ಹ್ಯಾಂಗ್ ಝೌ: ಏಷ್ಯನ್ ಗೇಮ್ಸ್ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಗೆದ್ದುಕೊಂಡಿದೆ. ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 19 ರನ್ಗಳಿಂದ ಗೆಲುವು ಸಾಧಿಸಿ ಚಿನ್ನಕ್ಕೆ ಕೊರಳೊಡ್ಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ
ಭಾರತವು 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 116 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಶ್ರೀಲಂಕಾ 20 ಓವರ್ನಲ್ಲಿ ಎಂಟು ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಭಾರತದ ಪರ ಸ್ಮೃತಿ ಮಂಧನಾ 46 ರನ್ ಮತ್ತು ಜೆಮಿಮಾ ರೋಡ್ರಿಗಸ್ 42 ರನ್ ಗಳಿಸಿ ಆಸರೆಯಾದರು. ಆದರೆ ಬಳಿಕ ಭಾರತ ಸತತ ವಿಕೆಟ್ ಕಳೆದುಕೊಂಡಿತು. ಹೀಗಾಗಿ ನಿರೀಕ್ಷಿತ ಮೊತ್ತ ಬರಲಿಲ್ಲ. ಲಂಕಾ ಪರ ಪ್ರಬೋಧನಿ, ಸುಗಂಧಿಕಾ ಕುಮಾರಿ ಮತ್ತು ರಣವೀರ ತಲಾ ಎರಡು ವಿಕೆಟ್ ಕಿತ್ತರು.ಗುರಿ ಬೆನ್ನತ್ತಿದ ಲಂಕಾ 14 ರನ್ ಆಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಹಾಸಿನಿ ಪೆರೆರಾ 25 ರನ್, ನೀಲಾಕ್ಷಿ ಡಿಸಿಲ್ವಾ 23 ರನ್ ಮತ್ತು ಒಶಾಡಿ ರಣಸಿಂಘೆ 19 ರನ್ ಗಳಿಸಿದರೂ ತಂಡಕ್ಕೆ ಜಯ ಒದಗಿಸಲು ಸಾಧ್ಯವಾಗಲಿಲ್ಲ.
ಭಾರತದ ಪರ ಟಿಟಾಸ್ ಸಂಧು ಮೂರು ವಿಕೆಟ್ ಪಡೆದರೆ, ರಾಜೇಶ್ವರಿ ಎರಡು ಮತ್ತು ದೀಪ್ತಿ, ಪೂಜಾ ವಸ್ತ್ರಾಕರ್ ಮತ್ತು ದೇವಿಕಾ ವೈದ್ಯ ತಲಾ ಒಂದು ವಿಕೆಟ್ ಕಿತ್ತರು.