ಬೆಂಗಳೂರು:ಭರ್ಜರಿ ಪ್ರದರ್ಶನ ನೀಡಿದ ಶ್ರೀಲಂಕಾ ತಂಡ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಎದುರು 8 ವಿಕೆಟ್ ಅಂತರದ ಗೆಲುವು ಸಾಧಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ, 33.2 ಓವರ್ಗಳಲ್ಲಿ 156 ರನ್ ಗಳಿಸಿ ಆಲೌಟ್ ಆಯಿತು. ಗುರಿ ಬೆನ್ನತ್ತಿದ ಶ್ರೀಲಂಕಾ ಇನ್ನೂ
25.4 ಓವರ್ಗಳಲ್ಲಿ 160 ರನ್ ಗಳಿಸಿ ಜಯದ ನಗೆ ಬೀರಿತು.
ಮುರಿಯದ ಮೂರನೇ ವಿಕೆಟ್ಗೆ ಶತಕದ (137 ರನ್) ಜೊತೆಯಾಟವಾಡಿದ ಪಾಥುಮ್ ನಿಸಾಂಕ ಮತ್ತು ಸದೀರ ಸಮರವಿಕ್ರಮ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಾಥುಮ್ 83 ಎಸೆತಗಳಲ್ಲಿ 77 ರನ್ ಗಳಿಸಿದರೆ, ಸದೀರ 54 ಎಸೆತಗಳಿಂದ 65 ರನ್ ಕಲೆಹಾಕಿದರು. ಕುಶಾಲ್ ಪೆರೆರಾ (4) ಕುಶಾಲ್ ಮೆಂಡಿಸ್ (11) ಬೇಗನೇ ಔಟ್ ಆದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ಗೆ ಆರಂಭಿಕ ಡೇವಿಡ್ ಮಲಾನ್ ಮತ್ತು ಜಾನಿ ಬೆಸ್ಟೋ ಜೋಡಿ 44 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಬಳಿಕ ಕುಸಿತ ಕಂಡ ತಂಡ ಅಲ್ಪ ಮೊತ್ತಕ್ಕೆ ಕುಸಿಯಿತು. ಡೇವಿಡ್ ಮಲಾನ್(28), ಜೋ ರೂಟ್ (3), ಜಾನಿ ಬೆಸ್ಟೋ (31), ನಾಯಕ ಜಾಸ್ ಬಟ್ಲರ್ ( 8),ಲಿಯಾಮ್ ಲಿವಿಂಗ್ಸ್ಟೋನ್( 1) ಆಲ್ರೌಂಡರ್ ಮೋಯಿನ್ ಅಲಿ (15), ಕ್ರಿಸ್ ವೋಕ್ಸ್(0) ಬೇಗನೆ ನಿರ್ಗಮಿಸಿದರು. ಬೆನ್ ಸ್ಟೋಕ್ಸ್, 73 ಎಸೆತಗಳನ್ನು ಎದುರಿಸಿದ ಅವರು, 6 ಬೌಂಡರಿ ಸಹಿತ 43 ರನ್ ಗಳಿಸಿದರು.ಡೇವಿಡ್ ವಿಲ್ಲಿ (ಅಜೇಯ 14 ರನ್ ಗಳಿಸಿದರು.
ಲಂಕಾ ಪರ ಲಹಿರು ಕುಮಾರ 3 ವಿಕೆಟ್ ಉರುಳಿಸಿದರು. ಏಂಜೆಲೊ ಮ್ಯಾಥ್ಯೂಸ್, ಕುಶಾಲ್ ರಜಿತ ತಲಾ ಎರಡು ವಿಕೆಟ್ ಪಡೆದರೆ, ಇನ್ನೊಂದು ವಿಕೆಟ್ ಮಹೀಷ ತೀಕ್ಷಣ ಪಾಲಾಯಿತು.
ಇಂಗ್ಲೆಂಡ್ ವಿರುದ್ಧದ ಗೆಲುವು ಟೂರ್ನಿಯಲ್ಲಿ ಶ್ರೀಲಂಕಾ ತಂಡಕ್ಕೆ ಸಿಕ್ಕ ಎರಡನೇ ಜಯ. ಇದರೊಂದಿಗೆ ಆಡಿರುವ 5 ಪಂದ್ಯಗಳಲ್ಲಿ 4 ಪಾಯಿಂಟ್ ಕಲೆಹಾಕಿದ ಸಿಂಹಳಿಯರು, ಅಂಕ ಪಟ್ಟಿಯಲ್ಲಿ ರನ್ ರೇಟ್ ಆಧಾರದಲ್ಲಿ 5ನೇ ಸ್ಥಾನಕ್ಕೇರಿದರು. ಇಂಗ್ಲೆಂಡ್, ಐದು ಪಂದ್ಯಗಳಲ್ಲಿ ನಾಲ್ಕನೇ ಸೋಲು ಅನುಭವಿಸಿತು. ಅದರೊಂದಿಗೆ, ಅಂಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿಯಿತು.