ಗುವಾಹಟಿ:ಯುವ ಬ್ಯಾಟರ್ ವೈಭವ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡಕ್ಕೆ(ಆರ್ಆರ್) ಸುಲಭ ಜಯ.ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ರಾಜಸ್ಥಾನ
18ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿ 6 ವಿಕೆಟ್ಗಳ ಗೆಲುವು ದಾಖಲಿಸಿತು. ಆರ್ಸಿಬಿ ಬೌಲರ್ಗಳ ವಿರುದ್ಧ ಲೀಲಾಜಾಲವಾಗಿ ಬ್ಯಾಟ್ ಬೀಸಿ ಸಿಕ್ಸರ್, ಬೌಂಡರಿಗಳ, ಸುರಿಮಳೆಗೆರೆದ ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರು. ಒಟ್ಟಾರೆ 26 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 78 ರನ್ ಗಳಿಸಿ ಭದ್ರ ಅಡಿಪಾಯ ಹಾಕಿದರು. ಎರಡನೇ ವಿಕೆಟ್ಗೆ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ 37 ಎಸೆತಗಳಲ್ಲಿ108 ರನ್ ಗಳಿಸಿದರು. ಅರ್ಧ ಶತಕ ಗಳಿಸಿದ ಜುರೆಲ್ 43 ಎಸೆತಗಳಲ್ಲಿ 8 ಬೌಂಡರಿ ಹಾಗೂ 3ಸಿಕ್ಸರ್ ನೆರವಿನಿಂದ ಅಜೇಯ 81 ರನ್ ಗಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿಯ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಶೂನ್ಯಕ್ಕೆ ಔಟಾದರೆ, ವಿರಾಟ್ ಕೊಹ್ಲಿ (32ರನ್, 16 ಎಸೆತ, 47) ಮತ್ತು ದೇವದತ್ ಪಡಿಕ್ಕಲ್(14 ರನ್, 7 ಎಸೆತ, 43) ರನ್ ಗಳಿಸಿದರು. ನಂತರ ಬಂದ ರಜತ್ ಪಾಟೀದಾರ್ (63 ರನ್, 40 ಎಸೆತ, 4ಬೌಂಡರಿ, 4ಸಿಕ್ಸರ್) ಸ್ಪೋಟಕ ಅರ್ಧಶತಕದ ಮೂಲಕ ತಂಡಕ್ಕೆ ನೆರವಾದರು. ಉಳಿದಂತೆ ವೆಂಕಟೇಶ್ ಅಯ್ಯರ್ (29ರನ್, 15ಎಸೆತ), ರೊಮಾರಿಯೊ ಶೆಫರ್ಡ್(22 ರನ್, 11ಎಸೆತ), ಟಿಮ್ ಡೇವಿಡ್(13 ರನ್, 9ಎಸೆತ) ರನ್ ಗಳಿಸಿದರು.
ರಾಜಸ್ಥಾನ ಪರ ಜೋಫ್ರಾ ಆರ್ಚರ್, ಬ್ರಿಜೇಶ್ ಶರ್ಮಾ, ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದಿದ್ದಾರೆ.
ಮಳೆಯ ಅಡಚಣೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಗಿತ್ತು. ರಾಜಸ್ಥಾನ ಸತತ ನಾಲ್ಕನೇ ಗೆಲುವು ದಾಖಲಿಸಿದರೆ, 3 ಪಂದ್ಯ ಆಡಿ ಎರಡು ಜಯ ಗಳಿಸಿದ ಆರ್ಸಿಬಿ ಒಂದು ಪಂದ್ಯದಲ್ಲಿ ಸೋಲನುಭವಿಸಿತು.











