ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರಕಾರದ ಅವಧಿಯಲ್ಲಿ ಎಷ್ಟು ಅನುದಾನ ಬಂದಿದೆ, ಕಾಂಗ್ರೆಸ್ ಸರಕಾರ ಎಷ್ಟು ಅನುದಾನ ಕೊಟ್ಟಿದೆ ಎಂಬುದರ ಬಗ್ಗೆ ಚರ್ಚೆಯಾಗಬೇಕು. ಕಾಂಗ್ರೆಸ್ ಸರಕಾರ ಬಂದ ಮೇಲೆ ಜಿಲ್ಲೆಯ ಅಭಿವೃದ್ಧಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಗ್ರಹಿಸಿದ್ದಾರೆ. ಬಿಜೆಪಿ ಸುಳ್ಯ ಮಂಡಲ ಸಮಿತಿಯ ವತಿಯಿಂದ
ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಬಿಜೆಪಿ ಬೆಂಬಲಿತ ಚುನಾಯಿತ ಸಹಕಾರಿಗಳ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯದ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಶೂನ್ಯ ಎಂದು ದೂರಿದ ಅವರು ಯಾವುದೇ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ, ಅನುದಾನ ನೀಡದ ಬಗ್ಗೆ ಕಾಂಗ್ರೆಸ್ ಶಾಸಕರೇ ಸರಕಾರವನ್ನು ಜರಿಯುತ್ತಿದ್ದಾರೆ. ಈ ಸರಕಾರ ಎಸ್ಟು ಬೇಗ ತೊಲಗುತ್ತದೆಯೋ ಅಷ್ಟು ಬೇಗ ರಾಜ್ಯಕ್ಕೆ ಒಳ್ಖೆಯದಾಗುತ್ತದೆ ಎಂದ ಅವರು ಯಾವಾಗ ಚುನಾವಣೆ ನಡೆದರೂ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇನೆ. ಅದಕ್ಕಾಗಿ ಪ್ರತಿ ಮಂಡಲಕ್ಕೂ ಪ್ರವಾಸ ಮಾಡುತ್ತಿದ್ದೇನೆ ಎಂದ ಅವರು
ಸಹಕಾರಿ ಕ್ಷೇತ್ರವು ಪಕ್ಷದ ಜೊತೆಗೆ ಬೆಳೆದು ಬಂದಿದೆ.ಸಹಕಾರಿ ಕ್ಷೇತ್ರದಲ್ಲಿನ ಗೆಲುವಿಗೆ ಪಕ್ಷದ ಕಾರ್ಯಕರ್ತರ ಶ್ರಮ ಇದ್ದೇ ಇದೆ.ಆದುದರಿಂದ ಸಹಕಾರಿಗಳು ಸಹಕಾರಿ ಕ್ಷೇತ್ರದ ಜೊತೆಗೆ ಪಕ್ಷದ ಸಂಘಟನೆಗೆ ಶಕ್ತಿ ತುಂಬಬೇಕು.ಸಹಕಾರಿ ಕ್ಷೇತ್ರದ ದೊಡ್ಟ ಕೊಡುಗೆ ಕ್ಯಾಂಪ್ಕೋ ಎಂದ ಅವರು ಗ್ರಾಮೀಣ ಜನರ ಬೆನ್ನೆಲುಬಾಗಿ ಸಹಕಾರಿ ಕ್ಷೇತ್ರ ಕೆಲಸ ಮಾಡಿದೆ ಎಂದರು. ಸಹಕಾರಿ ಕ್ಷೇತ್ರಕ್ಕೆ ಶಕ್ತಿಯನ್ನು ತುಂಬಬೇಕು, ದೇಶದಲ್ಲಿ ಸಹಕಾರಿ ಕ್ಷೇತ್ರ ಇನ್ನಷ್ಟು ಪಸರಿಸಬೇಕು ಎಂದು ಕೇಂದ್ರ ಸರಕಾರ ಪ್ರತ್ಯೇಕ ಸಹಕಾರಿ ಸಚಿವಾಲಯ ರಚಿಸಿ ಅಮಿತ್ ಷಾ ಅವರನ್ನು ಸಚಿವರನ್ನಾಗಿ ಮಾಡಿದೆ. ಇದರಿಂದ ದೇಶದ ಸಹಕಾರಿ ವ್ಯವಸ್ಥೆ ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆದಿದೆ ಎಂದು ಅವರು ಹೇಳಿದರು.ಭಯೋತ್ಪಾದಕರನ್ನು ಮಟ್ಟ ಹಾಕಲು ಆಪರೇಷನ್ ಸಿಂಧೂರ್ ಮೂಲಕ ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಹಾಗೂ ಜಗತ್ತಿಗೆ ಸ್ಪಷ್ಟ ಸಂದೇಶವನ್ನು ನೀಡಿದೆ.
ನರೇಂದ್ರ ಮೋದಿ ದೇಶದ ದೊಡ್ಡ ಶಕ್ತಿ, ಆ ಶಕ್ತಿಯ ಅಡಿಯಲ್ಲಿ ಕಾರ್ಯಕರ್ತರು ಧೈರ್ಯದಿಂದ ಪಕ್ಷಕ್ಕಾಗಿ, ದೇಶಕ್ಕಾಗಿ ಕೆಲಸ ಮಾಡಬೇಕು ಎಂದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ’ ಸಹಕಾರಿ ಕ್ಷೇತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಯ ಆಶೋತ್ತರಗಳನ್ನು ಈಡೇರಿಸಬೇಕು, ಹೊಸ ದೃಷ್ಠಿಕೋನ ಮತ್ತು ದಿಕ್ಕಿನೊಂದಿಗೆ ಸಹಕಾರಿ ಕ್ಷೇತ್ರ ಮುನ್ನಡೆಯಬೇಕು ಎಂದ ಅವರು ಕೃಷಿಕರ ಬೆನ್ನೆಲುಬಾಗಿರುವ ಅಡಿಕೆ ಕೃಷಿಗೆ ಹಳದಿ, ಎಲೆ ಚುಕ್ಕಿ ರೋಗ ಬಾದೆಯಿಂದ ಕಂಗೆಟ್ಟ ಕೃಷಿಕರಿಗೆ ಪರ್ಯಾಯ ಕೃಷಿಯ ಯೋಚನೆ, ಯೋಜನೆಗಳು ಬೇಕಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ
ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಸಹಕಾರಿ ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಗೆಲುವು ಸಾಧಿಸಿದೆ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು.ಶಾಸಕಿ ಭಾಗೀರಥಿ ಮುರುಳ್ಯ,ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಾಜಿ ಸಚಿವ ಎಸ್.ಅಂಗಾರ, ವಿಧಾನ ಪತಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಕೇಶ್ ರೈ ಕೆಡೆಂಜಿ, ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ವಿನಯಕುಮಾರ್ ಮುಳುಗಾಡು, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ್ ಕಲ್ಪುರೆ ವಂದಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಕಾರ್ಯಕ್ರಮ ನಿರೂಪಸಿದರು.
ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.







