ಸುಳ್ಯ:ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಉದಯ ಶೆಟ್ಟಿ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಪ್ರಾಕೃತಿಕ ವಿಕೋಪ ತಡೆಗೆ ತಾಲೂಕಿನಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂದು ಆಡಳಿತಾಧಿಕಾರಿ ಸೂಚಿಸಿದರು. 24 ಗಂಟೆಯೂ ಕಾರ್ಯನಿರ್ವಹಿಸುವ
ಕಂಟ್ರೋಲ್ ರೂಂ ತೆರೆಯಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಇರುವ ಅಪಾಯಕಾರಿ ಮರಗಳ ತೆರವು ಮಾಡಬೇಕು, ಗುಡ್ಡ ಜರಿತ, ಪ್ರವಾಹ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು, ಕಾಳಜಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಮಾಡಬೇಕು, ರಸ್ತೆಗಳ ಬದಿಯ ಚರಂಡಿ ರಿಪೇರಿ ಮತ್ತಿತರ ಕೆಲಸಗಳನ್ನು ಕೂಡಲೇ ಪೂರ್ತಿ ಮಾಡಬೇಕು ಎಂದು ಸೂಚನೆ ನೀಡಿದರು. ತಾಲೂಕಿನಲ್ಲಿ ಅಗತ್ಯ ಮುಂಜಾಗೃತ ಕೈಗೊಳ್ಳಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ತಿಳಿಸಿದರು.
ಸುಳ್ಯ ತಾಲೂಕಿನಲ್ಲಿ ಮೇಲ್ಚಾವಣಿ, ಗೋಡೆ ಮತ್ತಿತರ ದುರಸ್ತಿ ಮಾಡಬೇಕಾದ 92 ಶಾಲೆಗಳನ್ನು ಗುರುತಿಸಿ ಪಟ್ಟಿ ತಯಾರಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ. ತಿಳಿಸಿದರು. ವಿವಿಧ ಶಾಲೆಗಳಲ್ಲಿ19 ಕೊಠಡಿ ಶಿಥಿಲ ಆಗಿದೆ. 33 ಶಾಲೆಗಳ ದುರಸ್ತಿಗೆ 97.1 ಲಕ್ಷ ಅನುದಾನ ಬಿಡುಗಡೆ ಆಗಿದೆ ಎಂದು ಅವರು ಮಾಹಿತಿ ನೀಡಿದರು. ಅಕ್ಷರ ದಾಸೋಹ ಕೊಠಡಿಗಳ ಬೇಡಿಕೆ ಇದ್ದ 19 ಹೊಸ ಅಕ್ಷರ ದಾಸೋಹ ಕೊಠಡಿ ನಿರ್ಮಾಣ ಆಗಬೇಕಾಗಿದೆ. 25 ಕಡೆ ದುರಸ್ತಿ ಮಾಡಬೇಕಾಗಿದೆ ಎಂದರು. ಈ ಕುರಿತು ಪ್ರಸ್ತಾವನೆ ಸಲ್ಲಿಸಿ. ಉದ್ಯೋಗ ಖಾತರಿ ಯೋಜನೆಯಲ್ಲಿ ಹೊಸ ಕೊಠಡಿ ನಿರ್ಮಾಣಕ್ಕೆ ಅವಕಾಶ ಇದೆ ಎಂದು ತಾ.ಪಂ ಇಒ ತಿಳಿಸಿದರು.
ನಗರ ಪಂಚಾಯತ್ ಕಸ ವಿಲೇವಾರಿ ಮತ್ತು ತ್ಯಾಜ್ಯ ಘಟಕ ನಿರ್ಮಾಣದ ಸ್ಥಳದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ತ್ಯಾಜ್ಯ ನಿರ್ವಹಣೆ, ತ್ಯಾಜ್ಯ ಘಟಕ ನಿರ್ಮಾಣಕ್ಕೆ ಅನುದಾನ ಬರುತ್ತದೆ. ಈ ಅನುದಾನ ಬಳಕೆ ಮಾಡಿ ಅದಕ್ಕಾಗಿ ಸೂಕ್ತ ಜಾಗ ಗುರುತಿಸಿ ಎಂದು ಆಡಳಿತಾಧಿಕಾರಿ ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.ಸುಳ್ಯ ಬೆಳೆಯುತ್ತಿರುವ ನಗರ ಇಲ್ಲಿಗೆ ಸುಸಜ್ಜಿತ ಕಸ ವಿಲೇವಾರಿ ವ್ಯವಸ್ಥೆ ಇಲ್ಲದೆ ಇರುವುದು ಶೋಭೆ ತರುವಂತದ್ದಲ್ಲ ಎಂದು ಆಡಳಿತಾಧಿಕಾರಿ ಹೇಳಿದರು. ಸುಳ್ಯ ಶಿಶು ಅಭಿವೃದ್ಧಿ ಯೋಜನೆಯಡಿ 169 ಅಂಗನವಾಡಿ ಕೇಂದ್ರಗಳಿಗೆ 169 ಬಾಲ ವಿಕಾಸ ಸಮಿತಿಗಳ ಮುಖಾಂತರ ದಾನಿಗಳ ನೆರವಿನಿಂದ ಅಗ್ನಿ ನಂದಕ ಉಪಕರಣಗಳನ್ನು ಖರೀದಿಸಲು ಕ್ರಮ ವಹಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ದಿನೇಶ್ ಹೇಳಿದರು.
ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಗ್ರೇಡ್ 2 ತಹಶೀಲ್ದಾರ್ ಮಂಜುನಾಥ್, ಪರೀಕ್ಷಾರ್ಥ ಐಎಫ್ಎಸ್ ಅಧಿಕಾರಿ ಅಕ್ಷಯ್ ಅಶೋಕ್ ಪ್ರಕಾಶ್ ಕಾರಂತ್ ಉಪಸ್ಥಿತರಿದ್ದರು.