ಸುಳ್ಯ:ಹಿಂಗಾರು ಮಳೆ ಬಿರುಸುಗೊಳ್ಳುವ ಸೂಚನೆ ನೀಡಿ ಭಾರೀ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಅ.30ರಂದು ಸುಳ್ಯದಲ್ಲಿ ಭರ್ಜರಿ ಮಳೆ ಸುರಿದಿದೆ. ಮಧ್ಯಾಹ್ನದ ನಂತರ ಒಮ್ಮಿಂದೊಮ್ಮೆಲೆ ಆರಂಭಗೊಂಡ ಮಳೆ ಒಂದು ಗಂಟೆಗೂ ಹೆಚ್ಚು ಸುರಿಯಿತು. ಉತ್ತಮ ಮಳೆಯಾಗಿದ್ದು ಉರಿ ಸೆಕೆಯಿಂದ ಬಳಲಿದ್ದ ಇಳೆಗೆ ತಂಪೆರೆದಿದೆ. ನಿರಂತರ ಮಳೆಯಾಗಿದ್ದು
ಎಲ್ಲೆಡೆ ಮಳೆ ನೀರು ತುಂಬಿ ಹರಿದಿದೆ. ಬೆಳಗ್ಗಿನಿಂದಲೇ ಅತಿ ಉಷ್ಣಾಂಶದ ಹಾಗೂ ಮೋಡ ಕವಿದ ವಾತಾವರಣ ಇದ್ದು ಮಧ್ಯಾಹ್ನ 3 ಗಂಟೆಯ ಬಳಿಕ ಮಳೆ ಆರಂಭಗೊಂಡಿದೆ. ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಕಿವಿಗಪ್ಪಳಿಸುವ ಗುಡುಗು, ಸಿಡಿಲು ಭಯ ಹುಟ್ಟಿಸುತ್ತಿತ್ತು.
ಸುಳ್ಯದಲ್ಲಿ ನಿರಂತರ ಮೂರನೇ ದಿನವೂ ಉತ್ತಮ ಮಳೆಯಾಗಿದ್ದು ಹಿಂಗಾರು ಬಿರುಸುಗೊಳ್ಳುವ ಸೂಚನೆ ನೀಡಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಹಾಗೂ ಶನಿವಾರ ಸಂಜೆ ಗುಡುಗು ಸಹೀತ ಮಳೆಯಾಗಿದೆ.ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ನವೆಂಬರ್ 5ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.