ಬೆಂಗಳೂರು: ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅವಧಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಸ್ತರಿಸಿದೆ. ಇದರೊಂದಿಗೆ ಟೀಮ್ ಇಂಡಿಯಾ ಮುಂದಿನ ಕೋಚ್ ಯಾರು ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ.ದ್ರಾವಿಡ್ ಜೊತೆಗೆ ಸಹಾಯಕ ಕೋಚ್ ಸಿಬ್ಬಂದಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.2021ರಲ್ಲಿ ಎರಡು ವರ್ಷಗಳ
ಅವಧಿಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಯನ್ನು ದ್ರಾವಿಡ್ ವಹಿಸಿದ್ದರು. 2023ರ ಏಕದಿನ ವಿಶ್ವಕಪ್ ಫೈನಲ್ ನಂತರ ದ್ರಾವಿಡ್ ಅವಧಿಯು ಕೊನೆಗೊಂಡಿತ್ತು. ಫೈನಲ್ನಲ್ಲಿ ಅತಿಥೇಯ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.ಆದರೂ ಟೀಮ್ ಇಂಡಿಯಾದ ಏಳಿಗೆಯಲ್ಲಿ ಮತ್ತು ಹೊಸ ಆಟಗಾರರ ಹುಡುಕಾಟದಲ್ಲಿ ದ್ರಾವಿಡ್ ಹಾಗೂ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ನೀಡಿರುವ ಕೊಡುಗೆಯನ್ನು ಬಿಸಿಸಿಐ ಶ್ಲಾಘಿಸಿದೆ. ದ್ರಾವಿಡ್ ಅವರ ದೃಷ್ಟಿಕೋನ, ವೃತ್ತಿಪರತೆ, ಸತತ ಪ್ರಯತ್ನ ಟೀಮ್ ಇಂಡಿಯಾದ ಯಶಸ್ಸಿನ ಪ್ರಮುಖ ಆಧಾರಸ್ತಂಭಗಳಾಗಿವೆ. ಟೀಮ್ ಇಂಡಿಯಾದ ಉತ್ತಮ ಪ್ರದರ್ಶನ ದ್ರಾವಿಡ್ ರಣನೀತಿಗೆ ಸಾಕ್ಷಿಯಾಗಿದೆ. ಮುಖ್ಯ ಕೋಚ್ ಆಗಿ ಮುಂದುವರಿಯಲು ದ್ರಾವಿಡ್ ಒಪ್ಪಿಕೊಂಡಿರುವುದಕ್ಕೆ ನಮಗೆ ಸಂತೋಷವಿದೆ. ಅವರ ಮಾರ್ಗದರ್ಶನದಲ್ಲಿ ಭಾರತ ಕ್ರಿಕೆಟ್ ತಂಡ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದು ಬಿಸಿಸಿಐ ಹೇಳಿದೆ.