ಆ್ಯಂಟಿಗಾ: ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್ 8 ಹಂತದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 50 ರನ್ ಗಳ ಭರ್ಜರಿ ಜಯ ಸಾಧಿಸಿ, ಸತತ ಎರಡನೇ ಗೆಲುವು ಸಂಪಾದಿಸಿದೆ. ಟೂರ್ನಿಯಲ್ಲಿ ಅಜೇಯ ಅಭಿಯಾನವನ್ನು ಮುಂದುವರಿಸಿರುವ ಭಾರತದ ಸೆಮಿಫೈನಲ್ ಪ್ರವೇಶ ಹಾದಿ ಸುಗಮ ಆಗಿದ್ದರೂ ಸೆಮಿಫೈನಲ್ ಪ್ರವೇಶಿಸಿಲ್ಲ.ಇಂದಿನ ಪಂದ್ಯದಲ್ಲಿ
ಅಫ್ಘಾನಿಸ್ತಾನ ಆಸ್ಟ್ರೇಲಿಯಾವನ್ನು ಸೋಲಿಸಿರುವ ಹಿನ್ನಲೆಯಲ್ಲಿ
ಸೆಮಿಫೈನಲ್ ಹಾದಿ ಕುತೂಹಲ ಕೆರಳಿಸಿದೆ. ಟೂರ್ನಿಯ ಸೂಪರ್ 8 ಹಂತದಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ 4 ಅಂಕಗಳನ್ನು ಹೊಂದಿದ್ದು, 2.424 ನಿವ್ವಳ ರನ್ ರೇಟ್ ಹೊಂದಿದೆ. ಗುಂಪಿನಲ್ಲಿರುವ ಇತರ ತಂಡಗಳೆಂದರೆ ಆಸ್ಟ್ರೇಲಿಯಾ ಎರಡು ಪಂದ್ಯದಿಂದ 2 ಅಂಕ, ಅಫ್ಘಾನಿಸ್ತಾನ 2 ಪಂದ್ಯ 2 ಅಂಕ ಮತ್ತು ಬಾಂಗ್ಲಾದೇಶ 2 ಪಂದ್ಯ 0 ಅಂಕ ಪಡೆದಿದೆ.
ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿದರೆ, ಅಫ್ಘಾನಿಸ್ತಾನ ತಂಡ ಬಾಂಗ್ಲಾ ವಿರುದ್ಧವೂ ಗೆದ್ದರೆ, ಮೂರು ತಂಡಗಳು ತಲಾ ನಾಲ್ಕು ಅಂಕಗಳನ್ನು ಪಡೆದಂತಾಗುತ್ತದೆ. ಆಗ ನಿವ್ವಳ ರನ್ ರೇಟ್ ಗಣನೆಗೆ ಬರುತ್ತದೆ ಹಾಗೂ ಎರಡು ಅಗ್ರ ತಂಡಗಳು ಸೆಮಿಫೈನಲ್ ತಲುಪುತ್ತವೆ. ಈ ಕಾರಣದಿಂದ ಉತ್ತಮ ರನ್ ರೇಟ್ ಹೊಂದಿರುವ ಭಾರತ ಅಂತಿಮ ನಾಲ್ಕರ ಘಟ್ಟ ತಲುಪುವ ಸಾಧ್ಯತೆಗಳು ನಿಚ್ಚಳವಾಗಿದ್ದರೂ, ಇನ್ನೂ ಸೆಮಿಫೈನಲ್ ಸ್ಥಾನ ಖಾತರಿಯಾಗಿಲ್ಲ.
ಗುಂಪಿನಲ್ಲಿ ಅಜೇಯವಾಗಿರುವ ಭಾರತ ಮತ್ತು ಆಸ್ಟ್ರೇಲಿಯಾ ಸೋಮವಾರ ಸೆಂಟ್ ಲೂಸಿಯಾದಲ್ಲಿ ಪರಸ್ಪರ ಸೆಣೆಸಲಿವೆ. ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಭಾರತ 6 ಅಂಕಗಳೊಂದಿಗೆ ಸೆಮಿಫೈನಲ್ ಪ್ರವೇಶ ಪಡೆಯುತ್ತದೆ. ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರೆ ಸೆಮಿಫೈನಲ್ ಪ್ರವೇಶ ಪಡೆಯುತ್ತದೆ. ಸೋತರೆ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ಮಧ್ಯೆ ರನ್ ರೇಟ್ ಲೆಕ್ಕಾಚಾರ ನೋಡಬೇಕಾಗುತ್ತದೆ.









