ಸುಳ್ಯ:ಸುಳ್ಯ ಹಳೆಗೇಟಿನ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ 24 ನೇ ವರ್ಷದ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರ ಉದ್ಘಾಟನೆಗೊಂಡಿತು. ಗುರುಕುಲ ಮಾದರಿಯಲ್ಲಿ ಮೇ.19ರ ತನಕ ಒಂದು ತಿಂಗಳ ಕಾಲ ನಡೆಯುವ ಶಿಬಿರವನ್ನು ಯುಎಸ್ಎಯ ವಿದ್ವಾನ್ ರೂಪೇಶ್ ಆಚಾರ್ಯ ಮತ್ತು ಶ್ರೀಮತಿ ಶ್ರುತಿ ರೂಪೇಶ್ ಆಚಾರ್ಯ ಉದ್ಘಾಟಿಸಿದರು. ವಿದ್ವಾನ್ ರೂಪೇಶ್ ಆಚಾರ್ಯ ಮಾತನಾಡಿ’ಮನೆಯನ್ನೇ
ಮಠವನ್ನಾಗಿಸಿ ಜಗತ್ತಿಗೆ ಬೆಳಕು ನೀಡುವ ನಾಗರಾಜರ ಭಟ್ಟರ ಪ್ರಯತ್ನ ಮಹತ್ತರವಾದುದು ಎಂದು ಹೇಳಿದರು. ಪ್ರೀತಿ ಮಮತೆಯನ್ನು ಬೆರೆಸಿ ಯುವ ತಲೆಮಾರಿಗೆ ಸಂಸ್ಕಾರವನ್ನು ನೀಡುವ ಅವರ ಪ್ರಯತ್ನ ಶ್ಲಾಘನೀಯವಾದುದು. ಅವರ ಕೇಶವ ಕೃಪಾ ವಿದ್ಯಾ ಕೇಂದ್ರ ವಿಶ್ವ ವಿದ್ಯಾಪೀಠ ವಾಗಿ ಬೆಳಗಲಿ ಎಂದು ಆಶಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಮಂಕು ತಿಮ್ಮನ ಕಗ್ಗದ ಪ್ರವಚನಕಾರರಾದ ವಿದ್ವಾನ್ ಜಿ.ಎಸ್.ನಟೇಶ್ ಶಿವಮೊಗ್ಗ ವೇದಗಳು, ಉಪನಿಷತ್ತುಗಳು, ಪುರಾಣಗಳು ಭಾರತದ ಆತ್ಮ. ವೇದಗಳು, ಉಪನಿಷತ್ತುಗಳು, ಭಗವದ್ಗೀತೆ, ರಾಮಾಯಣ, ಮಹಾ ಭಾರತ ಇವೇ ಭಾರತದ ಸಮಗ್ರ ಸಂಪತ್ತು.ಇವುಗಳು ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಭಾರತೀಯ ಸಂಸ್ಕೃತಿ, ಪರಂಪರೆಗೆ ಇವುಗಳೇ ಮೂಲ. ನಮ್ಮ ಮಾತು ಸಂಸ್ಕಾರವನ್ನು ತಿಳಿಸುತ್ತದೆ,ವಸಂಸ್ಕಾರಯುತ ಮಾತಿನಿಂದ ಜಗತ್ತನ್ನು ಗೆಲ್ಲಬಹುದು.ಅಂತಹಾ ಸಂಸ್ಕಾರವನ್ನು ಈ ವೇದ ಶಿಬಿರ ಮಕ್ಕಳಿಗೆ ಕಲಿಸಿ ಕೊಡುತ್ತದೆ ಎಂದರು

ಶ್ರೀ ಕೇಶವಕಿರಣ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೇಶವ ಕೃಪಾ ವೇದ ಯೋಗ ಕಲಾ ಶಿಬಿರದ ಸಂಚಾಲಕರಾದ ವೇ. ಮೂ. ಅಭಿರಾಮ ಶರ್ಮ ಮಾತನಾಡಿ ವೇದಗಳನ್ನು ಅರ್ಥೈಸಿಕೊಂಡಾಗ ನಮ್ಮ ಆಚಾರ ವಿಚಾರಗಳು, ಸಂಸ್ಕಾರ, ಜೀವನ ಪರಿಶುದ್ಧವಾಗುತ್ತದೆ.ವೇದಗಳು, ಕಲೆಗಳನ್ನು ಕಲಿತರೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಬದುಕು ಪಾವನವಾಗುತ್ತದೆ ಎಂದು ಹೇಳಿದರು.

ಪ್ರಗತಿಪರ ಕೃಷಿಕರು ಹಾಗೂ ಶಿಬಿರದ ಹಿರಿಯ ವಿದ್ಯಾರ್ಥಿ ಸುಬ್ರಹ್ಮಣ್ಯ ಭಟ್ ತೊಂಡೆಮೂಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದರು.
ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಸ್ವಾಗತಿಸಿ, ಶ್ರೀದೇವಿ ನಾಗರಾಜ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಕ್ಷತಾ ಹಾಗೂ ಶ್ರೀದೇವಿ ನಾಗರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.

ಗುರುಕುಲ ಮಾದರಿಯಲ್ಲಿ ಒಂದು ತಿಂಗಳ ಕಾಲ ನಡೆಯುವ ಉಚಿತ ವೇದ,ಯೋಗ ಕಲಾ ಶಿಬಿರದ ವಿದ್ಯಾರ್ಥಿಗಳಿಗೆ ವಸ್ತ್ರ, ಪುಸ್ತಕ, ವ್ಯಾಸಪೀಠ, ಉತ್ತರೀಯವನ್ನು ನೀಡಲಾಯಿತು. ಕೇರಳ, ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ 207 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.







