ನವದೆಹಲಿ: ಭಾರತದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಬರೆದ ತಾರೆ ಆಟಗಾರ್ತಿ ಹಾಗೂ ಮಾಜಿ ವಿಶ್ವ ನಂ.1 ಸೈನಾ ನೆಹ್ವಾಲ್ ಅವರು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ಗೆ ನಿವೃತ್ತಿ ಘೋಷಿಸಿದ್ದಾರೆ.
ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿದ ಸೈನಾ ನೆಹ್ವಾಲ್, “ನಾನು ಕಳೆದ ಎರಡು ವರ್ಷಗಳಿಂದ
ಬ್ಯಾಡ್ಮಿಂಟನ್ ಆಡುತ್ತಿಲ್ಲ. ನನ್ನ ದೇಹ, ವಿಶೇಷವಾಗಿ ಮೊಣಕಾಲುಗಳು, ನನ್ನ ಆಟಕ್ಕೆ ಸ್ಪಂದಿಸುತ್ತಿಲ್ಲ. ನಾನು ನನ್ನದೇ ಉದ್ದೇಶಗಳಿಂದ ಬ್ಯಾಡ್ಮಿಂಟನ್ ಆರಂಭಿಸಿದೆ ಮತ್ತು ಈಗ ನನ್ನದೇ ಕಾರಣಗಳಿಂದ ಅದರಿಂದ ಹಿಂದೆ ಸರಿಯುತ್ತಿದ್ದೇನೆ. ಅದನ್ನು ಅಧಿಕೃತವಾಗಿ ಘೋಷಿಸುವ ಅಗತ್ಯವಿದೆ ಎಂದು ನಾನು ಭಾವಿಸಿರಲಿಲ್ಲ” ಎಂದು ಹೇಳಿದರು.
ಮೊಣಕಾಲಿನ ತೀವ್ರ ನೋವಿನಿಂದಾಗಿ ಸೈನಾ ಅವರು ಕಳೆದ ಎರಡು ವರ್ಷಗಳಿಂದ ಬ್ಯಾಡ್ಮಿಂಟನ್ ಅಂಗಳದಿಂದ ದೂರ ಉಳಿದಿದ್ದರು. ಅವರು ಕೊನೆಯದಾಗಿ 2023ರ ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸ್ಪರ್ಧಿಸಿದ್ದರು.ಬ್ಯಾಡ್ಮಿಂಟನ್ನಲ್ಲಿ ವಿಶ್ವದ ಅತ್ಯುತ್ತಮ ಆಟಗಾರರಾಗಬೇಕೆಂದರೆ ಪ್ರತಿದಿನ 8–9 ಗಂಟೆಗಳ ಕಾಲ ಕಠಿಣ ತರಬೇತಿ ಅಗತ್ಯ.
ಸೈನಾ ನೆಹ್ವಾಲ್ ಅವರ ವೃತ್ತಿಜೀವನದಲ್ಲಿ 2016ರ ರಿಯೋ ಒಲಿಂಪಿಕ್ಸ್ ಪ್ರಮುಖ ತಿರುವು ತಂದಿತು. ಆ ವೇಳೆ ಅವರಿಗೆ ಮೊಣಕಾಲಿನ ಗಂಭೀರ ಗಾಯ ಸಂಭವಿಸಿದ್ದು, ಅದು ಅವರ ಆಟದ ಮೇಲೆಯೇ ಗಮನಾರ್ಹ ಪರಿಣಾಮ ಬೀರಿತು. ಆದರೂ ಗಾಯದಿಂದ ಚೇತರಿಸಿಕೊಂಡ ಸೈನಾ, 2017ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಮತ್ತು 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ತಮ್ಮ ಹೋರಾಟ ಮನೋಭಾವವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.
ಭಾರತೀಯ ಕ್ರೀಡಾ ಇತಿಹಾಸದಲ್ಲಿ ಸೈನಾ ನೆಹ್ವಾಲ್ ಅವರಿಗೆ ವಿಶೇಷ ಸ್ಥಾನವಿದೆ. ಅವರು 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಇತಿಹಾಸ ನಿರ್ಮಿಸಿದ್ದರು.












