ಮುಂಬೈ:ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಜರುಗುತ್ತಿರುವ ಟಿ20 ವಿಶ್ವಕಪ್ನ ಲೀಗ್ ಹಂತದ ಪಂದ್ಯಗಳು ಮುಗಿದಿದ್ದು, ಸೂಪರ್ –8 ಹಂತಕ್ಕೆ ಕ್ಷಣಗಣನೆ ಆರಂಭವಾಗಿದೆ.ಲೀಗ್ ಹಂತದಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಅದರಲ್ಲಿ 8 ತಂಡಗಳು ಸೂಪರ್ –8 ಹಂತಕ್ಕೆ ಲಗ್ಗೆಯಿಟ್ಟಿದೆ.ಲೀಗ್ ಹಂತದಲ್ಲಿ ಪ್ರತಿಯೊಂದು ತಂಡವೂ ತಲಾ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅತಿಹೆಚ್ಚು ರನ್ ಗಳಿಸಿರುವ ಬ್ಯಾಟರ್ ಹಾಗೂ
ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿ ಇಲ್ಲಿದೆ.
ಲೀಗ್ ಹಂತದ ಪಂದ್ಯದಲ್ಲಿ ಅತಿಹೆಚ್ಚು ರನ್ ಗಳಿಸಿರುವ ಬ್ಯಾಟರ್ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಸಾಹಿಬ್ಜಾದಾ ಫರ್ಹಾನ್ ಅಗ್ರಸ್ಥಾನದಲ್ಲಿದ್ದು, 4 ಪಂದ್ಯಗಳಲ್ಲಿ 164.18 ಸ್ಟ್ರೈಕ್ರೇಟ್ನಲ್ಲಿ 220 ರನ್ ಗಳಿಸಿದ್ದಾರೆ. 2ನೇ ಸ್ಥಾನದಲ್ಲಿರುವ ಪಥುಮ್ ನಿಸಾಂಕ ಅವರು ಒಂದು ಶತಕ ಸೇರಿದಂತೆ 199 ರನ್ ಬಾರಿಸಿದ್ದಾರೆ. ಭಾರತದ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಅವರು 4 ಪಂದ್ಯಗಳಲ್ಲಿ 202.30 ಸ್ಟ್ರೈಕ್ರೇಟ್ನಲ್ಲಿ 176 ರನ್ ಗಳಿಸಿದ್ದು, ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.ಕೆನಡಾದ ಯುವರಾಜ್ ಸಾಮ್ರಾ ಅವರು 110 ರನ್ ಗಳಿಸಿರುವುದು ಈ ಟೂರ್ನಿಯಲ್ಲಿ ಇನಿಂಗ್ಸ್ ಒಂದರಲ್ಲಿ ಬ್ಯಾಟರ್ ಒಬ್ಬರು ಗಳಿಸಿರುವ ಗರಿಷ್ಠ ರನ್ ಆಗಿದೆ.
ಈ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಅಮೆರಿಕದ ಶ್ಯಾಡ್ಲಿ ವ್ಯಾನ್ ಶಾಲ್ಕ್ವಿಕ್ ಅವರು 4 ಪಂದ್ಯಗಳಲ್ಲಿ 13 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಆಗಿದ್ದಾರೆ. ಭಾರತದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ, 4 ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ.ಪಾಕ್ ಬೌಲರ್ ಉಸ್ಮಾನ್ ತಾರೀಕ್, 3 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ.ವೆಸ್ಟ್ ಇಂಡೀಸ್ನ ರೊಮಾರಿಯೋ ಶೆಫರ್ಡ್, ಸ್ಕಾಟ್ಲೆಂಡ್ ವಿರುದ್ಧ ಹಾಗೂ ಯುಎಇ ತಂಡದ ಬೌಲರ್ ಜುನೈದ್ ಸಿದ್ದಿಕ್ ಅವರು ಕೆನಡಾ ವಿರುದ್ಧ 5 ವಿಕೆಟ್ ಗೊಂಚಲು ಪಡೆದಿದ್ದಾರೆ.






