ಮುಂಬೈ: ವೆಸ್ಟ್ ಇಂಡೀಸ್ ತಂಡವು ಟಿ20 ವಿಶ್ವಕಪ್ ಸೂಪರ್ 8ರ ಹಂತದ ಪಂದ್ಯದಲ್ಲಿ 107 ರನ್ಗಳಿಂದ ಜಿಂಬಾಬ್ವೆ ತಂಡವನ್ನು ನಿರಾಯಾಸವಾಗಿ ಮಣಿಸಿತು.ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ವಿಂಡೀಸ್ ತಂಡವು ಶಿಮ್ರಾನ್ ಹೆಟ್ಮೆಯರ್ (85;34ಎ, 4×7, 6×7) ಮತ್ತು ರೋವ್ಮನ್ ಪಾವೆಲ್ (59;35ಎ, 4×4, 6×4) ಅವರ ಸಿಡಿಲಬ್ಬರ್ ಬ್ಯಾಟಿಂಗ್ ಬಲದಿಂದ 6 ವಿಕೆಟ್ಗೆ 254 ರನ್ಗಳ ಬೃಹತ್ ಮೊತ್ತ ಪೇರಿಸಿತು. ಇದು ವಿಶ್ವಕಪ್ ಇತಿಹಾಸದಲ್ಲೇ
ಎರಡನೇ ಅತ್ಯಧಿಕ ಮೊತ್ತ ಎನಿಸಿತು.ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ 17.4 ಓವರ್ಗಳಲ್ಲಿ 147 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಸ್ಪಿನ್ನರ್ಗಳಾದ ಗುಡಕೇಶ್ (28ಕ್ಕೆ 4) ಮತ್ತು ಅಕೇಲ್ ಹುಸೇನ್ (28ಕ್ಕೆ 3) ಅವರು ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಒಂದನೇ ಗುಂಪಿನಲ್ಲಿ ವಿಂಡೀಸ್ ತಂಡವು ಅಗ್ರಸ್ಥಾನಕ್ಕೇರಿತು. ಸಿಕಂದರ್ ರಝಾ ಪಡೆಯು ಯಾವುದೇ ಹಂತದಲ್ಲಿ ದಿಟ್ಟ ಹೋರಾಟ ತೋರಲಿಲ್ಲ. 20 ರನ್ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಡಿಯೋನ್ ಮೈಯರ್ಸ್ (28) ಮತ್ತು ನಾಯಕ ಸಿಕಂದರ್ ರಝಾ (27) ಕೊಂಚ ಚೇತರಿಕೆ ನೀಡಿದರು. ನಂತರದಲ್ಲಿ ಬ್ರಾಡ್ ಇವಾನ್ಸ್ (43;21ಎ) ಹೋರಾಟ ನಡೆಸಿದರು. ಅವರು ರಿಚಾರ್ಡ್ ಎನ್ಗವಾರ (ಔಟಾಗದೇ 7) ಜೊತೆ 10ನೇ ವಿಕೆಟ್ಗೆ 45 ರನ್ ಸೇರಿಸಿದ್ದು, ಇನಿಂಗ್ಸ್ನ ಅತಿ ದೊಡ್ಡ ಜೊತೆಯಾಟ ಎಸಿಸಿತು.
ಇದಕ್ಕೂ ಮುನ್ನ ಹೆಟ್ಮೆಯರ್ ಅವರು ಜಿಂಬಾಬ್ವೆ ದಾಳಿಯನ್ನು ಹಿಗ್ಗಾಮುಗ್ಗಾ ದಂಡಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಿದ ಅವರು ಕೇವಲ 19 ಎಸೆತಗಳಲ್ಲೇ ಅರ್ಧಶತಕ ತಲುಪಿದರು.
ಹೆಟ್ಮೆಯರ್ ಅವರಿಗೆ ರೋವ್ಮನ್ ಪಾವೆಲ್ ಸಮರ್ಥ ಬೆಂಬಲ ನೀಡಿದರು. ಇವರಿಬ್ಬರು ಮೂರನೇ ವಿಕೆಟ್ಗೆ ಕೇವಲ 52 ಎಸೆತಗಳಲ್ಲಿ 122 ರನ್ ಜೊತೆಯಾಟವಾಡಿದರು. ಕೊನೆಯಲ್ಲಿ ಶೆರ್ಫೇನ್ ರುದರ್ಫೋರ್ಡ್ (ಅಜೇಯ 31; 13ಎ), ರೊಮಾರಿಯೊ ಶೆಫರ್ಡ್ (21;10ಎ), ಜೇಸನ್ ಹೋಲ್ಡರ್ (13;4 ಎ) ಅವರು ತಂಡ 250 ಗಡಿದಾಟಲು ನೆರವಾದರು.ವೆಸ್ಟ್ ಇಂಡೀಸ್ ಇನಿಂಗ್ಸ್ನಲ್ಲಿ 19 ಸಿಕ್ಸರ್ಗಳಿದ್ದವು.






