ಮುಂಬೈ: ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಹಂತಕ್ಕೆ ಪ್ರವೇಶಿಸಿತು. ವಿಂಡೀಸ್ ಬಳಗವು 9 ವಿಕೆಟ್ಗಳಿಂದ ನೇಪಾಳ ತಂಡವನ್ನು ನಿರಾಯಾಸವಾಗಿ ಮಣಿಸಿತು. ಹ್ಯಾಟ್ರಿಕ್ ಗೆಲುವಿನೊಂದಿಗೆ ಶಾಯ್ ಹೋಪ್ ಬಳಗ ಸೂಪರ್ ಎಂಟರ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿತು.ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ
ಸಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಶಾಯ್ ಹೋಪ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ದೀಪೇಂದ್ರ ಸಿಂಗ್ ಐರೀ (58; 47ಎ, 4×3, 6×3) ಅರ್ಧಶತಕ ಹಾಗೂ ಸೋಮಪಾಲ್ ಕಮಿ (ಔಟಾಗದೇ 26; 15ಎ, 4×4) ಬಿರುಸಿನ ಬ್ಯಾಟಿಂಗ್ ನೆರವಿನಿಂದ ನೇಪಾಳ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 133 ರನ್ ಗಳಿಸಿತು. ನಾಯಕ ಶಾಯ್ ಹೋಪ್ (ಔಟಾಗದೇ 61; 44ಎ, 4×5, 6×3) ಹಾಗೂ ಶಿಮ್ರೋನ್ ಹೆಟ್ಮೇಯರ್ (ಔಟಾಗದೇ 46; 32ಎ, 4×4, 6×2) ಅವರ ಮುರಿಯದ 91(59ಎ) ರನ್ ಜೊತೆಯಾಟದ ಬಲದಿಂದ ವೆಸ್ಟ್ ಇಂಡೀಸ್ ತಂಡವು ಇನ್ನೂ 28 ಎಸೆತಗಳು ಇರುವಂತೆ ಗುರಿ ಮುಟ್ಟಿತು. ನೇಪಾಳ ತಂಡವು ಸತತ ಮೂರು ಸೋಲುಗಳೊಂದಿಗೆ ಸೂಪರ್ 8ರ ಪೈಪೋಟಿಯಿಂದ ಹೊರಬಿತ್ತು.
ಇನ್ನೊಂದು ಪಂದ್ಯದಲ್ಲಿ ವಿಲ್ ಜ್ಯಾಕ್ಸ್ ಅವರ ಆಲ್ರೌಂಡ್ ಆಟದ ನೆರವಿನಿಂದ ಇಂಗ್ಲೆಂಡ್ ತಂಡವು ಟಿ20 ವಿಶ್ವಕಪ್ನ ಹಾಲಿ ಆವೃತ್ತಿಯಲ್ಲಿ ಮೂರನೇ ಜಯ ದಾಖಲಿಸಿ ಸೂಪರ್ 8ರ ಘಟ್ಟಕ್ಕೆ ಲಗ್ಗೆಯಿಟ್ಟಿತು.
ಈಡನ್ ಗಾರ್ಡನ್ನಲ್ಲಿ ನಡೆದ ಸಿ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡವು 24 ರನ್ಗಳಿಂದ ಇಟಲಿ ತಂಡವನ್ನು ಮಣಿಸಿತು. ವಿಲ್ ಜ್ಯಾಕ್ಸ್ (ಔಟಾಗದೇ 53;22ಎ, 4×3, 6×4) ಅವರ ಮಿಂಚಿನ ಅರ್ಧಶತಕದ ಬಲದಿಂದ ಇಂಗ್ಲೆಂಡ್ ತಂಡವು 7 ವಿಕೆಟ್ಗೆ 202 ರನ್ಗಳ ಬೃಹತ್ ಮೊತ್ತ ಗಳಿಸಿತು. ಆರಂಭಿಕ ಆಟಗಾರ ಫಿಲ್ ಸಾಲ್ಟ್ (28), ಟಾಮ್ ಬ್ಯಾಂಟನ್ (30), ಸ್ಯಾಮ್ ಕರನ್ (25) ಉಪಯುಕ್ತ ಕೊಡುಗೆ ನೀಡಿದರು.
ಕಠಿಣ ಗುರಿಯನ್ನು ಬೆನ್ನಟ್ಟಿದ ಇಟಲಿ ತಂಡವು ಜಸ್ಟಿನ್ ಮೊಸ್ಕಾ (43;34ಎ) ಮತ್ತು ಬೆನ್ ಮಾನೆಂಟಿ (60;25ಎ, 4×4, 6×6) ಗ್ರಾಂಟ್ ಸ್ಟೀವರ್ಟ್ (45;23ಎ, 4×2, 6×5) ಅವರ ಪ್ರಯತ್ನದಿಂದ 20 ಓವರ್ಗಳಲ್ಲಿ 178 ರನ್ ಗಳಿಸಿ ಹೋರಾಟ ಮುಗಿಸಿತು. ಜೆಮಿ ಓವರ್ಟನ್ ಮತ್ತು ಸ್ಯಾಮ್ ಕರನ್ ತಲಾ ಮೂರು ವಿಕೆಟ್ ಪಡೆದರು.




