*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಈ ಶಾಲಾ ಅಂಗಳಕ್ಕೆ ಬಂದರೆ ನೋಡುಗರನ್ನು ಶಾಲಾ ಗೋಡೆಗಳು ಕೈ ಬೀಸಿ ಕರೆಯುತಿದೆ… ಕಲೆಯ ಸೊಬಗನ್ನು ಆಸ್ವಾದಿಸಿ ಒಳಗೆ ಬಾ ಯಾತ್ರಿಕನೆ ಎಂದು ಸ್ವಾಗತಿಸುತಿದೆ… ಇದು ಗಡಿ ಪ್ರದೇಶ ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಕಲಾ ಸೊಬಗು. ಈ ಅಕ್ಷರ ದೇಗುಲ ಈಗ ವರ್ಲಿ ವರ್ಣ ವೈಭವದಿಂದ ಕಂಗೊಳಿಸುತಿದೆ. ಈ ಸುಂದರ ವರ್ಲಿ ಚಿತ್ರಗಳು
ವಿದ್ಯಾರ್ಥಿಗಳ ಕೈ ಚಳಕದಲ್ಲಿ ಅರಳಿದೆ ಎಂದರೆ ನೋಡುಗರ ಕಣ್ಣು, ಮುಖ, ಮನಸ್ಸು ಇನ್ನಷ್ಟು ಅರಳುತ್ತದೆ.
ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್)ಯ ವಿದ್ಯಾರ್ಥಿಗಳ ವಾರ್ಷಿಕ ವಿಶೇಷ ಶಿಬಿರ ಒಂದು ವಾರಗಳ ಕಾಲ ಮಂಡೆಕೋಲು ಶಾಲೆಯಲ್ಲಿ ನಡೆಯಿತು. ಈ ಶಿಬಿರದಲ್ಲಿ ಶಾಲೆಯಲ್ಲಿ ಶ್ರಮದಾನ ಸೇರಿ ವಿವಿಧ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳು ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದಿದ್ದಾರೆ. ಶಾಲಾ ಹೊರಾಂಗಣ ಗೋಡೆಯಲ್ಲಿ ವರ್ಲಿ ಚಿತ್ರ ಕಲೆಯ ಅದ್ಭುತ ಲೋಕವನ್ನು ಸೃಷ್ಠಿಸಿದ್ದಾರೆ.

ವಿದ್ಯಾರ್ಥಿಗಳು ತಾವು ಬಿಡಿಸಿದ ವರ್ಲಿ ಚಿತ್ರದ ಮುಂದೆ
ಕಾಲೇಜಿನ ಎನ್ಎಸ್ಎಸ್ ಘಟಕದ 100 ಮಂದಿ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಇದರಲ್ಲಿ 11 ಮಂದಿ ವಿದ್ಯಾರ್ಥಿಗಳು ಶಾಲಾ ಗೋಡೆಯಲ್ಲಿ ವರ್ಲಿ ಚಿತ್ರ ಬಿಡಿಸುವ ಮೂಲಕ ಶಿಬಿರದ ನೆನಪು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ.
ವಿದ್ಯಾರ್ಥಿ ಹಿತೇಶ್ ನೇತೃತ್ವದಲ್ಲಿ ಸುಜಿಲ್,ಅಮೂಲ್ಯ, ಪ್ರಿಯಾ, ಹೇಮಂತ್, ಭರತ್, ಧನುಷ್, ಪವನ್, ಚೈತನ್, ಶಿವರಾಮ ಹಾಗೂ ದೀಕ್ಷಿತ್ ವರ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ. ವಾರದ ಕಾಲ ಬೆಳಿಗ್ಗೆ 9 ರಿಂದ ರಾತ್ರಿ 11 ಗಂಟೆಯ ತನಕ ನಿರಂತರ ಶ್ರಮ ವಹಿಸಿ ಶಾಲಾ ಗೋಡೆಯಲ್ಲಿ 25 ವೈವಿಧ್ಯಮಯ ಚಿತ್ರಗಳನ್ನು ಅರಳಿಸಿದ್ದಾರೆ. ಈ ಕಲೆಯ ಬಗ್ಗೆ ಯಾವುದೇ ತರಬೇತಿ ಪಡೆಯದೆ ಸ್ವಯಂ ಕರಗತ ಮಾಡಿಕೊಂಡ ವರ್ಲಿ ಕಲೆಯನ್ನು ವಿದ್ಯಾರ್ಥಿಗಳು ಇಲ್ಲಿ ಬಿಡಿಸಿದ್ದಾರೆ. ಇದು ಇವರ ಪ್ರಥಮ ಪ್ರಯೋಗ.

ಕೃಷಿ ಬದುಕು, ಜಾತ್ರೆ, ಹಳ್ಳಿಯ ಚಿತ್ರಣ, ಶಾರದಾ ದೇವಿಯ ಚಿತ್ರ, ಮೀನುಗಾರಿಕೆ, ಜಾನಪದ ನೃತ್ಯಗಳು, ಶಾಲಾ ಚಿತ್ರಣ, ಅಕ್ಷರ ದಾಸೋಹ ಹೀಗೆ ವೈವಿಧ್ಯಮಯ ಚಿತ್ರಣಗಳು ಇಲ್ಲಿ ಅರಳಿದೆ. ಶಾಲಾ ಗೋಡೆ ಹಾಗೂ ಕಂಬಗಳಿಗೆ ಸುಣ್ಣ ಬಣ್ಣ ಬಳಿದು ಸುಂದರಗೊಳಿಸಿ, ಆಯಿಲ್ ಪೆಯಿಂಟ್ ಬಳಸಿ ಚಿತ್ರಗಳನ್ನು ಬಿಡಿಸಿ ಜ್ಞಾನ ದೇಗುಲವನ್ನು ಶೃಂಗರಿಸಿದ್ದಾರೆ.
ವರ್ಲಿ ಕಲೆಯ ಸೊಬಗು:
ವರ್ಲಿ ಕಲೆಯು ಗೋಡೆಗಳನ್ನು ಸುಂದರಗೊಳಿಸುವುದು ಸೇರಿದಂತೆ ವಿವಿಧೆಡೆ ಮನ ಸೆಳೆಯುವ ಅದ್ಭುತ ಕಲೆ. ಮಹಾರಾಷ್ಟ್ರ ರಾಜ್ಯದ ವಾರ್ಲಿ ಜನಾಂಗದಿಂದ ಉಗಮವಾದ ಒಂದು ಜನಪದ ಚಿತ್ರಕಲೆ. ಇದು ಭಾರತದ ಅತ್ಯಂತ ಹಳೆಯ ಕಲೆಯಾಗಿದ್ದು ಸುಮಾರು 2500–3000 ವರ್ಷಗಳ ಇತಿಹಾಸವಿದೆ. ಸಾಮಾನ್ಯವಾಗಿ ಕೆಂಪು ಮಣ್ಣಿನ ಹಿನ್ನೆಲೆಯ ಮೇಲೆ ಬಿಳಿ ಬಣ್ಣದಲ್ಲಿ ಚಿತ್ರಿಸುತ್ತಾರೆ.
ಪ್ರಕೃತಿ ಆಧಾರಿತ ಚಿತ್ರಗಳು, ಕೃಷಿ, ಹಬ್ಬಗಳು, ನೃತ್ಯ, ಬೇಟೆ, ಮದುವೆ ಮತ್ತು ದೈನಂದಿನ ಜೀವನದ ದೃಶ್ಯಗಳನ್ನು ವರ್ಲಿ ಮೂಲಕ ಚಿತ್ರಿಸುತ್ತಾರೆ. ಸರಳವಾದರೂ ಅರ್ಥಪೂರ್ಣ ಕಲೆಯಾಗಿದೆ.ಇಂದಿಗೂ ಗೋಡೆ ಚಿತ್ರಗಳು, ಬಟ್ಟೆಗಳು ಮತ್ತು ಅಲಂಕಾರ ವಸ್ತುಗಳಲ್ಲಿ ಬಳಸಲಾಗುತ್ತಿದೆ.
ವರ್ಲಿ ಕಲೆ ಪ್ರಕೃತಿ ಮತ್ತು ಮಾನವನ ಸಂಬಂಧವನ್ನು ಸುಂದರವಾಗಿ ತೋರಿಸುವ ಒಂದು ಅನನ್ಯ ಜನಪದ ಕಲೆಯಾಗಿದೆ.

ಮಂಡೆಕೋಲು ಶಾಲಾ ಹೊರಾಂಗಣ ಗೋಡೆಯಲ್ಲಿ ವರ್ಲಿ ಚಿತ್ರ ಬಿಡಿಸಿದ ವಿದ್ಯಾರ್ಥಿಗಳ ಜೊತೆ ಎನ್ಎಸ್ಎಸ್ ಶಿಬಿರಾಧಿಕಾರಿಗಳಾದ ಕಿಶೋರ್ ಕುಮಾರ್, ಡಾ.ಮೋನಿಷ, ಮಂಡೆಕೋಲು ಶಾಲಾ ಮುಖ್ಯ ಶಿಕ್ಷಕಿ ಮಂಜುಳ ಅತ್ಯಾಡಿ, ಎಸ್ಡಿಎಂಸಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಮತ್ತಿತರರು.
ಕಾಲೇಜಿನ ಎನ್ಎಸ್ಎಸ್ ಘಟಕ 1ರ ಶಿಬಿರಾಧಿಕಾರಿ ಕಿಶೋರ್ ಕುಮಾರ್ ಬಿ.ಡಿ, ಎನ್ಎಸ್ಎಸ್ ಘಟಕ 2ರ ಶಿಬಿರಾಧಿಕಾರಿ ಡಾ.ಮೋನಿಷಾ.ಕೆ, ಸಹಶಿಬಿರಾಧಿಕಾರಿಗಳಾದ ಬಾಲಕೃಷ್ಣ ಮೇನಾಲ, ರಾಮಕೃಷ್ಣ ಕೆ.ಎಸ್.ಅವರ ನೇತೃತ್ವದಲ್ಲಿ100 ಮಂದಿ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ ಚಿತ್ರಕಲೆ ಮಾತ್ರವಲ್ಲದೆ ಶಾಲಾ ಕೈ ತೋಟ ರಚನೆ, ತರಕಾರಿ ಕೈತೋಟ ರಚನೆ, ಉದ್ಯಾನವನದ ಸ್ವಚ್ಚತೆ, ಚರಂಡಿ ದುರಸ್ತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತಿತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್.ಎನ್.ಪಿ, ಮಂಡೆಕೋಲು ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ಅತ್ಯಾಡಿ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಮತ್ತಿತರರು ಶಿಬಿರಕ್ಕೆ ಸಹಕಾರ ನೀಡಿದರು.

‘ಮಂಡೆಕೋಲು ಶಾಲೆಯಲ್ಲಿ ನಡೆದ ಮೂರನೇ ಎನ್ಎಸ್ಎಸ್ ಶಿಬಿರ ಇದು. ಇದುವರೆಗೆ ನಡೆದ ಶಿಬಿರಗಳಲ್ಲಿ ಅತ್ಯಂತ ಉತ್ತಮವಾದ ಶಿಬಿರ, ವಿದ್ಯಾರ್ಥಿಗಳು ಶಿಸ್ತು, ಬದ್ಧತೆ ತುಂಬಾ ಉತ್ತಮವಾಗಿತ್ತು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಶಾಲಾ ಗೋಡೆಯಲ್ಲಿ ವರ್ಲಿ ಕಲೆ ಅರಳಿಸಿ ಶಾಲೆಯನ್ನು ಸುಂದರಗೊಳಿಸಿರುವುಸು ಎಲ್ಲರಿಗೂ ಖುಷಿ ಕೊಟ್ಟಿದೆ ಮತ್ತು ಮೆಚ್ಚುಗೆ ಗಳಿಸಿದೆ.
-ಸುರೇಶ್ ಕಣೆಮರಡ್ಕ
ಅಧ್ಯಕ್ಷರು. ಎಸ್ಡಿಎಂಸಿ
ಮಂಡೆಕೋಲು ಹಿರಿಯ ಪ್ರಾಥಮಿಕ ಶಾಲೆ.











