ಸುಳ್ಯ:ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಸುಳ್ಯ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಗಿರೀಶ್ ನಂದನ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಮಳೆಗಾಲದ ಗುಡ್ಡ ಕುಸಿತ ಮುಂಜಾಗ್ರತೆ ಕ್ರಮ ವಹಿಸುವ ಬಗ್ಗೆ ಈ ಹಿಂದಿನ ಸಭೆಯ ಪಾಲನಾ ವರದಿ ಉಲ್ಲೇಖಿಸಿ ವಿಚಾರ ಪ್ರಸ್ತಾಪಿಸಿದ ಗಿರೀಶ್ ನಂದನ್ ಅವರು ಕಲ್ಮಕಾರಿನ ಗುಳಿಕಾನದ
9 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆ ಏನಾಗಿದೆ ಎಂದು ಪ್ರಶ್ನಿಸಿದರು. ಸಭೆಯಲ್ಲಿ ಮಾಹಿತಿ ಪಡೆದ ಅವರು ಗುಳಿಕಾನದ ಕುಟುಂಬಗಳಿಗೆ ನಿವೇಶನ ಒದಗಿಸಲು ಆದಷ್ಟು ಬೇಗ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ತಹಶೀಲ್ದಾರ್ ಮಂಜುಳಾ ಅವರಿಗೆ ಸೂಚಿಸಿದರು.
ವಾರದಲ್ಲಿ ವರದಿ ನೀಡಲು ಅರಣ್ಯ ಇಲಾಖೆಗೆ ಸೂಚನೆ:
ಸುಳ್ಯ ನ.ಪಂ. ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿಗೆ ಜಮೀನು ನಿಗದಿಪಡಿಸಿದ ಬಗ್ಗೆ ಈ ಹಿಂದಿನ ಸಭೆಯಲ್ಲಿ ಚರ್ಚಿಸಲಾಗಿತ್ತು. ಇದಕ್ಕೆ ಪುತ್ತೂರು ಸಹಾಯಕ ಆಯುಕ್ತರು ಅರಣ್ಯ ಇಲಾಖೆ ಅವರಿಂದ ನಿರಾಪೇಕ್ಷಣಾ ಪತ್ರ ಪಡೆಯುವಂತೆ ಹಾಗೂ ಆಕ್ಷೇಪಣೆ ಇದ್ದಲ್ಲಿ ಬದಲಿ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು. ಈ ಕುರಿತು ಅಂತಿಮ ವರದಿಯನ್ನು ಒಂದು ವಾರದಲ್ಲಿ ನೀಡುವಂತೆ ಆಡಳಿತಾಧಿಕಾರಿ ಗಿರೀಶ್ ನಂದನ್ ವಲಯ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಶಿಥಿಲ ಕಟ್ಟಡ ತೆರವು ವೇಳೆ ಮುನ್ನೆಚ್ಚರಿಕೆ ವಹಿಸಿ:
ಹಳೆಯ ಶಿಥಿಲ ಕಟ್ಟಡಗಳ ತೆರವು ಮಾಡುವ ಬಗ್ಗೆ ಸಭೆಯಲ್ಲಿ ಅನುಮತಿ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಗಿರೀಶ್ ನಂದನ್ ಅವರು, ಶಾಲಾ ಶಿಥಿಲ ಕಟ್ಟಡ ಸೇರಿದಂತೆ ಯಾವುದೇ ಶಿಥಿಲ ಕಟ್ಟಡ ತೆರವು ಮಾಡುವ ವೇಳೆ ಜಾಗ್ರತೆ ಹಾಗೂ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿ ತೆರವು ಕಾರ್ಯ ನಡೆಸಬೇಕು ಎಂದು ಸಲಹೆ ನೀಡಿದರು.
ಹಾಸ್ಟೇಲ್ಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದ ತಂಡ ಭೇಟಿಗೆ ನಿರ್ದೇಶಿಸಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಸಭೆಯಲ್ಲಿ ಮಾಹಿತಿ ನೀಡಿದರು. ಗಿರೀಶ್ ನಂದನ್ ಮಾತನಾಡಿ, ಅಧಿಕಾರಿಗಳು ತಮ್ಮ ವ್ಯಾಪ್ತಿಯ ಹಾಸ್ಟೇಲ್ಗಳಿಗೆ ಆಯಾ ಇಲಾಖೆಯ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ನೀಡಲಾಗುವ ಸೌಲಭ್ಯ, ಅಲ್ಲಿನ ಸೌಕಾರ್ಯಗಳ ಬಗ್ಗೆ ವರದಿ ನೀಡಲು ಸೂಚಿಸಿದರು. ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಹಳೆಯ ಕಟ್ಟಡ ತೆರವು , ರಸ್ತೆ ಚರಂಡಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು
ಸುಳ್ಯ ತಹಶೀಲ್ದಾರ್ ಮಂಜುಳಾ.ಎಂ, ತಾ.ಪಂ ಇ ರಾಜಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಇಲಾಖೆಗಳ ಅಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸುಳ್ಯ ತಾ.ಪಂ. ಕಾರ್ಯನಿರ್ವಹರ್ಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.