ಸುಳ್ಯ:ಸುಮಾರು ಅರ್ಧ ಶತಮಾನಗಳ ಹಿಂದೆ ಗ್ರಾಮೀಣ ಪ್ರದೇಶವಾಗಿದ್ದ ಸುಳ್ಯದಲ್ಲಿ ಉದ್ಯಮವನ್ನು ಸ್ಥಾಪಿಸಿ ಆ ಉದ್ಯಮದ ಮೂಲಕ ನೂರಾರು ಮಂದಿಗೆ ಉದ್ಯೋಗ ನೀಡಿ ಹಲವಾರು ಕುಟುಂಬಗಳಿಗೆ ಅನ್ನದಾತರಾದವರು ಅಗಲಿದ ಹಿರಿಯ ಉದ್ಯಮಿ ಉಪೇಂದ್ರ ಕಾಮತ್. ಆ ಮೂಲಕ ಸುಳ್ಯದಂತಹಾ ಗ್ರಾಮೀಣ ಭಾಗದಲ್ಲಿ ಜನರ ಆರ್ಥಿಕ ಸ್ವಾವಲಂಬನೆಗೆ ಮುನ್ನುಡಿ ಬರೆದ ಸಮಾಜ ಸುಧಾರಕ.ಸದಾ ಕಾಲ ಹೆಚ್ಚು ಕಮ್ಮಿ 500 ಕ್ಕೂ ಹೆಚ್ಚು ಮಂದಿಗೆ ಉದ್ಯೋಗವನ್ನು ನೀಡಿ ಜನ ಸಾಮಾನ್ಯರ ಕೈಗೆ ಆರ್ಥಿಕತೆಯ ಶಕ್ತಿ ತುಂಬಿದವರು.
ಉಪೇಂದ್ರ ಕಾಮತ್ ಅವರು ಮೂಲತಃ ಕಾಸರಗೋಡಿನವರು. ಅಲ್ಲಿಂದ ಸುಳ್ಯಕ್ಕೆ ಬಂದ ಅವರು
1974ರಲ್ಲಿ “ಕೆ.ಸುಬ್ರಾಯ ಕಾಮತ್ ಮತ್ತು ಮಕ್ಕಳು” ಎಂಬ ಗೇರು ಬೀಜದ ಕಾರ್ಖಾನೆಯನ್ನು ಜಾಲ್ಸೂರಿನ ಅಡ್ಕಾರು ಎಂಬಲ್ಲಿ ಸ್ಥಾಪಿಸಿದರು. ಕೇವಲ 50 ಜನ ಉದ್ಯೋಗಿಗಳಿಂದ ಆರಂಭವಾದ ಈ ಉದ್ದಿಮೆ ಬೆಳೆದು 500ಕ್ಕೂ ಮಿಕ್ಕಿ ಉದ್ಯೋಗಿಗಳು ಕೆಲಸ ಮಾಡುವ ಸುಳ್ಯ ತಾಲೂಕಿನ ಅತೀ ದೊಡ್ಡ ಉದ್ದಿಮೆಯಾಗಿ ಬೆಳೆದಿದೆ. ತಮ್ಮ ಉದ್ದಿಮೆಯ ಉದ್ಯೋಗಿಗಳನ್ನು ತಮ್ಮ ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಿದ್ದ ಅವರು ಅವರ ಎಲ್ಲಾ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದರು.ಆರ್ಥಿಕ ನೆರವಿನ ಹಸ್ತ ಚಾಚುತ್ತಿದ್ದರು, ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಅತ್ಯಂತ ಶಿಸ್ತು ಬದ್ಧ ಮತ್ತು ಸ್ವಚ್ಛ ವ್ಯವಹಾರಕ್ಕೆ ಹೆಸರಾದ ಇವರು 2003-04ನೇ ಸಾಲಿನಲ್ಲಿ ಕರ್ನಾಟಕ ಸರಕಾರದ ರಫ್ತು ಪ್ರಶಸ್ತಿಯನ್ನು ಪಡೆದು ಕೊಂಡಿದ್ದರು. ಆ ಮೂಲಕ ಸುಳ್ಯವನ್ನು ಉದ್ಯಮ ಭೂಪಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದರು.
ತಮ್ಮ ಉದ್ಯಮದ ಜೊತೆ ಸಮಾಜ ಸೇವಾ ಕಾರ್ಯಗಳಲ್ಲಿ ಕೂಡಾ ಇವರು ತಮ್ಮನ್ನು ತಾನು ತೊಡಗಿಸಿಕೊಂಡಿದ್ದರು. ಜಾಲ್ಸೂರು ಮಂಡಲ ಪಂಚಾಯತ್ನ ಮಂಡಲ ಪ್ರಧಾನರಾಗಿ ನಿರಂತರ 5 ವರ್ಷಗಳ ಕಾಲ ಸೇವೆ ಸಲ್ಲಿಸಿ ಜಾಲ್ಸೂರು ಮಂಡಲ ವ್ಯಾಪ್ತಿಯ ಅನೇಕ ಪ್ರಗತಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ತಮ್ಮ ನಿವಾಸದ ಪಕ್ಕದಲ್ಲಿಯೇ ವಿನೋಬಾ ನಗರವನ್ನು ರೂಪಿಸಿಕೊಂಡು ರಾಷ್ಟ್ರೋತ್ಥಾನ ಶಿಶು ಮಂದಿರ ಸ್ಥಾಪಿಸಿದರು. ಬಳಿಕ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ, ವಿವೇಕಾನಂದ ಪ್ರೌಢ ಶಾಲೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಕೆಲಸ ಮಾಡಿ ನಿರಂತರ ಪೋಷಿಸಿ ಒಂದು ಮಾದರಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಈಗ ಈ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 600 ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಜಾಲ್ಸೂರು ಪಯಸ್ಸಿನಿ ಪ್ರೌಢ ಶಾಲೆಯ ಆಡಳಿತ ಮಂಡಳಿಯಾದ
”ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ”ಯ ಸ್ಥಾಪಕರಲ್ಲಿ ಓರ್ವರಾಗಿದ್ದರು. ಆಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿಗೆ ನಿರಂತರ ಶ್ರಮಿಸಿದ್ದರು. ಜಾಲ್ಸೂರು ಗ್ರಾಮದ ಎಲ್ಲಾ ಯುವಕ, ಯುವತಿ, ಮಹಿಳಾ ಮಂಡಲ, ಭಜನಾ ಮಂದಿರ ಹಾಗೂ ಎಲ್ಲಾ ಸಮಾಜ ಸೇವೆ ಸಂಸ್ಥೆಗಳ ಪೋಷಕರಾಗಿ ಜಾಲ್ಸೂರನ್ನು ಸದಾ ಸಾಮಾಜಿಕವಾಗಿ ಹಾಗೂ ಕ್ರಿಯಾಶೀಲವಾಗಿರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸುಳ್ಯದ ಅಂಬಟೆಡ್ಕದಲ್ಲಿ ಸುಂದರವಾಗಿ ರೂಪುಗೊಂಡ ಶ್ರೀ ವೆಂಕಟ್ರಮಣ ಸ್ವಾಮಿ ದೇವಾಲಯವನ್ನು ನಿರ್ಮಿಸುವಲ್ಲಿ ಅದರ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಕಾಮತರು ಅಪಾರ ಕೊಡುಗೆ ನೀಡಿದ್ದರು. ಸುಳ್ಯದ ಶ್ರೀ ಚೆನ್ನಕೇಶವ ಸೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸುಳ್ಯ ನಗರದಲ್ಲಿ ವಾಣೀಜ್ಯ ಸಂಕೀರ್ಣ ನಿರ್ಮಿಸಿ ಅನೇಕ ಅಂಗಡಿ, ಬ್ಯಾಂಕ್, ಉದ್ಯಮಗಳಿಗೆ ಆಶ್ರಯತಾಣವಾಗಿದೆ. ತಾಲೂಕಿನಾದ್ಯಂತ ಅವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಗಳಿಗೆ ಸದಾ ಕೊಡುಗೆ ನೀಡುತ್ತಿದ್ದರು.
ಸುಳ್ಯ ತಾಲೂಕಿನಲ್ಲಿ ಬಿಜೆಪಿ, ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ ಸೇರಿ ಸಂಘ ಪರಿವಾರ ಸಂಘಟನೆಗಳ ಕಾರ್ಯಚಟುವಟಿಕೆಗಳ ಮಹಾಪೋಷಕರಾಗಿ ತೊಡಗಿಸಿಕೊಂಡು ಸುಳ್ಯದಲ್ಲಿ ಪಕ್ಷ ಹಾಗೂ ಸಂಘಟನೆಯ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದವರು ಉಪೇಂದ್ರ ಕಾಮತ್ ಅವರು.ಹಿಂದೆ ತಮ್ಮ ಕಟ್ಟಡದಲ್ಲಿಯೇ ಬಿಜೆಪಿ ಕಚೇರಿಗೆ ಅವಕಾಶ ನೀಡಿದ್ದರು.
ಶ್ರೀಮಂತರಾದರೂ ಅತ್ಯಂತ ಶಿಸ್ತುಬದ್ಧ, ಸರಳ ಜೀವನವನ್ನು ನಡೆಸುತ್ತಾ, ಸಜ್ಜನಿಕೆ, ಔದಾರ್ಯ ಮತ್ತು ಸ್ನೇಹಮಯಿ ಹಾಗೂ ಕರುಣಾಮಯಿ ವ್ಯಕ್ತಿತ್ವದ ಕಾಮತ್ ಅವರು ಸುಳ್ಯದ ಇತಿಹಾಸದ ಪುಟಗಳಲ್ಲಿ ಓರ್ವ ಆದರ್ಶ ಪ್ರಾಯರಾದ ಉದ್ಯಮಿಯಾಗಿ ಸಮಾಜಸೇವಕರಾಗಿ ಸುಳ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.