ಸುಳ್ಯ:ಸುಳ್ಯ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ವತಿಯಿಂದ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ‘ಸುಳ್ಯ ದಸರಾ’ ಅ.9 ರಿಂದ ಅ.17ರ ತನಕ ಶ್ರೀ ಚೆನ್ನಕೇಶವದ ದೇವಸ್ಥಾನದ ಮುಂಭಾಗದ ಶಾರದಾಂಬಾ ಕಲಾ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಶ್ರೀ ಶಾರದಾಂಬ ದಸರಾ ಸಮೂಹ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಕಾರ್ಯಕ್ರಮಗಳ ವಿವರ ನೀಡಿದರು. ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾ ಅದ್ದೂರಿಯಾಗಿ ನಡೆಯಲಿದೆ.
ಅ.9ರಂದು ಬೆಳಿಗ್ಗೆ 9ಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಶ್ರೀ ಶಾರದಾ ದೇವಿಯ ಪ್ರತಿಷ್ಠಾ ಮೆರವಣಿಗೆ ನಡೆದು 10.17ಕ್ಕೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನಡೆಯಲಿದೆ. ಸಂಜೆ 3 ರಿಂದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಕುಣಿತ ಭಜನೆಯೊಂದಿಗೆ ಹಸಿರುವಾಣಿ ಮೆರವಣಿಗೆ ನಡೆಯಲಿದೆ.ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಬಳಿಕ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.
ಅ.10ರಂದು ಸಂಜೆ 7ರಿಂದ ನಾಟ್ಯ ನಿಲಯಂ ಗುರು ಶ್ರೀ ಬಾಲಕೃಷ್ಣ ಮಂಜೇಶ್ವರ ಹಾಗು ಶಿಷ್ಯ ವೃಂದದವರಿಂದ ನೃತ್ಯ ಸಂಕಲ್ಪಂ.
ಅ.11ರಂದು ಪೂ.9 ರಿಂದ ಭಜನೋತ್ಸವ ನಡೆಯಲಿದೆ. ಸಂಜೆ 7 ರಿಂದ ಸಾಂಸ್ಕೃತಿಕ ವೈಭವ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ.
ಅ.12 ರಂದು ಬೆಳಿಗ್ಗೆ 6.30ರಿಂದ ಆಯುಧ ಪೂಜೆ ಬೆಳಿಗ್ಗೆ 9ರಿಂದ ಮಹಿಳಾ ದಸರ ನಡೆಯಲಿದೆ. ಇದರ ಅಂಗವಾಗಿ ತಾಲೂಕಿನ ಮಹಿಳೆಯರು ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯಗಳು, ಗೃಹ ತಯಾರಿಕಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಮಹಿಳೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ
ಸಂಜೆ 7ರಿಂದ ಭರತನಾಟ್ಯ ನೃತ್ಯ ವೈಭವ ‘ಅಷ್ಠಲಕ್ಷ್ಮಿ, ರಾತ್ರಿ 9ರಿಂದ ಮಹಿಳಾ ಯಕ್ಷಗಾನ ಶ್ರೀದೇವಿ ಮಹಿಷಮರ್ದಿನಿ ನಡೆಯಲಿದೆ.
ಅ.13 ರಂದು ಬೆಳಿಗ್ಗೆ 6.22ರಿಂದ ಪುಟಾಣಿಗಳಿಗೆ ಅಕ್ಷರಾಭ್ಯಾಸ. ಬೆಳಿಗ್ಗೆ 9ರಿಂದ ಮಕ್ಕಳ ದಸರಾ ನಡೆಯಲಿದೆ. ಇದರ ಅಂಗವಾಗಿ ಸುಳ್ಯ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಮಕ್ಕಳ ಮೆರವಣಿಗೆ ನಡೆಯಲಿದೆ. ಬಳಿಕ ಮಕ್ಕಳ ಸಾಂಸ್ಕೃತಿಕ ವೈಭವ. ಸಂಜೆ 7.30ರಿಂದ ಡಾನ್ಸ್ ಡಾನ್ಸ್ ಕಾರ್ಯಕ್ರಮ ನಡೆಯಲಿದೆ.
ಅ.14ರಂದು ಸಂಜೆ 7 ರಿಂದ ವಿಜಯಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ ಕನ್ನಡ ನಾಟಕ ‘ಮಣಿಕಂಠ ಮಹಿಮೆ’ ಪ್ರಸ್ತುತಿಗೊಳ್ಳಲಿದೆ.
ಅ.15ರಂದು ಸಂಜೆ 6ರಿಂದ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ಮತ್ತು ಅಷ್ಟಾವಧಾನ ಸೇವೆ ಹಾಗೂ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.
ಅ.16 ರಂದು ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನಡೆಯಲಿದೆ. 7.30ರಿಂದ ಚಲನಚಿತ್ರ ಹಿನ್ನಲೆ ಗಾಯಕ ಸರಿಗಮಪ ವಿಜೇತ ದರ್ಶನ್ ನಾರಾಯಣ್ ನೇತೃತ್ವದಲ್ಲಿ ಜನಪ್ರಿಯ ಗಾಯಕರೊಂದಿಗೆ ಸಂಗೀತ ರಸಮಂಜರಿ ಸಂಗೀತ ಸೌರಭ ಕಾರ್ಯಕ್ರಮ ನಡೆಯಲಿದೆ.
ಅ.17ರಂದು ಶ್ರೀ ಶಾರದಾ ದೇವಿಯ ವಿಜ್ರಂಭಣೆಯ ಶೋಭಾ ಯಾತ್ರೆಯೊಂದಿಗೆ ಸುಳ್ಯ ದಸರಾ ಉತ್ಸವ ಸಂಪನ್ನಗೊಳ್ಳಲಿದೆ ಎಂದು ನಾರಾಯಣ ಕೇಕಡ್ಕ ಹೇಳಿದರು.
ಸುಳ್ಯದಲ್ಲಿ 1972ರಲ್ಲಿ ಪ್ರಾರಂಭಗೊಂಡು ಕಳೆದ 52 ವರ್ಷಗಳಿಂದ ವಿಜೃಂಭಣೆಯಿಂದ ನಡೆಸಲ್ಪಡುವ ಶ್ರೀ ಶಾರದಾಂಬ ದಸರಾ ಉತ್ಸವವು ಈ ಬಾರಿ ಮೈಸೂರು, ಮಡಿಕೇರಿ ಹಾಗೂ ಮಂಗಳೂರು ದಸರಾ ಮಾದರಿಯಲ್ಲಿ ವಿಜೃಂಭಣೆಯಿಂದ ನಡೆಸಲು ಎಲ್ಲಾ ಸಿದ್ಧತೆ ಮಾಡಲಾಗಿದೆ.
ಪ್ರತೀ ವರ್ಷ ಸುಳ್ಯ ನಗರವನ್ನು ದಸರಾ ಸಂದರ್ಭದಲ್ಲಿ ತಳಿರು ತೋರಣ ಹಾಗೂ ಬಂಟಿಂಗ್ಸ್ ಮೂಲಕ ಅಲಂಕಾರ ಮಾಡುತ್ತಿದ್ದೆವು. ಈ ವರ್ಷ ಸುಳ್ಯ ನಗರ ಪಂಚಾಯತ್ ಆಡಳಿತದ ಸಹಕಾರದೊಂದಿಗೆ, ವರ್ತಕರ ಸಹಭಾಗಿತ್ವದಲ್ಲಿ ಪ್ರತೀ ಅಂಗಡಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡುವಂತೆ ವಿನಂತಿಸಿಕೊಳ್ಳಲಾಗಿದೆ.
ಈ ಬಾರಿ ಸುಮಾರು 15ರಿಂದ 20 ಟ್ಯಾಬ್ಲೋ ಇರಲಿದ್ದು, ಮಹಿಳಾ ಸಮಿತಿಯ ವತಿಯಿಂದಲೂ ಈ ಬಾರಿ ಟ್ಯಾಬ್ಲೋ ಇರಲಿದೆ ಎಂದು ಅವರು ಹೇಳಿದರು. ಶೋಭಾಯಾತ್ರೆಯ ದಿನ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ವಿವಿಧ ಕಡೆಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಈ ಬಾರಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.16ರಂದು ನಡೆಯುವ ಸಾಂಸ್ಕೃತಿಕ ಸಂಭ್ರಮದ ಸಮಾರೋಪದ ದಿನ ಸಂಗೀತ ನಿರ್ದೇಶಕರುಗಳಾದ ಗುರುಕಿರಣ್, ಅರ್ಜುನ್ ಜನ್ಯ ಹಾಗೂ ಹಾಡುಗಾರ ವಿಜಯಪ್ರಕಾಶ್ ಅವರನ್ನು ಕರೆ ತರುವ ಪ್ರಯತ್ನ ನಡೆಯುತಿದೆ. ಪ್ರತಿ ದಿನ ರಾತ್ರಿ ಹಾಗೂ 3 ದಿನ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ ಎಂದು ನಾರಾಯಣ ಕೇಕಡ್ಕ ತಿಳಿಸಿದ್ದಾರೆ.
ಶಾರದಾಂಬ ಉತ್ಸವ ಸಮಿತಿಯ ಅಧ್ಯಕ್ಷ ಡಾ. ಡಿ.ವಿ. ಲೀಲಾಧರ್ ಅವರು ಮಾತನಾಡಿ ಈ ಬಾರಿ ದಸರಾ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ.ಇದಕ್ಕೆ ಎಲ್ಲರ ಸಹಕಾರ ಬೇಕು. ಎಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಬೇಕು ಎಂದು ಹೇಳಿದರು. ವಿವಿಧ ಸಂಘ – ಸಂಸ್ಥೆಗಳು ಸಹಕಾರ ನೀಡಬೇಕು. ಅಂತಿಮ ದಿನದ ಶೋಭಾಯಾತ್ರೆಯುದ್ದಕ್ಕೂ ತಾಲೂಕಿನ ಜನತೆ ಭಾಗವಹಿಸಬೇಕು ಎಂದು ಹೇಳಿದರು.
ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಗೋಕುಲ್ದಾಸ್ ಮಾತನಾಡಿ ಕಳೆದ 52 ವರ್ಷದಿಂದ ಸುಳ್ಯದ ಶ್ರೀ ಶಾರದಾಂಬ ಉತ್ಸವವು ಅದ್ಧೂರಿಯಾಗಿ ಜರುಗುತ್ತಿದೆ. ಈ ಬಾರಿ ಅತ್ಯಂತ ವಿಶೇಷವಾಗಿ ದಸರಾ ನಡೆಯಲಿದ್ದು, ಸುಳ್ಯದ ಎರಡನೇ ಜಾತ್ರೆಯಾಗಿ ದಸರಾ ಕಾರ್ಯಕ್ರಮವು ಮೂಡಿ ಬರಲಿದೆ.ಶೋಭಾಯಾತ್ರೆಯಲ್ಲಿ 15-20ಟ್ಯಾಬ್ಲೋಗಳು ಇರಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಶಾರದಾಂಬ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು,.ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಶ್ರೀ ಶಾರದಾಂಬ ಸೇವಾ ಸಮಿತಿಯ ಕೋಶಾಧಿಕಾರಿ ಅಶೋಕ್ ಪ್ರಭು, ಶ್ರೀ ಶಾರದಾಂಬ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಖಜಾಂಜಿ ಬೂಡು ರಾಧಾಕೃಷ್ಣ ರೈ, ಶ್ರೀ ಶಾರದಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್,ಉಪಾಧ್ಯಕ್ಷರಾದ ಡಾ. ಯಶೋದಾ ರಾಮಚಂದ್ರ, ಲತಾ ಮಧುಸೂದನ್, ಹರೀಶ್ ರೈ ಉಬರಡ್ಕ, ಹೇಮಂತ್ ಕಾಮತ್, ಶ್ರೀ ಶಾರದಾಂಬ ಉತ್ಸವ ಸಮಿತಿಯ ಕೋಶಾಧಿಕಾರಿ ಗಣೇಶ್ ಆಳ್ವ, ದಸರಾ ಉತ್ಸವ ಸಮಿತಿಯ ಖಜಾಂಜಿ ಸುನಿಲ್ ಕೇರ್ಪಳ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ.ಕೆ. ಸತೀಶ್, ಗೌರವ ಸದಸ್ಯರಾದ ತೀರ್ಥರಾಮ ಜಾಲ್ಸೂರು, ಶಾರದಾಂಬ ಉತ್ಸವ ಸಮಿತಿಯ ಉಪಾಧ್ಯಕ್ಷರಾದ ಸನತ್ ಪೆರಿಯಡ್ಕ, ಸತೀಶ್ ಕೆ.ಜಿ, ಶಿವನಾಥ್ ರಾವ್, ರಂಜಿತ್ ಎನ್.ಆರ್, ಸಂದೇಶ್ ಕುರುಂಜಿ, ಬಾಲಕೃಷ್ಣ ಎಸ್.ಬಿ.ಲ್ಯಾಬ್, ಶಾರದಾಂಬ ಮಹಿಳಾ ಸಮಿತಿಯ ಕಾರ್ಯದರ್ಶಿ ಶ್ರೀದೇವಿ ನಾಗರಾಜ ಭಟ್,ಶೀಲಾ ಅರುಣ ಕುರುಂಜಿ, ಗೌರವ ಸದಸ್ಯೆ ಶೀಲಾ ಅರುಣ ಕುರುಂಜಿ, ಹೇಮಲತಾ ದೇಂಗೋಡಿ ಮತ್ತಿತರರು ಉಪಸ್ಥಿತರಿದ್ದರು.