ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವೀರಯೋಧ ದಿ.ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಗೌರವಾರ್ಥ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ರಾಜ್ಯ ಮಟ್ಟದ ಬ್ರ್ಯಾಂಡ್ ಮಂಗಳೂರು ರೋಹನ್ ಕಪ್ -೨೦೨೪ ಕ್ರಿಕೆಟ್ ಪಂದ್ಯಾಟ ಜ.5 ರಿಂದ 7 ರ ತನಕ ನಡೆಯಲಿದೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ
ಆತಿಥ್ಯದಲ್ಲಿ ಜ.5,6, ಮತ್ತು 7ರಂದು ಅಡ್ಯಾರ್ನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.
ಟೂರ್ನಮೆಂಟ್ನಲ್ಲಿ ಒಟ್ಟು 24 ತಂಡಗಳು ಭಾಗವಹಿಸಲಿವೆ.
ಸಂಜೆ 4 ಗಂಟೆಗೆ ಸಹ್ಯಾದ್ರಿ ಸ್ವಾಗತ ದ್ವಾರದಿಂದ ಕ್ರೀಡಾಂಗಣಕ್ಕೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ನಾನಾ ಜಿಲ್ಲಾ ತಂಡಗಳ ಆಟಗಾರರು ತಮ್ಮ ಜಿಲ್ಲೆಯ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ ಹೆಜ್ಜೆ ಇರಿಸಲಿದ್ದಾರೆ. ಸಂಜೆ 5 ಗಂಟೆಗೆ ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಿರುವರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಕ್ಯಾ.ಎಂ.ವಿ.ಪ್ರಾಂಜಲ್ ಗೌರವಾರ್ಥದ ಪೆವಿಲಿಯನ್ ಉದ್ಘಾಟಿಸುವರು.
ಸೌಹಾರ್ದ ಪಂದ್ಯ:
ಮೊದಲ ದಿನ ಎರಡು ತಂಡಗಳ ನಡುವೆ ಸೌಹಾರ್ದ ಪಂದ್ಯ ನಡೆಯಲಿದೆ.
ಬ್ರ್ಯಾಂಡ್ ಮಂಗಳೂರು ಇಲೆವನ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ಮೀಡಿಯಾ ಇಲೆವನ್ ಮಧ್ಯೆ ಪ್ರದರ್ಶನ ಪಂದ್ಯ ನಡೆಯಲಿದೆ. ಬ್ರ್ಯಾಂಡ್ ಮಂಗಳೂರು ಇಲೆವನ್ ತಂಡದಲ್ಲಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಬಳಿಕ ನಾನಾ ಜಿಲ್ಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಎರಡು ದಿನಗಳ ಕಾಲ ಲೀಗ್ ಮಾದರಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ.
ಸಮಾರೋಪ ಸಮಾರಂಭ: ಜ.7ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಕ್ರೀಡಾ ಸಚಿವ ನಾಗೇಂದ್ರ ಮತ್ತು ವಸತಿ ಸಚಿವ ಝಮೀರ್ ಅಹ್ಮದ್ಖಾನ್ ಬಹುಮಾನ ವಿತರಿಸುವರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ ನಾನಾ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ತಿಳಿಸಿದ್ದಾರೆ.









