ಬೆಂಗಳೂರು:ರಾಜ್ಯದ ನೂತನ ಸ್ಪೀಕರ್ ಕುರಿತ ಚರ್ಚೆಗಳು ನಡೆಯುತ್ತಿದ್ದು ಸ್ಪೀಕರ್ ಸ್ಥಾನಕ್ಕೆ ಕರಾವಳಿಯ ಹಿರಿಯ ಶಾಸಕರಾದ ಯು.ಟಿ.ಖಾದರ್ ಅವರ ಹೆಸರು ಮುಂಚೂಣಿಗೆ ಬಂದಿದೆ.ಯು.ಟಿ. ಖಾದರ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ವರದಿಯಾಗಿದೆ. ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ ಹಾಗೂ
ಎಚ್.ಕೆ. ಪಾಟೀಲ್ ಇವರಲ್ಲಿ ಒಬ್ಬರು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಆಗುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಯು.ಟಿ. ಖಾದರ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಆರಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಯು.ಟಿ ಖಾದರ್ಗೆ ಕರೆ ಮಾಡಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲು ಮನವಿ ಮಾಡಿದ್ದಾರೆ. ನಂತರ ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ಮಾಡಿದ್ದು, ಬಹುತೇಕ ಫೈನಲ್ ಆಗಿದೆ ಎನ್ನಲಾಗಿದೆ. ಇಂದು ವಿಧಾನಸಭೆಯಲ್ಲಿ ಸಭಾಧ್ಯಕ್ಷ ಸ್ಥಾನಕ್ಕೆ ಯು.ಟಿ. ಖಾದರ್ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದ್ದು ಅವಿರೋಧ ಆಯ್ಕೆ ಸಾಧ್ಯತೆಗಳಿವೆ. ಮಂಗಳೂರು ಕ್ಷೇತ್ರದಿಂದ ಐದನೇ ಬಾರಿ ಶಾಸಕರಾಗಿ ಆಯ್ಕೆಯಾದ ಯು.ಟಿ.ಖಾದರ್ ಅವರು ಈ ಹಿಂದೆ ಸಚಿವರಾಗಿ ಆರೋಗ್ಯ ಖಾತೆ, ಆಹಾರ ಮತ್ತು ನಾಗರಿಕ ಸರಬರಾಜು, ನಗರಾಭಿವೃದ್ಧಿ ಮತ್ತಿತರ ಖಾತೆಗಳನ್ನು ನಿರ್ವಹಿಸಿದ್ದರು. ಕಳೆದ ವಿಧಾನಸಭೆಯಲ್ಲಿ ವಿಪಕ್ಷ ಉಪನಾಯಕರಾಗಿದ್ದರು.