ಸುಳ್ಯ:ಸಂವಿಧಾನ ಅನುಷ್ಠಾನ ಆದ ಬಳಿಕ ಭಾರತ ನಮ್ಮದಾಯಿತು. ನಮ್ಮ ಬದುಕಿಗೆ, ನಮ್ಮ ಎಲ್ಲಾ ಸಾಧನೆಗಳಿಗೆ ಸಂವಿಧಾನವೇ ಆಧಾರ. ಸಂವಿಧಾನ ಇಲ್ಲದಿದ್ದರೆ ಭಾರತೀಯರಾದ ನಾವು ಉಳಿಯಲು ಸಾಧ್ಯವಿಲ್ಲ ಎಂದು ಖ್ಯಾತ ವಾಗ್ಮಿ ನಿಕೇತ್ರಾಜ್ ಮೌರ್ಯ ಹೇಳಿದ್ದಾರೆ. ಪ್ರಜಾಧ್ವನಿ ಕರ್ನಾಟಕ ವತಿಯಿಂದ 1949 ನವೆಂಬರ್ 26 ಡಾ.ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನದ ಸಮರ್ಪಣಾ ದಿನದ ಸ್ಮರಣೆಗಾಗಿ ನಡೆದ ರಾಷ್ಟ್ರಧ್ವಜ ಗೌರವ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ
ಅವರು ಮುಖ್ಯ ಭಾಷಣ ಮಾಡಿದರು.ಪ್ರತಿಯೊಂದು ಧರ್ಮದವರಿಗೂ ಒಂದೊಂದು ಧರ್ಮ ಗ್ರಂಥ ಇದೆ. ಆದರೆ ಭಾರತೀಯರ ಎಲ್ಲರ ಧರ್ಮ ಗ್ರಂಥ ಸಂವಿಧಾನ. ಸಂವಿಧಾನ ಇಲ್ಲದೆ ಇರುತ್ತಿದ್ದರೆ ಭಾರತೀಯರ ಪಾಡೇನು, ಸಂವಿಧಾನ ಬರುವ ಮೊದಲು ಭಾರತೀಯರ ಸ್ಥಿತಿ ಹೇಗಿತ್ತು ಎಂದು ಯೋಚಿಸಬೇಕು. ಸಂವಿಧಾನ ಬರುವ ಮೊದಲು ಭಾರತ ನಮ್ಮದಾಗಿರಲಿಲ್ಲ. ಸಂವಿಧಾನ ಬಂದ ಬಳಿಕ ಭಾರತ ಪ್ರತಿಯೊಬ್ಬ ಜನ ಸಾಮಾನ್ಯನ ದೇಶವಾಯಿತು. ಶಿಕ್ಷಣ ಬೆಳೆಯಲು, ಹೆಣ್ಣು ಮಕ್ಕಳು ಸೇರಿ ಎಲ್ಲರೂ ವಿದ್ಯಾವಂತರಾಗಲು ಸಂವಿಧಾನವೇ ಕಾರಣ. ಸಂವಿಧಾನ ಬಂದ ಬಳಿಕ 27 ವರ್ಷ ಇದ್ದ ಮನುಷ್ಯನ ಸರಾಸರಿ ಆಯುಷ್ಯ 74 ವರ್ಷಕ್ಕೆ ಏರಿದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯ ಹೋರಾಟಗಾರರ ಕನಸೇ ಸಂವಿಧಾನ. ಸಂವಿಧಾನವು ಬಡವರಿಗೆ ಭೂಮಿ ಕೊಟ್ಟಿತ್ತು. ಬಡ ಮಕ್ಕಳಿಗೆ
ಹೊಟ್ಟೆ ತುಂಬಾ ಊಟ ಲಭಿಸಿತು. ಪ್ರತಿಯೊಬ್ಬರನ್ನೂ ಕನಸು ಕಾಣಲು ಪ್ರೇರೇಪಿಸಿದ್ದು ಅದರ ಸಾಕಾರ ಮಾಡಲು ಸಹಾಯ ಮಾಡಿದ್ದು ನಮ್ಮ ಸಂವಿಧಾನ. ಸಂವಿಧಾನ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ,
ಸಂವಿಧಾನದ ಆಶಯ ಉಳಿದರೆ ಸಮಾನತೆ ಉಳಿಯಲು ಸಾಧ್ಯ.
ಸಂವಿಧಾನ ಯಾರ ಕೈಯಲ್ಲಿ ಇರುತ್ತದೆ ಎಂಬುದರ ಆಧಾರದಲ್ಲಿ ಮೇಲೆ ಅದರ ಭವಿಷ್ಯ ತೀರ್ಮಾನ ಆಗುತ್ತದೆ ಎಂದು ನಿಕೇತ್ರಾಜ್ ಮೌರ್ಯ ಹೇಳಿದರು. ನಮ್ಮ
ರಾಜಕೀಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದರೆ ಹಣ ಇಲ್ಲದವರು ಚುನಾವಣೆಯಲ್ಲಿ ಗೆಲ್ಲುವುದೇ ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣ ಆಗಿದೆ. ಜನ ಸಾಮಾನ್ಯರು ಪ್ರಬುದ್ಧರಾದರೆ ಮಾತ್ರ ಸಂವಿಧಾನ ಉಳಿಯಲು ಸಾಧ್ಯ ಎಂದ ಅವರು ಸಂವಿಧಾನದ ಆಶಯದ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಬೇಕು, ಜಾಗೃತಿ ಮೂಡಿಸಬೇಕು. ಇಲ್ಲದಿದ್ದರೆ ಸಂವಿಧಾನ ಉಳಿಯಲು ಸಾಧ್ಯವಿಲ್ಲ ಎಂದರು. ಸಂವಿಧಾನ ನಮ್ಮ ತಾಯಿ ಇದ್ದಂತೆ. ಸಂವಿಧಾನ ಎಂಬ ತಾಯಿ ತನ್ನ ದುರ್ಬಲ ಮಗುವೂ ಇತರ ಮಕ್ಕಳಂತೆ ಸಮಾನರಾಗಿ ಬೆಳೆಯಲಿ ಎಂಬ ಕಾರಣ ಮೀಸಲಾತಿ ಘೋಷಿಸಿತು. ಸಂವಿಧಾನದ ಆಶಯ ಎಲ್ಲರಲ್ಲಿಯೂ ಪಸರಿಸಬೇಕು. ಈ ದೇಶದ ಭವಿಷ್ಯವನ್ನು ನಿರ್ಧರಿಸುವ ಅಧಿಕಾರ ಜನರಿಗೆ ಕೊಟ್ಟಿದೆ. ಜನರು ಆ ಅಧಿಕಾರವನ್ನು ಬಳಸಿಕೊಳ್ಳಬೇಕು. ಸಾಮಾಜಿಕ ಮೌಲ್ಯ, ಬಡವರ ಪರ ಕಾಳಜಿ ಇರುವ ಜನಪ್ರತಿನಿಗಳನ್ನು ಆಯ್ಕೆ ಮಾಡಬೇಕು ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಬೇಕಾಗಿದ್ದ ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ ಅವರ ಸಂದೇಶವನ್ನು ಸಮಾರಂಭದಲ್ಲಿ ತಿಳಿಸಲಾಯಿತು.
ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮುಖಂಡರಾದ ಇನಾಯತ್ ಅಲಿ, ಧರ್ಮಗುರುಗಳಾದ ಸಯ್ಯಿದ್ ತಾಹ್ವಿರ್ ಸಅದಿ ಖಾ ಅಲವಿ ತಂಙಳ್, ಸೈಂಟ್ ಬ್ರಿಜಿಡ್ಸ್ ಚರ್ಚ್ನ ಧರ್ಮ ಗುರುಗಳಾದ ಫಾ.ವಿಕ್ಟರ್ ಡಿಸೋಜಾ, ಪ್ರಜಾಧ್ವನಿ ಸಂಚಾಲಕರಾದ ಗೋಪಾಲ್ ಪೆರಾಜೆ, ಕಡಬ ತಾಲೂಕು ಸಂಚಾಲಕ ಟಿ.ಜಿ.ಮ್ಯಾಥ್ಯು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾಧ್ವನಿ ವೇದಿಕೆಯ ಸದಸ್ಯರಾದ ಅಶೋಕ್ ಎಡಮಲೆ ಸ್ವಾಗತಿಸಿ, ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್ ವಂದಿಸಿದರು. ಟಿ.ಐ.ಲೂಕಾಸ್ ಹಾಗೂ ಕಾಂತಿ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ,
ಪಿ.ಸಿ.ಜಯರಾಮ, ರಾಧಾಕೃಷ್ಣ ಬೊಳ್ಳೂರು, ಗೀತಾ ಕೋಲ್ಚಾರ್, ಮಹಮ್ಮದ್ ಕುಂಞಿ ಗೂನಡ್ಕ, ಪ್ರವೀಣ್ ಮುಂಡೋಡಿ, ಕೆ.ಗೋಕುಲ್ದಾಸ್, ಕೆ.ಪಿ.ಜಾನಿ ಕಲ್ಲುಗುಂಡಿ, ರಾಜು ಪಂಡಿತ್,
ವಸಂತ ಪೆಲ್ತಡ್ಕ, ಅಶ್ರಫ್ ಎಲಿಮಲೆ, ಭರತ್ ಕುಕ್ಕುಜಡ್ಕ,ಲಕ್ಷ್ಮೀಶ ಗಬಲಡ್ಕ, ಬೆಟ್ಟ ಜಯರಾಮ್ ಭಟ್, ಬೆಟ್ಟ ರಾಜಾರಾಮ್ ಭಟ್, ರಾಜು ಪಂಡಿತ್, ಧನುಷ್ ಕುಕ್ಕೆಟ್ಟಿ, ಇಬ್ರಾಹಿಂ ಎ.ಕೆ. ಕಲ್ಲುಗುಂಡಿ, ಶಶಿಧರ ಎಂ.ಜೆ, ಭವಾನಿಶಂಕರ ಕಲ್ಮಡ್ಕ, ಪಿ.ಎ.ಮಹಮ್ಮದ್, ಧೀರಾ ಕ್ರಾಸ್ತಾ, ಶೌವಾದ್ ಗೂನಡ್ಕ, ಮಂಜುನಾಥ್ ಮಡ್ತಿಲ, ದಿನೇಶ್ ಅಂಬೆಕಲ್ಲು, ಮೊದಲಾದವರು ಉಪಸ್ಥಿತರಿದ್ದರು.
ಬೆಳಿಗ್ಗೆ ಸಂಪಾಜೆಯಿಂದ ಆರಂಭಗೊಂಡ ರಾಷ್ಟ್ರಧ್ವಜ ಗೌರವ ಯಾತ್ರೆಯು ಮರ್ಕಂಜ, ಎಲಿಮಲೆ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ನಿಂತಿಕಲ್ಲು, ಬೆಳ್ಳಾರೆ, ಐವರ್ನಾಡು, ಸೋಣಂಗೇರಿ, ಪೈಚಾರು ಮಾರ್ಗವಾಗಿ ಸಂಜೆ ಸುಳ್ಯದಲ್ಲಿ ಸಮಾಪನಗೊಂಡಿತು.