ಹೈದರಾಬಾದ್:ಮಳೆಯ ಕಾರಣದಿಂದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳ ಮಧ್ಯೆಯ ಐಪಿಎಲ್ ಪಂದ್ಯ ರದ್ದುಗೊಂಡಿದೆ.ಉಭಯ ತಂಡಗಳಿಗೆ ಒಂದೊಂದು ಅಂಕ ನೀಡಲಾಯಿತು. ಇದರೊಂದಿಗೆ ಹಾಲಿ ರನ್ನರ್ ಅಪ್ ಹೈದರಾಬಾದ್ ತಂಡದ ಪ್ಲೇ ಆಫ್ ಕಾಣದೆ ಹೊರ ಬಿದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು
ರಾಜಸ್ಥಾನ ರಾಯಲ್ಸ್ ತಂಡಗಳು ಈಗಾಗಲೇ ಹೊರಬಿದ್ದಿವೆ. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡವು ವೇಗಿ ಪ್ಯಾಟ್ ಕಮಿನ್ಸ್ ಅವರ ದಾಳಿಗೆ ಆರಂಭದಲ್ಲೇ ಕುಸಿಯಿತು. ಕೆಳ ಕ್ರಮಾಂಕದ ಬ್ಯಾಟರ್ಗಳ ಹೋರಾಟದ ನೆರವಿನಿಂದ ತಂಡಕ್ಕೆ 133 ರನ್ಗಳ ಸಾಧಾರಣ ಮೊತ್ತ ಪೇರಿಸಿತು.ಡೆಲ್ಲಿ ತಂಡದ ಇನಿಂಗ್ಸ್ ಮುಗಿಯುತ್ತಿದ್ದಂತೆ ಮಳೆ ಆರಂಭವಾಯಿತು. ರಾತ್ರಿ 11 ಗಂಟೆಯವರೆಗೂ ಹವಾಮಾನ ಪರಿಸ್ಥಿತಿ ಸುಧಾರಿಸದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.
ಇದಕ್ಕೂ ಮುನ್ನ ಕಮಿನ್ಸ್ (4–0–19–3) ದಾಳಿಯಿಂದಾಗಿ ಡೆಲ್ಲಿ ತಂಡವು 29 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು.
ಅಗ್ರ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು.ಕಮಿನ್ಸ್ ಮೂರು ಓವರ್ಗಳಲ್ಲಿ ಮೂರು ವಿಕೆಟ್ ಗಳಿಸಿದರು. ಟ್ರಿಸ್ಟನ್ ಸ್ಟಬ್ಸ್ (41; 36ಎ, 4X4), ವಿಪ್ರಜ್ ನಿಗಂ (18) ಆಶುತೋಷ್ ಶರ್ಮಾ (41; 26ಎ, 4X2, 6X3) ಇನಿಂಗ್ಸ್ಗೆ ಚೇತರಿಕೆ ನೀಡಿದರು.7ನೇ ವಿಕೆಟ್ ಜೊತೆಯಾಟದಲ್ಲಿ ಸ್ಟಬ್ಸ್ ಮತ್ತು ಶರ್ಮಾ ಅವರು 66 ರನ್ ಸೇರಿಸಿದರು. ಅದರಿಂದಾಗಿ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 133 ರನ್ ಗಳಿಸಲು ಸಾಧ್ಯವಾಯಿತು.





