ಸುಳ್ಯ: ಕಳೆದ ವರ್ಷ ಮಳೆಗಾಲದಲ್ಲಿ ನದಿಗಳು ತುಂಬಿ ಹರಿದಾಗಲೆಲ್ಲ ಕಲ್ಲುಗುಂಡಿ ಪೇಟೆ ಸೇರಿ ಸಂಪಾಜೆ ಗ್ರಾಮದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಭಾರೀ ಪ್ರಮಾಣದಲ್ಲಿ ಜನರ ಆಸ್ತಿ ಪಾಸ್ತಿ ನಷ್ಟ ಉಂಟಾಗಿತ್ತು. ನದಿಯಲ್ಲಿ ತುಂಬಿದ ಮರಳು, ಹೂಳು ತೆಗೆಯಬೇಕೆಂದು ಊರ ಜನತೆ ಹತ್ತಾರು ಬಾರಿ ಬೇಡಿಕೆ ಇಟ್ಟರೂ ಹೂಳೆತ್ತುವ ಗೋಜಿಗೆ ಇಲಾಖೆ, ಸರಕಾರ ಹೋಗಿಲ್ಲ. ಇದೀಗ ಮತ್ತೆ ಮಳೆಗಾಲ ಹತ್ತಿರ ಬಂದಿದ್ದು ಜನರ ಆತಂಕ ಮುಗಿಲು ಮುಟ್ಟಿದೆ. ಸಂಪಾಜೆ, ಕಲ್ಲುಗುಂಡಿಯನ್ನು ಪ್ರಳಯ ಭೀತಿಯಿಂದ
ಪಾರು ಮಾಡಲು ನದಿಯಲ್ಲಿ ತುಂಬಿರುವ ಮರಳು, ಹೂಳುಗಳನ್ನು ತೆರವು ಮಾಡಬೇಕು. ಕಲ್ಲುಗುಂಡಿ ಪೇಟೆಗೆ ಪ್ರಳಯ ಜಲ ನುಗ್ಗದಂತೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂಬುದು ಜನರ ಬೇಡಿಕೆ. ಆದರೆ ಎರಡೂ ಕೈಗೂಡಲಿಲ್ಲ. 2018ರಲ್ಲಿ ಜೋಡುಪಾಲದಲ್ಲಿ ಉಂಟಾದ ಜಲಪ್ರಳಯದಲ್ಲಿ ಕೊಚ್ಚಿ ಬಂದ ಮಣ್ಣು, ಮರಳು, ಹೂಳು, ಬಳಿಕದ ಪ್ರತಿ ವರ್ಷ ಮಳೆಗಾಲದಲ್ಲಿ ಧುಮುಕಿ ಹರಿಯುವ ನದಿಯಲ್ಲಿ ಕೊಚ್ಚಿ ಬರುವ ಮಣ್ಣು, ಮರಳು ತುಂಬಿ ನದಿಯ ಹೊಂಡಗಳೆಲ್ಲಾ ತುಂಬಿ ಹೋಗಿದೆ. ಇದರ ಪರಿಣಾಮವಾಗಿ ನದಿಯ ಒಡಲು ತುಂಬಿದ್ದು ಜನವಸತಿ ಪ್ರದೇಶಕ್ಕೆ,

ನದಿಯಲ್ಲಿ ಮರಳು ತುಂಬಿರುವುದು
ಪೇಟೆ, ಕೃಷಿ ಭೂಮಿಗೆ ಸಮಾನಾಂತರವಾಗಿದೆ. ಮಳೆಗಾಲದಲ್ಲಿ ನದಿಯಲ್ಲಿ ನೀರು ಉಕ್ಕಿದಾಗ ಕಲ್ಲುಗುಂಡಿ ಪೇಟೆಗೆ, ಮನೆ, ಅಂಗಡಿಗಳಿಗೆ ನೀರು ನುಗ್ಗಿ ನಾಶ ಉಂಟು ಮಾಡುತ್ತದೆ. ಗದ್ದೆ ತೋಟಗಳಿಗೆ ನುಗ್ಗುವ ನೀರು ಕೃಷಿಯನ್ನು ಆಫೋಷನ ತೆಗೆದುಕೊಳ್ಳುತ್ತಿದೆ. ಕಳೆದ ವರ್ಷ ಹತ್ತಾರು ಬಾರಿ ಪೇಟೆಗೆ, ಕೃಷಿ ಭೂಮಿಗೆ ಮನೆಗಳಿಗೆ ನುಗ್ಗಿದ ನೀರು ಕೋಟ್ಯಾಂತರ ರೂ ನಷ್ಟ ಮಾಡಿದೆ. ಹತ್ತಾರು ದಿನ ಜನರ ನಿದ್ದೆಗೆಡಿಸಿದೆ. ಇಷ್ಟು ದೊಡ್ಡ ನಷ್ಟಕ್ಕೆ ಹೇಳಿಕೊಳ್ಳುವಂತಹಾ ಯಾವುದೇ ಪರಿಹಾರ ಸಿಕ್ಕಿಲ್ಲಾ ಎಂದು ಮಾತ್ರವಲ್ಲಾ ನದಿಯ ಹೂಳು, ಮರಳು ತೆಗೆಯಿರಿ ಎಂದು ಗ್ರಾಮಸ್ಥರು ಹಲವು ಬಾರಿ ಸಚಿವರುಗಳು ಸೇರಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಬೇಡಿಕೆಯಿಟ್ಟರೂ ಸರಕಾರ, ಸಂಬಂಧಪಟ್ಟವರು ಸ್ಪಂದಿಸಿಲ್ಲ. ಇದೀಗ

ಮತ್ತೊಂದು ಮಳೆಗಾಲ ಸಮೀಪಿಸಿದ್ದು ಮತ್ತೆ ಪ್ರಳಯ ಭೀತಿಯಲ್ಲಿ ಒಂದು ನಾಡು ದಿನ ಕಳೆಯುವಂತಾಗಿದೆ. ನದಿಯ ಹೂಳು, ಮರಳು ತೆಗೆಯಬೇಕು ಎಂದು ಕಳೆದ ವರ್ಷ ಆಗಷ್ಟ್ ತಿಂಗಳಿನಿಂದ ನಾಡಿನ ಪ್ರಮುಖರು ಆರಂಭಿಸಿದ ಪ್ರಯತ್ನ, ಅಭಿಯಾನಕ್ಕೆ ಇನ್ನೂ ಫಲ ಸಿಕ್ಕಿಲ್ಲ. ಜನರ ಸಹಿ ಸಮೇತ ಮನವಿ, ಎಲ್ಲಾ ವಿವರಗಳನ್ನೂ ದಾಖಲೆಗಳನ್ನು ಸಲ್ಲಿಸಲಾಗಿದೆ. ಮಾರ್ಚ್ ತಿಂಗಳಲ್ಲಿ ಜಿಲ್ಲಾಧಿಕಾರಿಗೆ ಮತ್ತೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಕಂದಾಯ, ಗಣಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಸ್ಥಳದ ಡ್ರೋನ್ ಸರ್ವೆ ನಡೆಸಿ, ವಿಡೀಯೋ, ಫೋಟೋ ಹಾಗು ನಕ್ಷೆಗಳನ್ನು ಊರಿನವರೇ ಸಿದ್ಧಪಡಿಸಿ ಅಧಿಕಾರಿಗಳಿಗೆ ನೀಡಿದ್ದರು. ಬಳಿಕ ಗಣಿ ಇಲಾಖೆ ಮತ್ತಿತರ ವಿವಿಧ ಇಲಾಖೆಗಳ ಅಧಿಕಾರಿಗಳು ಆಗಮಿಸಿ ಜಂಟಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಆದರೆ ಮಳೆಗಾಲ ಆರಂಭವಾದರೂ ಮರಳು, ಹೂಳು ಎತ್ತಲು ಯಾವುದೇ ಕ್ರಮ ಕೈಗೊಂಡಿಲ್ಲ. ವರದಿ, ಸಮೀಕ್ಷೆಗಳು ಕಡತದಲ್ಲೇ ಹುದುಗಿ ಹೋಗಿದೆ.

ಜಂಟಿ ಸಮೀಕ್ಷಾ ಶಿಫಾರಸ್ಸು ಏನು:
ಜಂಟಿ ಸಮೀಕ್ಷಾ ತಂಡವು ಹಲವು ಶಿಫಾರಸ್ಸುಗಳನ್ನು ನೀಡಿದ್ದು ಮರಳು, ಹೂಳು ಎತ್ತುವುದು ಅನಿವಾರ್ಯ ಎಂದು ಸೂಚಿಸಿದೆ.
ನದಿಯ ನೀರು ಸರಾಗವಾಗಿ ಹರಿಯಲು ನದಿ ಪಾತ್ರದಲ್ಲಿ ತುಂಬಿರುವ ಚರಳು ಮಿಶ್ರಿತ ಮರಳು ದಿಬ್ಬಗಳನ್ನು ತೆರವುಗೊಳಿಸಬೇಕಾಗಿರುತ್ತದೆ.
ಸಂಪಾಜೆ, ಗ್ರಾಮದಲ್ಲಿ ಪಯಸ್ವಿನಿ ನದಿ ಪಾತ್ರವು ರಾಷ್ಟ್ರೀಯ ಹೆಬ್ಬಾರಿ 275 ಮತ್ತು ಪೇಟೆಗೆ ಸಮಾನಾಂತರವಾಗಿದ್ದು, ಪ್ರಾಕೃತಿಕ ವಿಕೋಪ ಉಂಟಾಗುವುದನ್ನು ತಡೆಯಲು ಮರಳು ದಿಬ್ಬಗಳನ್ನು ತೆರವುಗೊಳಿಸುವುದರ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕಾಗುತ್ತದೆಎಂದು ಶಿಫಾರಸ್ಸು ಮಾಡಿದೆ. ಆದರೆ ಶಿಫಾರಸ್ಸುಗಳು ಕೇವಲ ಕಡತದಲ್ಲಿಯೇ ಅಡಗಿ ಹೋಗಿದ್ದು ಹಲವು ತಿಂಗಳುಗಳ ಬಳಿಕವೂ ಕಾರ್ಯಗತವಾಗಿಲ್ಲ.