ನವದೆಹಲಿ: ಸನ್ರೈಸರ್ಸ್ ಹೈದರಾಬಾದ್ ತಂಡವು ಭಾನುವಾರ ಐಪಿಎಲ್ ಪಂದ್ಯದಲ್ಲಿ 110 ರನ್ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮಣಿಸಿತು.ಹೆನ್ರಿಚ್ ಕ್ಲಾಸೆನ್ (ಅಜೇಯ 105, 39ಎ, 4X7, 6X9) ಶತಕದ ನೆರವಿನಿಂದ ಸನ್ ರೈಸರ್ಸ್ ಭರ್ಜರಿ ಗೆಲುವು ದಾಖಲಿಸಿತು. ಪ್ಲೇಆಫ್ ರೇಸ್ನಿಂದ ಎರಡೂ ತಂಡಗಳು ಮೊದಲೇ ಹೊರಬಿದ್ದಿರುವುದರಿಂದ ಈ ಪಂದ್ಯಕ್ಕೆ ಹೆಚ್ಚಿನ ಮಹತ್ವ ಇರಲಿಲ್ಲ. ಆದರೆ
ಕೋಲ್ಕತ್ತ ತಂಡವನ್ನು ಸೋಲಿಸಿದ ಸನ್ರೈಸರ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು. ಹೆನ್ರಿಚ್ ಮತ್ತು ಟ್ರಾವಿಸ್ ಹೆಡ್ (76; 40ಎ, 4X6, 6X6) ಅವರ ಅಬ್ಬರದ ಬ್ಯಾಟಿಂಗ್ನಿಂದ ಸನ್ರೈಸರ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ಗಳಿಗೆ 278 ರನ್ ಗಳಿಸಿತು. ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತ ತಂಡವು 18.4 ಓವರ್ಗಳಲ್ಲಿ 168 ರನ್ಗಳಿಸಿ ಹೋರಾಟನನ್ನು ಮುಗಿಸಿತು. ಸುನಿಲ್ ನಾರಾಯಣ್ (31), ಮನೀಷ್ ಪಾಂಡೆ (30), ಹರ್ಷಿತ್ ರಾಣಾ (34) ರನ್ ಗಳಿಸಿ ಹೋರಾಟ ನೀಡಿದರು.
ಸನ್ರೈಸರ್ಸ್ನ ಜಯದೇವ್ ಉನದ್ಕತ್, ಇಶಾನ್ ಮಾಲಿಂಗ ಮತ್ತು ಹರ್ಷ್ ದುಬೆ ತಲಾ ಮೂರು ವಿಕೆಟ್ ಪಡೆದು ಎದುರಾಳಿ ತಂಡವನ್ನು ಯಾವುದೇ ಹಂತದಲ್ಲಿ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಸನ್ ಪರ
ಅಭಿಷೇಕ್ ಶರ್ಮಾ (32; 16ಎ, 4X4, 6X2) ಮತ್ತು ಹೆಡ್ ಅಮೋಘ ಆರಂಭ ನೀಡಿದರು. ಅವರ ಆಟದ ವೇಗಕ್ಕೆ ಕೇವಲ 6.5 ಓವರ್ಗಳಲ್ಲಿ 92 ರನ್ಗಳು ಹರಿದುಬಂದವು. ಹೆಡ್ ಜೊತೆಗೂಡಿದ ಕ್ಲಾಸೆನ್ ಐಪಿಎಲ್ನಲ್ಲಿ ಅತಿ ವೇಗವಾಗಿ ಶತಕ ದಾಖಲಿಸಿದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆ ಅವರದ್ದಾಯಿತು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ ಸೇರಿ 83 ರನ್ ಕಲೆಹಾಕಿದರು. ಇಶಾನ್ ಕಿಶನ್ (29; 20ಎ) ಸೇರಿ 83 ರನ್ಗಳನ್ನು ಸೂರೆ ಮಾಡಿದರು. ಅದರಲ್ಲಿ ಕ್ಲಾಸೆನ್ ಅವರದ್ದೇ ಸಿಂಹಪಾಲು.





