ಅಹಮದಾಬಾದ್: ವಿಲ್ ಜಾಕ್ ಸಿಡಿಸಿದ ಸ್ಪೋಟಕ ಶತಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಬೃಹತ್ ಮೊತ್ತ ಬೆನ್ನಟ್ಟಿದ ಆರ್ಸಿಬಿ ಭರ್ಜರಿ ಜಯ ದಾಖಲಿಸಿದೆ. ಸತತ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಿರುವ ಆರ್ಸಿಬಿ ಗುಜರಾತ್ ಟೈಟನ್ಸ್ ವಿರುದ್ಧ 9 ವಿಕೆಟ್ಗಳ ಗೆಲುವಿನ ನಗು ಬೀರಿತು. ಮೊದಲು ಬ್ಯಾಟ್ ಮಾಡಿದ
ಗುಜರಾತ್ ನಿಗದಿತ 20 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆರ್ಸಿಬಿ 16 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ವಿಲ್ ಜಾಕ್ಸ್ ಕೇವಲ 41 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಹಾಗೂ 5 ಆಕರ್ಷಕ ಬೌಂಡರಿ ನೆರವಿನಿಂದ ಅಜೇಯ 100 ರನ್ ಗಳಿಸಿ ವೇಗದ ಶತಕ ಗಳಿಸಿದರು. ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಆಕರ್ಷಕ ಬೌಂಡರಿ ನೆರವಿನಿಂದ ಅಜೇಯ 70 ರನ್ ಗಳಿಸಿದರು. ಸಿಕ್ಸರ್ ಬೌಂಡರಿ ಸುರಿಮಳೆಗೈದ ಜಾಕ್ಸ್ ಮತ್ತು ಕೊಹ್ಲಿ ಮುರಿಯದ ಎರಡನೇ ವಿಕೆಟ್ಗೆ 73 ಎಸೆತಗಳಲ್ಲಿ166 ರನ್ ಸಿಡಿಸಿದರು.
ಮೊದಲು ಬ್ಯಾಟ್ ಮಾಡಿದ ಗುಜರಾತ್ ಪರ ಸಾಯಿ ಸುದರ್ಶನ್ (84*) ಹಾಗೂ ಶಾರುಕ್ ಖಾನ್ ಬಿರುಸಿನ ಅರ್ಧಶತಕ (58) ಭಾರಿಸಿದರು. ನಾಯಕ ಶುಭಮನ್ ಗಿಲ್ (16) ಹಾಗೂ ವೃದ್ಧಿಮಾನ್ ಸಹಾ (5) ಬೇಗನೇ ಔಟ್ ಆದರು. ಮೂರನೇ ವಿಕೆಟ್ಗೆ 86 ರನ್ಗಳ ಜೊತೆಯಾಟ ಕಟ್ಟಿದ ಸಾಯಿ ಸುದರ್ಶನ್ ಹಾಗೂ ಶಾರುಕ್ ಖಾನ್, ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು.
ಶಾರೂಕ್ ಖಾನ್ 24 ಎಸೆತಗಳಲ್ಲಿ ಐಪಿಎಲ್ನಲ್ಲಿ ಚೊಚ್ಚಲ ಅರ್ಧಶತಕದ ಸಾಧನೆ ಮಾಡಿದರು. ಅಲ್ಲದೆ 30 ಎಸೆತಗಳಲ್ಲಿ 58 ರನ್ ಗಳಿಸಿ (5 ಸಿಕ್ಸರ್, 3 ಬೌಂಡರಿ) ಔಟ್ ಆದರು. ಸುದರ್ಶನ್ 84 ರನ್ ಗಳಿಸಿ ಔಟಾಗದೆ ಉಳಿದರು. 49 ಎಸೆತಗಳನ್ನು ಎದುರಿಸಿದ ಸಾಯಿ ಇನಿಂಗ್ಸ್ನಲ್ಲಿ ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ಗಳು ಸೇರಿದ್ದವು.
ಕೊನೆಯ ಹಂತದಲ್ಲಿ ಡೇವಿಡ್ ಮಿಲ್ಲರ್ ಅಜೇಯ 26 ರನ್ಗಳ (19 ಎಸೆತ, 1 ಸಿಕ್ಸರ್, 2 ಬೌಂಡರಿ) ಕೊಡುಗೆ ನೀಡಿದರು. ಆರ್ಸಿಬಿ ಪರ ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ತಲಾ ಒಂದು ವಿಕೆಟ್ ಗಳಿಸಿದರು.