ಸುಳ್ಯ: ಸುಳ್ಯದಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಮಧ್ಯಾಹ್ನದ ಬಳಿಕ ಹಲವು ಬಾರಿ ಮಳೆಯಾಗಿದ್ದು ಮಳೆಗಾಲದ ವಾತಾವರಣ ಕಂಡು ಬಂದಿದೆ. ಗುಡುಗು ಸಿಡಿಲಿನ ಅಬ್ಬರದೊಂದಿಗೆ ಉತ್ತಮ ಮಳೆಯಾಗಿದೆ. ರಾತ್ರಿಯೂ ಮಳೆ ಮುಂದುವರಿದಿದೆ. ಮಂಗಳವಾರವೂ ತಾಲೂಕಿನಾದ್ಯಂತ
ಉತ್ತಮ ಮಳೆಯಾಗಿತ್ತು. ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಯಲ್ಲಿ ಸುಳ್ಯ ನಗರದಲ್ಲಿ 72 ಮಿ.ಮಿ.ಮಳೆಯಾಗಿತ್ತು ಎಂದು ಸುಳ್ಯ ನಗರದಲ್ಲಿ ಮಳೆ ದಾಖಲೆ ಮಾಡುವ ಶ್ರೀಧರ ರಾವ್ ಹೈದಂಗೂರು ತಿಳಿಸಿದ್ದಾರೆ.ಮರ್ಕಂಜ ಮಾಪಲತೋಟದಲ್ಲಿ 131 ಮಿ.ಮಿ, ಉಬರಡ್ಕದಲ್ಲಿ 72 ಮಿ.ಮಿ. ದೊಡ್ಡತೋಟದ ಬಳಿ ಕೀಲಾರ್ಕಜೆ 56 ಮಿಮಿ, ಮಡಪ್ಪಾಡಿ 67 ಮಿ.ಮಿ.ಮಳೆಯಾಗಿತ್ತು.
ನಾಳೆಯೂ ಮಳೆ ಸಾಧ್ಯತೆ:
ರಾಜ್ಯದ ಬಹುತೇಕ ಕಡೆ ಗುರುವಾರವೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಆರು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮಂಡ್ಯ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಮೈಸೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಒಂದೆರಡು ಸ್ಥಳಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಉಡುಪಿ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ ಹಾಗೂ ಶಿವಮೊಗ್ಗ ಜಿಲ್ಲೆಯ ಹಲವೆಡೆ ಗುಡುಗು ಹಾಗೂ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ಹೇಳಿದೆ.ಕರಾವಳಿಯಲ್ಲಿ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳು ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದೇ 29ರವರೆಗೂ ರಾಜ್ಯದ ಕೆಲವೆಡೆ ಮಳೆ ಮುಂದುವರಿಯುವ ಸಂಭವವಿದೆ ಎಂದು ಹೇಳಿದೆ.