ನವಿ ಮುಂಬೈ: ಕರ್ನಾಟಕದ ಶುಭಾ ಸತೀಶ್ ಸೇರಿದಂತೆ ನಾಲ್ವರು ಬ್ಯಾಟರ್ಗಳು ಅರ್ಧಶತಕ ಗಳಿಸಿದ ಫಲವಾಗಿ ಭಾರತ ಮಹಿಳಾ ಕ್ರಿಕೆಟ್ ತಂಡವು ಗುರುವಾರ ಇಂಗ್ಲೆಂಡ್ ವಿರುದ್ಧ ಆರಂಭವಾದ ಟೆಸ್ಟ್ ಪಂದ್ಯದ ಮೊದಲ ದಿನವೇ ದಾಖಲೆಯ ಮೊತ್ತ ಪೇರಿಸಿತು.ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ತಂಡವು ದಿನದಾಟದ ಮುಕ್ತಾಯಕ್ಕೆ 94 ಓವರ್ಗಳಲ್ಲಿ 7 ವಿಕೆಟ್ಗಳಿಗೆ 410 ರನ್ ಗಳಿಸಿತು.
ಪಂದ್ಯದ ಮೊದಲ ಹತ್ತು ಓವರ್ಗಳಾಗುವಷ್ಟರಲ್ಲಿಯೇ ಆರಂಭಿಕ
ಬ್ಯಾಟರ್ಗಳಾದ ಸ್ಮೃತಿ ಮಂದಾನ (17 ರನ್) ಮತ್ತು ಶಫಾಲಿ ವರ್ಮಾ (19 ರನ್) ಅವರು ಔಟಾದರು.ಸಂಕಷ್ಟದ ಸಂದರ್ಭದಲ್ಲಿ ಜೊತೆಯಾದ ಶುಭಾ (69; 76ಎ, 4X13) ಮತ್ತು ಜೆಮಿಮಾ ರಾಡ್ರಿಗಸ್ (68; 99ಎ, 4X11) ಇನಿಂಗ್ಸ್ಗೆ ಚೇತರಿಕೆ ನೀಡಿದರು. ಇವರಿಬ್ಬರೂ ಮೂರನೇ ವಿಕೆಟ್ ಜೊತೆಯಾಟದಲ್ಲಿ 125 ರನ್ ಸೇರಿಸಿದರು.ನಾಯಕಿ ಹರ್ಮನ್ಪ್ರೀತ್ ಕೌರ್ (49; 81ಎ) ಮತ್ತು ಯಷ್ಟಿಕಾ ಭಾಟಿಯಾ (66; 88ಎ, 4X10, 6X1) ಶತಕದ ಜೊತೆಯಾಟವಾಡಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ 116 ರನ್ ಸೇರಿಸಿ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು.ದೀಪ್ತಿ ಶರ್ಮಾ (ಬ್ಯಾಟಿಂಗ್ 60; 95ಎ, 4X9, 6X1) ಕೂಡ ಅರ್ಧಶತಕ ಬಾರಿಸಿದರು. ಅವರಿಗೆ ಸ್ನೇಹ ರಾಣ (30; 73ಎ) ಉತ್ತಮ ಜೊತೆ ನೀಡಿದರು. ಏಳನೇ ವಿಕೆಟ್ ಜೊತೆಯಾಟದಲ್ಲಿ 92 ರನ್ ಸೇರಿಸಿ ನಾಲ್ಕುನೂರರ ಗಡಿ ದಾಟಿಸಿದರು. ದಿನದಾಟದ ಮುಕ್ತಾಯಕ್ಕೆ ದೀಪ್ತಿ ಮತ್ತು ಪೂಜಾ ವಸ್ತ್ರಕರ್ (ಬ್ಯಾಟಿಂಗ್ 4) ಕ್ರೀಸ್ನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ: 94 ಓವರ್ಗಳಲ್ಲಿ 7 ವಿಕೆಟ್ಗಳಿಗೆ 410 (ಶುಭಾ ಸತೀಶ್ 69, ಜೆಮಿಮಾ ರಾಡ್ರಿಗಸ್ 68, ಹರ್ಮನ್ಪ್ರೀತ್ ಕೌರ್ 49, ಯಷ್ಟಿಕಾ ಭಾಟಿಯಾ 66, ದೀಪ್ತಿ ಶರ್ಮಾ ಬ್ಯಾಟಿಂಗ್ 60, ಸ್ನೇಹಾ ರಾಣಾ 30, ಲಾರೆನ್ ಬೆಲ್ 64ಕ್ಕೆ2)










