಳೆದ ಬಳಿಕ, ಉರಿಯದೇ ಉಳಿದಿದ್ದ ಕಸಕಡ್ಡಿಗಳನ್ನು ಮತ್ತೆ ಮಾಪೆ ಹಾಕಿ ಉರಿಸುತ್ತಿದ್ದರು. ನಂತರ ಆ ಮಾಪೆ ಬೂದಿಯನ್ನು ಸುತ್ತಲೂ ಹರಡುತ್ತಿದ್ದರು. ಪಗ್ಗು ತಿಂಗಳಲ್ಲಿ ಬೀಳುವ ಪ್ರಥಮ ಮಳೆಯ ನಂತರ
ಕುಮೇರ್ ಒಕ್ಕುವ(ಅಗೆಯುವ) ಕೆಲಸ ನಡೆಯುತ್ತಿತ್ತು. ‘ಪರ್ವಾಯಿ’ ಎಂಬ ಮಣ್ಣು ಎಳೆಯುವ ಸಾಧನದಿಂದ ಕುಮೇರ್ ಮಣ್ಣನ್ನು ಎರಡು ಕಾಯುವ ಬಸೀಳಲಾಗುತ್ತಿತ್ತು. ಎತ್ತರವಾದ ಪ್ರದೇಶಗಳಲ್ಲಿ ಅಡ್ಡವಾಗಿಯೂ ಸಮತಟ್ಟು ಪ್ರದೇಶಗಳಲ್ಲಿ ಉದ್ದವಾಗಿಯೂ ಮಣ್ಣನ್ನು ಸೀಳಲಾಗುತ್ತಿತ್ತು. ಈ ಸೀಳಿದ ಕಣಿಯಲ್ಲಿ ಗೇಣಿಗೆ ಒಂದರಂತೆ ಬೀಜ ಬಿತ್ತುತ್ತಿದ್ದರು. ಈ ರೀತಿಯ ಬಿತ್ತನೆಯು ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ನಡೆಯುತ್ತಿತ್ತು. ಕುಮೇರ್ ಬಿತ್ತಿದ ನಂತರ ಒಟ್ಟು ಸ್ಥಳಕ್ಕೆ ಬೇಲಿ ಹಾಕುವ ಕೆಲಸವು ನಡೆಯುತ್ತಿತ್ತು. ಬಿತ್ತನೆ ಕಾರ್ಯ ನಡೆದು ಸುಮಾರು ೨೦, ೨೫ ದಿನಗಳೊಳಗೆ ನೇಜಿಗೆ ‘ಪಿಳ್ಳೆ’ ಬರಲು ಆರಂಭವಾಗುತ್ತಿತ್ತು. ಅದುವರೆಗೂ ಬಿತ್ತಿದ ಬೀಜವನ್ನು ಕಾಯುವ ಕೆಲಸವು ಅನಿವಾರ್ಯವಾಗಿರಲಿಲ್ಲ. ಆ ನಂತರ ಕುಮೇರ್ ರಕ್ಷಣೆಯ ಕೆಲಸವು ಬಹಳ ಅನಿವಾರ್ಯ.

(ಡಾ.ಸುಂದರ ಕೇನಾಜೆ ಅಂಕಣಕಾರರು, ಜಾನಪದ ಸಂಶೋಧಕರು)
















