ಸುಳ್ಯ: ಟಿ.ಎಂ.ಶಹೀದ್ ತೆಕ್ಕಿಲ್ ಅವರು ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಬಲ್ಲ ಉತ್ಸಾಹಿ ನಾಯಕ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಸ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸುಳ್ಯದ ಬಂಟರ ಭವನದಲ್ಲಿ ಜು.6ರಂದು ನಡೆದ ರಾಜಕೀಯ, ಸಾಮಾಜಿಕ ಕ್ಷೇತ್ರದ ಮುಖಂಡ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ, ಟಿ.ಎಂ.ಶಹೀದ್ ತೆಕ್ಕಿಲ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಉತ್ತಮ ಸಂಘಟಕ. ಜಾತ್ಯಾತೀತ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ
ನಾಯಕರಾದ ಟಿ.ಎಂ.ಶಹೀದ್ ತೆಕ್ಕಿಲ್ ಅವರು ಎಲ್ಲರೊಂದಿಗೆ ಬೆರೆತು ಎಲ್ಲರ ವಿಶ್ವಾಸ ಗಳಿಸಿದ್ದಾರೆ. ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯಿಂದ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ರಾಷ್ಟ್ರ ಮಟ್ಟದ ಎಲ್ಲಾ ನಾಯಕರ ಸಂಪರ್ಕ ಇದೆ. ನಾನಾ ಕ್ಷೇತ್ರದ ಸೇವೆಗಾಗಿ ಮಾಡಿದ ಈ ಕಾರ್ಯಕ್ರಮ ಅತ್ಯಂತ ಸಂತೋಷದ ಕಾರ್ಯಕ್ರಮ ಎಂದು ಅವರು ಹೇಳಿದರು. ಸುಳ್ಯದ ಸಾರ್ವಜನಿಕ ಆಸ್ಪತ್ರೆಯ ಬೇಡಿಕೆ ಮುಂದಿಟ್ಟಿದ್ದಾರೆ. ಅದನ್ನು ಪರಿಹರಿಸುತ್ತೇನೆ ಎಂದ ಅವರು ಜಿಲ್ಲಾ ಉಸ್ತುವಾರಿ ಸಚಿವನಾಗಿ ತಾಲೂಕಿನ ಅಭಿವೃದ್ಧಿಗೆ ಗಮನ ಹರಿಸುತ್ತೇನೆ ಎಂದು ಹೇಳಿದರು.
ಅಭಿನಂದನಾ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹಮ್ಮದ್ ಮಾತನಾಡಿ
ಕಳೆದ 35 ವರ್ಷಗಳಿಂದ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯರಾಗಿರಯವ ಟಿ.ಎಂ.ಶಹೀದ್ ಅವರಿಗೆ ಸರಕಾರದ ಮಟ್ಟದಲ್ಲಿ ಉತ್ತಮ ಸ್ಥಾನಮಾನ ಸಿಗಬೇಕಾಗಿದೆ. ಅದಕ್ಕಾಗಿ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ಸಚಿವ ದಿನೇಶ್ ಗುಂಡುರಾವ್ ಹಾಗೂ ಸಲೀಂ ಅಹಮ್ಮದ್ ಹಾಗೂ ಗಣ್ಯರು ಸೇರಿ ಟ.ಎಂ.ಶಹೀದ್ ಅವರನ್ನು ಸನ್ಮಾನಿಸಿದರು.
ಅಭಿನಂದನಾ ಭಾಷಣ ಮಾಡಿದ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎಂ.ಬಿ.ಸದಾಶಿವ ಮಾತನಾಡಿ ಒಬ್ಬ ವ್ಯಕ್ತಿ ಹೇಗಿರಬೇಕು ಎಂಬುದಕ್ಕೆ ಟಿ.ಎಂ.ಶಹೀದ್ ಮಾದರಿ ಎಂದು ಹೇಳಿದರು. ಎಲ್ಲರನ್ನೂ ಸಮಾನಾಗಿ ಕಾಣುವ ಮೂಲಕ ಸ್ನೇಹಿತರ ತಂಡವನ್ನು ಕಟ್ಟಿ ಸಾಮಾಜಿಕ ಸೇವೆಯ ಮೂಲಕ ಜನರ ಪ್ರೀತಿಯನ್ನು ಗಳಿಸಿದ್ದಾರೆ. ಇಂದು ಇಡೀ ಸಮಾಜ ಅವರಿಗೆ ಶಕ್ತಿ ತುಂಬಿದೆ. ಮುಂದೆ ಅವರಿಗೆ ಸೂಕ್ತವಾದ ಹುದ್ದೆ ಸಿಗುವಂತಾಗಬೇಕು. ಆ ರೀತಿಯ ಅಧಿಕಾರದ ಮೂಲಕ ಸಮಾಜ ಸೇವೆ ಮಾಡುವಂತಾಗಲಿದೆ ಎಂದರು.ಯಾವುದೇ ಅಧಿಕಾರ ಇಲ್ಲದೇ ಇದ್ದರೂ ಸರಕಾರದಿಂದ ಅನುದಾನ ತರಿಸಿ ತನ್ನೂರಿಗೆ ಸೇತುವೆ, ರಸ್ತೆ ಅಭಿವೃದ್ಧಿ ಮಾಡಿದ ಅವರ ಸಾಧನೆ ಅನನ್ಯ ಎಂದರು.
55 ಸೇವಾ ಚಟುವಟಿಕೆಗಳಿಗೆ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಹರೀಶ್ ಕುಮಾರ್ ಚಾಲನೆ ನೀಡಿದರು.
ಅಭಿನಂದನಾ ಸಮಿತಿಯ ಅಧ್ಯಕ್ಷ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕರಾದ ಸೀತಾರಾಮ ರೈ ಸವಣೂರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ನ.ಪಂ.ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಅತಿಥಿಗಳಾಗಿ ಭಾಗವಹಿಸಿದ್ದರು.
ಅಭಿನಂದನಾ ಸಮಿತಿಯ ಸಂಚಾಲಕರಾದ ಕೆ.ಟಿ.ವಿಶ್ವನಾಥ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ.ಮುಸ್ತಫ ವಂದಿಸಿದರು. ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಫವಾಝ್, ಕೋಶಾಧಿಕಾರಿ ತಾಜ್ ಮಹಮ್ಮದ್ ಸಂಪಾಜೆ ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಟಿ.ಎಂ.ಶಹೀದ್ ಅವರನ್ನು ಸನ್ಮಾನಿಸಲಾಯಿತು.ಸಭಾ ಕಾರ್ಯಕ್ರಮದ ಮುನ್ನ ಹಾಗೂ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.