ಸುಳ್ಯ:ಸುಳ್ಯದ ಸ್ನೇಹ ಶಾಲೆಯಿಂದ ಕರಿಕೆಯ ಸರಕಾರಿ ಪ್ರೌಢ ಶಾಲೆಗೆ ನಿರ್ಮಸಿದ ಶಿಕ್ಷಣದ ಸ್ನೇಹ ಸೇತುವಿಗೆ ಉತ್ತಮ ಫಲಿತಾಂಶ. ಮೊನ್ನೆ ತಾನೆ ಪ್ರಕಟಗೊಂಡ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಸ್ನೇಹ ಶಾಲೆಯ ಶಿಕ್ಷಕರು ಹೇಳಿ ಕೊಟ್ಟ ಪಾಠವನ್ನು ವರ್ಚುವಲ್ ಆಗಿ ಕೇಳಿಸಿಕೊಂಡ ಕರಿಕೆ ಶಾಲೆಯ ಬಹುತೇಕ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೀಗೆ ವರ್ಚುವಲ್ ಆಗಿ ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ಪಾಠ ಕೇಳಿಸಿಕೊಂಡು
ಪರೀಕ್ಷೆ ಬರೆದ 17 ವಿದ್ಯಾರ್ಥಿಗಳಲ್ಲಿ 15 ಮಂದಿ ಉತ್ತೀರ್ಣರಾಗಿದ್ದಾರೆ. ಕಳೆದ ಅಧ್ಯಯನ ವರ್ಷದಲ್ಲಿ
ಕರಿಕೆ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರ ಕೊರತೆ ಉಂಟಾಗಿ ಮಕ್ಕಳಿಗೆ ಪಾಠ ನಡೆಯದ ಸಂದರ್ಭ ಎದುರಾದಾಗ ಸ್ನೇಹ ಶಿಕ್ಷಣ ಸಂಸ್ಥೆ ಆರಂಭಿಸಿದ ಹೊಸ ಪ್ರಯೋಗ ಈ ವರ್ಚುವಲ್ ತರಗತಿಗಳು. ಕಳೆದ ನವೆಂಬರ್ ನಿಂದ ಮಾರ್ಚ್ ತಿಂಗಳ ತನಕ ಸ್ನೇಹ ಶಾಲೆಯ ಶಿಕ್ಷಕರು ವರ್ಚುವಲ್ ಮಾದರಿಯಲ್ಲಿ ಕರಿಕೆ ಶಾಲೆಯ ಮಕ್ಕಳಿಗೆ ಪಾಠ ಬೋಧಿಸಿದ್ದರು. ಸ್ನೇಹ ಶಾಲೆಯ
ವರ್ಚುವಲ್ ತರಗತಿಯ ಬಗ್ಗೆ ಸುಳ್ಯ ಮಿರರ್ ಮಾ.15ರಂದು ಪ್ರಕಟಿಸಿದ್ದ ವಿಶೇಷ ವರದಿ
ಶಿಕ್ಷಕಿಯರಾದ ಪ್ರತಿಮಾ ಕುಮಾರಿ ಕೆ.ಎಸ್. ಜೀವಶಾಸ್ತ್ರ (ಬಯೋಲಜಿ) ಪಾಠ, ಅಮೃತಾ ಕೆ ಮಾಡುವ ರಸಾಯನ ಶಾಸ್ತ್ರ (ಕೆಮಿಸ್ಟ್ರಿ) ಮಾಡಿದ ಪಾಠಗಳನ್ನು ಸುಮಾರು 30 ಕಿ.ಮಿ.ದೂರದ ಕರಿಕೆ ಶಾಲೆಯ ಕೊಠಡಿಯಲ್ಲಿ ಕುಳಿತು ಕೇಳಿದ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ಮೂಲಕ ಸ್ನೇಹ ಶಾಲೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಅವರ ಆಶಯ ಮತ್ತು ಶಿಕ್ಷಕರ ಶ್ರಮಕ್ಕೆ ಸಾರ್ಥಕ ಭಾವವನ್ನು ತೋರ್ಪಡಿಸಿದ್ದಾರೆ.
ಸುಳ್ಯ ಸ್ನೇಹ ಶಾಲೆಯ ತರಗತಿಯಲ್ಲಿ ಶಿಕ್ಷಕರು ಮಾಡುವ ಪಾಠಗಳು ಡಿಜಿಟಲ್ ಬೋರ್ಡ್ನಿಂದ ಗೂಗಲ್ ಮೀಟ್ನ ಸ್ಕ್ರೀನ್ ಶೇರ್ ಮೂಲಕ ಕರಿಕೆ ಶಾಲೆಯ ತರಗತಿಯ ಲ್ಯಾಪ್ಟಾಪ್ಗೆ.. ಅಲ್ಲಿಂದ ಪ್ರಾಜೆಕ್ಟರ್ ಮೂಲಕ ದೊಡ್ಡ ಪರದೆಯಲ್ಲಿ ಮಕ್ಕಳ ಮುಂದೆ ತೆರೆದು ಕೊಳ್ಳುತ್ತಿತ್ತು. ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಹಾಗೂ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ ಅವರ ಮಾರ್ಗದರ್ಶನದಲ್ಲಿ
ಕರಿಕೆ ಪ್ರೌಢ ಶಾಲೆಯ 8,9 ಮತ್ತು10ನೇ ತರಗತಿಯ ಮಕ್ಕಳಿಗೆ ವಾರದಲ್ಲಿ ಪ್ರತಿ ತರಗತಿಗಳಿಗೆ,ತಲಾ ಎರಡು ಕ್ಲಾಸ್ಗಳಂತೆ ಬಯೋಲಜಿ ಮತ್ತು ಕೆಮಿಸ್ಟ್ರಿ ಪಾಠವನ್ನು ಈ ರೀತಿ ಶಿಕ್ಷಕರಾದ ಪ್ರತಿಮಾ ಕುಮಾರಿ ಹಾಗೂ ಅಮೃತಾ ಮಾಡಿದ್ದರು. ಕರಿಕೆ ಶಾಲೆಯ ಭೌತಶಾಸ್ತ್ರ ಶಿಕ್ಷಕರಾದ ಹರೀಶ್ ಶಾಲೆಯಲ್ಲಿ ವರ್ಚುವಲ್ ತರಗತಿಗಳಿಗೆ ಅಗತ್ಯ ನೆರವನ್ನು ನೀಡಿದ್ದರು. ವಿವೇಕಾನಂದ ಯೂತ್ ಮೂವ್ಮೆಂಟ್ ವರ್ಚುವಲ್ ಕ್ಲಾಸ್ಗೆ ಬೇಕಾಗಿ ಕರಿಕೆ ಶಾಲೆಗೆ ಪರದೆ, ಪ್ರಾಜೆಕ್ಟರ್,ಲ್ಯಾಪ್ಟಾಪ್ ನೀಡಿ ಸ್ಮಾರ್ಟ್ ಕ್ಲಾಸ್ ರೂಪಿಸಿದ್ದರು. ಗಡಿನಾಡ ಅಭಿವೃದ್ಧಿ ಪ್ರಾಧಿಕಾರದವರು ಸ್ನೇಹ ಶಾಲೆಗೆ ನೀಡಿದ ಡಿಜಿಟಲ್ ಬೋರ್ಡ್ನ್ನು ವರ್ಚುವಲ್ ತರಗತಿಗೆ ಬಳಸಿಕೊಳ್ಳಲಾಗಿತ್ತು.
ವರ್ಚುವಲ್ ತರಗತಿ ನಡೆಸಿದ ಸ್ನೇಹ ಶಾಲೆಯ ಶಿಕ್ಷಿಕಿಯರಾರ ಪ್ರತಿಮಾಕುಮಾರಿ ಹಾಗೂ ಅಮೃತಾ
ಸ್ನೇಹ ಸೇತು ಆರಂಭಗೊಂಡದ್ದು ಹೇಗೆ..?
2023ರ ಜುಲೈ, ಆಗಸ್ಟ್ ತಿಂಗಳಲ್ಲಿ ಕರಿಕೆ ಶಾಲೆಯಲ್ಲಿದ್ದ ಕೆಲವು ಶಿಕ್ಷಕರು ವರ್ಗಾವಣೆಯಾಗಿ ತೆರಳಿದರು. ಇದರಿಂದ ಶಾಲೆಯಲ್ಲಿ ಮಕ್ಕಳಿಗೆ ಪಾಠ ಪ್ರವಚನಕ್ಕೆ ಸಮಸ್ಯೆಯಾಗಿತ್ತು.ಕೆಲವು ಶಿಕ್ಷಕರ ನೇಮಕ, ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದ್ದರೂ ವಿಜ್ಞಾನ ವಿಭಾಗದಲ್ಲಿ ಶಿಕ್ಷಕರ ಕೊರತೆ ಎದುರಾಯಿತು. ಈ ಸಂದರ್ಭದಲ್ಲಿ
ಕೊಡಗು ಜಿಲ್ಲಾ ಪ್ರಭಾರ ಡಿಡಿಪಿಐ ಆಗಿದ್ದ ಸೌಮ್ಯ ಅವರು ವಿಜ್ಞಾನ ವಿಷಯಕ್ಕೆ ಅತಿಥಿ ಶಿಕ್ಷಕರಿದ್ದರೆ ಕಳಿಸುವಂತೆ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಅವರಿಗೆ ತಿಳಿಸಿದ್ದರು. ಆದರೆ ಶಿಕ್ಚಕರನ್ನು ಕಳಿಸಲಾಗಲಿಲ್ಲ. ಬದಲಾಗಿ ಡಾ.ದಾಮ್ಲೆ ಅವರಿಗೆ ಹೊಳೆದ ಅಶಯ ವರ್ಚುವಲ್ ತರಗತಿ. ತಮ್ಮ ಶಾಲೆಯ ವಿಜ್ಞಾನ ಶಿಕ್ಷಕರು ಹಾಗೂ
ಡಿಜಿಟಲ್ ಬೋರ್ಡ್ ಬಳಸಿ ಕ್ಲಾಸ್ ನೀಡುವುದಾಗಿ ಡಾ.ದಾಮ್ಲೆ ಅವರು ತಿಳಿಸಿದರು. ಅದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಒಪ್ಪಿ ಈ ವರ್ಚುವಲ್ ತರಗತಿಗಳು ಆರಂಭಗೊಂಡಿತು. ನವೆಂಬರ್ ತಿಂಗಳಿನಿಂದ ಆರಂಭಗೊಂಡು ಸುಮಾರು 5 ತಿಂಗಳ ಕಾಲ ಈ ರೀತಿಯ ತರಗತಿಗಳು ನಡೆದವು.
ಕರಿಕೆ ಶಾಲೆಯಲ್ಲಿ ಶಿಕ್ಷಕರ ಕೊರತೆ ಉಂಟಾದಾಗ ಈ ರೀತಿಯ ಪ್ರಯೋಗ ಮಾಡಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಮತ್ತು ಈಗ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶವೂ ಬಂದಿದೆ.
ಆಧುನಿಕ ತಂತ್ರಜ್ಞಾನವನ್ನು ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ನಮ್ಮ ಶಿಕ್ಷಣ ಸಂಸ್ಥೆಯಿಂದ ಈ ರೀತಿಯ ಸೌಲಭ್ಯ ನೀಡಲು ಉತ್ಸುಕರಾಗಿದ್ದೇವೆ.
-ಡಾ.ಚಂದ್ರಶೇಖರ ದಾಮ್ಲೆ
ಶಿಕ್ಷಣ ತಜ್ಞರು.
ಅಧ್ಯಕ್ಷರು ಸ್ನೇಹ ಶಿಕ್ಷಣ ಸಂಸ್ಥೆ.