ಸುಳ್ಯ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಸುಳ್ಯ ತಾಲೂಕು ಶಿಕ್ಷಕರ ದಿನಾಚರಣೆಯ ಸಮಿತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಸುಳ್ಯ ತಾಲೂಕು ಮಟ್ಟದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಜನ್ಮದಿನೋತ್ಸವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸುಳ್ಯದ
ಪರಿವಾರಕಾನ ಅಮರಜ್ಯೋತಿ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅತಿಥಿಗಳು ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಮಂಗಳೂರು ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಪದನಿಮಿತ್ತ ಸಹನಿರ್ದೇಶಕ ಡಾ.ಸಿಪ್ರಿಯನ್ ಮೊಂತೆರೋ, ಸುಳ್ಯ ತಹಶೀಲ್ದಾರ್ ಎಂ. ಮಂಜುನಾಥ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ವಿಶ್ವನಾಥ ಬದಿಕಾನ ಪ್ರಧಾನ ಭಾಷಣ ಮಾಡಿದರು.
ಡಿಡಿಪಿಐ ದಯಾನಂದ ರಾಮಚಂದ್ರ ನಾಯ್ಕ್ ಸ್ವಾಗತಿಸಿದರು. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಈ. ಗಣ್ಯರ ಶುಭಾಶಯ ಓದಿದರು. ಉದ್ಘಾಟನಾ ಕಾರ್ಯಕ್ರಮ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ 21ಮಂದಿ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅತಿಥಿಗಳ ಸಾಲು ಸಾಲು ಗೈರು:
ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಸಚಿವರುಗಳು, ಜಿಲ್ಲೆಯ ಶಾಸಕರುಗಳು, ಅಧಿಕಾರಿಗಳ ಗೈರು ಎದ್ದು ಕಾಣುತ್ತಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿದ ಬಹುತೇಕ ಅತಿಥಿಗಳು ಗೈರು ಹಾಜರಾಗಿದ್ದರು.