ಗುವಾಹಟಿ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಪಾರಮ್ಯ ಮೆರೆದ ರಾಜಸ್ಥಾನ ರಾಯಲ್ಸ್ ತಂಡವು ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ 27 ರನ್ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿತು.ಮಳೆಯಿಂದಾಗಿ ಸುಮಾರು ಎರಡೂವರೆ ಗಂಟೆ ತಡವಾಗಿ ಆರಂಭವಾದ ಪಂದ್ಯವನ್ನು
11 ಓವರ್ಗೆ ಸೀಮಿತ ಮಾಡಲಾಗಿತ್ತು. ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಅಬ್ಬರಿಸಿದರು. ಈ ಜೋಡಿಯ ಮಿಂಚಿನ ಆಟದ ಬಲದಿಂದ ರಿಯಾನ್ ಪರಾಗ್ ಪಡೆ 11 ಓವರ್ಗಳಲ್ಲಿ 3 ವಿಕೆಟ್ಗಳಿಗೆ 151 ರನ್ ಗಳಿಸಿತು.ಕಠಿಣ ಗುರಿ ಬೆನ್ನಟ್ಟಿದ ಮುಂಬೈ 9 ವಿಕೆಟ್ಗಳಿಗೆ 123 ರನ್ ಗಳಿಸಿ, ಓವರ್ ಪೂರೈಸಿತು.ಮಧ್ಯಮ ಕ್ರಮಾಂಕದಲ್ಲಿ ನಮನ್ ಧೀರ್ (25; 13ಎ) ಹಾಗೂ ಶೆರ್ಫೇನ್ ರುದರ್ಫೋರ್ಡ್ (25; 8ಎ) ಹೋರಾಟ ತೋರಿದರಾದರೂ, ಗೆಲುವು ಒಲಿಯಲಿಲ್ಲ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ, ರಾಯಲ್ಸ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು. ಪವರ್ಪ್ಲೇ ಅವಧಿಯನ್ನು 3.2 ಓವರುಗಳಿಗೆ ಇಳಿಸಲಾಯಿತು.
ಜೈಸ್ವಾಲ್ 32 ಎಸೆತಗಳಲ್ಲಿ ಅಜೇಯ 77 ರನ್ ಸಿಡಿಸಿದರು. ಅವರ ಇನಿಂಗ್ಸ್ನಲ್ಲಿ ಹತ್ತು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಇದ್ದವು. ಯುವತಾರೆ ವೈಭವ್ 14 ಎಸೆತಗಳಲ್ಲಿ ಒಂದು ಬೌಂಡರಿ, 5 ಸಿಕ್ಸರ್ ಸಹಿತ 39 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 5 ಓವರ್ಗಳಲ್ಲಿ 80 ರನ್ ಗಳಿಸಿ, ಭದ್ರ ಅಡಿಪಾಯ ಹಾಕಿಕೊಟ್ಟಿತು. ಕೊನೆಯಲ್ಲಿ, ನಾಯಕ ರಯಾನ್ ಪರಾಗ್ (20; 10 ಎ, 4×1, 6×2) ಅವರೂ ಬಿರುಸಿನ ಆಟವಾಡಿದರು. ಹೀಗಾಗಿ ರಾಯಲ್ಸ್ ತಂಡವು 150ರ ಗಡಿ ಮುಟ್ಟಿತು.










