ಸೇಂಟ್ ಜಾರ್ಜ್ ಪಾರ್ಕ್: ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಭಾರತದ ಎದುರು 5 ವಿಕೆಟ್ಗಳಿಂದ ಜಯ ಸಾಧಿಸಿತು.ಮೂರು ಪಂದ್ಯಗಳ ಸರಣಿಯಲ್ಲಿ 1–0ಯಿಂದ ಮುನ್ನಡೆ ಸಾಧಿಸಿತು. ಸರಣಿಯ ಮೊದಲ ಪಂದ್ಯವು ಮಳೆಗಾಹುತಿಯಾಗಿತ್ತು.
ಈ ಪಂದ್ಯದಲ್ಲಿಯೂ ಮಳೆಯಿಂದಾಗಿ ದಕ್ಷಿಣ ಆಫ್ರಿಕಾ ತಂಡದ ಗೆಲುವಿನ ಗುರಿಯನ್ನು ಪರಿಷ್ಕರಿಸಲಾಗಿತ್ತು. ಟಾಸ್ ಸೋತಿದ್ದ ಭಾರತ ಮೊದಲು
ಬ್ಯಾಟಿಂಗ್ ಮಾಡಿತು. ತಂಡವು 19.3 ಓವರ್ಗಳಲ್ಲಿ 7 ವಿಕೆಟ್ಗಳಿಗೆ 180 ರನ್ ಗಳಿಸಿತು. ಈ ಸಂದರ್ಭದಲ್ಲಿ ಮಳೆ ಬಂದು ಆಟ ನಿಂತಿತು. ಆದ್ದರಿಂದ ಡಕ್ವರ್ಥ್ ಲೂಯಿಸ್ ನಿಯಮದಡಿಯಲ್ಲಿ 15 ಓವರ್ಗಳಲ್ಲಿ 152 ರನ್ಗಳ ಗುರಿಯನ್ನು ಪರಿಷ್ಕರಿಸಲಾಯಿತು. ಆಫ್ರಿಕಾ 13.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಜಯ ದಾಖಲಿಸಿತು.
ಆರಂಭಿಕ ಬ್ಯಾಟರ್ ರೀಜಾ ಹೆನ್ರಿಕ್ಸ್ (49 ರನ್) ಮತ್ತು ಮ್ಯಾಥ್ಯೂ ಬ್ರೀಟ್ಜ್ ಅವರು ಕೇವಲ 2ವಓವರ್ಗಳಲ್ಲಿ 38 ರನ್ ಸೂರೆ ಮಾಡಿ ಉತ್ತಮ ಆರಂಭ ನೀಡಿದರು. ನಾಯಕ ಏಡನ್ ಮರ್ಕರಂ 17 ಎಸೆತಗಳಲ್ಲಿ 30 ರನ್ ಗಳಿಸಿದರು. ಡೇವಿಡ್ ಮಿಲ್ಲರ್ 17, ಟ್ರಿಸ್ಟನ್ ಸ್ಟಬ್ಸ್ ಔಟಾಗದೆ 14, ಆ್ಯಂಡಿಲೆ ಪಿಶುವಾಯೊ ಔಟಾಗದೆ 10 ರನ್ ಬಾರಿಸಿದರು.
ಮೊದಲು ಬ್ಯಾಟ್ ಮಾಡಿದ ಭಾರತ ಪರ ಸೂರ್ಯಕುಮಾರ್ ಯಾದವ್ (56; 36ಎ, 4X5, 6X3) ಮತ್ತು ರಿಂಕು (ಔಟಾಗದೆ 68; 39ಎ, 4X9, 6X2) ಅವರು ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು.
ಭಾರತದ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರಿಬ್ಬರೂ ಖಾತೆ ತೆರೆಯದೇ ಔಟಾದರು.
ಈ ಹಂತದಲ್ಲಿ ಕ್ರೀಸ್ನಲ್ಲಿದ್ದ ತಿಲಕ್ ವರ್ಮಾ (29; 20ಎ) ಅವರು ಸೂರ್ಯ ಅವರೊಂದಿಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 49 ರನ್ ಸೇರಿಸಿದರು. ಸೂರ್ಯ ಮತ್ತು ರಿಂಕು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 70 ರನ್ ಸೇರಿಸಿದರು.









