ಸುಳ್ಯ:ಸುಳ್ಯದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸುಳ್ಯದ ಕಾಂಗ್ರೆಸ್ ಮುಖಂಡರು ಖಡಕ್ಕಾಗಿ ಮಾತನಾಡಿ ಚುನಾವಣಾ ಪ್ರಚಾರಕ್ಕೆ ಚುರುಕ್ಕು ಮುಟ್ಟಿಸಿದ್ದಾರೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಪಟ್ಟು ಕೆಲಸ ಮಾಡಬೇಕಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದರು.
ಸಿದ್ಧರಾಮಯ್ಯರ ಸರಕಾರ ನೀಡಿರುವ
ಜನರ ಪರ ಯೋಜನೆಯಾಗಿರುವ ಗ್ಯಾರಂಟಿ ಯೋಜನೆ ಕಾಂಗ್ರೆಸ್ ಪಕ್ಷದ ಶಕ್ತಿ. ಈ ಚುನಾವಣೆಯಲ್ಲಿ ಇದನ್ನು ಪ್ರತೀ ಮನೆಗೂ ಮತದಾರರಿಗೂ ಮುಟ್ಟಿಸಿ ಗೆಲುವನ್ನು ಗ್ಯಾರಂಟಿ ಎಂದು ಹೇಳಿದರು.
ನಾಯಕರು ಒಗ್ಗಟ್ಟಾದರೆ ಮಾತ್ರ ಬಹುಮತ:ಅಡ್ಪಂಗಾಯ
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮಾತನಾಡಿ ಕಾಂಗ್ರೆಸ್ ನಾಯಕರು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸುಳ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆಯಲು ಸಾಧ್ಯ ಎಂದು ಹೇಳಿದರು. ಈ ಭಾಗದಲ್ಲಿ ಅಡಿಕೆ ಹಳದಿ ಎಲೆ ರೋಗ ಸಮಸ್ಯೆ ಇದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ಪ್ರಯತ್ನ ಮಾಡಿಲ್ಲ. ಇಲ್ಲಿಯವರೇ ಇಂಧನ ಸಚಿವರು, ಮುಖ್ಯಮಂತ್ರಿಗಳು ಇದ್ದರೂ 110 ಕೆವಿ ಸಬ್ ಸ್ಟೇಷಬ್ ಅನುಷ್ಠಾನ ಆಗಿಲ್ಲ. ಇದೆಲ್ಲವನ್ನು ಜನರಿಗೆ ತಿಳಿಸಬೇಕು ಜತೆಗೆ, ಕಾಂಗ್ರೆಸ್ ಸರಕಾರದ ಸಾಧನೆಯನ್ನು ತಿಳಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಕೆಲಸ ಮಾಡದವರಿಗೆ ಗೇಟ್ ಪಾಸ್ ನೀಡಿ:
ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಎನ್.ಜಯಪ್ರಕಾಶ್ ರೈ ಮಾತನಾಡಿ ನಾಯಕರಲ್ಲಿಗೆ ಹೋಗಿ ತಮ್ಮ ಕೆಲಸ ಮಾಡಿಸಿಕೊಂಡು ಬಂದು ಪಕ್ಷದ ಕೆಲಸ ಮಾಡದವರಿಗೆ ಗೇಟ್ ಪಾಸ್ ನೀಡಬೇಕಾಗಿದೆ ಎಂದು ಹೇಳಿದರು.ಒಬ್ಬ ನಾಯಕರಿಗೆ ಎರಡು ಮೂರು ಬೂತ್ ಕೊಟ್ಟು ಅವರು ಅಲ್ಲೇ ಇದ್ದು ಕೆಲಸ ಮಾಡಬೇಕು. ಆ ರೀತಿಯ ಯೋಜನೆ ರೂಪಿಸಿಕೊಳ್ಳಲಾಗಿದೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ. ಅಭಿಪ್ರಾಯ ಬೇಧ ಇದೆ. ಅದು ಸರಿಯಾಗಬೇಕು. ಗ್ಯಾರಂಟಿ ಯೋಜನೆಯ ಮೂಲಕ ಪ್ರತೀ ಬೂತ್ನಲ್ಲಿ ಕನಿಷ್ಠ 50 ಮತ ಹೆಚ್ಚು ಬರುವಂತೆ ಕೆಲಸ ಮಾಡುತ್ತೇವೆ ಎಂದ ಅವರು, ತಮ್ಮ ಕೆಲಸ ಮಾಡಿಸಿಕೊಳ್ಳುವವರು ಪಕ್ಷದ ಕೆಲಸವನ್ನೂ ಮಾಡುವಂತೆ ಸೂಚನೆ ನೀಡಬೇಕು. ಕೆಲಸ ಮಾಡದಿದ್ದರೆ ಅಂತವರಿಗೆ ಗೇಟ್ ಪಾಸ್ ಕೊಡಿ ಎಂದು ಅವರು ಹೇಳಿದರು. ಇವರ ಈ ಮಾತಿಗೆ ಸಭೆಯು ಕರತಾಡನದ ಮೂಲಕ ಬೆಂಬಲ ಸೂಚಿಸಿತು.